ಪ್ರಧಾನ ಸುದ್ದಿ

ಶಾದಿಭಾಗ್ಯ, ಮುಸ್ಲಿಮರ ಪಾಲಿಗೆ ದೌರ್ಭಾಗ್ಯ

ಶಾದಿಭಾಗ್ಯ, ಮುಸ್ಲಿಮರ ಪಾಲಿಗೆ ದೌರ್ಭಾಗ್ಯ
Published On :

'ಶಾದಿಭಾಗ್ಯ ತಕ್ಷಣ ರಾಜಕೀಯ ಲಾಭಗಳನ್ನು ನಿರೀಕ್ಷಿಸುವ ಕಾರ್ಯಕ್ರಮ. ಮೌಢ್ಯ ವಿಧೇಯಕ ಏಕದಂ ಹೇರುವಿಕೆ ಅಸಹನೀಯ...'
ಅಪ್ಪಟ ಸಂಪ್ರದಾಯಬದ್ಧ ಮುಸ್ಲಿಂ ಕುಟುಂಬದಲ್ಲಿ ಜನಿಸಿ ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡು ಉತ್ತಮ ಕನ್ನಡ ಸಾಹಿತ್ಯ ಬೆಳೆಯನ್ನು ಬೆಳೆದು ಕನ್ನಡಿಗರಿಗೆ ನೀಡುತ್ತಿರುವ ಹಿರಿಯ ಲೇಖಕಿ ಬಾನು ಮುಷ್ತಾಕ್ ಅವರಲ್ಲಿ ಸಾಮಾಜಿಕ ಸಮಸ್ಯೆಗಳ ವಿರುದ್ಧ ದನಿ ಎತ್ತುವ ದಿಟ್ಟತನವಿದೆ. ಹಿಂದಿನಿಂದಲೂ ಮಹಿಳಾ ಪರ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರ ಘೋಷಿಸಿರುವ ಶಾದಿ ಭಾಗ್ಯ ಮತ್ತು ರಾಜ್ಯ ಸರ್ಕಾರದ ಉದ್ದೇಶಿತ ಮೌಢ್ಯಗಳ ಪ್ರತಿಬಂಧಕ ಕರಡು ವಿಧೇಯಕ ಬಗ್ಗೆ ಬಾನು ಮುಷ್ತಾಕ್ ತಮ್ಮ ಅಭಿಪ್ರಾಯವನ್ನು 'ಕನ್ನಡಪ್ರಭ'ದೊಂದಿಗೆ ಹಂಚಿಕೊಂಡಾಗ...

