ಪ್ರಧಾನ ಸುದ್ದಿ

ಅಧಿಕಾರಿಗಳ ಕಾರುಗಳ ಮೇಲೆ ಬಣ್ಣದ ದೀಪ!

Published On :

ಮ್ಯಾಜಿಸ್ಟ್ರೇಟ್ ಮಟ್ಟದ ಅಧಿಕಾರಿಗಳ ವಾಹನಗಳಿಗೆ ಬೇರೆ ಬಣ್ಣದ ದೀಪ ಅಳವಡಿಸಲು ಗೃಹ ಇಲಾಖೆ ಚಿಂತನೆ

ಬೆಂಗಳೂರು:
ಪೊಲೀಸ್ ಮತ್ತು ಮ್ಯಾಜಿಸ್ಟ್ರೇಟ್ ದರ್ಜೆ ಅಧಿಕಾರಿಗಳ ವಾಹನಕ್ಕೆ ಬರಲಿವೆ ಬಣ್ಣದ ದೀಪಗಳು..!
ಹೌದು, ಅತಿ ಗಣ್ಯರು ಓಡಾಡುವ ವಾಹನಗಳನ್ನು ಹೊರತುಪಡಿಸಿ ಬೇರೆ ಯಾರ ವಾಹನಕ್ಕೂ ಕೆಂಪು ದೀಪ ಬಳಸುವಂತಿಲ್ಲ ಎಂಬ ತನ್ನ ತೀರ್ಪನ್ನು ಸುಪ್ರೀಂ ಕೋರ್ಟ್ ಪುನರ್‌ಪರಿಶೀಲಿಸದೇ ಇದ್ದಲ್ಲಿ ಪೊಲೀಸ್ ಸೇರಿದಂತೆ ಮ್ಯಾಜಿಸ್ಟ್ರೇಟ್ ಮಟ್ಟದ ವಾಹನಗಳಿಗೆ ಬೇರೆ ಬಣ್ಣದ ದೀಪಗಳನ್ನು ಅಳವಡಿಸುವ ಬಗ್ಗೆ ಗೃಹ ಇಲಾಖೆ ಚಿಂತನೆ ನಡೆಸಿದೆ.
ರಾಜ್ಯಪಾಲರು, ಮುಖ್ಯಮಂತ್ರಿ, ಸಂಪುಟ ಸದಸ್ಯರು ಹಾಗೂ ನ್ಯಾಯಮೂರ್ತಿಗಳ ವಾಹನಗಳನ್ನು ಹೊರತುಪಡಿಸಿ ಬೇರೆ ವಾಹನಗಳಿಗೆ ಕೆಂಪು ದೀಪ ಬಳಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಆದೇಶ ನೀಡಿದ್ದು, ರಾಜ್ಯದಲ್ಲಿ ಈ ಆದೇಶವನ್ನು ಪಾಲಿಸಲಾಗುತ್ತಿದೆ. ಆದರೆ, ಸುಪ್ರೀಂ ಕೋರ್ಟ್‌ನ ಈ ಆದೇಶ ಭದ್ರತೆ, ತಪಾಸಣೆ ಸೇರಿದಂತೆ ಪೊಲೀಸರ ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ಅಷ್ಟೇ ಅಲ್ಲ, ಮ್ಯಾಜಿಸ್ಟ್ರೇಟ್ ಮಟ್ಟದ ಅಧಿಕಾರಿಗಳು ಅಂದರೆ ಜಿಲ್ಲಾಧಿಕಾರಿಗಳಿಗೂ ಈ ಆದೇಶ ತೊಂದರೆಯಾಗಿದೆ.
ಈ ಹಿನ್ನೆಲೆಯಲ್ಲಿ ವಾಹನಗಳ ಮೇಲೆ ಕೆಂಪುದೀಪದ ಬದಲು ಹಸಿರು ಅಥವಾ ಇನ್ಯಾವುದಾದರೂ ಬಣ್ಣದ ದೀಪ ಅಳವಡಿಸಬೇಕು ಎಂಬುದು ಗೃಹ ಇಲಾಖೆ ಆಲೋಚನೆ. ಆದರೆ, ಕೆಂಪು ದೀಪ ಅಳವಡಿಸುವ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ಅಂತಿಮ ಆದೇಶ ನೀಡಿದ ಬಳಿಕವೇ ಈ ಕುರಿತು ಅಧಿಕೃತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಗಣ್ಯರ ವಾಹನಗಳ ಮೇಲೆ ಕೆಂಪು ದೀಪ ಹಾಕಲು ಈ ಹಿಂದೆ ಅವಕಾಶವಿತ್ತು. ಆದರೆ, ಬಹುತೇಕ ಸಂದರ್ಭದಲ್ಲಿ ಇದು ದುರುಪಯೋಗವಾಗುತ್ತಿತ್ತು. ಸಣ್ಣ ಪುಟ್ಟ ಅಧಿಕಾರಿಗಳು, ಸಂಘ ಸಂಸ್ಥೆಗಳ ಮುಖಂಡರು ಕೂಡ ತಮ್ಮ ವಾಹನಗಳಿಗೆ ಕೆಂಪು ದೀಪ ಅಳವಡಿಸಿಕೊಂಡಿದ್ದರು. ಇದರಿಂದಾಗಿ ಪೊಲೀಸ್ ಇಲಾಖೆಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್, ರಾಜ್ಯಪಾಲರು, ಮುಖ್ಯಮಂತ್ರಿ, ಸಚಿವ ಸಂಪುಟದ ಸದಸ್ಯರು ಕೇಂದ್ರ ಸಚಿವರು, ನ್ಯಾಯಮೂರ್ತಿಗಳು ಹೊರತುಪಡಿಸಿ ಬೇರೆ ಯಾರೂ ತಮ್ಮ ವಾಹನಗಳಿಗೆ ಕೆಂಪು ದೀಪ ಅಳವಡಿಸಬಾರದು ಎಂದು ಆದೇಶ ನೀಡಿತ್ತು.

