ಸಕ್ಕರೆ ಕಾಯಿಲೆ

ಸುವರ್ಣ ವಿಧಾನಸೌಧ: ಕಬ್ಬು ಬೆಳೆಗಾರರ ಸಮಸ್ಯೆಯಿಂದ ಉಂಟಾಗಿರುವ ಬಿಕ್ಕಟ್ಟು ಇನ್ನೇನು ಮುಗಿಯಿತು ಎನ್ನುವಾಗಲೇ ಇದೀಗ ಖಾಸಗಿ ಸಕ್ಕರೆ ಕಾರ್ಖಾನೆಗಳು ಸರ್ಕಾರಕ್ಕೆ ಸವಾಲೆಸೆದು ಕುಳಿತಿವೆ.
ಸರ್ಕಾರ ನಿಗದಿಪಡಿಸಿರುವ ದರವನ್ನು ಕಬ್ಬು ಬೆಳೆಗಾರರಿಗೆ ನೀಡಲು ಸಾಧ್ಯವೇ ಇಲ್ಲ. ಅದರ ಬದಲಿಗೆ ಕಾರ್ಖಾನೆಗಳನ್ನು ಮುಚ್ಚುವುದೇ ಲೇಸು ಎಂದು ಕಾರ್ಖಾನೆಗಳು ಬೆದರಿಕೆ ಹಾಕಿವೆ. ಎದುರಾಗಿದ್ದ ಎಲ್ಲ ಅಡಚಣೆಗಳು ನಿವಾರಣೆಯಾಗಿ ವಿಧಾನಸಭೆ ಕಲಾಪ ಶುಕ್ರವಾರ ಬೆಳಗ್ಗೆ ಸುಗಮವಾಗಿ ಆರಂಭವಾಯಿತಾದರೂ ಸಂಜೆ ವೇಳೆಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಎದ್ದು ಕುಳಿತು, ಸವಾಲು ಎಸೆದಿದ್ದಾರೆ.
ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿದ್ದ ಹೋರಾಟವನ್ನು ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಕೆಜೆಪಿ ಕೈ ಬಿಟ್ಟಿದೆ. ಶಾದಿಭಾಗ್ಯ ಯೋಜನೆಗೆ ಸಂಬಂಧಿಸಿದ ವಿವಾದವೂ ತಣ್ಣಗಾಗಿದೆ. ಆದರೆ, ಖಾಸಗಿ ಸಕ್ಕರೆ ಕಾರ್ಖಾನೆಗಳ ಮಾಲೀಕರು ಇದೀಗ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ.
ರೈತ ವಿರೋಧಿ ಮುಖ್ಯಮಂತ್ರಿ, ಕೊಲೆಗಡುಕ ಸರ್ಕಾರ ಎಂದೆಲ್ಲಾ ಬಿಂಬಿಸುತ್ತಾ ಆತ್ಮಹತ್ಯೆ ಮಾಡಿಕೊಂಡ ರೈತನ ಹೆಣದ ಮೇಲೆ ಪ್ರತಿಪಕ್ಷಗಳು ರಾಜಕಾರಣ ಮಾಡುತ್ತಿವೆ. ಬಣವೆಗೆ ಬೆಂಕಿ ಬಿದ್ದಾಗ ಮೈ ಕಾಯಿಸಿಕೊಂಡಂತೆ ರೈತನ ಸಾವನ್ನು ಟೀಕೆಗೆ ಬಳಸಿಕೊಳ್ಳುವ ಕೆಟ್ಟ ರಾಜಕಾರಣದಲ್ಲಿ ತೊಡಗಿವೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಸರ್ಕಾರ ಒತ್ತಡ ಹೇರಿದರೆ ನಾವು ನ್ಯಾಯಾಲಯದ ಮೊರೆ ಹೋಗುತ್ತೇವೆ. ನ್ಯಾಯಾಲಯಕ್ಕೆ ಹೋದರೆ ತೀರ್ಪು ಬರಲು ಆರು ತಿಂಗಳಾಗುತ್ತದೆ. ಆಗ ಸರ್ಕಾರ ರೈತರನ್ನು ಹೇಗೆ ಕಾಪಾಡುತ್ತದೆ.
- ವಿದ್ಯಾ ಮುರಕುಂಬಿ, ರೇಣುಕಾ ಶುಗರ್ಸ್ನ ಚೇರ್ಮನ್
ಹೇಳಿದಷ್ಟು ಕೊಡಲಾಗದು!
