ಅನುದಾನಿತ ಕಾಲೇಜುಗಳಲ್ಲಿ 'ಗುರು ಬರ'
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ನ. 18-
ರಾಜ್ಯದ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಬರ ಎದುರಾಗಿದೆ. ಸರ್ಕಾರ ಕಾಲೇಜು ಉಪನ್ಯಾಸಕರ ಹುದ್ದೆ ಭರ್ತಿಗೆ ಅನುಮತಿ ನೀಡದಿರುವ ಪರಿಣಾಮ ವಿದ್ಯಾರ್ಥಿಗಳ ಭವಿಷ್ಯವೇ ಮಂಕಾಗಿದೆ.
ಹೌದು. ಕಳೆದ ಮೂರು ವರ್ಷಗಳಿಂದ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಒಂದೇ ಒಂದು ಉಪನ್ಯಾಸಕರ ಹುದ್ದೆ ಭರ್ತಿಗೆ ಸರ್ಕಾರ ಅನುಮತಿ ನೀಡದೆ ವಿದ್ಯಾರ್ಥಿಗಳನ್ನು ಸಂಕಷ್ಟಕ್ಕೆ ತಳ್ಳಿದೆ.
ರಾಜ್ಯದ ವಿವಿಧ ಅನುದಾನಿತ ಪಪೂ ಕಾಲೇಜಿನಲ್ಲಿ ಬರೋಬ್ಬರಿ 292 ಉಪನ್ಯಾಸಕರ ಹುದ್ದೆ ಖಾಲಿ ಇವೆ. 2010 ಜುಲೈನಲ್ಲಿ ಖಾಲಿ ಹುದ್ದೆ ಭರ್ತಿ ಮಾಡಲು ಅನುಮತಿ ಕೊಟ್ಟಿದ್ದೇ ಅಂತಿಮ. ಹೀಗಿರುವಾಗ 2010ರಿಂದ ಈವರೆಗೂ ಒಂದೇ ಒಂದು ಹುದ್ದೆ ಭರ್ತಿಗೆ ಮುಂದಾಗಿಲ್ಲ. ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಉಪನ್ಯಾಸಕರ ಪೈಕಿ ಕೆಲವರು ನಿವೃತ್ತಿ ಹೊಂದಿದರೆ, ಮತ್ತೆ ಕೆಲವರ ಅಕಾಲಿಕ ಮರಣದಿಂದ ಆ ಹುದ್ದೆಗಳು ಖಾಲಿಯಾಗಿವೆ.
ದೇವರು ಕೊಟ್ಟರೂ: ಖಾಲಿ ಇರುವ ಉಪನ್ಯಾಸಕರ ಹುದ್ದೆ ಭರ್ತಿ ವಿಷಯದಲ್ಲಿ 'ದೇವರು ಕೊಟ್ಟರೂ ಪೂಜಾರಿ ಕೊಡ' ಎನ್ನುವಂತಾಗಿದೆ. 2012ರಲ್ಲಿಯೇ ಖಾಲಿ ಇರುವ 292 ಉಪನ್ಯಾಸಕ ಹುದ್ದೆ ಭರ್ತಿಗೆ ಸರ್ಕಾರ ಅಗತ್ಯಕ್ಕೆ ಅನುಸಾರವಾಗಿ ಹಣಕಾಸು ಇಲಾಖೆಗೆ ಪ್ರಸ್ತಾವನೆ ಹೋಗಿತ್ತು. ಈ ಕಡತ ಪರಿಶೀಲಿಸಿದ ಹಣಕಾಸು ಇಲಾಖೆ ಹುದ್ದೆ ಭರ್ತಿಗೆ ಅನುಮತಿ ನೀಡಿ ಮುಂದಿನ ಪ್ರಕ್ರಿಯೆಗೆ ಕಡತವನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಗೆ ಕಳುಹಿಸಿತ್ತು. ಆದರೆ, ಶಿಕ್ಷಣ ಇಲಾಖೆ ಈ ಕಡತವನ್ನು ವಿಲೇವಾರಿ ಮಾಡದೆ ಹಾಗೇ ಉಳಿಸಿಕೊಂಡಿದೆ. ಎಷ್ಟೋ ಸಂದರ್ಭದಲ್ಲಿ ಹಣಕಾಸು ಇಲಾಖೆಯ ಅನುಮತಿ ದೊರೆಯುವುದಿಲ್ಲ, ಆದರಿಲ್ಲಿ ಹಣಕಾಸು ಇಲಾಖೆಯ ಅನುಮತಿ ಸಿಕ್ಕರೂ ಉಪನ್ಯಾಸಕರ ಹುದ್ದೆ ಭರ್ತಿಗೆ ಶಿಕ್ಷಣ ಇಲಾಖೆ ಅನುಮತಿ ಆದೇಶ ಹೊರಡಿಸದಿರುವುದು ವಿಪರ್ಯಾಸ.
