ನಕ್ಸಲ್ ಬೆದರಿಕೆ ಜಗ್ಗದ ಮತದಾರ

ಪಿಟಿಐ ರಾಯ್ಪುರ/ನವದೆಹಲಿ ನ.11-
ಬರೋಬ್ಬರಿ ಬಂದೋಬಸ್ತ್; ನಕ್ಸಲೀಯರ ಬೆದರಿಕೆ ನಡುವೆಯೂ ಶೇ.67ರಷ್ಟು ಹಕ್ಕು ಚಲಾವಣೆ.
-ಇದು ಛತ್ತೀಸ್ಗಡದಲ್ಲಿ 18 ಸ್ಥಾನಗಳಿಗೆ ಸೋಮವಾರ ನಡೆದ ಮೊದಲ ಹಂತದ ಮತದಾನದ ಪ್ರಮುಖ ಅಂಶಗಳು.
ಮತಗಟ್ಟೆಗಳಲ್ಲಿ ನಕ್ಸಲೀಯರ ಜತೆಗೆ ಗುಂಡಿನ ಚಕಮಕಿ, ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಒಬ್ಬ ಸಿಬ್ಬಂದಿ ಸಾವು. ಈ ಚುನಾವಣೆಯಲ್ಲಿ ವಿದ್ಯುನ್ಮಾನ ಮತ ಯಂತ್ರಗಳಲ್ಲಿ ನನ್ ಆಫ್ದ ಎಬವ್ (ನನ್ನ ಆಯ್ಕೆ ಮೇಲಿನ ಯಾರೂ ಅಲ್ಲ) ಎಂಬ ಆಯ್ಕೆಯನ್ನು ಇದೇ ಮೊದಲ ಬಾರಿಗೆ ಬಳಸಲಾಗಿದೆ. ನ.19ರಂದು ಎರಡನೇ ಹಂತದ ಮತದಾನ ನಡೆಯಲಿದ್ದು, ಮುಂದಿನ ತಿಂಗಳ ಎಂಟನೇ ತಾರೀಖೆಗೆ ಮತ ಎಣಿಕೆ ನಡೆಯಲಿದೆ.
ಯಾರೆಲ್ಲ ಪ್ರಮುಖರು?: ಮುಖ್ಯಮಂತ್ರಿ ಡಾ.ರಮಣ್ ಸಿಂಗ್ ಮತ್ತು ಅವರ ಸಂಪುಟದ ಮೂವರು ಸಚಿವರು ಸೇರಿದಂತೆ 143 ಮಂದಿ ಅಭ್ಯರ್ಥಿಗಳ ಭವಿಷ್ಯ ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಭದ್ರವಾಗಿದೆ.
ದಂತೇವಾಡದಲ್ಲಿ ಸಿಬ್ಬಂದಿ ಸಾವು: ದಂತೇವಾಡ ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯ ಮುಗಿಸಿ ಹಿಂತಿರುಗುತ್ತಿದ್ದ ಸಿಆರ್ಪಿಎಫ್ ಸಿಬ್ಬಂದಿ ಹಾಗೂ ನಕ್ಸಲೀಯರ ನಡುವಿನ ಗುಂಡಿನ ಚಕಮಕಿಯಲ್ಲಿ ಸಿಆರ್ಪಿಎಫ್ ಸಿಬ್ಬಂದಿಯೊಬ್ಬರು ಅಸುನೀಗಿದ್ದಾರೆ. ನಕ್ಸಲರು ಮನಬಂದಂತೆಗುಂಡು ಹಾರಿಸಿದ್ದರಿಂದ ಈ ಘಟನೆ ನಡೆದಿದೆ. ಇದಾದ ಬಳಿಕ ಅವರು ನಾಪತ್ತೆಯಾಗಿದ್ದಾರೆ
ಬಾಂಬ್ ವಶ: ಕಂಕೇರ್ ಜಿಲ್ಲೆಯಲ್ಲಿ ಪಾರ್ಸೆಲ್ ಒಂದರಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಿಸಿ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ಬಾಂಬ್ ಅನ್ನು ನಿಷ್ಕ್ರಿಯಗೊಳಿಸಲು ಯತ್ನಿಸುತ್ತಿದ್ದಾಗ ಈ ಘಟನೆ ನಡೆದಿದೆ. ನಾರಾಯಣಪುರ ಜಿಲ್ಲೆಯ ಊರ್ಚಾದಲ್ಲಿ ಟಿಫಿನ್ ಬಾಂಬ್ ಮತ್ತು ಕಂಕೇರ್ ಜಿಲ್ಲೆಯಲ್ಲಿ ಸಜೀವ ಬಾಂಬ್, ಬಿಜಾಪುರ ಜಿಲ್ಲೆಯ ಮುರ್ಕಿನಾರ್ ಎಂಬಲ್ಲಿ 10 ಕೆ.ಜಿ ಪೈಪ್ ಬಾಂಬ್, ದಂತೇವಾಡ ಜಿಲ್ಲೆಯಲ್ಲಿ 10 ಬಾಂಬ್ಗಳನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿ, ವಶಪಡಿಸಿಕೊಂಡಿವೆ. ದಂತೇವಾಡ, ಬಿಜಾಪುರ ಜಿಲ್ಲೆಗಳ ಕೆಲ ಮತಗಟ್ಟೆಗಳಲ್ಲಿ ನಕ್ಸಲೀಯರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.
ನಕ್ಸಲರಿಗೆ ಸೆಡ್ಡು
ಕೆಂಪು ಉಗ್ರರ ನೆಲೆಯಾಗಿರುವ ಬಸ್ತಾರ್, ರಾಜನಂದಗಾಂವ್, ಕಂಕೇರ್, ಬಿಜಾಪುರ, ಸುಕ್ಮಾ, ಕೊಂಡಗಾಂವ್, ನಾರಾಯಣಪುರ, ದಂತೇವಾಡ ಜಿಲ್ಲೆಗಳಲ್ಲಿರುವ ಮತಕ್ಷೇತ್ರಗಳಲ್ಲಿನ ಸುಮಾರು 20 ಲಕ್ಷ ಮತದಾರರು ಹಕ್ಕು ಚಲಾಯಿಸಿದರು. ಈ ಪ್ರದೇಶದಲ್ಲಿ ಮತದಾನ ಬಹಿಷ್ಕರಿಸುವಂತೆ ಕೆಂಪು ಉಗ್ರರು ಕರೆ ನೀಡಿದ್ದರೂ ಸಹ ಮತದಾರರು ಧೈರ್ಯದಿಂದ ಹಕ್ಕು ಚಲಾವಣೆ ಮಾಡಿದ್ದು ಗಮನಾರ್ಹ ಅಂಶ. ಬೆಳಗ್ಗೆ 7 ಗಂಟೆಗೆ ಮತದಾನ ನೀರಸವಾಗಿದ್ದರೂ ನಂತರದ ಗಂಟೆಗಳಲ್ಲಿ ಬಿರುಸಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


