ಲಕ್ಷ ಅಲಕ್ಷ್ಯ; ಕೃಷಿಯಲ್ಲೇ ಖುಷಿ
ಕ.ಪ್ರ.ವಾರ್ತೆ ಬೆಂಗಳೂರು ನ. 9
ಲಂಡನ್‌ನಲ್ಲಿ ಮಾಸ್ಟರ್ ಡಿಗ್ರಿ, ಬೆಂಗಳೂರಲ್ಲಿ ಎಂಜಿನಿಯರಿಂಗ್ ಪದವಿ. ಜತೆಗೆ, ಲಂಡನ್‌ನಲ್ಲೇ ಒಂದೂಕಾಲು ಲಕ್ಷ ರುಪಾಯಿ ಸಂಬಳದ ಕೆಲಸ. ಇಷ್ಟಿದ್ದರೂ ಅವೆಲ್ಲವನ್ನೂ ಬದಿಗಿರಿಸಿ ಕೃಷಿಯಲ್ಲೇ ಬದುಕು ಕಟ್ಟಿಕೊಂಡಿರುವ ಯುವಕ ಈಗ ಯುವರೈತ ಪ್ರಶಸ್ತಿ ಪುರಸ್ಕೃತ..!
ವಿದ್ಯಾವಂತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂಬ ಮಾತಿಗೆ ಅಪವಾದವೆಂಬಂತೆ ಎರಡೆರಡು ಪದವಿ, ಕೈತುಂಬಾ ಸಂಬಳ ಇದ್ದರೂ ಕೃಷಿಯತ್ತ ಮುಖ ಮಾಡಿ ಅಕ್ಷರಶಃ 'ಕೈ ಕೆಸರಾದರೆ ಬಾಯಿ ಮೊಸರು' ಎಂಬಂತೆ ಬದುಕು ಸಾಗಿಸುತ್ತಿರುವವರು ನಗರದ ಚೊಕ್ಕಸಂದ್ರ ನಿವಾಸಿ, 28 ವರ್ಷ ವಯಸ್ಸಿನ ಎಸ್.ಚೇತನ್ ರೆಡ್ಡಿ.
ಸ್ವಂತ ಭೂಮಿ, ನೀರು ಎಲ್ಲಾ ಇರುವಾಗ ಎರಡೆರಡು ಪದವಿ ಪಡೆದು ಇನ್ನೊಬ್ಬರ ಕೈಕೆಳಗೆ ಏಕೆ ಕೆಲಸ ಮಾಡಬೇಕೆಂದು ಕೃಷಿಯಲ್ಲಿ ತೊಡಗಿಸಿಕೊಂಡು ಈಗ ಹತ್ತು ಮಂದಿಗೆ ಕೆಲಸ ನೀಡಿರುವ ಚೇತನ್ ರೆಡ್ಡಿಯ ಕೃಷಿ ಆಸಕ್ತಿ ನೋಡಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಶನಿವಾರ 'ಅಂತಾರಾಷ್ಟ್ರೀಯ ಕೃಷಿಮೇಳ' ಸಂದರ್ಭದಲ್ಲಿ 'ಬೆಂಗಳೂರು ನಗರ ಜಿಲ್ಲೆ ತಾಲೂಕುಮಟ್ಟದ ಯುವರೈತ ಪ್ರಶಸ್ತಿ' ನೀಡಿ ಪ್ರೋತ್ಸಾಹಿಸಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ 'ಕನ್ನಡಪ್ರಭ' ಜತೆ ಮಾತನಾಡಿದ ಚೇತನ್ ರೆಡ್ಡಿ ಹೇಳಿದ್ದಿಷ್ಟು.