ವಯೋವುತಿ ಮೀರುವ ಆತಂಕ: ಇನ್ನೊಂದು ಗಮನಾರ್ಹ ಸಂಗತಿಯೆಂದರೆ ಉಪನ್ಯಾಸಕ ಹುದ್ದೆ ಭರ್ತಿಗೆ ಸರ್ಕಾರ ಅನುಮತಿ ನೀಡದಿರುವುದು ಕೇವಲ ವಿದ್ಯಾರ್ಥಿಗಳನ್ನು ಮಾತ್ರವಲ್ಲ, ಉಪನ್ಯಾಸಕ ಹುದ್ದೆಗಾಗಿ ಕಾದು ಕುಳಿತ ಅಭ್ಯರ್ಥಿಗಳನ್ನೂ ಸಂಕಷ್ಟಕ್ಕೆ ನೂಕಿದೆ.
ಅನುದಾನಿತ ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಲು ಸರ್ಕಾರ ಸಾಮಾನ್ಯ ವರ್ಗಕ್ಕೆ 40 ವರ್ಷ, ಹಿಂದುಳಿದ ವರ್ಗಕ್ಕೆ 43 ವರ್ಷ ಹಾಗೂ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡಕ್ಕೆ 45 ವರ್ಷ ವಯೋವುತಿ ನಿಗದಿ ಮಾಡಿದೆ. ಇಂಥ ಪ್ರಸಂಗದಲ್ಲಿ ಅನುದಾನಿತ ಕಾಲೇಜಿನಲ್ಲಾದರೂ ಹುದ್ದೆ ಗಿಟ್ಟಿಸಿಕೊಳ್ಳೋಣ ಎಂದು ಕಾಯುತ್ತಿರುವ ಲಕ್ಷಾಂತರ ಅಭ್ಯರ್ಥಿಗಳನ್ನು ಸರ್ಕಾರ ನಿರಾಸೆಗೆ ಕೆಡವಿದೆ.
ರಾಜ್ಯದ ಅನುದಾನಿತ ಪಪೂ ಕಾಲೇಜಿನಲ್ಲಿ 292 ಉಪನ್ಯಾಸಕರ ಹುದ್ದೆ ಖಾಲಿ ಇರುವ ಸಂಗತಿ ನನ್ನ ಗಮನಕ್ಕೆ ಬಂದಿದೆ. ಈ ಕುರಿತಂತೆ ಅಧಿಕಾರಿಯೊಂದಿಗೆ ಚರ್ಚಿಸಿ ಒಂದು ತಿಂಗಳ ಅವಧಿಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು.
- ಕಿಮ್ಮನೆ ರತ್ನಾಕರ,
ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ
ರಾಜ್ಯದ ಅನುದಾನಿತ ಪಪೂ ಕಾಲೇಜಿನಲ್ಲಿ 292 ಉಪನ್ಯಾಸಕರ ಹುದ್ದೆ ಖಾಲಿ ಇವೆ. ಈ ಹುದ್ದೆ ಭರ್ತಿಗಾಗಿ ಪ್ರಕ್ರಿಯೆ ನಡೆದಿದ್ದರೂ ಪೂರ್ಣಗೊಂಡಿಲ್ಲ. ಕಳೆದ ಮೂರು ವರ್ಷದಿಂದ ಒಂದೇ ಒಂದು ಹುದ್ದೆ ಭರ್ತಿ ಮಾಡಿಕೊಳ್ಳದಿರುವ ಪರಿಣಾಮ, ಹುದ್ದೆಯ ಆಕಾಂಕ್ಷಿಗಳಾದ ನಮಗೆ ಅನ್ಯಾಯವಾಗಿದೆ.
- ಚಂದ್ರಗೌಡ ದೇಸಾಯಿ, ಅರೆಕಾಲಿಕ ಉಪನ್ಯಾಸಕ
- ಪ್ರಕಾಶ ಎಸ್. ಶೇಟ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