ಶಾದಿ ಭಾಗ್ಯ ಯೋಜನೆ ಮುಸ್ಲಿಂ ಮಹಿಳೆಯರ ಭಾಗ್ಯದ ಬಾಗಿಲನ್ನು ತೆರೆಸುತ್ತದೆಯೇ?
-ಇದು ಅಪ್ಪಟ ಜನಪ್ರಿಯ ಕಾರ್ಯಕ್ರಮ. ತಕ್ಷಣದಲ್ಲಿ ರಾಜಕೀಯ ಲಾಭವನ್ನು ನಿರೀಕ್ಷಿಸುವ ಉದ್ದೇಶವೇ ಇದರ ಹಿಂದಡಗಿದೆ. ಮುಂದಿನ ಚುನಾವಣೆ ಮೇಲೆ ಕಣ್ಣಿಟ್ಟು ತಂದಿರುವ ಕಾರ್ಯಕ್ರಮ ಎಂಬುದರಲ್ಲಿ ಎರಡು ಮಾತಿಲ್ಲ. ಇಂಥ ಕಾರ್ಯಕ್ರಮಗಳಿಂದ ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಶಂಕಿಸುವಂತಾಗಿದೆ. ಸಂವಿಧಾನದ ನೀತಿ, ನಿರ್ದೇಶಕ ತತ್ವಗಳಲ್ಲಿ ಎಲ್ಲ ವರ್ಗಗಳ ಬಡವರು, ಮಹಿಳೆಯರು ಹಾಗೂ ಹಿಂದುಳಿದವರನ್ನು ಒಟ್ಟಾಗಿ ಶೈಕ್ಷಣಿಕ, ಸಾಮಾಜಿಕವಾಗಿ ಮೇಲೆತ್ತಬೇಕೆಂಬ ಆಶಯವಿದೆ. ಹೀಗೆ ಮಾಡಬೇಕಾದುದು ಸರ್ಕಾರಗಳ ಕರ್ತವ್ಯ. ಹಾಗೆ ಮಾಡದೆ ಮಂಚ ಕೊಡೋದು, ಹಣ ಕೊಡೋದು ಸರಿಯಲ್ಲ. ಇದು ಮುಸ್ಲಿಂ ಮಹಿಳೆಯರ ಪಾಲಿಗೆ ಭಾಗ್ಯದ ಬಾಗಿಲನ್ನು ಮುಚ್ಚಿದಂತಾಗುತ್ತದೆ. ಇದು ಮಹಿಳೆಯರ ಸ್ವಾಭಿಮಾನಕ್ಕೆ ಹಿನ್ನೆಡೆ ಉಂಟು ಮಾಡುವ ಕಾರ್ಯಕ್ರಮ.    

ಸಾಮಾಜಿಕ, ಶೈಕ್ಷಣಿಕವಾಗಿ ತೀರ ಹಿಂದುಳಿದಿರುವ ಮುಸ್ಲಿಂ ಮಹಿಳೆಯರ ವಿವಾಹಕ್ಕೆ ಹಣ ನೀಡಿದರೇ ಉಪಯೋಗವಾಗುವುದಿಲ್ಲವೇ?
ಹಣ, ಮಂಚ ಕೊಟ್ಟರೇ ಮುಸ್ಲಿಂ ಮಹಿಳೆಯರು ಸಬಲರಾಗುತ್ತಾರೆ ಎಂಬುದನ್ನು ಒಪ್ಪಲಿಕ್ಕಾಗದು.  ಮಂಚ ಎಂಬ ಶಬ್ಬವೇ ಅಸಹನೀಯವಾದುದು. ಮಂಚ ಮತ್ತಿತರ ಉಪಕರಣ ಪೂರೈಸುವ ಗುತ್ತಿಗೆದಾರರು, ಅಧಿಕಾರಿಗಳಿಗೆ ಇದರಿಂದ ಲಾಭವಾಗುತ್ತದೆಯೇ ಹೊರತು ಅಸಹಾಯಕ ಮಹಿಳೆಯರಿಗೆ ಕಿಂಚಿತ್ತೂ ಸಹಾಯವಾಗದು. ಇಸ್ಲಾಂ ಧರ್ಮದ 'ಮೆಹರ್‌'ಪದ್ಧತಿಯಂತೆ ವಧು ದಕ್ಷಣೆ ನೀಡಬೇಕು. ಅದೊಂದು ರಿಜಿಸ್ಟ್ರೇಷನ್ ಪ್ರಕ್ರಿಯೆಯಷ್ಟೇ. ಆದರೆ, ವರದಕ್ಷಿಣೆ ನುಸುಳುವಂತೆ ಮಾಡಿದಂತಾಗುತ್ತದೆ. ಇಸ್ಲಾಂನಲ್ಲಿ ವಿವಾಹವೆಂಬುದು ಅತ್ಯಂತ ಸರಳವಾದ ಆಚರಣೆ. ಮದುವೆ ನಂತರ ಸಮಾಜಕ್ಕೆ ಪತ್ನಿ, ಪತಿ ಎಂದು ಗುರುತಿಸಿಕೊಳ್ಳುವ ಸಲುವಾಗಿ ಹಿಂದುಗಳಲ್ಲಿ ಬೀಗರ ಊಟ ಎಂದು ಮಾಡತ್ತರಲ್ಲಾ ಹಾಗೆ 'ಬಲಿಯಾ' ಎಂಬ ಔತಣ ಕೂಟ ಮಾಡಲಾಗುತ್ತದೆ. ಇದೂ ಅದ್ಧೂರಿಯಾಗಿ ನಡೆಯುವಂತಿಲ್ಲ.

