ಪ್ರಧಾನ ಸುದ್ದಿ

ಪಶ್ಚಿಮ ಘಟ್ಟದಲ್ಲಿ ಅಭಿವೃದ್ಧಿಗೆ ನಿಷೇಧ

ಪಶ್ಚಿಮ ಘಟ್ಟದಲ್ಲಿ ಅಭಿವೃದ್ಧಿಗೆ ನಿಷೇಧ
Published On :

ನವದೆಹಲಿ: ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿರುವ 60 ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಕೈಗೊಳ್ಳದಂತೆ ಕೇಂದ್ರ ಪರಿಸರ ಸಚಿವಾಲಯ ಕರ್ನಾಟಕ ಸೇರಿದಂತೆ 6 ರಾಜ್ಯ ಸರ್ಕಾರಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದೆ.
ಪಶ್ಚಿಮಘಟ್ಟಕ್ಕೆ ಸಂಬಂಧಿಸಿ ಗಾಡ್ಗೀಳ್ ಸಮಿತಿ ನೀಡಿದ್ದ ವರದಿಯನ್ನು ಕೈಬಿಟ್ಟು ಕೆ. ಕಸ್ತೂರಿರಂಗನ್ ನೇತೃತ್ವದ ಸಮಿತಿಯು ನೀಡಿದ್ದ ವಿವಾದಾತ್ಮಕ ವರದಿಯನ್ನು ಅಂಗೀಕರಿಸಿದ ಬೆನ್ನಲ್ಲೇ ಈ ಆದೇಶ ಹೊರಬಿದ್ದಿದೆ.

ತಪ್ಪಿದರೆ ಕಾನೂನು ಕ್ರಮ: 60 ಸಾವಿರ ಚದರ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳು, ಕಲ್ಲು ಹಾಗೂ ಇತರೆ ಗಣಿಗಾರಿಕೆಯನ್ನು ನಿಷೇಧಿಸಿ ಪರಿಸರ ಸಚಿವಾಲಯ ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ಸರ್ಕಾರಕ್ಕೆ ಆದೇಶ ಹೊರಡಿಸಿದೆ.            
ಈ ಆದೇಶವು ತತ್‌ಕ್ಷಣವೇ ಜಾರಿಯಾಗಲಿದ್ದು, ಮುಂದಿನ ಆದೇಶ ಬರುವವರೆಗೆ ಚಾಲ್ತಿಯಲ್ಲಿರುತ್ತದೆ ಎಂದೂ ಹೇಳಿದೆ. ಒಂದು ವೇಳೆ ಈ ಆದೇಶದ ಉಲ್ಲಂಘನೆಯಾದಲ್ಲಿ 1986ರ ಪರಿಸರ ಸಂರಕ್ಷಣಾ ಕಾಯ್ದೆಯನ್ವಯ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಸಚಿವಾಲಯ ನೀಡಿದೆ.

ಆದೇಶದಲ್ಲೇನಿದೆ?: ಗಣಿಗಾರಿಕೆ, ಕಲ್ಲು ಗಣಿಗಾರಿಕೆ, ಮರಳು ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರ, 20 ಸಾವಿರ ಚದರ ಮೀಟರ್ ಹಾಗೂ ಅದಕ್ಕಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡ ಮತ್ತು ನಿರ್ಮಾಣ ಯೋಜನೆಗಳು, 1.50 ಲಕ್ಷ ಚದರ ಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಪಟ್ಟಣ ಮತ್ತು ಪ್ರದೇಶ ಅಭಿವೃದ್ಧಿ ಯೋಜನೆಗಳನ್ನು ಈ ಪ್ರದೇಶದಲ್ಲಿ ನಿಷೇಧಿಸಲಾಗಿದೆ ಎಂದು ಸಚಿವಾಲಯ ತನ್ನ ಆದೇಶದಲ್ಲಿ ತಿಳಿಸಿದೆ. ಜತೆಗೆ, ಹೆಚ್ಚು ಮಾಲಿನ್ಯಕಾರಕ ಕೈಗಾರಿಕೆ(ರೆಡ್ ಕ್ಯಾಟಗರಿ ಇಂಡಸ್ಟ್ರೀಸ್)ಗಳ ಕಾರ್ಯನಿರ್ವಹಣೆಗೂ ನಿಷೇಧ ಹೇರಲಾಗಿದೆ.