ಹೆಚ್ಚು ತೊಂದರೆ ಪೊಲೀಸರಿಗೆ: ವಾಹನಗಳಿಗೆ ಕೆಂಪು ದೀಪ ಅಳವಡಿಸುವುದಕ್ಕೆ ಹೈಕೋರ್ಟ್ ನಿರ್ಬಂಧ ಹೇರಿದ್ದರಿಂದ ಹೆಚ್ಚು ತೊಂದರೆಗೊಳಗಾದವರು ಪೊಲೀಸರು. ಅದರಲ್ಲೂ ರಾತ್ರಿ ವೇಳೆ ನಡೆಸುವ ಕಾರ್ಯಾಚರಣೆ ಅಥವಾ ತಪಾಸಣೆ ಸಂದರ್ಭದಲ್ಲಿ ಪೊಲೀಸ್ ವಾಹನಗಳನ್ನು ಗುರುತಿಸುವುದೇ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಪ್ರಮುಖ ತನಿಖಾಧಿಕಾರಿಗಳ ವಾಹನಗಳನ್ನು ತಕ್ಷಣವೇ ಗುರುತು ಹಿಡಿಯಲು ವಾಹನದ ಮೇಲೆ ಯಾವುದಾದರೂ ದೀಪ ಅಳವಡಿಸಬೇಕು ಎಂಬ ಬೇಡಿಕೆಯನ್ನು ಪೊಲೀಸರು ಗೃಹ ಇಲಾಖೆ ಮುಂದೆ ಇಟ್ಟಿದ್ದಾರೆ.
ಆದರೆ, ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇರುವುದರಿಂದ ಸರ್ಕಾರ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಮಧ್ಯೆ ಕೆಂಪು ದೀಪ ಅಳವಡಿಸುವುದಕ್ಕೆ ನಿರ್ಬಂಧ ಹೇರಿರುವ ತೀರ್ಪು ಮರುಪರಿಶೀಲಿಸುವಂತೆ ಕೋರಿ ಕೆಲವು ರಾಜ್ಯಗಳು ಅರ್ಜಿ ಸಲ್ಲಿಸಿವೆ. ಪ್ರಸ್ತುತ ವಿಚಾರಣೆ ಅಂತಿಮ ಹಂತದಲ್ಲಿದೆ. ಒಂದು ವೇಳೆ ಸುಪ್ರೀಂ ಕೋರ್ಟ್ ನಿಯಮ ಸಡಿಲಿಸಿ ಪೊಲೀಸ್ ಮತ್ತು ಮ್ಯಾಜಿಸ್ಟ್ರೇಟ್ ಮಟ್ಟದ ಅಧಿಕಾರಿಗಳಿಗೆ ಕೆಂಪು ದೀಪ ಅಳವಡಿಸಲು ಅನುಮತಿ ನೀಡಿದರೆ ಪರವಾಗಿಲ್ಲ. ಇಲ್ಲದೇ ಇದ್ದರೆ ಪೊಲೀಸರು ಮತ್ತು ಮ್ಯಾಜಿಸ್ಟ್ರೇಟ್ ಮಟ್ಟದ ಅಧಿಕಾರಿಗಳ ವಾಹನಗಳನ್ನು ಸುಲಭವಾಗಿ ಗುರುತಿಸಲು ಹಸಿರು ಅಥವಾ ಬೇರೆ ಯಾವುದಾದರೂ ಬಣ್ಣದ ದೀಪಗಳನ್ನು ಅಳವಡಿಸಲು ಅನುಮತಿ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ಗೃಹ ಇಲಾಖೆ ನಿರ್ಧರಿಸಿದೆ.