ಮತ್ತೇಕೆ ಇಂದು ಮುಸ್ಲಿಂ ಮಹಿಳೆಯರ ಪಾಲಿಗೆ ಮದುವೆ ದುಬಾರಿಯಾಗುತ್ತಿದೆಯಲ್ಲಾ?
ಉದ್ದೇಶಪೂರ್ವಕವಾಗಿ ವರದಕ್ಷಿಣೆ ಎಂಬ ಭೂತವನ್ನು ನುಸುಳುವಂತೆ ಮಾಡಿ ವಿವಾಹ ಕಠಿಣ ಸ್ವರೂಪ ಪಡೆದುಕೊಳ್ಳುತ್ತಿದೆ. ಒಂದು ವಿಷಯ ಗೊತ್ತಾ? ಮೆಹರ್ ಪದ್ಧತಿ ಪ್ರಕಾರ ವಧು ಧನ ನೀಡಬೇಕು. ಅದರಂತೆ ನಡೆಯುತ್ತಿಲ್ಲ. ಅರಬ್ ರಾಷ್ಟ್ರಗಳಲ್ಲಿ ವಧು ಧನ ನೀಡೇ ವಿವಾಹವಾಗುತ್ತದೆ. ಯುವಕರು, ಯುವತಿಯನ್ನು ವಿವಾಹವಾಗಲು ಬಿಲಿಯನ್‌ಗಟ್ಟಲೇ ಅಲ್ಲಿ ಹಣ ನೀಡಬೇಕು. ಈ ಪ್ರಮಾಣದ ಹಣ ನೀಡಲಾಗದೇ ಅಲ್ಲಿನ ಸರ್ಕಾರ ಮೆಹರ್‌ಗೆ ಸಬ್ಸಿಡಿ ನೀಡುತ್ತಿದೆ. ಭಾರತೀಯ ಸಾಮಾಜಿಕ ವ್ಯವಸ್ಥೆಯಲ್ಲಿ ವರ ದಕ್ಷಿಣೆ ನೀಡುವಂತೆ ಮಾಡಲಾಗಿದೆ. ವರನಿಗೆ ಹಣ ನೀಡುವುದು ಇಸ್ಲಾಂ ಧರ್ಮಕ್ಕೆ ವಿರುದ್ಧವಾದುದು. ಇಸ್ಲಾಂ ಧರ್ಮ ಮಹಿಳಾಸ್ನೇಹಿ.