ಸಮಿತಿ ಏನು ಹೇಳಿತ್ತು?: ಕಸ್ತೂರಿರಂಗನ್ ನೇತೃತ್ವದ 10 ಮಂದಿ ಸದಸ್ಯರ ಸಮಿತಿಯು ಇತ್ತೀಚೆಗಷ್ಟೇ ಪಶ್ಚಿಮಘಟ್ಟದ ಬಗೆಗಿನ ವರದಿ ನೀಡಿತ್ತು. ಪಶ್ಚಿಮಘಟ್ಟದ ಶೇ.37ರಷ್ಟು ಪ್ರದೇಶದಲ್ಲಿ ನೈಸರ್ಗಿಕ ಸಂಪತ್ತು ಸಮೃದ್ಧವಾಗಿದೆ. ಇಲ್ಲಿ ಅರಣ್ಯನಾಶದ ಪ್ರಮಾಣ ಹಾಗೂ ಜನಸಾಂದ್ರತೆಯೂ ಕಡಿಮೆಯಿದ್ದು, ರಕ್ಷಿತ ಅರಣ್ಯ ಪ್ರದೇಶಗಳು, ವಿಶ್ವ ಪರಂಪರೆ ತಾಣಗಳು, ಹುಲಿ ಮತ್ತು ಆನೆ ಕಾರಿಡಾರ್‌ಗಳು ಇವೆ. ಹಾಗಾಗಿ ಇದನ್ನು ಸೂಕ್ಷ್ಮ ಪ್ರದೇಶವೆಂದು ಸಮಿತಿ ಗುರುತಿಸಿತ್ತು. ಜತೆಗೆ, ಗಣಿಗಾರಿಕೆ ಹಾಗೂ ನಗರೀಕರಣದಿಂದಾಗಿ ಪಶ್ಚಿಮ ಘಟ್ಟಕ್ಕೆ ಹಿಂದೆಂದೂ ಕಾಣದ ಅಪಾಯ ಎದುರಾಗಿದೆ. ಹಾಗಾಗಿ ಗಣಿಗಾರಿಕೆ, ಮಾಲಿನ್ಯಕಾರಕ ಕೈಗಾರಿಕೆಗಳಂತಹ ಪರಿಸರಕ್ಕೆ ಹಾನಿ ಉಂಟುಮಾಡುವ ಚಟುವಟಿಕೆಗಳಿಗೆ ಸಂಬಂಧಿಸಿ 'ಅಸಹನೆಯ ನೀತಿ'ಯನ್ನು ಜಾರಿಮಾಡುವಂತೆಯೂ ಸಮಿತಿಯು ತನ್ನ ಶಿಫಾರಸಿನಲ್ಲಿ ಹೇಳಿತ್ತು.
ಅಭಿವೃದ್ಧಿ ಕಾರ್ಯ ನಿಷೇಧಗೊಂಡ ಪ್ರದೇಶದ ವ್ಯಾಪ್ತಿ: 60 ಸಾವಿರ ಚದರ ಕಿ.ಮೀ.
ಯಾವ ರಾಜ್ಯಗಳಿಗೆ ಆದೇಶ?: ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ, ಗುಜರಾತ್.

ಜಾರಿ ಯಾವಾಗ?: ತಕ್ಷಣದಿಂದಲೇ. ಮುಂದಿನ ಆದೇಶದವರೆಗೆ ಮುಂದುವರಿಕೆ
ನಿಷೇಧಿತ ಕಾರ್ಯಗಳು: ಗಣಿಗಾರಿಕೆ, ಕಲ್ಲು, ಮರಳು ಗಣಿಗಾರಿಕೆ, ಉಷ್ಣ ವಿದ್ಯುತ್ ಸ್ಥಾವರ, 20 ಸಾವಿರ ಚ.ಮೀ. ಹಾಗೂ ಅದಕ್ಕಿಂತ ಹೆಚ್ಚಿನ ಪ್ರದೇಶದಲ್ಲಿ ಕಟ್ಟಡ ಅಥವಾ ನಿರ್ಮಾಣ ಕಾಮಗಾರಿ, ಟೌನ್‌ಶಿಪ್, ಮಾಲಿನ್ಯಕಾರಕ ಕೈಗಾರಿಕೆಗಳು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.