ಶೌಚಾಲಯ ಇದ್ರಷ್ಟೆ ಸರ್ಕಾರದ ಸಹಾಯ

- ಬಸವ ವಸತಿ ಯೋಜನೆ ಸಹಾಯಧನ ಕುರಿತಂತೆ ಸಂಪುಟ ತೀರ್ಮಾನ
- ಪರಿಶಿಷ್ಟರಿಗೆ ನೀಡುವ ಶೌಚಾಲಯ ಸಹಾಯಧನ ರು. 15 ಸಾವಿರಕ್ಕೆ ಹೆಚ್ಚಳ
ಕನ್ನಡಪ್ರಭ ವಾರ್ತೆ, ಬೆಂಗಳೂರು, ನ.13-
ಸರ್ಕಾರದ ಬಸವ ವಸತಿ ಯೋಜನೆಯಡಿ ನಿರ್ಮಿಸುವ ಮನೆಗಳಲ್ಲಿ ಶೌಚಾಲಯ ನಿರ್ಮಿಸಿದರೆ ಮಾತ್ರ ಸರ್ಕಾರದಿಂದ ಸಹಾಯಧನ ಮಂಜೂರಾಗಲಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ಸಮಸ್ಯೆ ಬಗೆಹರಿಸಲು ನಿರ್ಮಲ ಭಾರತ ಅಭಿಯಾನದಲ್ಲಿ ಶೌಚಾಲಯಗಳನ್ನು ನಿರ್ಮಿಸಲು ಸಹಾಯಧನ ನೀಡಲಾಗುತ್ತದೆಯಾದರೂ ಅದು ಸರಿಯಾಗಿ ಬಳಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ತೀರ್ಮಾನಕ್ಕೆ ಬಂದಿದೆ.
ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ನಿರ್ಮಲ ಭಾರತ ಅಭಿಯಾನದಡಿ ಶೌಚಾಲಯ ನಿರ್ಮಿಸಲು ಬಡವರಿಗೆ 10 ಸಾವಿರ ಸಹಾಯಧನ ನೀಡಲಾಗುತ್ತದೆ. ಇನ್ನು ಮುಂದೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಈ ಸಹಾಯಧನ ಮೊತ್ತವನ್ನು 15 ಸಾವಿರಕ್ಕೆ ಹೆಚ್ಚಿಸಲಾಗುತ್ತದೆ.
ಇದರ ಜತೆಗೆ ಬಸವ ವಸತಿ ಯೋಜನೆ ಮನೆಗಳಿಗೆ ಈ ಸಹಾಯಧನವನ್ನು ಮನೆಗಳಿಗೆ ನೀಡುವ ಸಹಾಯಧನದ ಜತೆ ವಿತರಿಸಲಾಗುತ್ತದೆ. ಅಂದರೆ, ಬಸವ ವಸತಿ ಯೋಜನೆ ಮನೆಗೆ ಸರ್ಕಾರ 1.20 ಲಕ್ಷ ಸಹಾಯಧನ ನೀಡುತ್ತದೆ. ಇದರ ಜತೆಗೆ ಶೌಚಾಲಯ ನಿರ್ಮಿಸಲು 10 ಸಾವಿರವನ್ನು ಸೇರಿಸಿ ನೀಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಈ ಮೊತ್ತ 15 ಸಾವಿರವಾಗುತ್ತದೆ. ನಿರ್ಮಿಸುವ ಮನೆಯಲ್ಲಿ ಶೌಚಾಲಯವಿದ್ದರೆ ಮಾತ್ರ ವಸತಿ ಯೋಜನೆ ಮತ್ತು ಶೌಚಾಲಯ ಸಹಾಯಧನ ನೀಡಲಾಗುತ್ತದೆ.
ರಾಜೀವ್ಗಾಂಧಿ ಚೈತನ್ಯ ಯೋಜನೆ: ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿ ವರ್ಷ 2 ಲಕ್ಷ ಯುವಕ/ಯುವತಿಯರಿಗೆ ಸ್ವಯಂ ಉದ್ಯೋಗ ಮತ್ತು ಕೌಶಲ್ಯ ವೃದ್ಧಿ ಕಾರ್ಯಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಅದರಂತೆ ಒಂದು ಲಕ್ಷ ಮಂದಿಯನ್ನು ಗುರುತಿಸಿ ಅವರಿಗೆ ಸಬ್ಸಿಡಿ ಮೂಲಕ ಹಣದ ಸಹಾಯ ಒದಗಿಸುವುದು ಮತ್ತು ಒಂದು ಲಕ್ಷ ಮಂದಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಲು ತೀರ್ಮಾನಿಸಲಾಗಿದ್ದು, ಇದಕ್ಕಾಗಿ 105 ಕೋಟಿ ಅನುದಾನ ಮಂಜೂರು ಮಾಡಲಾಗಿದೆ.
