ಪ್ರಿಯತಮೆ ಪಡೆಯಲು 2 ಲಕ್ಷ ವೆಚ್ಚ ಮಾಡಿದ ಯುವಕ!
- ದುಬೈನಿಂದ ಬಂದು ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದ ಉಸ್ಮಾನ್
- ಪೋಷಕರು ತೋರಿಸಿದವರನ್ನು ಮದುವೆಯಾಗುವುದಾಗಿ ಯುವತಿ ತಿಳಿಸಿದ್ದರಿಂದ ಅರ್ಜಿ ವಜಾ
- ಕಡುಬಡತನದಲ್ಲಿ ಬೆಳೆದು ಎಸ್ಎಸ್ಎಲ್ಸಿ ಮುಗಿಸಿ ನಂತರ ದುಬೈಗೆ ತೆರಳಿ ನೌಕರಿ ಹಿಡಿದಿದ್ದ
- ಬಾಲ್ಯದ ಗೆಳತಿ ಜತೆ ಫೇಸ್ಬುಕ್ನಲ್ಲಿ ನಡೆದ ಚಾಟಿಂಗ್ ನಂತರ ಪ್ರೇಮಕ್ಕೆ ತಿರುಗಿತ್ತು
- ಆಗರ್ಭ ಶ್ರೀಮಂತರಾದ ಯುವತಿ ಮನೆಯವರಿಂದ ಪ್ರೀತಿಗೆ ತೀವ್ರ ವಿರೋಧ
ಬೆಂಗಳೂರು: ಕಡುಬಡತನದಲ್ಲಿ ಬೆಳೆದು ಸ್ವಂತ ಪ್ರಯತ್ನದಿಂದ ದುಬೈನಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದ ಬಡ ಕುಟುಂಬದ ಆ ಯುವಕ ಪ್ರೀತಿಸಿದಾಕೆಯನ್ನು ಪಡೆಯಲು ಮಾಡಿದ ವೆಚ್ಚ ರು. 2 ಲಕ್ಷ.
ಆದರೂ ಆತನ ಪ್ರೀತಿ ಫಲ ನೀಡಲಿಲ್ಲ. ಪ್ರೀತಿಗೆ ಸಾಕ್ಷಿಗಳಿಲ್ಲದ ಹಿನ್ನೆಲೆಯಲ್ಲಿ ಆತನ ಕೇಸು ನ್ಯಾಯಾಲಯದಲ್ಲಿ ಬಿದ್ದು ಹೋಯಿತು.
ಅಂದ ಹಾಗೆ, ಈತನ ಪ್ರೇಮ ಪರೀಕ್ಷೆ ವಿಫಲವಾಗಲು ಕಾರಣ ಪ್ರಿಯತಮೆ. ತನಗಾಗಿ ದೂರದ ದೇಶದಿಂದ ಓಡಿ ಬಂದ ಪ್ರಿಯತಮನನ್ನು ಬಿಟ್ಟು ಪೋಷಕರು ತೋರಿಸಿದವರನ್ನು ವಿವಾಹವಾಗುವುದಾಗಿ ನ್ಯಾಯಾಲಯದ ಮುಂದೆ ಹೇಳಿದ ಆಕೆ ಆತನ ನಿರೀಕ್ಷೆಗೆ ತಣ್ಣೀರೆರಚಿದ್ದಾಳೆ.
ಇದರಿಂದ ತನ್ನ ಪ್ರಿಯತಮೆಯನ್ನು ಆಕೆಯ ಪೋಷಕರು ಬಚ್ಚಿಟ್ಟಿದ್ದಾರೆ ಎಂದು ಆಕ್ಷೇಪಿಸಿ ಪ್ರಿಯಕರ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ನ್ಯಾ.ಕೆ.ಎಲ್.ಮಂಜುನಾಥ್ ಹಾಗೂ ನ್ಯಾ.ಎಂ.ವಿ.ಚಂದ್ರಶೇಖರ್ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ.
ಬಾಲ್ಯ ಜೀವನದ ಪ್ರೀತಿ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಉಸ್ಮಾನ್ ಕಂಚಿಲಪಾಡಿ ಎಂಬಾತ ತನ್ನ ಬಾಲ್ಯದ ಗೆಳತಿ ರೇಖಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ಕಡುಬಡತನದಲ್ಲಿ ಬೆಳೆದಿದ್ದ ಉಸ್ಮಾನ್, ಎಸ್ಎಸ್ಎಲ್ಸಿ ನಂತರ ದುಬೈಗೆ ಹೋಗಿ ಖಾಸಗಿ ಸಂಸ್ಥೆಯಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದ.