ಸರ್ಕಾರ ಟನ್ ಕಬ್ಬಿಗೆ 2500 ಘೋಷಣೆ ಮಾಡಿರುವುದು ಅವೈಜ್ಞಾನಿಕ. ಸರ್ಕಾರದ ಘೋಷಣೆ ಮಾಡಿದ ದರವನ್ನು ನೀಡಲು ಖಾಸಗಿ ಕಾರ್ಖಾನೆಗಳಿಗೆ ಸಾಧ್ಯವಿಲ್ಲ ಎಂದು ರೇಣುಕಾ ಶುಗರ್ಸ್ನ ಚೇರ್ಮನ್ ವಿದ್ಯಾ ಮುರಕುಂಬಿ ಹೇಳಿದ್ದಾರೆ. ರಂಗರಾಜನ್ ಸಮಿತಿ ವರದಿಯ ಪ್ರಕಾರ ಟನ್ಗೆ 2100 ಸಲಹಾ ಬೆಲೆಯನ್ನ್ನು ಸರ್ಕಾರ ಘೋಷಣೆ ಮಾಡಬೇಕಿತ್ತು. ಆದರೆ, ನಮ್ಮ ಖಾಸಗಿ ಒಕ್ಕೂಟದ ಯಾವುದೇ ಸಮಸ್ಯೆಯನ್ನು ಆಲಿಸದೇ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನ್ನು ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಮುಂಬರುವ ಸೋಮವಾರ ಖಾಸಗಿ ಕಾರ್ಖಾನೆಗಳ ಒಕ್ಕೂಟದ ಪರವಾಗಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು. ಸರ್ಕಾರ ನಮ್ಮ ಮನವಿಯನ್ನ್ನು ತಿರಸ್ಕರಿಸಿದರೆ ನ್ಯಾಯಾಲಯದ ಮೊರೆ ಹೋಗಲಾಗುವುದು ಮತ್ತು ಕಾರ್ಖಾನೆಗಳನ್ನು ಬಂದ್ ಮಾಡುವುದಾಗಿ ಅವರು ಹೇಳಿದ್ದಾರೆ.
ಪರಿಷತ್ತಿನಲ್ಲಿ ಗದ್ದಲ, ಸಭಾತ್ಯಾಗ
ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಗದ್ದಲದ ವಾತವಾರಣ ನಿರ್ಮಾಣವಾಯಿತು. ಪ್ರತಿಪಕ್ಷದ ಸದಸ್ಯರು ಬಾವಿಗಿಳಿದು ಹೋರಾಟ ಆರಂಭಿಸಿದ ಪರಿಣಾಮ, ಪ್ರಶ್ನೋತ್ತರದ ಬದಲು ಮೂರು ದಿನಗಳಿಂದ ನಿರಂತರ ಚರ್ಚೆಯಲ್ಲಿರುವ ಕಬ್ಬಿಗೆ ಬೆಂಬಲ ಬೆಲೆ, ರೈತನ ಆತ್ಮಹತ್ಯೆ ಹಾಗೂ ಸಕ್ಕರೆ ಕಾರ್ಖಾನೆಗಳ ಬಗ್ಗೆ ಎರಡು ಗಂಟೆಗಳ ಕಾಲ ಚರ್ಚೆಗೆ ನಡೆಯಿತು. ರಾಜ್ಯದ ಜನತೆಗಾಗಿ ಒಂದಿಷ್ಟು ಬೇಡಿಕೆಗಳನ್ನು ಈಡೇರಿಸಿದರೆ ಕಲಾಪ ಸರಾಗವಾಗಿ ನಡೆದು ಈ ಭಾಗದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಬಹುದೆಂದು ವಿಪಕ್ಷದ ನಾಯಕ ಡಿ.ವಿ. ಸದಾನಂದಗೌಡ ಹೇಳಿದರು. ಪ್ರಶ್ನೋತ್ತರದ ನಂತರ ಈ ಕುರಿತು ಚರ್ಚೆ ನಡೆಸೋಣ ಎಂಬ ಎಂ.ಸಿ. ನಾಣಯ್ಯ, ವೀರಣ್ಣ ಮತ್ತಿಕಟ್ಟಿ ಸಲಹೆಯನ್ನು ಸಭಾಪತಿ ಡಿ.ಎಚ್. ಶಂಕರಮೂರ್ತಿ ತಿರಸ್ಕರಿಸಿದರು. ವಾದ-ಪ್ರತಿವಾದ ಮುಂದುವರೆದು ಆಡಳಿತ, ಪ್ರತಿಪಕ್ಷಗಳ ನಡುವೆ ಟೀಕಾಸ್ತ್ರಗಳ ವಿನಿಮಯ ಆಯಿತು. ಮುಖ್ಯಮಂತ್ರಿ ಉತ್ತರದಿಂದ ತೃಪ್ತರಾಗದ ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದರು. ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಯಿತು.
