ಅಧಿಕಾರಿಗಳಿಗೂ 'ರಿಸ್ಕ್' ತಂದ ಅಮೌಂಟ್
ಕ.ಪ್ರ.ವಾರ್ತೆ, ಬಳ್ಳಾರಿ, ಅ. 2-
ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆ ವಿಷಯದಲ್ಲಿ ರಿಸ್ಕ್ ತೆಗೆದುಕೊಂಡವರು ಬಹಳ ಜನ. ಅದರಲ್ಲಿ ರಾಜಕಾರಣಿಗಳು, ಉದ್ಯಮಿಗಳು, ಟ್ರೇಡರ್ಸ್ಗಳು, ಟ್ರಾನ್ಸ್ಪೋರ್ಟರ್ಸ್ ಪ್ರಮುಖವಾಗಿದ್ದರೆ, ಇವರಿಗೆ ಬೆನ್ನೆಲುಬಾಗಿ ನಿಂತವರು ಅಧಿಕಾರಿಗಳು.
ಈ ವಿಷಯ ಲೋಕಾಯುಕ್ತ ವರದಿಯಲ್ಲೂ ಉಲ್ಲೇಖಗೊಂಡಿದೆ. ಅಕ್ರಮ ಅದಿರನ್ನು ಪರವಾನಗಿ ಇಲ್ಲದೆ ಸಾಗಿಸಲು ಟ್ರೇಡರ್ಸ್ ನೀಡುತ್ತಿದ್ದ ರಿಸ್ಕ್ ಅಮೌಂಟ್ನಲ್ಲಿ ಮಿತಿ ಮೀರಿ ರಿಸ್ಕ್ ತೆಗೆದುಕೊಂಡು, ಅಮೌಂಟ್ ಪಡೆದಿದ್ದ 23 ಅಧಿಕಾರಿಗಳಿಗೆ ಇದೀಗ ಅದೇ ರಿಸ್ಕಾಗಿ ಪರಿಣಮಿಸಿದೆ. ಈ ಅಮೌಂಟ್ ಪಡೆದಿರುವವರ ಮೇಲೆ ಇಲಾಖಾ ವಿಚಾರಣೆ ನಡೆಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೆ.21ರಂದು ಆದೇಶಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹೊಸಪೇಟೆಯಲ್ಲಿ ದಾಳಿ ನಡೆಸಿ, ವಶ ಪಡಿಸಿಕೊಂಡ ಪೆನ್ಡ್ರೈವ್ನಲ್ಲಿ ಹಣದ ವಹಿವಾಟು ವಿವರಗಳಿಂದ ಅಧಿಕಾರಿಗಳು ಲಂಚ ರೂಪದ ಹಣ ಪಡೆದಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ.
ರಿಸ್ಕ್ ನಲ್ಲಿರುವ ಅಧಿಕಾರಿಗಳು: ಈಗಾಗಲೇ ನಿವೃತ್ತಿಯಾಗಿರುವ ಈ ಹಿಂದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಉಪನಿರ್ದೇಶಕರಾಗಿ ಕೆಲಸ ನಿರ್ವಹಿಸಿದ ಜಿ.ವಿ. ವೀರಭದ್ರಪ್ಪ, ಎಸ್.ಆರ್. ನಿಡಗುಂದಿ, ಹಿರಿಯ ವಿಜ್ಞಾನಿಗಳಾದ ಸಂಪತ್ ಕೃಷ್ಣ, ಮಹಮ್ಮದ್ ನಸರುಲ್ಲಾ, ಬಿ.ಎಂ. ಲಿಂಗರಾಜು, ಎಂ. ವಿರೂಪಾಕ್ಷಗೌಡ, ಎಚ್.ಪಿ. ಮಲ್ಲೇಶ್, ಎಸ್. ಮಲ್ಲಿಕಾರ್ಜುನ, ಸಿಕಂದರ್ ಭಾಷಾ, ಎನ್. ದುರ್ಗೇಶ್ ಸೇರಿದಂತೆ ಭೂ ವಿಜ್ಞಾನಿಗಳು, ಕಿರಿಯ ಅಭಿಯಂತರರು, ಪ್ರಥಮ ದರ್ಜೆ ಸಹಾಯಕರು, ಡ್ರಿಲರ್ಗಳು ಹಾಗೂ ವಾಹನ ಚಾಲಕರು ಸೇರಿ23 ಜನರ ಮೇಲೆ ರಿಸ್ಕ್ ಅಮೌಂಟ್ ಪಡೆದಿರುವ ಆರೋಪವಿದೆ.