ಈ ನಡುವೆ, ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ರೇಖಾಳೊಂದಿಗೆ ಫೇಸ್ಬುಕ್ ಮೂಲಕ ಸಂಪರ್ಕ ಇಟ್ಟುಕೊಂಡಿದ್ದ. ದೀರ್ಘಕಾಲದ ಚಾಟಿಂಗ್ ನಂತರ ಇಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಆಗರ್ಭ ಶ್ರೀಮಂತರಾದ ರೇಖಾ ಮನೆಯವರು ಫೇಸ್ಬುಕ್ ಸ್ನೇಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು.
ಆದರೆ, ಅಷ್ಟರಲ್ಲಾಗಲೇ ಉಸ್ಮಾನ್ನೊಂದಿಗೆ ಪ್ರೇಮದ ಬಲೆಯಲ್ಲಿ ಸಿಲುಕಿದ್ದ ರೇಖಾ, ಮನೆಯವರ ಎಚ್ಚರಿಕೆ ನಿರ್ಲಕ್ಷ್ಯಿಸಿ ಚಾಟಿಂಗ್ ಮುಂದುವರಿಸಿದ್ದಳು.
ಉಸ್ಮಾನ್ ವಿವಾಹ ಪ್ರಸ್ತಾಪ ಇಟ್ಟಾಗ ರೇಖಾ ಮನೆಯವರು ಒಪ್ಪಿಗೆ ಸೂಚಿಸಲಿಲ್ಲ. ಇದರಿಂದ ಎರಡು ಕುಟುಂಬಗಳ ನಡುವೆ ಕಲಹ ನಡೆದಿದೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಪರಿಸ್ಥಿತಿ ಸುಧಾರಿಸುವ ಸಲುವಾಗಿ ಭಾರತಕ್ಕೆ ಆಗಮಿಸಿದ ಉಸ್ಮಾನ್, ರೇಖಾಳನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಈತ ಊರಿಗೆ ಬಂದ ವಿಷಯ ತಿಳಿದ ರೇಖಾ ಪೋಷಕರು ಆಕೆಯನ್ನು ಮನೆಯಿಂದ ಹೊರಹೋಗಲು ಅನುವು ಮಾಡಿಕೊಟ್ಟಿರಲಿಲ್ಲ. ಗಾಬರಿಗೊಂಡ ಉಸ್ಮಾನ್ ಹೈಕೋರ್ಟ್ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದ.
ವಿಚಾರಣೆ ನಡೆಸಿದ ನ್ಯಾಯಪೀಠ, ರೇಖಾ ಹಾಗೂ ಆಕೆ ಕುಟುಂಬ ಸದಸ್ಯರನ್ನು ನ್ಯಾಯಾಲಯಕ್ಕೆ ಕರೆಸಿತ್ತು. ವಿಚಾರಣೆಗೆ ಹಾಜರಾದ ರೇಖಾ, ತಾನು ಪೋಷಕರು ತೋರಿಸಿದ ವರನನ್ನೇ ವಿವಾಹವಾಗುವುದಾಗಿ ಸ್ಪಷ್ಟಪಡಿಸಿದಳು. ನೀನು ಈತನೊಂದಿಗೆ ಚಾಟಿಂಗ್ ನಡೆಸಿರಲಿಲ್ಲವೇ ಎಂಬ ಪ್ರಶ್ನೆಗೆ ಆಕೆಯಿಂದ ಸ್ಪಷ್ಟ ಉತ್ತರ ದೊರೆಯಲಿಲ್ಲ.
ಇಬ್ಬರ ನಡುವಿನ ಪ್ರೇಮಕ್ಕೆ ಯಾವುದೇ ದಾಖಲೆಗಳಿಲ್ಲದ ಹಿನ್ನೆಲೆಯಲ್ಲಿ ನ್ಯಾಯಪೀಠ ಅರ್ಜಿವಜಾಗೊಳಿಸಿತು.
ಇದರಿಂದ ಉಸ್ಮಾನ್ ತನ್ನ ಪ್ರಿಯತಮೆ ಕಳೆದುಕೊಂಡಿದ್ದಲ್ಲದೆ, ವಕೀಲರ ಶುಲ್ಕ ಮತ್ತು ಪ್ರಯಾಣ ವೆಚ್ಚವಾಗಿ ಮಾಡಿದ ರು. 2 ಲಕ್ಷ ಖರ್ಚು ನೀರಿನಲ್ಲಿ ಹೋಮ ಮಾಡಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

