ತಾಯಿಗೆ ಬೇಡವಾದ ಹೆಣ್ಣು ಶಿಶು ಸರ್ಕಾರದ ಮಡಿಲಿಗೆ

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ನ.24-
ಚಿಂಚೋಳಿ ತಾಲೂಕಿನ ಕೊಂಚಾವರಂ ಹೋಬಳಿ ದಟ್ಟ ಕಾನನದಲ್ಲಿರುವ ಲಂಬಾಣಿ ತಾಂಡಾಗಳಲ್ಲಿ ಹೆಣ್ಣು ಸಂತಾನದ ಪ್ರತಿರೋಧ ಮುಂದುವರಿದಿದೆ. 8 ತಿಂಗಳ ಹಿಂದಷ್ಟೆ ವಂಟಿ ಚಿಂತಾ ತಾಂಡಾದ ಶಂಕರ ಚವ್ಹಾಣ್ ದಂಪತಿ ತಮ್ಮ ಹೆಣ್ಣು ಮಕ್ಕಳಿಬ್ಬರನ್ನು ಸಲಹಲಾಗದೆಂದು ಸರ್ಕಾರಕ್ಕೆ ಒಪ್ಪಿಸಿದ ಬೆನ್ನಲ್ಲೇ ಇದೇ ಸೀಮೆಯ ಮೋತಿಮೋಕಾ ತಾಂಡಾದ ನಿವಾಸಿ ಲಾಲಿಬಾಯಿ ತನ್ನ 4 ದಿನದ ಹೆಣ್ಣು ಮಗುವನ್ನು ಸರ್ಕಾರಕ್ಕೊಪಿಸಿದ್ದಾಳೆ.
ಈಗಾಗಲೇ 4 ಹೆಣ್ಣು ಮಕ್ಕಳಿರುವ ಲಾಲಿಬಾಯಿ 5ನೇ ಹೆರಿಗೆಯಲ್ಲೂ ಹೆಣ್ಮಗುವಿಗೆ ಜನ್ಮ ನೀಡಿದ್ದರಿಂದ ಪತಿ ಕುಟುಂಬದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. 5ನೇ ಮಗು ಯಾರಿಗಾದರೂ ಕೊಟ್ಟು ಬಿಡು. ಇಲ್ಲದಿದ್ದರೆ ಮನೆಗೆ ಪ್ರವೇಶವಿಲ್ಲ ಎಂಬ ಅತ್ತೆ ಮಾತಿಗೆ ಬೆದರಿ ಲಾಲಿಬಾಯಿ ತನ್ನ ಹಸುಗೂಸನ್ನು ನ.23ರಂದು ಗುಲ್ಬರ್ಗದಲ್ಲಿರುವ ಸರ್ಕಾರಿ ಒಡೆತನದ ಅಮೂಲ್ಯ ಶಿಶುಗೃಹಕ್ಕೆ ಒಪ್ಪಿಸಿದ್ದಾಳೆ.
ಮೋತಿಮೋಕಾ ತಾಂಡಾದ ಕೇಸು ಪವಾರ್ (35) ಹಾಗೂ ಲಾಲಿಬಾಯಿ (30) ದಂಪತಿ ಬಡವರು. ಜಮೀನು, ಮನೆ ಇಲ್ಲ. ಗುಡಿಸಲಲ್ಲೇ ಸಂಸಾರ. ಕೇಸು ಪವಾರ್ ಮೂವರು ಹೆಣ್ಣು ಮಕ್ಕಳ ಸಮೇತ ಕೆಲಸ ಅರಸುತ್ತ ಆಂಧ್ರಕ್ಕೆ ಗುಳೆ ಹೋಗಿದ್ದಾನೆ. ಗುಂಟೂರಲ್ಲಿ ಮಕ್ಕಳು ಹಾಗೂ ಪತಿ ಹತ್ತಿ ಬಿಡಿಸುವ ಕೆಲಸದಲ್ಲಿದ್ದಾರೆ, 5ನೇ ಮಗು ಸಹ ಹೆಣ್ಣು ಎಂದಾಗ ಪತಿ ಕೇಸು ಕಸಿವಿಸಿಗೊಂಡು ತಾಯಿಯ ಮಾತಿಗೇ ಬೆಂಬಲಿಸಿರಬಹುದು ಎನ್ನುತ್ತಾಳೆ ಲಾಲಿಬಾಯಿ.
