ಆರದ ರೋಷಾಗ್ನಿ

ಪಿಟಿಐ ವಿಶಾಖಪಟ್ಟಣ/ಹೈದರಾಬಾದ್ ಅ.6
ಆಂಧ್ರ ವಿಭಜನೆ ವಿರೋಧಿಸಿ ಸೀಮಾಂಧ್ರದ ವಿಜಯನಗರ ಜಿಲ್ಲೆಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ವಿಜಯನಗರ ಪಟ್ಟಣದ ಹಲವೆಡೆ ಕಲ್ಲುತೂರಾಟ ನಡೆದಿದ್ದು, ಅನೇಕ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪಟ್ಟಣದಲ್ಲಿ ಕರ್ಫ್ಯೂ ಹೇರಿದ್ದು, ಕಂಡಲ್ಲಿ ಗುಂಡು ಆದೇಶ ಹೊರಡಿಸಿದ್ದಾರೆ.
ಈ ನಡುವೆ, ತೆಲಂಗಾಣ ರಚನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ವಿದ್ಯುತ್ ಕೇಂದ್ರದ 70 ಸಾವಿರಕ್ಕೂ ಹೆಚ್ಚು ನೌಕರರೂ ಬೆಂಬಲ ವ್ಯಕ್ತಪಡಿಸಿದ್ದರಿಂದ ರಾಜ್ಯದ 13 ಜಿಲ್ಲೆಗಳು ಕತ್ತಲೆಯಲ್ಲಿ ಮುಳುಗಿವೆ.
ಬ್ಯಾಂಕ್ಗೆ ಬೆಂಕಿ: ನಾನ್ ಗೆಜೆಟೆಡ್ ನೌಕರರು ಕರೆ ನೀಡಿದ್ದ ಮೂರು ದಿನಗಳ ಬಂದ್ನ ಎರಡನೇ ದಿನವಾದ ಶನಿವಾರ ರಾತ್ರಿ ಏಕಾಏಕಿ ಹಿಂಸಾಚಾರಕ್ಕಿಳಿದ ಕೆಲ ದುಷ್ಕರ್ಮಿಗಳು ಅನೇಕ ಅಂಗಡಿಗಳನ್ನು ಲೂಟಿ ಮಾಡಿದ್ದಾರೆ. ಬ್ಯಾಂಕ್ವೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಜತೆಗೆ, ಪೊಲೀಸ್ ಹಾಗೂ ಅನೇಕ ಖಾಸಗಿ ವಾಹನಗಳಿಗೆ ಹಾನಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪಟ್ಟಣದಲ್ಲಿ ಕರ್ಫ್ಯೂ ಹೇರಿದ್ದು, ಕಂಡಲ್ಲಿ ಗುಂಡು ಹಾರಿಸಲು ಆದೇಶ ಹೊರಡಿಸಿದ್ದರು. ಇಷ್ಟಾದರೂ ಭಾನುವಾರ ಬೆಳಗ್ಗೆ ಕರ್ಫ್ಯೂ ಆದೇಶ ಧಿಕ್ಕರಿಸಿ ಬೀದಿಗಿಳಿದ ಪ್ರತಿಭಟನಾಕಾರರು ಕೋಥಪೇಟ ಹಾಗೂ ಪಲ್ಲಿವೀಥಿಯಲ್ಲಿ ಪೊಲೀಸರ ಜತೆಗೆ ಘರ್ಷಣೆಗೆ ಇಳಿದಿದ್ದಾರೆ. ಈ ವೇಳೆ ಪೊಲೀಸರು ರಬ್ಬರ್ ಗುಂಡು ಹಾರಿಸಿ, ಲಾಠಿ ಚಾರ್ಜ್ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದ್ದಾರೆ.
ಆಂಧ್ರ ಕಾಂಗ್ರೆಸ್ ಮುಖ್ಯಸ್ಥರ ಆಸ್ತಿಪಾಸ್ತಿ ಗುರಿ: ಬಂದ್ ವೇಳೆ ಪ್ರತಿಭಟನಾಕಾರರು ಆಂಧ್ರ ಕಾಂಗ್ರೆಸ್ ಅಧ್ಯಕ್ಷ ಬಿ. ಸತ್ಯನಾರಾಯಣ ಹಾಗೂ ಅವರ ಕುಟುಂಬದ ಆಸ್ತಿಯನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿದ್ದಾರೆ. ಸತ್ಯನಾರಾಯಣ ಅವರಿಗೆ ಸೇರಿದ ಎಂಜಿನಿಯರಿಂಗ್ ಕಾಲೇಜು ಹಾಗೂ ಅವರ ಕುಟುಂಬಕ್ಕೆ ಸೇರಿದ ಕೇಬಲ್ ನೆಟ್ವರ್ಕ್ ಮೇಲೆ ಕಲ್ಲು ತೂರಿ ಹಾನಿ ಮಾಡಿದ್ದಾರೆ.
