ಕನ್ನಡ ಮಾಧ್ಯಮದಲ್ಲೇ ಆಂಗ್ಲ ಬೋಧಿಸಿ
ಬೆಂಗಳೂರು: ಸರ್ಕಾರ ಆಂಗ್ಲ ಮಾಧ್ಯಮ ತೆರೆಯುವುದರ ಬದಲಾಗಿ ಕನ್ನಡ ಮಾಧ್ಯಮದಲ್ಲೇ ಆಂಗ್ಲ ಭಾಷೆಯನ್ನು ಒಂದು ಭಾಷೆಯಾಗಿ ಬೋಧಿಸುವುದು ಉತ್ತಮ ಎಂದು ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ ಹೇಳಿದರು.
ಪಿಇಎಸ್ ಶಿಕ್ಷಣ ಸಂಸ್ಥೆ ಶನಿವಾರ ಆಯೋಜಿಸಿದ್ದ ದತ್ತು ಪಡೆದ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ಹಾಗೂ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಆಂಗ್ಲ ಮಾಧ್ಯಮ ತೆರೆಯುವುದರ ಬದಲಾಗಿ ಕನ್ನಡ ಮಾಧ್ಯಮವನ್ನೇ ಉಳಿಕೊಂಡು ಆಂಗ್ಲ ಭಾಷೆಯನ್ನು ಒಂದು ಭಾಷೆಯಾಗಿ ಕಲಿಸುವುದು ಉತ್ತಮ. ಆಂಗ್ಲ ಮಾಧ್ಯಮ ತೆರೆದ ಮಾತ್ರಕ್ಕೆ ವಿದ್ಯಾರ್ಥಿಗಳು ಆಂಗ್ಲ ಭಾಷೆಯನ್ನು ಚೆನ್ನಾಗಿ ಕಲಿಯುತ್ತಾರೆ ಎಂಬ ಸರ್ಕಾರದ ಚಿಂತನೆ ಉತ್ತಮವಾದುದಲ್ಲ. ಆಂಗ್ಲ ಭಾಷೆ ಕಲಿಯುವುದು ಅವಶ್ಯ. ಅಂದಮಾತ್ರಕ್ಕೆ ಆಂಗ್ಲ ಮಾಧ್ಯಮವನ್ನೇ ತೆರೆಯುವುದು ಬೇಡ ಎಂದರು.
ಅವನತಿಯಲ್ಲಿ ಕನ್ನಡಕ್ಕೆ 30ನೇ ಸ್ಥಾನ!: ಪ್ರಪಂಚದಲ್ಲಿರುವ ಸುಮಾರು 7000 ಭಾಷೆಗಳ ಪೈಕಿ 3000 ಭಾಷೆಗಳು ಈಗಾಗಲೇ ಅವನತಿ ಹೊಂದಿವೆ. ಉಳಿದ ಭಾಷಾ ಪಟ್ಟಿಯಲ್ಲಿ ಕನ್ನಡ ಭಾಷೆಯು 30ನೇ ಸ್ಥಾನ ಪಡೆದುಕೊಂಡಿದೆ. ಇದರ ಸ್ಥಾನವನ್ನು ಉನ್ನತೀಕರಿಸುವ ಉದ್ದೇಶದಿಂದ ನಾವೆಲ್ಲರೂ ಕನ್ನಡದಲ್ಲೇ ಮಾತನಾಡುವುದು ಉತ್ತಮ. ಈ ಹಿನ್ನೆಲೆಯಲ್ಲಿ ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಭಾಷಾ ಪ್ರಾಮುಖ್ಯದ ಬಗ್ಗೆ ತಿಳಿ ಹೇಳಬೇಕು ಎಂದರು.
ಪಿಇಎಸ್ ಕಾಲೇಜಿನ ಸಂಸ್ಥಾಪಕ ಎಂ.ಆರ್. ದೊರೆಸ್ವಾಮಿ ಮಾತನಾಡಿ, ಸರ್ಕಾರ ಮಕ್ಕಳ ಪ್ರವಾಸಕ್ಕಾಗಿ ಹಣ ಬಿಡುಗಡೆ ಮಾಡಿರುವುದು ಒಳ್ಳೆಯ ಸುದ್ದಿ. ಆದರೆ, ಕೇವಲ ಹಿಂದುಳಿದ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರವೇ ಪ್ರವಾಸ ಕರೆದುಕೊಂಡು ಹೋಗುವುದು ಸರಿಯಲ್ಲ. ಮಕ್ಕಳಲ್ಲಿ ಜಾತಿ ತಾರತಮ್ಯ ಬೇಡ. ಪ್ರತಿಯೊಬ್ಬರಿಗೂ ಪ್ರವಾಸ ಕರೆದುಕೊಂಡು ಹೋಗಬೇಕು ಎಂದರು.
ಶಾಲೆಗಳ ದತ್ತುಗೆ ನಿಯಮ ರೂಪಿಸಿ: ಸರ್ಕಾರಿ ಶಾಲೆಗಳು ಯಾವ ಮಟ್ಟದಲ್ಲಿವೆ ಎಂದು ಎಲ್ಲರಿಗೂ ತಿಳಿದಿದೆ. ಇದನ್ನು ಉನ್ನತೀಕರಿಸುವ ಉದ್ದೇಶದಿಂದ ಪ್ರತಿಯೊಬ್ಬ ಎಂಎಲ್‌ಎ ಮತ್ತು ಎಂಎಲ್‌ಸಿಗಳು ಕನಿಷ್ಠ 5 ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು. ಅಲ್ಲದೆ ಸರ್ಕಾರ ಖಾಸಗಿ ಶಾಲಾ- ಕಾಲೇಜು ತೆರೆಯಲು ಅನುಮತಿ ನೀಡುವ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳಬೇಕು ಎಂಬ ನಿಯಮ ರೂಪಿಸಿ ಒಪ್ಪಿಗೆ ಪಡೆದುಕೊಳ್ಳಬೇಕು ಎಂದರು.
ಸಾಮಾಜಿಕ ಕಳಕಳಿ ಅಗತ್ಯ: 1998ರಲ್ಲಿ ನಾನು ಶಾಲೆಗಳನ್ನು ದತ್ತು ಸ್ವೀಕರಿಸಲು ಪ್ರಾರಂಭಿಸಿದೆ. ಅಂದು 8 ಶಾಲೆಗಳನ್ನು ಸ್ವೀಕರಿಸಲಾಯಿತು. ಇಂದು 16 ಶಾಲೆಗಳಿವೆ. ನಾವು ಶಿಕ್ಷಣ ಸಂಸ್ಥೆಗಳನ್ನು ನಡೆಸುವುದರ ಜತೆಗೆ ಸಾಮಾಜಿಕ ಕಳಕಳಿ ಇಟ್ಟುಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು. ಪ್ರತಿಯೊಬ್ಬ ಶಿಕ್ಷಣ ಸಂಸ್ಥೆಗಳು ಈ ರೀತಿಯ ಚಿಂತನೆಯಲ್ಲಿ ತೊಡಗಿದರೆ ಉತ್ತಮ ಎಂದರು.
ಬಸವನಗುಡಿ ಶಾಸಕ ಎಲ್. ರವಿ ಸುಬ್ರಹ್ಮಣ್ಯ, ಪಿಇಎಸ್ ಕಾಲೇಜಿನ ಪ್ರಾಂಶುಪಾಲ ಕೆ.ಎನ್. ಸುಬ್ರಹ್ಮಣ್ಯ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

