ಪ್ರಧಾನ ಸುದ್ದಿ

ಝಳಕಿ ಆಸ್ತಿಯಲ್ಲಿ ಅಕ್ರಮದ್ದೇ ಝಲಕ್!

ಝಳಕಿ ಆಸ್ತಿಯಲ್ಲಿ ಅಕ್ರಮದ್ದೇ ಝಲಕ್!
Published On :

ಕನ್ನಡಪ್ರಭ ವಾರ್ತೆ,  ಬೆಂಗಳೂರು, ನ.26-
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ರಮೇಶ್ ಬಿ. ಝಳಕಿ ಹಾಗೂ ಇನ್ನಿಬ್ಬರು ಸರ್ಕಾರಿ ಅಧಿಕಾರಿಗಳು ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ನೇಮಕವಾದ ಬಳಿಕ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಲೋಕಾ ಬಲೆಗೆ ಬಿದ್ದ ಮೊದಲ ಐಎಎಸ್ ಅಧಿಕಾರಿ ಇವರು. ಬೆಂಗಳೂರು, ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ಪ್ರತ್ಯೇಕವಾಗಿ ಲೋಕಾಯುಕ್ತ ಪೊಲೀಸರು ಮಂಗಳವಾರ ನಡೆಸಿದ ದಾಳಿಯಲ್ಲಿ ಕೋಟ್ಯಂತರ ರುಪಾಯಿ ಅಕ್ರಮ ಆಸ್ತಿ ಪತ್ತೆಯಾಗಿದೆ.
ರಮೇಶ್ ಝಳಕಿ ಅವರು ಆದಾಯಕ್ಕಿಂತ ಶೇ.137ರಷ್ಟು ಅಕ್ರಮ ಆಸ್ತಿ ಹೊಂದಿದ್ದಾರೆ. ಇದರ ಒಟ್ಟು ಮೌಲ್ಯ 3.03 ಕೋಟಿ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ. 463 ಗ್ರಾಂ ಚಿನ್ನ ಹಾಗೂ ಎರಡೂವರೆ ಕೆಜಿ ಬೆಳ್ಳಿ ದೊರೆತಿದೆ. ಮಾಹಿತಿ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಕಲಂ 13(1) ಮತ್ತು 13(2)ರ ಅನ್ವಯ ದೂರು ದಾಖಲಿಸಿ  ಬೆಂಗಳೂರು ನಗರದ ವಿವಿಧೆಡೆ ದಾಳಿ ನಡೆಸಲಾಗಿದೆ.
1987ರ ಸಾಲಿನ ಐಎಎಸ್ ಅಧಿಕಾರಿಯಾಗಿರುವ ಝಳಕಿ, ಒಟ್ಟು 3.50 ಕೋಟಿ ಆಸ್ತಿ ಹೊಂದಿದ್ದಾರೆ ಹಾಗೂ ತಮ್ಮ ವೃತ್ತಿ ಜೀವನದಲ್ಲಿ ಸುಮಾರು 1.73 ಕೋಟಿ ಖರ್ಚು ಮಾಡಿದ್ದಾರೆ. ಒಟ್ಟು ಆಸ್ತಿ ಮತ್ತು ಖರ್ಚನ್ನು ಪರಿಗಣಿಸಿದರೆ ಒಟ್ಟು 5.23 ಕೋಟಿಯಷ್ಟಾಗುತ್ತದೆ. ಆದರೆ ಝಳಕಿ ಅವರ ಅಂದಾಜು ಆದಾಯ ಮಾತ್ರ 2.20 ಕೋಟಿ. ಇದರರ್ಥ ಸುಮಾರು 3.03 ಕೋಟಿಯಷ್ಟು ಅಸಮತೋಲನ ಮೌಲ್ಯದ ಆಸ್ತಿಯು ದಾಳಿ ಸಂದರ್ಭದಲ್ಲಿ ಕಂಡುಬಂದಿದೆ ಎಂದು ಲೋಕಾಯುಕ್ತ ಪೊಲೀಸ್ ಹೆಚ್ಚುವರಿ ಮಹಾನಿರ್ದೇಶಕ ಸತ್ಯನಾರಾಯಣ ರಾವ್ ತಿಳಿಸಿದ್ದಾರೆ.