ಚೈಲ್ಡ್ಲೈನ್ ಮಾರ್ಗದರ್ಶಿ ಸಂಸ್ಥೆಯಿಂದ ಮೋತಿಮೋಕಾ ತಾಂಡಾದಲ್ಲಿನ ಈ ಘಟನೆ ಗಮನಕ್ಕೆ ಬಂದಿದೆ. ಮಗುವಿನ ಭವಿಷ್ಯವನ್ನು ಲಕ್ಷ್ಯದಲ್ಲಿಟ್ಟುಕೊಂಡು ಲಾಲಿಬಾಯಿ ಇವರಿಂದ 4 ದಿನದ ಹೆಣ್ಣು ಮಗುವನ್ನು ಅಮೂಲ್ಯ ಶಿಶುಗೃಹಕ್ಕೆ ಪಡೆಯಲಾಗಿದೆ ಎಂದು ಮಕ್ಕಳ ಕಲ್ಯಾಣ ಸಮೀತಿ ಅಧ್ಯಕ್ಷ ಆನಂದರಾಜ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಏನ್ ಮಾಡೋದು?
ಯಾನ್ ಮಾಡೋದ್ರಿ ಯಪ್ಪಾ, ಈಗಾಗ್ಲೇ 4 ಹೆಣ್ಮಕ್ಕಳಿದ್ದಾರೆ, 5 ನೇಯದ್ದು ಹೆಣ್ಮಗು ಆಗಿದೆ. ಹೆಣ್ಣಾದರೆ ಮನೆಗೇ ಬರಬೇಡ ಅಂತ ಅತ್ತೆ ಬೆದರಿಸಿದ್ದಾಳೆ, ಗಂಡನೂ ಹೇಳಿದ್ದಾನೆ. ಹೀಗಾಗಿ ಈ ಮಗುವನ್ನು ಹೆತ್ತರು ಸಹ ಹೊತ್ತು ಸಲಹಲು ಆಗದ ಪರಿಸ್ಥಿತಿಯಲ್ಲಿದ್ದೇನೆ. ಅದಕ್ಕೇ ಮಗುವನ್ನು ಸರ್ಕಾರಕ್ಕೆ ಕೊಡುತ್ತಿದ್ದೇನೆ. ಇಲ್ಲಾದರೂ ಮಗು ವೈನಾಗಿರಲಿ ಎನ್ನುತ್ತಾಳೆ ಲಾಲಿಬಾಯಿ.
ತವರು ಮನೆ ಧರ್ಮಾಸಾಗರ ತಾಂಡಾದಿಂದ ತಾಯಿ ಜತೆ ಗುಲ್ಬರ್ಗಕ್ಕೆ ಬಂದಿದ್ದ ಲಾಲಿಬಾಯಿ ಹೆಣ್ಣು ಹಸುಳೆಯನ್ನು ಶಿಶುಗೃಹಕ್ಕೆ ಒಪ್ಪಿಸಿದಳು. ಈಗಾಗಲೇ 3 ಮಕ್ಕಳೊಂದಿಗೆ ಪತಿ ಕೇಸು ಕೆಲಸಕ್ಕೆಂದು ಆಂಧ್ರ ಸೇರಿದ್ದಾನೆ. ತನಗೂ ಸಂಕಷ್ಟಗಳು ಹಲವು ಕಾಡುತ್ತಿವೆ ಎಂದು ಕಣ್ಣೀರಿಟ್ಟ ಲಾಲಿಬಾಯಿ ಹೆತ್ತ ಮಗುವನ್ನೇ ಸಾಕಲಾಗುತ್ತಿಲ್ಲವಲ್ಲ ಎಂದು ನೋವಿನಿಂದ ಕಣ್ಣೀರಿಟ್ಟಳು.
ಹೆಣ್ಣು ಮಗುವಿನ ಕುರಿತು ಭಾವನೆಗಳು ಬದಲಾಗದ ಹೊರತು ಈ ಸಮಸ್ಯೆಗೆ ಪರಿಹಾರ ಅಸಾಧ್ಯ. ಕೇವಲ ಯೋಜನೆ ರೂಪಿಸಿ ಜಾರಿಗೆ ತಂದರೆ ಸಾಲದು, ಅಲ್ಲಿನ ನಿವಾಸಿಗಳ ಮನಪರಿವರ್ತನೆ ಆಗಬೇಕು. ಅದಕ್ಕಾಗಿ ಸರ್ಕಾರ ಚಿಂತನೆ ಮಾಡಬೇಕು.
-ಆನಂದರಾಜ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ
-ಶೇಷಮೂರ್ತಿ ಅವಧಾನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