- ಮುಸ್ಲಿಂ ಮಹಿಳೆಯರ ಸಬಲೀಕರಣ, ಸ್ವಾವಲಂಬನೆ ಹೇಗೆ?
ಎಲ್ಲ ಧರ್ಮಗಳ ನಾಡ ಹಬ್ಬಗಳಲ್ಲಿ ಎಲ್ಲ ಮಹಿಳೆಯರೂ ಪಾಲ್ಗೊಳ್ಳುವಂತೆ ಮಾಡಬೇಕು. ಅದರೆ ಅಂಥ ಕಾರ್ಯಕ್ರಮಗಳನ್ನು ಸರ್ಕಾರಗಳು ಹಮ್ಮಿಕೊಳ್ಳುವುದಿಲ್ಲ. ಪರಿಣಾಮ ಮುಸ್ಲಿಂ ಮಹಿಳೆಯರಂತೂ ಪ್ರತಿಯೊಂದನ್ನೂ ಅಂಚಿನಲ್ಲಿ ನಿಂತು ನೋಡಬೇಕಾಗಿದೆಯೇ ಹೊರತು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಅವರನ್ನು ಹೊರಗಿಡುವ ಪರಿಸ್ಥಿತಿ ಇದೆ. ವೇದಿಕೆಗಳಲ್ಲಿ ಮಾತ್ರ  ಸಮಾಜದ ಮುಖ್ಯವಾಹಿನಿಗೆ ಬರಬೇಕು  ಎಂದು ಹೇಳಲಾಗುತ್ತದೆ.  ಮುಸ್ಲಿಂ ವಿದ್ಯಾವಂತ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿ ಕೊಡಬೇಕು ಹಾಗೂ ಅವಿದ್ಯಾವಂತ ಮಹಿಳೆಯರಿಗೆ ವೃತ್ತಿ ಕೌಶಲ್ಯ ಹೆಚ್ಚಿಸುವ ತರಬೇತಿ ನೀಡಿ ಸ್ವಉದ್ಯೋಗ ಕೈಗೊಳ್ಳುವಂತೆ ಮಾಡಿ ಅವರೇ ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳುವ ಅವಕಾಶ ಕಲ್ಪಿಸಬೇಕು. ರಾಜಕೀಯ ಶಕ್ತಿ ಅಗತ್ಯವೂ ಅವರಿಗಿದೆ. ಅದು ಬಿಟ್ಟು ಶಾದಿ ಭಾಗ್ಯದಂತ ಜನಪ್ರಿಯ ಕಾರ್ಯಕ್ರಮ ಹಮ್ಮಿಕೊಳ್ಳುವುದು ಸಹನೀಯವಲ್ಲ.

ಅಲ್ಪಸಂಖ್ಯಾತರ ಮತ ಗಳಿಕೆಯಿಂದ ಇಂಥ ಯೋಜನೆಗಳನ್ನು ರೂಪಿಸಲಾಗುತ್ತದೆ ಎಂಬ ಟೀಕೆ ಬಗ್ಗೆ ಏನ್ ಹೇಳ್ತಿರಿ?
ಇದನ್ನು ತಳ್ಳಿ ಹಾಕಲಿಕ್ಕಾಗದು. ಸಂವಿಧಾನದಡಿಯಲ್ಲಿಯೇ ಮುಸ್ಲಿಂ ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು. ಹಾಗೇ ಮಾಡದೆ ಮತ ಬ್ಯಾಂಕ್‌ಗಾಗಿ ಶಾದಿಪಾದಿಯಂಥ ಯೋಜನೆಗಳನ್ನು ಜಾರಿಗೆ ತರುವುದು ತರವಲ್ಲ. ಅದು ಸಮಾಜದಲ್ಲಿ ದ್ವೇಷ ಬೆಳೆಯಲು ಕಾರಣವಾಗುತ್ತೆ.  ಬಿಜೆಪಿ ಇರಲಿ...  ಹಲವು ದಶಕಗಳವರೆಗೆ ದೇಶವಾಳಿದ ಕಾಂಗ್ರೆಸ್, ಜೆಡಿಎಸ್ ಕೂಡ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಗಮನಹರಿಸಿಲ್ಲ. ಸರ್ಕಾರದ ಕಾರ್ಯಕ್ರಮಗಳು ಇಡಿ ಸಮಾಜದ ಸಮಗ್ರ ಅಭಿವೃದ್ಧಿಯ ದೃಷ್ಟಿಕೋನದಿಂದ ಕೂಡಿರಬೇಕು. ಜಾತ್ಯಾತೀತವಾದ ನಿಲುವನ್ನು ಹೊಂದಿರಬೇಕಾಗುತ್ತದೆ. ಅಂಥ ನಾಯಕರು ಕಾಣ ಸಿಗುತ್ತಿಲ್ಲ.

