ಗಾಂಧಿ ಮಾರ್ಗದಲ್ಲಿ ಶಾಂತಿ ಪ್ರತಿಷ್ಠಾನ

46 ವರ್ಷಗಳಿಂದ ಮಹಾತ್ಮನ ತತ್ವಗಳ ಸಾರುವ ಮೂಲಕ ಸಾರ್ಥಕ ಸೇವೆ
ಕನ್ನಡಪ್ರಭ ವಾರ್ತೆ, ಧಾರವಾಡ, ಅ.1-
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜೀವನ, ಆದರ್ಶ ಮತ್ತು ತತ್ವಗಳ ಪ್ರಚಾರದ ಪ್ರಮುಖ ಉದ್ದೇಶದೊಂದಿಗೆ ಧಾರವಾಡದಲ್ಲಿ ಆರಂಭವಾದ ಉತ್ತರ ಕರ್ನಾಟಕದ ಏಕೈಕ ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರವು ಸಾರ್ಥಕ 46 ವರ್ಷಗಳ ಸೇವೆ ಸಲ್ಲಿಸಿದೆ. ಗಾಂಧೀಜಿ ನಮ್ಮಿಂದ ಕಣ್ಮರೆಯಾದರೂ ಅವರ ತತ್ವಗಳು, ಅಹಿಂಸಾ ಮಾರ್ಗ, ಸ್ವಾವಲಂಬನೆಯಂಥ ವಿಚಾರಗಳನ್ನು ಯುವ ಜನಾಂಗಕ್ಕೆ ತಲುಪಿಸುವ ನಿಟ್ಟಿನಲ್ಲಿ ಸ್ವಾತಂತ್ರ್ಯ ಯೋಧರಾದ ಶಕುಂತಲಾ ಕುರ್ತಕೋಟಿ ಅವರಿಂದ 1967ರಲ್ಲಿ ಆರಂಭವಾದ ಈ ಕೇಂದ್ರ, ಗಾಂಧೀಜಿ ನಡೆದು ಬಂದ ಆದರ್ಶಗಳ ಹಾದಿಯಲ್ಲಿಯೇ ನಡೆಯುತ್ತಿದೆ.
ಇನ್ನಷ್ಟು ಕಾರ್ಯಗಳು: ಕೇಂದ್ರದಲ್ಲಿಯೇ ಒಂದು ಗ್ರಂಥಾಲಯವಿದ್ದು, ಸದ್ಯ ಗಾಂಧೀಜಿ ಹಾಗೂ ಅವರಿಗೆ ಸಂಬಂಧಿಸಿದ 1,500 ಪುಸ್ತಕಗಳ ಭಂಡಾರ ಇಲ್ಲಿದೆ. ಇಷ್ಟು ವರ್ಷಗಳ ಸುದೀರ್ಘ ಹಾದಿಯಲ್ಲಿ ಕೇಂದ್ರ ಹತ್ತು ಸಾವಿರಕ್ಕೂ ಹೆಚ್ಚು ಪುಸ್ತಕಗಳನ್ನು ರಿಯಾಯ್ತಿ ದರದಲ್ಲಿ ಓದುಗರಿಗೆ ಒದಗಿಸಿದೆ. ಅಲ್ಲದೆ, ಈ ಕೇಂದ್ರದ ಕಟ್ಟಡದಲ್ಲಿಯೇ ಖಾದಿ ಗ್ರಾಮೋದ್ಯೋಗ ಆರಂಭಿಸಿದ್ದು, ಖಾದಿ ಬಟ್ಟೆ ಪ್ರಚಾರ ಹಾಗೂ ಮಾರಾಟವೂ ನಡೆಯುತ್ತಿದೆ. ಇದಕ್ಕಿಂತ ಹೆಚ್ಚಾಗಿ ಕೇಂದ್ರದೆದುರು ಕಳೆದ ಎರಡು ವರ್ಷಗಳಿಂದ ಪ್ರತಿ ಗುರುವಾರ ಹಾಗೂ ಭಾನುವಾರ ಸಾವಯವ ಜಾತ್ರೆ ನಡೆಸಲಾಗುತ್ತಿದೆ. ಸುತ್ತಮುತ್ತಲಿನ ಊರುಗಳಲ್ಲಿ ಸಾವಯವ ಕೃಷಿ ಮೂಲಕ ಬೆಳೆದ ತರಕಾರಿ, ಧಾನ್ಯಗಳನ್ನು ಇಲ್ಲಿ ಮಾರಲಾಗುತ್ತಿದೆ. ಇದಕ್ಕೆ ಪ್ರೇರಣೆ ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರ.
