ಪ್ರಧಾನ ಸುದ್ದಿ

ಮಹಾರಾಜರ ಕೊಡುಗೆ ನಾಡಿಗೆ ಸಂದ ಉಪಕಾರ

ಮಹಾರಾಜರ ಕೊಡುಗೆ ನಾಡಿಗೆ ಸಂದ ಉಪಕಾರ
Published On :

ಮೈಸೂರು ದಸರಾ ಉತ್ಸವ ಬಗ್ಗೆ ಉದ್ಘಾಟಕ ಡಾ. ಚಂದ್ರಶೇಖರ ಕಂಬಾರರಿಂದ 'ಕನ್ನಡಪ್ರಭ'ಕ್ಕೆ ಸಂದರ್ಶನ

ಕ.ಪ್ರ.ವಾರ್ತೆ, ಮೈಸೂರು, ಅ. 4
-
ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಈ ಬಾರಿ ಉದ್ಘಾಟಿಸಲಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಶುಕ್ರವಾರ ಮೈಸೂರಿಗೆ ಆಗಮಿಸಿದರು. ಅವರೊಂದಿಗೆ 'ಕನ್ನಡಪ್ರಭ' ಸಂದರ್ಶನ ನಡೆಸಿತು. ಆಯ್ದ ಭಾಗ ಇಲ್ಲಿದೆ.

ದಸರಾ ಬಗ್ಗೆ ನಿಮ್ಮ ಅನಿಸಿಕೆ?
ದಸರಾ ಎಂದರೆ ಅದೊಂದು ಜನಸಾಮಾನ್ಯರ ಕಲೆಗಳ ಪ್ರದರ್ಶನಕ್ಕೆ ದೊರಕಿರುವ ಮಹಾಹಬ್ಬ. ಇಂತಹ ಸಂದರ್ಭದಲ್ಲಿ ನಾಡಿನ ವಿವಿಧ ಸಂಸ್ಕೃತಿಗಳ ಸಂಗಮವೂ ಆಗುವುದು ಜನರಿಗೆ ಒದಗುವ ಸುಯೋಗ.

ದಸರಾ ಮಹೋತ್ಸವದಲ್ಲಿ ಈ ಹಿಂದೆ ಭಾಗವಹಿಸಿದ್ದೀರಾ?
ಎರಡನೇ ಬಾರಿ ದಸರಾದಲ್ಲಿ ಭಾಗವಹಿಸುವ ಅವಕಾಶ ದೊರಕಿದೆ. ಒಮ್ಮೆ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದೆ.

ಮೈಸೂರಿಗೂ ನಿಮಗೂ ಇರುವ ಸಂಬಂಧ?
ರಾಷ್ಟ್ರಕವಿ ಕುವೆಂಪು ಅವರಿಂದಾಗಿ ನನಗೆ ಮೈಸೂರಿನ ಸಂಬಂಧ ಬೆಸೆಯಿತು. ನಾನು ಸಾಹಿತಿಯಾಗಲು ಅವರ ಸ್ಫೂರ್ತಿಯೂ ಕಾರಣ. ಕುವೆಂಪು ಅವರಿಂದಾಗಿ ಉತ್ತರ ಕರ್ನಾಟಕದ ಅನೇಕ ಮಂದಿ ಕವಿಗಳಾದರು. ಇದನ್ನು ಎಂದಿಗೂ ಮರೆಯಲಾಗದು.

 ಉತ್ತರ ಕರ್ನಾಟಕದ ಜನರಲ್ಲಿ ಮೈಸೂರು ದಸರಾ ಬಗ್ಗೆ ಯಾವ ರೀತಿ ಅಭಿಪ್ರಾಯವಿದೆ?
ಮೈಸೂರು ಮಹಾರಾಜರೆಂದರೆ ಅಲ್ಲಿನ ಜನರಿಗೆ ವಿಶೇಷ ಗೌರವವಿದೆ. ಇಂದಿಗೂ ಅದೇ ಗೌರವ ಹಾಗೂ ಮೈಸೂರು ದಸರಾದ ಬಗ್ಗೆ ಪ್ರೀತಿ ಹೊಂದಿದ್ದಾರೆ.

ರಾಜ ಮಹಾರಾಜರ ಕಾಲದಲ್ಲಿ ಆರಂಭವಾದ ಈ ವಿಜಯ ದಶಮಿ ಆಚರಣೆ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಮುಂದುವರಿಯಲು ಇರುವ ಮಹತ್ವವೇನು?
ವಿಜಯನಗರ ಕಾಲದಲ್ಲಿ ಆರಂಭವಾದ ವಿಜಯದಶಮಿ ಆಚರಣೆಯೂ, ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಮುಂದುವರಿಯಲು ಕಾರಣ ಕಾಲಘಟ್ಟಕ್ಕೆ ಅನುಗುಣವಾಗಿ ಅದರ ಸ್ವರೂಪ ಬದಲಾಗುತ್ತಿರುವುದು. ಕೇವಲ ಮೈಸೂರು ಸಂಸ್ಥಾನಕ್ಕೆ ಸೀಮಿತವಾಗಿದ್ದ ಈ ಉತ್ಸವವನ್ನು ಇಂದು ನಾಡಹಬ್ಬವೆಂದು ಘೋಷಿಸಿ, ಅಖಂಡ ಕರ್ನಾಟಕದ ವ್ಯಾಪ್ತಿಗೆ ಪ್ರಖ್ಯಾತಿಗೊಳಿಸಿದ್ದು ಆಧುನಿಕ ಸರ್ಕಾರಗಳ ಬಹುದೊಡ್ಡ ಸಾಧನೆ.