'ನಗರದ ವೈಟ್‌ಫೀಲ್ಡ್‌ನ ಎಂವಿಜೆ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಮುಗಿಸಿದೆ. ಬಳಿಕ ಲಂಡನ್‌ನ ಯನಿವರ್ಸಿಟಿಯಲ್ಲಿ ಸಿವಿಲ್ ಆ್ಯಂಡ್ ಸ್ಟ್ರಕ್ಚರಲ್ ವಿಷಯದಲ್ಲಿ ಎಂಎಸ್‌ಸಿ ಪದವಿ ಪಡೆದೆ. ಆ ನಂತರ ಅಲ್ಲಿನ ಕಂಪನಿಯೊಂದರಲ್ಲಿ ಶಿಪ್ ಮ್ಯಾನೇಜರ್ ಆಗಿ ಸುಮಾರು 1 ವರ್ಷ ಕೆಲಸ ಮಾಡಿದೆ. ಆಗ ನನಗೆ ಅಲ್ಲಿ ಸಿಗುತ್ತಿದ್ದ ಮಾಸಿಕ ವೇತನ 1.25 ಲಕ್ಷ. ಆದರೂ ವೃತ್ತಿ ಸಂತೃಪ್ತಿ ಇರಲಿಲ್ಲ. ಇಷ್ಟೆಲ್ಲಾ ಪದವಿ ಪಡೆದು ಯಾರದೋ ಕೈಕೆಳಗೆ ಕೆಲಸ ಮಾಡಬೇಕಲ್ಲ ಎಂದೆನಿಸುತ್ತಿತ್ತು.
ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ತಂದೆ ಶ್ರೀನಿವಾಸರೆಡ್ಡಿ ಅವರಿಗೆ ಅದೇ ಸಮಯದಲ್ಲಿ ಮುಂದೆ ಕೃಷಿ ಮಾಡಲು ಸಾಧ್ಯವಿಲ್ಲ ಎನಿಸುತ್ತಿತ್ತು. ಆದರೆ, ಸುದೀರ್ಘ ಕಾಲದಿಂದ ಮಾಡುತ್ತಿದ್ದ ಕೃಷಿ ಮುಂದುವರಿಸದೇ ಇರಲು ಅವರಿಗೆ ಮನಸ್ಸಿರಲಿಲ್ಲ. ನಾವು 3 ಜನ ಸೋದರರು. ಹಿರಿಯಣ್ಣನಿಗೆ ಜರ್ಮನಿಯಲ್ಲಿ ಉದ್ಯೋಗ, 2ನೇ ಅಣ್ಣ ಇಲ್ಲೇ ಊರಿನಲ್ಲಿ ಹಾಲು ವಿತರಣೆ ನಡೆಸುತ್ತಿದ್ದಾನೆ. ಅವರಿಬ್ಬರೂ ಕೃಷಿ ನಡೆಸಲು ಸಾಧ್ಯ ಇರಲಿಲ್ಲ. ಆದರೆ, ನನಗೆ ಲಂಡನ್ ಉದ್ಯೋಗದಲ್ಲಿ ಬೇಸರ ಮೂಡಿ, ಬೇರೆಯವರ ಬಳಿ ಕೆಲಸ ಮಾಡುವ ಬದಲು 6.5 ಎಕರೆ ಇರುವ ನಮ್ಮ ಭೂಮಿಯಲ್ಲಿ ದುಡಿದು ಇನ್ನೊಬ್ಬರಿಗೆ ಕೆಲಸ ಏಕೆ ನೀಡಬಾರದು ಎಂದೆನಿಸಿ ಕೃಷಿಯಲ್ಲಿ ತೊಡಗಿಸಿಕೊಂಡೆ. ಕಳೆದ 1 ವರ್ಷ 9 ತಿಂಗಳಿನಿಂದ ಕೃಷಿ ಮಾಡುತ್ತಿದ್ದು, ಪ್ರಮುಖವಾಗಿ ಕ್ಯಾಪ್ಸಿಕಂ ಬೆಳೆಯುತ್ತಿದ್ದೇನೆ' ಎಂದರು.
ಕಾರ್ಮಿಕರಿಗೂ ಪಿಕಪ್ ಡ್ರಾಪ್: ಚೇತನ್ ಅವರಲ್ಲಿಗೆ ಕೆಲಸಕ್ಕೆ ಬರುವ ಕಾರ್ಮಿಕರಿಗೆ ಕಾಲ್‌ಸೆಂಟರ್ ಶೈಲಿಯಲ್ಲೇ ಪಿಕಪ್- ಡ್ರಾಪ್ ಇದೆ. ಚೊಕ್ಕಸಂದ್ರ, ಹಾರೋಹಳ್ಳಿ, ಮುತ್ತನಲ್ಲೂರು ಮತ್ತು ಕೊಮ್ಮಸಂದ್ರದಿಂದ ಒಟ್ಟು 11 ಜನ ಕೆಲಸಕ್ಕೆ ಬರುತ್ತಿದ್ದು ಅವರನ್ನು ಪ್ರತಿದಿನ ತಮ್ಮದೇ ಬೊಲೆರೋ ವಾಹನದಲ್ಲಿ ಬೆಳಗ್ಗೆ ಕರೆತಂದು ಸಂಜೆ ಮನೆಗೆ ಬಿಡಲಾಗುತ್ತದೆ. ಪ್ರತಿ ಶನಿವಾರ ಅವರಿಗೆ ಬಟವಾಡೆ, ಇವತ್ತೇ ಬಟವಾಡೆ ದಿನ ಹೊರಗಿದ್ದೇನೆ ಎಂದು ಮಾತು ಮುಂದುವರಿಸಿದರು.