ಬತ್ತಕ್ಕೆ 1600 ಬೆಂಬಲ ಬೆಲೆ: ರಾಜ್ಯದಲ್ಲಿ ಬತ್ತಕ್ಕೆ 1600 ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಕೇಂದ್ರ ಸರ್ಕಾರ ಈಗಾಗಲೇ ಪ್ರತಿ ಕ್ವಿಂಟಲ್ ಬತ್ತಕ್ಕೆ 1310 ಬೆಂಬಲ ಬೆಲೆ ನಿಗದಿಪಡಿಸಿದೆ.
ಇದರ ಜತೆಗೆ ರಾಜ್ಯ ಸರ್ಕಾರ 290 ನೀಡುತ್ತಿದ್ದು, ಒಟ್ಟು 1600 ಬೆಂಬಲ ಬೆಲೆ ನೀಡಿ ಭತ್ತ ಖರೀದಿಸಲಾಗುತ್ತದೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅನ್ನಭಾಗ್ಯ ಯೋಜನೆಗೆ ಚತ್ತೀಸ್ಗಡದಿಂದ ಅಕ್ಕಿ ತರಲಾಗುತ್ತಿದ್ದು, ಇದನ್ನು ಸಂಪೂರ್ಣ ನಿಲ್ಲಿಸುವ ಉದ್ದೇಶದಿಂದ ಸರ್ಕಾರದ ವಿವಿಧ ಸಂಸ್ಥೆಗಳಿಗೇ ಬೆಂಬಲ ಬೆಲೆ ನೀಡಿ ಭತ್ತ ಖರೀದಿಸಲಿದ್ದು, ಇದನ್ನು ಅಕ್ಕಿಯಾಗಿ ಪರಿವರ್ತಿಸಿ ಅನ್ನಭಾಗ್ಯ ಯೋಜನೆಗೆ ನೀಡಲಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯೂ ಕಡಿಮೆಯಾಗುತ್ತದೆ.
3 ವರ್ಷದಲ್ಲಿ 11 ಸಾವಿರ ಪೊಲೀಸ್ ಮನೆ: ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ಸುಮಾರು 11 ಸಾವಿರ ಮನೆಗಳನ್ನು ನಿರ್ಮಿಸಲು ಸರ್ಕಾರ ಅನುಮೋದನೆ ನೀಡಿದೆ. ಪ್ರಸ್ತುತ ಪೊಲೀಸ್ ಪೇದೆಗಳು, ಮುಖ್ಯ ಪೇದೆಗಳು, ಸಹಾಯಕ ಸಬ್ ಇನ್ಸ್ಪೆಕ್ಟರ್ಗಳಿಗೆ 10260 ಮತ್ತು ಸಬ್ ಇನ್ಸ್ಪೆಕ್ಟರ್ಗಳಿಗೆ 740 ಮನೆ ಸೇರಿ 11 ಸಾವಿರ ಮನೆಗಳನ್ನು ನಿರ್ಮಿಸಬೇಕಿದೆ. ಇದಕ್ಕಾಗಿ ಹುಡ್ಕೋದಿಂದ 1018 ಕೋಟಿ ಸಾಲ ಪಡೆಯಲಾಗುತ್ತದೆ. ಜತೆಗೆ ಸರ್ಕಾರದಿಂದ 454.5 ಕೋಟಿ ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
ಇತರೆ ಪ್ರಮುಖ ನಿರ್ಧಾರಗಳು
-ಬಿಪಿಎಲ್ ಕಾರ್ಡ್ದಾರರ ಜತೆಗೆ ಎಲ್ಲಾ ಎಪಿಎಲ್ ಕಾರ್ಡ್ದಾರರಿಗೂ ವಾಜಪೇಯಿ ಆರೋಗ್ಯ ಶ್ರೀ ವಿಮಾ ಯೋಜನೆ ವಿಸ್ತರಣೆ. ಇದರಿಂದ ಒಂದೂವರೆ ಕೋಟಿಗೂ ಹೆಚ್ಚು ಮಂದಿಗೆ ಅನುಕೂಲ.
-ಸರ್ಕಾರ ಈಗಾಗಲೇ ನಿರ್ಧರಿಸಿದಂತೆ ಕೃಷಿ ಬೆಲೆ ಆಯೋಗ ರಚನೆಗೆ ಸಂಬಂಧಿಸಿ ಅದು ಹೇಗಿರಬೇಕು? ಅದರ ಕಾರ್ಯವ್ಯಾಪ್ತಿ, ಕೈಗೊಳ್ಳಬೇಕಾದ ಕಾರ್ಯಕ್ರಮಗಳನ್ನು ನಿರ್ಧರಿಸಲು ಸಚಿವ ಸಂಪುಟ ಉಪಸಮಿತಿ ರಚನೆ.