ದಸರಾ ಮೆರವಣಿಗೆಯಲ್ಲಿ ಜನಪದ ತಂಡಗಳಿಗೆ ಮತ್ತಷ್ಟು ಅವಕಾಶ ಸಿಗಬೇಕು ಎನ್ನುವಿರಾ?
ಖಂಡಿತ ಸಿಗಬೇಕು. ಜನಪದ ಕಲಾತಂಡಗಳಿಗೆ ಹೆಚ್ಚಿನ ಅವಕಾಶ ಸಿಗಬೇಕು ಎಂದು ಜನಪದ ವಿದ್ವಾಂಸನಾಗಿ ನಾನು ಒತ್ತಾಯಿಸುವುದಕ್ಕಿಂತ ಜನಸಾಮಾನ್ಯರು ಆಗ್ರಹಿಸಬೇಕು. ಪೂರ್ವಜರ ಸಂಸ್ಕೃತಿ ಉಳಿಯಬೇಕಾದರೆ ನಮ್ಮ ಜನಪದ ಕಲಾ ಪ್ರಕಾರಗಳು ಉಳಿಯಬೇಕು. ಕಲೆ ಉಳಿಸುವ ಜವಾಬ್ದಾರಿ ಜನರ ಮೇಲಿದೆ. ಅಂತೆಯೇ ಸರ್ಕಾರ ಕಲೆಗಳನ್ನು ಸಂರಕ್ಷಿಸಬೇಕು.

 ಜನಪದ ಕಲೆಗಳನ್ನು ಅವಲಂಬಿಸಿದ್ದ ಕುಟುಂಬಗಳು ಕ್ಷೀಣಿಸುತ್ತಿದೆ ಅಲ್ಲವೇ?
ಜನರಿಂದ ಸರಿಯಾದ ಉತ್ತೇಜನ ದೊರಕದೆ ಹೋದರೆ ಎಲ್ಲಾ ಕಲೆಗಳು ಮೂಲೆಗುಂಪಾಗಲಿವೆ. ಜನಪದದಲ್ಲಿ ತೊಗಲುಗೊಂಬೆ ಸಹ ಒಂದು ಕಲಾಪ್ರಕಾರ. ಕರ್ನಾಟಕದಲ್ಲಿ ಸುಮಾರು 40 ಮಂದಿ ತೊಗಲು ಬೊಂಬೆ ನಡೆಸುವ ಕುಟುಂಬಗಳಿವೆ. ಕಲೆ ಉಳಿಸಬೇಕಾದರೆ ಆ ಕಲಾವಿದ ಉಳಿಯಬೇಕು. ಈ ದಿಸೆಯಲ್ಲಿ ಆ ಕುಟುಂಬದ ಪ್ರಮುಖನಿಗೆ ಸರ್ಕಾರ ಮಾಸಾಶನ ನೀಡಬೇಕು. ಆತ ಸತ್ತ ನಂತರ ಅದು ಕುಟುಂಬದ ಮತ್ತೊಬ್ಬ ಸದಸ್ಯನಿಗೆ ಮುಂದುವರಿಯಬೇಕು. ಇದಕ್ಕಾಗಿ ಹಿಂದಿನ ಸರ್ಕಾರಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಐಎಎಸ್ ಅಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸಬೇಕು.

ಜನಪದ ಕಲಾಪ್ರಕಾರಗಳ ಸಂರಕ್ಷಣೆ ವಿದೇಶಗಳಲ್ಲಿ ಹೇಗೆ ನಡೆದಿದೆ?
ವಿದೇಶಿಗಳಲ್ಲಿ ಜನಪದ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ದೊರಕಲಿದೆ. ಅಲ್ಲಿನ ಸರ್ಕಾರಗಳು ಆ ಕಲೆಗಳನ್ನು ಸಂರಕ್ಷಿಸುವಲ್ಲಿ ಆದ್ಯತೆ ವಹಿಸಿವೆ. ಅಲ್ಲಿನ ಪ್ರವಾಸಿ ತಾಣಗಳಲ್ಲಿ ಜನಪದ ಕಲಾವಿದರಿಗೆ ಪ್ರತಿದಿನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಇದರಿಂದ ಕಲೆಯೂ ಉಳಿಯುವುದರ ಜತೆಗೆ ಕಲೆ ನಂಬಿ ಬದುಕುವ ಕಲಾವಿದರ ಜೀವನ ನಡೆಯಲಿದೆ. ಇಂತಹ ಕೆಲಸ ಕರ್ನಾಟಕದಲ್ಲಿಯೂ ಆಗಬೇಕು.