ಈ ವಿಧೇಯಕ ಜಾರಿಗೊಳಿಸಿ ಒಂದು ಧರ್ಮದ ವಿರುದ್ಧ ಮತ್ತೊಂದು ಧರ್ಮವನ್ನು ಎತ್ತಿಕಟ್ಟಲಾಗುತ್ತಿದೆ ಎಂಬ ಆರೋಪವಿದೆ.
ಆಗಲೇ ಹೇಳಿದೆನಲ್ಲಾ.. ಧಾರ್ಮಿಕ ಆಚರಣೆ ತೀರ ವೈಯಕ್ತಿಕ. ಅದರ ಮೇಲೆ ತಡೆ ಹೇರಬಾರದು. ಪೂಜೆ, ಪ್ರಾರ್ಥನೆ ವೈಯಕ್ತಿಕ. ಬೇಡರ ಕಣ್ಣಪ್ಪ ತನ್ನದೆಂದು ಏನನ್ನೂ ಉಳಿಸಿಕೊಳ್ಳದೇ ಶಿವನಿಗೆ ಭಕ್ತಿ ಅರ್ಪಿಸಿದ. ದೇವರು ಮತ್ತು ಮಾನವನ ನಡುವೆ ಭಾವ ಪೂಜೆ ನಡೆಯಬೇಕು. ಧರ್ಮ ಮತ್ತು ಧಾರ್ಮಿಕ ಆಚರಣೆ ಊಟ, ನಿದ್ದೆ, ಹಸಿವಿನಷ್ಟೇ ಮುಖ್ಯ. ದೇವರ ಬಗ್ಗೆ ಶಬರಿಯ ನಿಷ್ಕಲ್ಮಶ ಭಕ್ತಿ ಬೇಕೆ ಹೊರತು ಗಣಿ ಉದ್ಯಮಿ ಜನಾರ್ದನ ರೆಡ್ಡಿಯಂಥವರು ಕೋಟ್ಯಂತರ ರುಪಾಯಿ ಬೆಲೆ ಬಾಳುವ ವಜ್ರದ ಕಿರೀಟ ಹಾಕುವುದಲ್ಲ. ಎಲ್ಲಕ್ಕಿಂತ ಆಚರಣೆ ಎಂಬುದರಲ್ಲಿ ವಿವೇಚನೆ ಮುಖ್ಯ. ಯಾವುದೇ ಒಂದು ಜಾತಿ, ಧರ್ಮದ ಆಚರಣೆಗಳು ಆಯಾ ಪ್ರಾದೇಶಿಕತೆಯ ಮನೋಭೂಮಿಕೆಗೆ ಅನುಗುಣವಾಗಿ ಭಿನ್ನವಾಗಿರುತ್ತವೆ. ಈಗ ನೋಡಿ, ಹಳೇ ಮೈಸೂರು ಮತ್ತು ಉತ್ತರ ಕರ್ನಾಟಕದ ಲಿಂಗಾಯಿತರ ಆಚರಣಾ ಪದ್ಧತಿಗಳು ವಿಭಿನ್ನವಾಗಿರುತ್ತವೆ. ಹಾಗೆಯೇ ಕರಾವಳಿ ತೀರ ಮತ್ತು ಹಳೇ ಮೈಸೂರು ಪ್ರಾಂತ್ಯದ ಮುಸ್ಲಿಂ ಆಚರಣೆಗಳಿಗೂ ಅಜಾಗಜಾಂತರ ವ್ಯತ್ಶಾಸಗಳು, ಭಿನ್ನತೆಗಳಿರುತ್ತವೆ.