-ಮಿತಿಮೀರಿ ಅಂತರ್ಜಲ ಬಳಕೆಗೆ ಕಡಿವಾಣ ಹಾಕಲು ಮತ್ತು ಅದರ ಸುಧಾರಣೆಗೆ ಪ್ರತ್ಯೇಕ ಕಾಯ್ದೆ ಇದೆಯಾದರೂ ಅದು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನಿನ ಸಮರ್ಪಕ ಜಾರಿಗೆ ಪ್ರತ್ಯೇಕ ಅಂತರ್ಜಲ ನಿರ್ದೇಶನಾಲಯ ಸ್ಥಾಪಿಸಲು ತೀರ್ಮಾನ.
-ಸಂಕಷ್ಟದಲ್ಲಿರುವ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ 27 ಕೋಟಿ ಸಾಲ ಪಡೆಯಲು ಸರ್ಕಾರದಿಂದ ಖಾತರಿ
-ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ನಿಯಮ-2013 ರಚನೆ. ಈಗಾಗಲೇ ಇರುವ ಕಾಯ್ದೆ ಜಾರಿಗೆ ನಿಯಮ ರಚಿಸಿ ದಿನಗೂಲಿ ನೌಕರರಿಗೂ ಸರ್ಕಾರಿ ನೌಕರರಂತೆ ವೇತನ ಮತ್ತು ಸೌಲಭ್ಯಗಳನ್ನು ಒದಗಿಸುವುದು.
-ರಾಜ್ಯದಲ್ಲಿರುವ 216 ಖಜಾನೆ ಕಟ್ಟಡಗಳ ದುರಸ್ತಿ, ಆಧುನೀಕರಣಕ್ಕೆ 36.58 ಕೋಟಿ ಮಂಜೂರು.
-ಕೇಂದ್ರದಿಂದ ಬರುವ ಸೀಮೆಎಣ್ಣೆ ಪ್ರಮಾಣ ಆಧರಿಸಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕಾರ್ಡ್ಗೆ ಎಷ್ಟು ಸೀಮೆಎಣ್ಣೆ ವಿತರಿಸಬೇಕು ಎಂಬ ನಿರ್ಧಾರ ಕೈಗೊಳ್ಳುವ ಅಧಿಕಾರ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ.
-ಕೊಳಚೆ ನಿರ್ಮೂಲನಾ ಮಂಡಳಿಗೆ ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ.
-ಬಿಬಿಎಂಪಿ ವ್ಯಾಪ್ತಿಯಲ್ಲಿ ಬಿ ಖಾತಾ ನೋಂದಣಿಗೆ ಅವಕಾಶ. ಇದರ ಜತೆಗೆ ಅಕ್ರಮ-ಸಕ್ರಮದಡಿಯಲ್ಲೂ ಬಿ ಖಾತಾ ನೋಂದಣಿ.
-ಗ್ರಾಮ ಪಂಚಾಯ್ತಿಗಳ ಸಬಲೀಕರಣಕ್ಕಾಗಿ ವಿಶ್ವಬ್ಯಾಂಕ್ ನೆರವಿನ ಯೋಜನೆಯಡಿ ಗ್ರಾಮ ಪಂಚಾಯ್ತಿಗಳಿಗೆ ಕಂಪ್ಯೂಟರ್ ಖರೀದಿ ಮತ್ತು ತಾಲೂಕು ಪಂಚಾಯ್ತಿಗಳಿಗೆ ಪರಿಕರಗಳ ಖರೀದಿಗೆ 29.54 ಕೋಟಿ ಮಂಜೂರು.
-ಬೆಂಗಳೂರಿನ ಸಿಟಿ ರೇಲ್ವೆ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಹೆಸರಿಡುವಂತೆ ರೇಲ್ವೆ ಇಲಾಖೆಗೆ ಪ್ರಸ್ತಾವ ಸಲ್ಲಿಸುವುದು.
-ಬೆಳಗಾವಿ ತಾಲೂಕು ಮಂಗೋತ್ರಿ ನಾಲೆಗೆ ಕನಾಯೆ ನೀರಾವರಿ ಯೋಜನೆಗೆ 79 ಕೋಟಿ ವೆಚ್ಚ ಮಾಡಲು ಆಡಳಿತಾತ್ಮಕ ಅನುಮೋದನೆ.
-4013 ಕೋಟಿ ವೆಚ್ಚದಲ್ಲಿ ನಾರಾಯಣಪುರ ಎಡದಂಡೆ ಕಾಲುವೆ ವಿಸ್ತರಣೆ, ಆಧುನೀಕರಣ, ನವೀಕರಣಕ್ಕೆ ಆಡಳಿತಾತ್ಮಕ ಅನುಮೋದನೆ.
-ತುಂಗಾ ಮೇಲ್ದಂಡೆ ಯೋಜನೆ ಜಾರಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು 2561 ಕೋಟಿ ಬಿಡುಗಡೆಗೆ ಸಮ್ಮತಿ.
-ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕಾಯ್ದೆಗೆ ಸಮಗ್ರ ತಿದ್ದುಪಡಿಗೆ ಅನುಮೋದನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