ಸುಪ್ರೀಂ ತೀರ್ಪಿನ ಬಳಿಕ ನಿರ್ಧಾರ: ವಾಹನಗಳಿಗೆ ಯಾವುದೇ ಬಣ್ಣದ ದೀಪ ಅಳವಡಿಸುವುದಿದ್ದರೂ ಈ ಕುರಿತು ಕಾನೂನು ತಿದ್ದುಪಡಿ ತಂದು ಆದೇಶ ಹೊರಡಿಸಬೇಕಾಗಿರುವುದು ಸಾರಿಗೆ ಇಲಾಖೆ. ಹೀಗಾಗಿ ಸುಪ್ರೀಂ ಕೋರ್ಟ್ ಆದೇಶ ಹೊರಬಿದ್ದ ಬಳಿಕ ಸಾರಿಗೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಗೃಹ ಇಲಾಖೆ ತೀರ್ಮಾನಿಸಿದೆ.

ಪ್ರಮುಖವಾಗಿ ಪೊಲೀಸ್ ವಾಹನಗಳನ್ನು ಗುರುತಿಸಲು ಅದರ ಮೇಲೆ ದೀಪ ಇರಬೇಕು. ಆದರೆ, ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಲೇ ಬೇಕಾಗುತ್ತದೆ. ಒಂದು ವೇಳೆ ಸುಪ್ರೀಂ ಕೋರ್ಟ್ ಕೆಂಪು ಇಲ್ಲವೇ ಬೇರೆ ಬಣ್ಣದ ದೀಪವನ್ನು ವಾಹನಗಳ ಮೇಲೆ ಅಳವಡಿಸಲು ಅನುಮತಿ ನೀಡಿದರೆ ಈ ಕುರಿತು ಸೂಕ್ತ ಕಾನೂನು ತಿದ್ದುಪಡಿ ಮಾಡಲು ತಮ್ಮ ಇಲಾಖೆ ಸಿದ್ಧವಿದೆ.
-ರಾಮಲಿಂಗಾರೆಡ್ಡಿ,
ಸಾರಿಗೆ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.