ಸರ್ಕಾರದ ಉದ್ದೇಶಿತ ಮೌಢ್ಯಗಳ ಪ್ರತಿಬಂಧಕ ಕರಡು ವಿಧೇಯಕ ಬಗ್ಗೆ ಏನಂತೀರಿ?
-ಯಾವುದೇ ವಿಧೇಯಕದ ಬಗ್ಗೆ ಮೊದಲು ಸಾರ್ವಜನಿಕ ಚರ್ಚೆ ಆಗಬೇಕು. ಹಾಗೆ ಮಾಡದೇ ಏಕ್‌ದಂ ಹೇರುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರಿಯಲ್ಲ. ಧಾರ್ಮಿಕ ಆಚರಣೆ ಮತ್ತು ಮೌಢ್ಯತೆ ನಡುವೆ ತೆಳುವಾದ ಗೆರೆಯಿದೆ. ಇದನ್ನು ಗುರುತಿಸುವ ಸೂಕ್ಷ್ಮತೆ ಇರಬೇಕು. ಧಾರ್ಮಿಕ ಆಚರಣೆ ವೈಯಕ್ತಿಕವಾದುದು. ಮೌಢ್ಯ ಜನರನ್ನು ನರಳುವಂತೆ ಮಾಡುತ್ತದೆ. ಪುರಾತನ ಕಾಲದಿಂದಲೂ ಮಾನವ ಭಯ ಮತ್ತು ಅಜ್ಞಾನದೊಟ್ಟಿಗೆ ಬೆಳೆದಿದ್ದಾನೆ. ಈ ಹಿನ್ನೆಲೆಯಲ್ಲಿ ಜನಪದ ಆಚರಣೆ ಬಂದಿತ್ತು. ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿ ಧಾರ್ಮಿಕ ಹಕ್ಕು ಇದೆ. ಆದರೆ ಮಾಟ ಮಂತ್ರ ಇತ್ಯಾದಿ ಮಾನವತಾ ವಿರೋಧಿ ಆಚರಣೆಗಳನ್ನು ಶಿಕ್ಷಾರ್ಹ ಅಪರಾಧ ಎಂದು ಹೇಳಿಲ್ಲ.

ಜೋತಿಷ್ಯ ಮತ್ತು ವಾಸ್ತು ನಿಲ್ಲಿಸಬೇಕೇ?
ಜೋತಿಷ್ಯ ಮತ್ತು ವಾಸ್ತು ಮೂಲಕ ಮೂಢ ನಂಬಿಕೆಗಳನ್ನು ವ್ಯಾಪಾರೀಕರಣ ಮಾಡಲಾಗುತ್ತದೆ. ಇದು ಅಜ್ಞಾನದ ದುರ್ಬಳಕೆ ಮತ್ತು ಶೋಷಣೆ. ಇದಕ್ಕೆ ಪೂರಕವಾಗಿ ಮಾಧ್ಯಮಗಳು ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರವನ್ನು ವೈಭವೀಕರಿಸಿ, ಸಾರ್ವತ್ರಿಕಗೊಳಿಸುತ್ತಿವೆ. ಇದು ಅಪಾಯಕಾರಿ. ಮೂಢನಂಬಿಕೆ ವ್ಯಾಪಾರಿ ತಂತ್ರವಾಗಿ ಮಾಡುತ್ತಿರುವುದನ್ನು ತಡೆಯಲೇಬೇಕಾಗುತ್ತದೆ. ಮಹಾರಾಷ್ಟ್ರ ಸರ್ಕಾರ ವಿಧೇಯಕದ ಮೂಲಕ  ಮಾಟ, ಮಂತ್ರ ನಿಷೇಧಿಸಿದೆಯೇ ಹೊರತು ಧಾರ್ಮಿಕ ಆಚರಣೆಗಳನ್ನಲ್ಲ. ಏನೇ ಇರಲಿ ಯಾವುದೇ ಧರ್ಮಾಚರಣೆ ಮತ್ತು ಮೌಢ್ಯಚರಣೆಯಲ್ಲಿ ವಿವೇಚನೆ ಮತ್ತು ವಿವೇಕ ಮುಖ್ಯ.

- ದಯಾಶಂಕರ ಮೈಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.