ರಾಜ್ಯ ಮಟ್ಟದ ಅಧಿಕಾರಿಗಳ ಮೇಲೂ ಕತ್ತಿ: ಗಣಿ ಲಾಬಿ ಕೇವಲ ಬಳ್ಳಾರಿ, ಚಿತ್ರದುರ್ಗ, ತುಮಕೂರಿಗೆ ಮಾತ್ರ ಸೀಮಿತವಾಗಿಲ್ಲ. ರಾಜ್ಯ ಮಟ್ಟದ ಅಧಿಕಾರಿಗಳ ಮೇಲೆ ಪ್ರಭಾವ ಬೀರಿತ್ತು ಎಂಬುದಕ್ಕೆ ಹಲವು ನಿದರ್ಶನಗಳಿವೆ. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಎನ್ಇಬಿ ರೇಂಜ್ನಲ್ಲಿ 550 ಎಕರೆ ಪ್ರದೇಶಕ್ಕೆ ಕಬ್ಬಿಣದ ಅದಿರು ಗಣಿ ಗುತ್ತಿಗೆಗೆ ಎಸ್.ವಿ. ಸಾಕ್ರೇ ಎಂಬುವವರು ಸಾಯಿ ವೆಂಕಟೇಶ್ವರ ಮಿನರಲ್ಸ್ ಹೆಸರಿನಲ್ಲಿ ಅರ್ಜಿ ಸಲ್ಲಿಸಿದ್ದರು ಎಂಬ ನಿರ್ದೇಶನವಿದೆ. ಸರ್ಕಾರ ಮತ್ತು ನಿರ್ದೇಶನಾಲಯದಲ್ಲಿ ಸಂಚು ರೂಪಿಸಿ ಮೂಲ ಅರ್ಜಿದಾರರು ಎಸ್.ವಿ. ಸಾಕ್ರೇ ಬದಲು ವಿನೋದ್ ಗೋಯಲ್ ಹೆಸರನ್ನು ಸೇರಿಸಿ ತಿದ್ದುಪಡಿ ಮಾಡಲಾಗಿದೆ. ಮೂಲ ಅರ್ಜಿದಾರರನ್ನು ತೆಗೆದು ಹಾಕಿ ಸಿದ್ಧಪಡಿಸಿದ ದಾಖಲೆಗಳನ್ನು ಒಪ್ಪಿಕೊಂಡಿರುವ ಆರೋಪವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿಂದಿನ ನಿರ್ದೇಶಕ, ಐಎಎಸ್ ಅಧಿಕಾರಿ ಕೆ.ಎಸ್. ಪ್ರಭಾಕರ, ಅಪರ ನಿರ್ದೇಶಕ ಎಚ್ಎಂ. ಖಯ್ಯೂಂ ಅಲಿ ಸೇರಿದಂತೆ ಇತರರು ಎದುರಿಸುತ್ತಿದ್ದಾರೆ.
ಇತರೆ ಇಲಾಖೆಗಳಿಗೂ ತನಿಖೆ ತಲೆಬಿಸಿ: ಈಗಾಗಲೇ ಲೋಕಾಯುಕ್ತ ವರದಿಯಲ್ಲಿ ಹೆಸರಿರುವ ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮೇಲೆ ಇಲಾಖಾ ವಿಚಾರಣೆ ನಡೆಯುತ್ತಿದ್ದರೆ, ಇದೀಗ ಕಂದಾಯ, ಪೊಲೀಸ್, ಪ್ರಾದೇಶಿಕ ಸಾರಿಗೆ ಇಲಾಖೆಯ ಗಣಿ ಸಂಬಂಧಿಸಿದ ಚಟುವಟಿಕೆಗಳಿಗೂ ಸಹಕರಿಸಿದ ಅಧಿಕಾರಿಗಳು ಹಾಗೂ ನೌಕರರಿಗೂ ನಡುಕ ಆರಂಭವಾಗಿದೆ. ಐಎಎಸ್, ಐಎಫ್ಎಸ್ ಅಧಿಕಾರಿಗಳಾಯ್ತು, ಮುಂದಿನ ಸರದಿ ಐಪಿಎಸ್ ಅಧಿಕಾರಿಗಳಿಗೆ ತಾಕಿದರೂ ಆಶ್ಚರ್ಯವಿಲ್ಲ ಎನ್ನುತ್ತಿವೆ ಮೂಲಗಳು.
ಏನಿದು ರಿಸ್ಕ್ ಅಮೌಂಟ್?
ಖಾರದಪುಡಿ ಮಹೇಶ್ ಮತ್ತು ಸಹಚರರು ಬಳ್ಳಾರಿ ಮತ್ತು ಇತರೆ ಜಿಲ್ಲೆಗಳಲ್ಲಿರುವ ಅನಧಿಕೃತ ಗಣಿಗಾರಿಕೆ ಮಾಡಿದ ಅದಿರನ್ನು ಸಾಗಿಸಲು 2009ರ ನವೆಂಬರ್ನಿಂದ 2010ರ ಏಪ್ರಿಲ್ವರೆಗೆ 382 ಕಂಪನಿ ಮತ್ತು ಟ್ರೇಡರ್ಸ್ನಿಂದ ಒಟ್ಟು 40.92 ಕೋಟಿ ರಿಸ್ಕ್ ಅಮೌಂಟ್ ರೂಪದಲ್ಲಿ ಪಡೆದಿದ್ದರು. ಪರವಾನಗಿ ಇಲ್ಲದೆ ನಿಗದಿತ ಪ್ರದೇಶಗಳಿಗೆ ಸುರಕ್ಷಿತವಾಗಿ ಅದಿರನ್ನು ತಲುಪಿಸಲು ಪಡೆಯುತ್ತಿದ್ದ ಹಣವನ್ನು ರಿಸ್ಕ್ ಅಮೌಂಟ್ ಎಂದು ಗಣಿ ಭಾಷೆಯಲ್ಲಿ ಹೆಸರಿಟ್ಟಿದ್ದರು. ರಿಸ್ಕ್ಗೆ ಸಹಕರಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ 23 ಅಧಿಕಾರಿಗಳು, ನೌಕರರು ಸೇರಿದಂತೆ ಕಂದಾಯ, ಸಾರಿಗೆ, ಪೊಲೀಸ್, ಅರಣ್ಯ ಇಲಾಖೆ ಸೇರಿದಂತೆ ಒಟ್ಟು 617 ಅಧಿಕಾರಿಗಳು, ನೌಕರರು ಸುಮಾರು 2.46 ಕೋಟಿಯನ್ನು ಲಂಚ ರೂಪದಲ್ಲಿ ಪಡೆದಿದ್ದಾರೆ ಎಂಬ ಅಂಶ ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪಿತವಾಗಿತ್ತು.
- ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