ಝಳಕಿ ಆಸ್ತಿ ವಿವರ
- ಸ್ತಿರಾಸ್ಥಿ : ಬೆಂಗಳೂರಿನ ಮಹಾಲಕ್ಷ್ಮಿಪುರಂ, ಕುವೆಂಪುನಗರ, ಬೆಳಗಾವಿಯಲ್ಲಿ ನಿವೇಶನ, ಬೆಂಗಳೂರಿನ ಇನ್ಫ್ಯಾಂಟ್ರಿ ರಸ್ತೆ ಫೈ ಓಕ್ಸ್ ಅಪಾರ್ಟ್ಮೆಂಟ್ನಲ್ಲಿ ಎರಡು ಮನೆ, ಸುಪ್ರಮೆಂಟಲ್ ರೆಂಟಲ್ ಪ್ರೈ.ಲಿ ಎಂಬ ಸಂಸ್ಥೆ (ಒಟ್ಟು ಮೌಲ್ಯ 3.03 ಕೋಟಿ ರು)


-ಚರಾಸ್ತಿ : ಆಲ್ಟೋ ಕಾರು, ವ್ಯಾಗನಾರ್ ಕಾರು, ಆಕ್ಟೀವ್ ಹೊಂಡಾ ದ್ವಿಚಕ್ರ ವಾಹನ (ರು. 9 ಲಕ್ಷ)

-ಷೇರುಗಳಲ್ಲಿ ಹೂಡಿಕೆ ಆಗಿರುವ ಮೌಲ್ಯ (ರು. 75 ಲಕ್ಷ)

-463 ಗ್ರಾಂ ಚಿನ್ನ,  2.5 ಕೆಜಿ ಬೆಳ್ಳಿ

ಶಿವಮೊಗ್ಗ ಹಾಗೂ ಬಳ್ಳಾರಿಯಲ್ಲಿ ಲೋಕಾ ದಾಳಿ
ಇಲಾಖೆ ಪ್ರಧಾನ ಕಾರ್ಯದರ್ಶಿ ಬಲೆಗೆ ಬೀಳುವುದರ ಜತೆಗೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ಎಫ್‌ಡಿಎ ಮನೆ  ಮೇಲೂ ಲೋಕಾ ಪೊಲೀಸರು ದಾಳಿ ನಡೆಸಿ 1.17 ಕೋಟಿ ಅಕ್ರಮ ಆಸ್ತಿ ಕುರಿತ ಮಾಹಿತಿ ವಶಪಡಿಸಿಕೊಂಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಎಫ್‌ಡಿಎ ಆಗಿ ಕಾರ್ಯನಿರ್ವಹಿಸುತ್ತಿರುವ ಬಿ.ಟಿ. ಬೋಗೇಶ್ ಹೊಸಪೇಟೆ ಮನೆ ಮೇಲೆ ದಾಳಿ ನಡೆದಿದೆ. ದಾಳಿ ಸಂದರ್ಭದಲ್ಲಿ ರು. 5 ಲಕ್ಷದ ಚಿನ್ನ, 12 ಸಾವಿರ ನಗದು ದೊರೆತಿದೆ. ಹೊಸಪೇಟೆ ತಿರುಮಲ ನಗರದಲ್ಲಿ ಇವರು 3 ಅಂತಸ್ತಿನ ಮನೆ ಹೊಂದಿದ್ದಾರೆ. ಮೆಸ್ಕಾಂ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ಕ್ಲೆಮೆಂಟ್ ರಾಯನ್ ಮನೆ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಪೊಲೀಸರು ಅಕ್ರಮ ಆಸ್ತಿ ಮಾಹಿತಿ ವಶಪಡಿಸಿಕೊಂಡಿದ್ದಾರೆ. ಶಿವಮೊಗ್ಗದ ನಂಜಪ್ಪ ಬಡಾವಣೆಯಲ್ಲಿ ಐಷಾರಾಮಿ ಬಂಗಲೆ ಹಾಗೂ ಚಿಕ್ಕಮಗಳೂರಿನಲ್ಲಿ 10 ಎಕರೆ ರಬ್ಬರ್ ತೋಟ  ಹೊಂದಿದ್ದಾರೆ. ಇದಲ್ಲದೇ ಶಿವಮೊಗ್ಗದಲ್ಲಿಯೇ ಎಸ್.ಆರ್ ಕಾರ್ ಡೆಕೊರೇಟರ್‌ನ್ನು ಕ್ಲೆಮೆಂಟ್ ಹೊಂದಿದ್ದಾರೆ. ಮನೆ, ತೋಟ, ಅಂಗಡಿ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಮಾಹಿತಿ ಪಡೆಯಲಾಗಿದ್ದು, ಒಟ್ಟು ಅಕ್ರಮ ಆಸ್ತಿಯ ಮೌಲ್ಯ ಇನ್ನೂ ಬಹಿರಂಗಪಡಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.