ಗಾಂಧಿವಾದಿಗಳಾದ ಎನ್.ಎ. ಹೊಸಕೇರಿ, ಡಿ.ಪಿ. ಕರಮರಕರ, ಬಿ.ಜಿ. ಗೋಖಲೆ, ಕೆ.ವಿ. ಆಲೂರ, ಪ್ರೊ. ಕೆ.ಎಸ್. ದೇಶಪಾಂಡೆ, ಸರೋಜಿನಿ ನಾಯಕ, ಡಾ. ಸಿ.ವಿ. ವೇಣುಗೋಪಾಲ ಪ್ರತಿಷ್ಠಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಕಳೆದ 13 ವರ್ಷಗಳಿಂದ ಪ್ರೊ. ಕೆ.ಎಸ್. ಭಸ್ಮೆ ಅವರು ಕೇಂದ್ರವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.
ಸದ್ಯ ದೇಶದಲ್ಲಿ ಭ್ರಷ್ಟಾಚಾರ, ಅತ್ಯಾಚಾರ ಹಾಗೂ ಅಹಿಂಸೆ ಹೆಚ್ಚಾಗುತ್ತಿದ್ದು, ಗಾಂಧೀಜಿ ಅವರ ತತ್ವ-ಆದರ್ಶಗಳು ಹಾಗೂ ಅಹಿಂಸಾ ಮಾರ್ಗ ಹಿಂದಿನಿಗಿಂತ ಇಂದು ಹೆಚ್ಚು ಪ್ರಸ್ತುತ ಎನಿಸುತ್ತಿದೆ. ದಿನನಿತ್ಯದ ಕೆಲಸದಲ್ಲಿ ಪರಸ್ಪರ ಸಹಕಾರ, ಪರಿಸರ ನೈರ್ಮಲ್ಯ ಹಾಗೂ ಅಹಿಂಸಾ ಮಾರ್ಗದ ಮೂಲಕ ಮೊದಲು ನಾವು ಬದಲಾಗೋಣ. ನಂತರ ಸಮಾಜ ತಾನಾಗಿಯೇ ಬದಲಾಗುತ್ತದೆ ಎಂಬುದು ಈ ಕೇಂದ್ರದ ನಿಲವು.
ಸರ್ಕಾರದ ಒಂದೂ ರುಪಾಯಿ ಅನುದಾನವಿಲ್ಲದೇ ಇಷ್ಟು ವರ್ಷಗಳ ಕಾಲ ಸಮಾಜದ ಶಾಂತಿ ಹಾಗೂ ಸುಧಾರಣೆಗೆ ಈ ಕೇಂದ್ರ ಕಾರ್ಯ ನಿರ್ವಹಿಸುದೆ. ಸರ್ಕಾರವೇ ಸ್ವ ಇಚ್ಛೆಯಿಂದ ಕೇಂದ್ರ ಇನ್ನಷ್ಟು ಬೃಹದಾಕಾರವಾಗಿ ಬೆಳೆಯಲು ಅನುದಾನ ನೀಡಿ ಆ ಮೂಲಕ ಗಾಂಧೀಜಿ ಅವರು ಈಗಿನ ಯುವ ಜನಾಂಗಕ್ಕೆ ಇನ್ನಷ್ಟು ಹತ್ತಿರವಾಗುವಂತೆ ಮಾಡಿದರೆ ಒಳಿತು.
ಕಳೆದ 50 ವರ್ಷಗಳ ಹಿಂದೆ (1963-64) ದೆಹಲಿಯಲ್ಲಿ ಸ್ಥಾಪನೆಗೊಂಡ ಗಾಂಧಿ ಶಾಂತಿ ಪ್ರತಿಷ್ಠಾನ ಕೇಂದ್ರದ ಭಾಗವಾಗಿ ಕರ್ನಾಟಕದ ಪೈಕಿ ಬೆಂಗಳೂರು ಹಾಗೂ ಧಾರವಾಡದಲ್ಲಿ ಈ ಕೇಂದ್ರಗಳು ಹುಟ್ಟಿಕೊಂಡವು. ಸರ್ಕಾರದ ಯಾವ ಅನುದಾನ, ಹಸ್ತಕ್ಷೇಪವೂ ಇಲ್ಲದ ಈ ಕೇಂದ್ರದಲ್ಲಿ ಪ್ರಸ್ತುತ 100 ಪೋಷಕರು ಹಾಗೂ ಸದಸ್ಯರಿದ್ದಾರೆ. ಗಾಂಧೀಜಿ ತತ್ವದ ಮೇಲೆಯೇ ಕೇಂದ್ರವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ.
ಪ್ರೊ. ಕೆ.ಎಸ್. ಭಸ್ಮೆ, ಕೇಂದ್ರದ ಅಧ್ಯಕ್ಷ
- ಬಸವರಾಜ ಹಿರೇಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


