ಚಿಕ್ಕಮಗಳೂರಲ್ಲಿ ಕನ್ನಡ ಶಾಲೆಗಳ ಫಳಫಳ!
ಕ.ಪ್ರ. ವಾರ್ತೆ, ಚಿಕ್ಕಮಗಳೂರು, ನ. 24-
ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಕನ್ನಡ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಣೆಯಾಗಿದೆ. ಜಿಲ್ಲೆಯ ಸರ್ಕಾರಿ ಕನ್ನಡ ಶಾಲೆಗಳು ಫಲಿತಾಂಶದಲ್ಲಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಸಮಾನವಾಗಿ ಮುನ್ನಡೆ ಸಾಧಿಸುತ್ತಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಸರ್ಕಾರಿ, ಅನುದಾನಿತ, ಅನುದಾನ ರಹಿತ ಒಟ್ಟು 2056 ಶಾಲೆಗಳಿದ್ದು, ಈ ಪೈಕಿ 811 ಕಿರಿಯ ಪ್ರಾಥಮಿಕ, 709 ಹಿರಿಯ ಪ್ರಾಥಮಿಕ, 131 ಸರ್ಕಾರಿ ಪ್ರೌಢಶಾಲೆಗಳಿವೆ. ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಕಡಿಮೆ ಇದೆ. ಆದರೂ ಕಳೆದ ಎರಡು ವರ್ಷಗಳ ಅಂಕಿ ಅಂಶ ನೋಡಿದರೆ 2011ನೇ ಸಾಲಿನಲ್ಲಿ ಶಾಲೆಗಳಿಂದ ಹೊರಗುಳಿದ ಮಕ್ಕಳ ಸಂಖ್ಯೆ 494. 2012ರಲ್ಲಿ 387 ಮಕ್ಕಳು ಹೊರಗುಳಿದಿದ್ದು, ಈ ಸಂಖ್ಯೆಯಲ್ಲಿ ಇಳಿಕೆ ಕಾಣುತ್ತಿದೆ. 2011-12ನೇ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ 1.65 ಲಕ್ಷ ಮಕ್ಕಳಿದ್ದು, ಪ್ರಸಕ್ತ ಸಾಲಿನಲ್ಲಿ 1.60 ಲಕ್ಷ ಮಕ್ಕಳು ಶಾಲೆಗಳಿಗೆ ದಾಖಲಾಗಿದ್ದಾರೆ. ಅಂದರೆ ಸುಮಾರು 5 ಸಾವಿರ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಜನಸಂಖ್ಯೆಯಲ್ಲಿ ಕುಂಠಿತವೂ ಇದಕ್ಕೆ ಕಾರಣ.
ಶತಮಾನ ಕಂಡ ಶಾಲೆಗಳು
ಚಿಕ್ಕಮಗಳೂರು ತಾಲೂಕಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈಶ್ವರಹಳ್ಳಿ, ಚಿಕ್ಕಮಗಳೂರು ನಗರದ ಕೋಟೆ, ಬಾಲಕರ ಶಾಲೆ, ಪೋರ್ಟರ್ಪೇಟೆ, ಹಿರೇಗೌಜ, ಸಿಂದಿಗೆರೆ, ಬೆಳವಾಡಿ, ಅಂಬಳೆ, ಕರ್ತಿಕೆರೆ. ಎನ್.ಆರ್.ಪುರ ಸರ್ಕಾರಿ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಭಂಡೀಗಡಿ, ಕಮ್ಮರಡಿ, ಶೃಂಗೇರಿ ಸರ್ಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆ, ತರೀಕೆರೆ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಲಕ್ಕವಳ್ಳಿ, ತರೀಕೆರೆ, ಹನುಮನಹಳ್ಳಿ, ಅತ್ತಿಮೊಗ್ಗೆ, ಮೂಡಿಗೆರೆಯ ಸರ್ಕಾರಿ ಮಾಧ್ಯಮಿಕ ಹಿರಿಯ ಪ್ರಾಥಮಿಕ ಶಾಲೆ, ಬೀರೂರು ವಲಯದಲ್ಲಿ ಬೀರೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕ, ಬಾಲಕಿಯರ ಶಾಲೆ, ದೇವನೂರು, ಚಿಕ್ಕದೇವನೂರು ಶತಮಾನ ಪೂರೈಸಿದೆ.