ವಿಧಾನಸಭೆಯಲ್ಲಿ ಗಂಭೀರ ಮಾತು
ವಿಧಾನಸಭೆ ಕಲಾಪಕ್ಕೆ ಇದ್ದ ಎಲ್ಲಾ ಅಡ್ಡಿಗಳು ನಿವಾರಣೆಯಾದಂತಾಗಿದ್ದು, ಸೋಮವಾರದಿಂದ ಕಲಾಪ ಸುಸೂತ್ರವಾಗಿ ನಡೆದು ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿ, ಪರಿಹಾರ ಕಂಡುಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಅಧಿವೇಶನಕ್ಕೆ ಇದ್ದ ಎರಡು ಪ್ರಮುಖ ಅಡ್ಡಿಗಳು ಬಿಜೆಪಿ ಮತ್ತು ಕೆಜೆಪಿ ಸದಸ್ಯರು ಸಭಾತ್ಯಾಗದ ಮಾಡಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುವ ಮೂಲಕ ಶುಕ್ರವಾರ ನಿವಾರಣೆಯಾದಂತಾಗಿದೆ. ಗುರುವಾರ ಕಬ್ಬು ಬೆಳೆಗಾರರ ಸಮಸ್ಯೆ ವಿರುದ್ಧದ ಹೋರಾಟ ಅಂತ್ಯಗೊಂಡರೆ, ಶುಕ್ರವಾರ ಬಿದಾಯಿ ಅರ್ಥಾತ್ ಶಾದಿಭಾಗ್ಯ ಯೋಜನೆ ವಿವಾದ ಮುಕ್ತಾಯವಾಗಿದೆ.
ಕೃಷ್ಣಾ ಯೋಜನೆ ಚರ್ಚೆ ಸೋಮವಾರ
ಕೃಷ್ಣಾ ಮೇಲ್ದಂಡೆ ಯೋಜನೆ ಕುರಿತಂತೆ ಸೋಮವಾರದಿಂದ ವಿಧಾನಸಭೆಯಲ್ಲಿ ಚರ್ಚೆ ಆರಂಭವಾಗಲಿದೆ. ಜತೆಗೆ ಕಳಸಾ-ಬಂಡೂರಿ ನಾಲಾ ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ಸೇರಿದಂತೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆ ನಡೆಯಲಿದೆ. ಬಿಜೆಪಿ, ಕೆಜೆಪಿ ಹಾಗೂ ಕಾಂಗ್ರೆಸ್ ಸರ್ಕಾರದ ಮಧ್ಯೆ ತೀವ್ರ ವಿವಾದಕ್ಕೆ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ
ಅವರು ಮೂರು ದಿನಗಳ ಕಾಲ ವಿಧಾನಸಭೆಯಲ್ಲಿ ಅಹೋರಾತ್ರಿ ಧರಣಿ ನಡೆಸಲು ಕಾರಣವಾಗಿದ್ದ ಬಿದಾಯಿ ಅರ್ಥಾತ್ ಶಾದಿಭಾಗ್ಯ ಯೋಜನೆ ಕುರಿತು ವಿಧಾನಸಭೆಯಲ್ಲಿ ಶುಕ್ರವಾರ ಶಾಂತ ರೀತಿಯಲ್ಲಿ ಉತ್ತಮ ಚರ್ಚೆ ನಡೆಯಿತು. ಯೋಜನೆಯನ್ನು ಎಲ್ಲ ವರ್ಗದ ಹೆಣ್ಣು ಮಕ್ಕಳಿಗೆ ವಿಸ್ತರಿಸುವ ಕುರಿತು ಸರ್ಕಾರ ಮುಕ್ತ ಮನಸ್ಸಿನಿಂದ ತೀರ್ಮಾನ ಕೈಗೊಳ್ಳಲಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಏಕೋ ಗೊತ್ತಿಲ್ಲ, ರಾಜ್ಯ ಸರ್ಕಾರ ಆನೆ ನಡೆದಿದ್ದೇ ದಾರಿ ಎನ್ನುವಂತೆ ವರ್ತಿಸುತ್ತಿದೆ. ಹೀಗಾದರೆ ಅನಿವಾರ್ಯವಾಗಿ ನಮ್ಮ ಹೋರಾಟ ಮುಂದುವರಿಯುತ್ತದೆ. ಪ್ರತಿಪಕ್ಷಗಳ ಬೇಡಿಕೆಗೆ ಸರ್ಕಾರದಿಂದ ಸರಿಯಾದ ಉತ್ತರ ದೊರೆಯುತ್ತಿಲ್ಲ. ರಾಜ್ಯದ ಜನತೆಗಾಗಿ ಒಂದಿಷ್ಟು ಬೇಡಿಕೆ ಈಡೇರಿಸಿದರೆ ಕಲಾಪ ಸರಾಗವಾಗಿ ನಡೆದು, ಈ ಭಾಗದ ಸಮಸ್ಯೆಗಳಿಗೆ ಪರಿಹಾರ ದೊರೆಯಬಹುದು.
- ಡಿ.ವಿ. ಸದಾನಂದಗೌಡ, ವಿಧಾನ ಪರಿಷತ್ ವಿಪಕ್ಷ ನಾಯಕ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