ವಿಜಯ ದಶಮಿಯ ಹೆಸರಿನಲ್ಲಿ ಅಚರಿಸುವ ದಸರಾ ಉತ್ಸವವನ್ನು ವಿರೋಧಿಸುವ ಮಂದಿಗೆ ನಿಮ್ಮ ಮಾತೇನು?
ಅದು ಅವರ ವೈಯಕ್ತಿಕ ವಿಚಾರವಾಗಿದ್ದು ಅದಕ್ಕೆ ನಾನು ಪ್ರತಿಕ್ರಿಯಿಸಲಾರೆ.

 ನಾಡಿನ ಅಭಿವೃದ್ಧಿಗೆ ಮೈಸೂರು ರಾಜರು ನೀಡಿದ ಕೊಡುಗೆ ಯಾವ ರೀತಿ ಸ್ಮರಿಸುತ್ತೀರಾ?
ವಿಜಯನಗರ ಅರಸರ ಕಲಾ ಪರಂಪರೆ ಮುಂದುವರಿಸಿದ ಮೈಸೂರು ಮಹಾರಾಜರ ಕೊಡುಗೆ ನಾಡಿಗೆ ಸಂದ ಬಹುದೊಡ್ಡ ಉಪಕಾರ. ಕಲೆ ಹಾಗೂ ಸಂಸ್ಕೃತಿಗೆ ನೀಡಿದ ಪ್ರೋತ್ಸಾಹ ಹಾಗೂ ಪೋಷಣೆ ಅವಿಸ್ಮರಣೀಯ. ಜನಾನುರಾಗಿಯಾಗಿ ಆದರ್ಶ ಆಡಳಿತ ನಡೆಸಿದ ರಾಜ ಒಡೆಯರುಗಳನ್ನು ಪ್ರಜೆಗಳು ಸಹ ತುಂಬ ಪ್ರೀತಿಸುತ್ತಿದ್ದರು ಎಂಬುದು ಹೆಮ್ಮೆಯ ಸಂಗತಿ.

ವಿಶ್ವಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಗೂ, ವಿಶ್ವಪ್ರಸಿದ್ಧ ದಸರಾ ಮಹೋತ್ಸವದ ಉದ್ಘಾಟನೆಗೂ ಭಿನ್ನ ಎನ್ನಿಸುತ್ತದೆಯೇ?
ಸಾಹಿತ್ಯ ಸಮ್ಮೇಳನ ಕನ್ನಡ ಭಾಷೆಯ ಸ್ಥಿತಿಗತಿಯ ಚರ್ಚೆಗೆ ಸೂಕ್ತ ವೇದಿಕೆ. ಕನ್ನಡ ತಂತ್ರಾಂಶ ಬೆಳವಣಿಗೆಯಾಗಬೇಕೆಂಬುದು ನನ್ನ ಹೆಬ್ಬಯಕೆ. ದಸರಾ ಉತ್ಸವ ಜನಸಾಮಾನ್ಯರ ಕಲಾ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆ. ಜನರ ಉತ್ಸಾಹ ಹಾಗೂ ಸಡಗರದಿಂದ ಭಾಗವಹಿಸುವ ಈ ನಾಡಹಬ್ಬವನ್ನು ಉದ್ಘಾಟಿಸುವುದು ನನಗೆ ತುಂಬ ಸಂತೋಷ ತಂದಿದೆ.

- ಈ ನೆಲದ ಸಂಸ್ಕೃತಿ ಉಳಿವಿಗಾಗಿ ಯುವಜನತೆಗೆ ನಿಮ್ಮ ಸಂದೇಶವೇನು?
ಯಾವುದೇ ಕಲೆ ಉಳಿಯಬೇಕಾದರೆ ಜನರು ಅದನ್ನು ಯಾವ ರೀತಿ ಪ್ರೋತ್ಸಾಹಿಸುತ್ತಾರೆ ಎಂಬುದರ ಅಧಾರದ ಮೇಲೆ ಅದು ಜೀವಂತಿಕೆ ಪಡೆಯಲಿದೆ. ಈ ನೆಲದ ಕಲೆ ಹಾಗೂ ಸಂಸ್ಕೃತಿ ಆಸ್ವಾದಿಸಲು ಮನಸ್ಸು ತೆರೆದು, ಅದನ್ನು ಅಪ್ಪಿಕೊಳ್ಳುವಲ್ಲಿ ಯುವಜನತೆ ಒಲವು ತೋರಬೇಕು. ಅಂತಹ ವಾತಾವರಣವನ್ನು ಸಮಾಜ ಹಾಗೂ ಸರ್ಕಾರ ಕಲ್ಪಿಸಬೇಕು.

- ಮಾ. ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.