ಹೆಚ್ಚುತ್ತಿವೆ ಆಂಗ್ಲ ಶಾಲೆಗಳು
ಇತ್ತೀಚೆಗೆ ಆಂಗ್ಲ ಮಾಧ್ಯಮ ಶಾಲೆಗಳು ನಾಯಿ ಕೊಡೆಗಳಂತೆ ತಲೆ ಎತ್ತುತ್ತಿವೆ. ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಈ ಶಾಲೆಗಳೀಗ ಹಳ್ಳಿ ಹಳ್ಳಿಗಳಲ್ಲೂ ಹುಟ್ಟಿ ಕೊಳ್ಳುತ್ತಿವೆ. ಮಕ್ಕಳನ್ನು ಸುರಕ್ಷಿತವಾಗಿ ಶಾಲೆಗೆ ಕರೆದುಕೊಂಡು ಹೋಗುತ್ತಿರುವುದು, ಅವರ ವಿದ್ಯಾಭ್ಯಾಸದ ಬಗ್ಗೆ ಪೋಷಕರಿಗೆ ಆಗಾಗ ಮಾಹಿತಿ ನೀಡಿ ಹೆಚ್ಚಿನ ಜವಾಬ್ದಾರಿ ತೆಗೆದುಕೊಳ್ಳುವ ಈ ಶಾಲೆಗಳು ಪೋಷಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತಿವೆ. ಆರ್ಥಿಕವಾಗಿ ಹಿಂದುಳಿದ ಮಕ್ಕಳು ಮಾತ್ರ ಸರ್ಕಾರಿ ಶಾಲೆಗಳನ್ನು ಹುಡುಕಿಕೊಂಡು ಹೋಗುತ್ತಿವೆ.
ಜನಪ್ರತಿನಿಧಿಗಳಿಂದ ಇಲ್ಲ ಅನುದಾನ
ಸರ್ಕಾರಿ ಶಾಲೆಗಳ ಶಿಕ್ಷಣದ ಮಟ್ಟ ಸುಧಾರಣೆಯಾಗಬೇಕೆಂದು ಜನಪ್ರತಿನಿಧಿಗಳು ಆಗಾಗ ಹೇಳುತ್ತಲೇ ಇರುತ್ತಾರೆ. ಆದರೆ, ಶಾಲೆಗಳ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ಮೂಲ ಸೌಲಭ್ಯಗಳಿಗೆ ಯಾವುದೇ ಅನುದಾನವನ್ನೂ ನೀಡಿಲ್ಲ. 2009-10ನೇ ಸಾಲಿನಲ್ಲಿ ಶಾಸಕರಾದ ಸಿ.ಟಿ. ರವಿ 1 ಲಕ್ಷ, ಡಿ.ಎನ್. ಜೀವರಾಜ್ 3 ಲಕ್ಷ ಹಾಗೂ ಎಂಎಲ್ಸಿ ಗಣೇಶ್ ಕಾರ್ಣೀಕ್ 5 ಲಕ್ಷವನ್ನು ತಮ್ಮ ಅನುದಾನದಲ್ಲಿ ಜಿಲ್ಲೆಯ ಸರ್ಕಾರಿ ಕನ್ನಡ ಶಾಲೆಗಳ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ನೀಡಿದ್ದರು. ಆಗ ಪ್ರತಿ ಶಾಲೆಗಳಿಗೂ ತಲಾ 2,500 ಪುಸ್ತಕಗಳನ್ನು ನೀಡಲಾಗಿತ್ತು. ಇನ್ನುಳಿದಂತೆ ಜಿಲ್ಲೆಯ ಜನಪ್ರತಿನಿಧಿಗಳು ಶಾಲೆಗಳಿಗೆ ಅನುದಾನ ನೀಡಿದ್ದು ಅಷ್ಟಕ್ಕಷ್ಟೆ. ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೆ ಹೋಲಿಸಿದಲ್ಲಿ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಪೋಷಕರು ಗಮನ ಹರಿಸುವುದೇ ಇಲ್ಲ.
ಮುಚ್ಚಿದ ಶಾಲೆಗಳು ಮತ್ತೆ ಆರಂಭ
ಜಿಲ್ಲೆಯ 8 ವಲಯಗಳ ಪೈಕಿ ಬಯಲುಸೀಮೆ ಭಾಗದಲ್ಲಿ ಹೆಚ್ಚು ಕನ್ನಡ ಸರ್ಕಾರಿ ಶಾಲೆಗಳಿದ್ದು, ಮಕ್ಕಳ ಕೊರತೆಯಿಂದ ಮುಚ್ಚಿದ್ದ 27 ಶಾಲೆಗಳ ಪೈಕಿ ಈ ವರ್ಷದಲ್ಲಿ 14 ಶಾಲೆಗಳು ಪುನಃ ಪ್ರಾರಂಭಗೊಂಡಿವೆ. ಮಕ್ಕಳ ಅನುಪಾತಕ್ಕೆ ಅನುಗುಣವಾಗಿ ಶಿಕ್ಷಕರಿದ್ದು, ಇತ್ತೀಚೆಗೆ 170 ಅತಿಥಿ ಶಿಕ್ಷಕರು ಹಾಗೂ ನಕ್ಸಲ್ಪೀಡಿತ ಪ್ರದೇಶದಲ್ಲಿ 87 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದೆ. ಸರ್ಕಾರಿ ಕನ್ನಡ ಶಾಲೆಯಲ್ಲಿ ಓದುತ್ತಿರುವ ಮಕ್ಕಳು, ಆಂಗ್ಲ ಶಾಲೆಗೆ ಸೇರುವುದು ತುಂಬಾ ಅಪರೂಪ ಎಂಬುದು ಜಿಲ್ಲೆಯ ಮಟ್ಟಿಗೆ ಸಂತೋಷದ ವಿಚಾರ.
- ಆರ್. ತಾರಾನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