ಅವರ ಆಸೆ ಈಡೇರಿಸಿದ್ದೇನೆ, ಇನ್ನು ನನ್ನಾಸೆ...: ಲಕ್ಷ ಸಂಬಳದ ಕೆಲಸ ಬಿಟ್ಟು ಕೃಷಿಯಲ್ಲಿ ತೊಡಗಿಸಿಕೊಂಡ ಮೇಲೆ ಯಾವತ್ತಾದರೂ ಕೆಲಸ ಬಿಟ್ಟಿದ್ದಕ್ಕೆ ಪಶ್ಚಾತ್ತಾಪ ಉಂಟಾಗಿತ್ತಾ? ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು ಯಾವತ್ತೂ ಹಾಗೆನಿಸಲಿಲ್ಲ. ಶ್ರದ್ಧೆಯಿಂದ ದುಡಿದರೆ ಎಲ್ಲ ಕೆಲಸದಲ್ಲೂ ಲಾಭ ಸಿಕ್ಕೇ ಸಿಗುತ್ತದೆ. ಅಷ್ಟಕ್ಕೂ ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವ ಬದಲು ನಾನೇ 10 ಮಂದಿಗೆ ಕೆಲಸ ನೀಡಿರುವ ಸಂತೃಪ್ತಿ ಇದೆ. ತಂದೆಗೆ ನಾನು ಚೆನ್ನಾಗಿ ಓದಿ, ವಿದೇಶದಲ್ಲಿ ಮಾಸ್ಟರ್ ಡಿಗ್ರಿ ಪಡೆಯಬೇಕು ಎಂಬ ಆಸೆ ಇತ್ತು. ಅವರ ಆಸೆ ಈಡೇರಿಸಿದ್ದೇನೆ. ಈಗ ನನ್ನಿಷ್ಟದಂತೆ ಜೀವನ ಸಾಗಿಸುತ್ತಿದ್ದೇನೆ, ತಂದೆಯೂ ಸಹಕರಿಸುತ್ತಿದ್ದಾರೆ ಎಂದರು.
ಚೆನ್ನಾಗಿ ಓದಿ, ಕೃಷಿ ಮಾಡಿ
ಓದದೇ ಇಂಥದ್ದರಲ್ಲಿ ತೊಡಗಿಸಿಕೊಂಡರೆ 'ಓದಿದ್ದರೆ ಇವೆಲ್ಲ ಮಾಡ್ಬೇಕಾಗ್ತಿತ್ತಾ?' ಎನ್ನುತ್ತಾರೆ. ಹಾಗಾಗಿ, ಎಲ್ಲರೂ ಚೆನ್ನಾಗಿ ಓದಿ. ಆಮೇಲೆ ಸ್ವಂತ ಜಮೀನು, ಸಾಕಷ್ಟು ನೀರು ಎಲ್ಲ ಇದ್ದರೆ ಕೃಷಿ ಮಾಡಿ. ಸ್ವಾಮೀಜಿಗಳೆಲ್ಲ ಎಲ್ಲೆಲ್ಲೋ ಬೆಟ್ಟಗುಡ್ಡಗಳ ಮೇಲೆ ಹೋಗಿ ಏನೇನೋ ಕೃಷಿ ಮಾಡುತ್ತಾರೆ. ನಾವ್ಯಾಕೆ ನಮ್ಮ ನೆಲದಲ್ಲಿ ಕೃಷಿ ಮಾಡಬಾರದು?
-ಎಸ್. ಚೇತನ್ ರೆಡ್ಡಿ, ಯುವರೈತ ಪ್ರಶಸ್ತಿ ಪುರಸ್ಕೃತ
ರವಿಕಾಂತ ಕುಂದಾಪುರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