ವಿದ್ಯುತ್ ನೌಕರರಿಂದ ಅನಿರ್ದಿಷ್ಟಾವಧಿ ಮುಷ್ಕರ
ರಾಜ್ಯ ವಿಭಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಸೀಮಾಂಧ್ರದ ವಿದ್ಯುತ್ ಕೇಂದ್ರಗಳ ನೌಕರರೂ ಕೈ ಜೋಡಿಸಿದ್ದಾರೆ. 70 ಸಾವಿರಕ್ಕೂ ಹೆಚ್ಚು ನೌಕರರು ಭಾನುವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ನೌಕರರ ಮುಷ್ಕರದಿಂದಾಗಿ ವಿಜಯವಾಡ ಉಷ್ಣವಿದ್ಯುತ್ ಸ್ಥಾವರದ ಏಳು ಘಟಕಗಳಲ್ಲಿ ಆರರಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಆಂಧ್ರಪ್ರದೇಶಕ್ಕೆ ಪ್ರತಿ ದಿನ 5 ಸಾವಿರ ಮೆ.ವ್ಯಾ.ನಷ್ಟು ವಿದ್ಯುತ್ ಅಗತ್ಯವಿದೆ. ವಿಜಯವಾಡ ಉಷ್ಣವಿದ್ಯುತ್ ಘಟಕವೊಂದರಲ್ಲೇ 1700 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತದೆ. ಆದರೆ, ನೌಕರರ ಮುಷ್ಕರದಿಂದ ವಿಜಯವಾಡ ಮತ್ತು ಸುತ್ತಮುತ್ತಲ ಹಳ್ಳಿಗಳಲ್ಲಿ ಕತ್ತಲೆ ಆವರಿಸಿದೆ. ಉಳಿದಂತೆ ಸೀಮಾಂಧ್ರದ 13 ಜಿಲ್ಲೆಗಳಲ್ಲೂ ತೀವ್ರ ವಿದ್ಯುತ್ ವ್ಯತ್ಯಯ ಕಾಣಿಸಿಕೊಂಡಿದೆ.
ಇಂದಿನಿಂದ ನಾಯ್ಡು ಪ್ರತಿಭಟನೆ
ಪ್ರತ್ಯೇಕ ರಾಜ್ಯ ರಚನೆ ಖಂಡಿಸಿ ತೆಲುಗು ದೇಶಂ ಪಕ್ಷದ ಮುಖಂಡ ಚಂದ್ರಬಾಬು ನಾಯ್ಡು ಅವರು ಸೋಮವಾರದಿಂದ ದೆಹಲಿಯಲ್ಲಿ ನಿರಶನ ಆರಂಭಿಸಲಿದ್ದಾರೆ. ಜಗನ್ ರೆಡ್ಡಿ ಶನಿವಾರವಷ್ಟೇ ಅನಿರ್ದಿಷ್ಟಾವಧಿ ನಿರಶನ ಆರಂಭಿಸಿದ್ದರು.
ಯಶವಂತಪುರ ರೈಲು ತಡೆ
ಪ್ರತಿಭಟನಾಕಾರರು ವಿಜಯವಾಡ- ಗುದೂರು ನಡುವೆ ಭಾನುವಾರ ಅನೇಕ ರೈಲುಗಳ ಸಂಚಾರಕ್ಕೂ ಅಡ್ಡಿಪಡಿಸಿದ್ದಾರೆ. ಇದರಿಂದಾಗಿ ಯಶವಂತಪುರ- ಹೌರಾ ಎಕ್ಸ್ಪ್ರೆಸ್ ರೈಲು ಸಂಚಾರ ಕೆಲಕಾಲ ಅಸ್ತವ್ಯಸ್ತವಾಯಿತು. ಆದರೆ, ಪೊಲೀಸರ ಮಧ್ಯಪ್ರವೇಶದ ಬಳಿಕ ರೈಲುಗಳ ಸಂಚಾರ ಪುನರ್ ಆರಂಭವಾಯಿತು.
ಯಾರೂ ಮೃತರಾಗಿಲ್ಲ
ಹಿಂಸಾಚಾರದಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿ 3 ಮಂದಿ ಮೃತಪಟ್ಟಿದ್ದಾರೆ ಎಂದು ಆಂಧ್ರದಲ್ಲಿ ಸುದ್ದಿ ಹರಡಿತ್ತು. ಆದರೆ, ಈ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಸಮಾಜಘಾತುಕ ಶಕ್ತಿಗಳು ಉದ್ದೇಶಪೂರ್ವಕವಾಗಿ ಈ ರೀತಿ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


