ಪ್ರಧಾನ ಸುದ್ದಿ

ಸಕ್ರೆಬೈಲಿನಲ್ಲಿ ಗಜಕ್ರೀಡೆ ಮೋಜು

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಅ. 6-
ಭಾನುವಾರ ಸಕ್ರೆಬೈಲಿನಲ್ಲಿ ಸೊಗಸು, ಸಂಭ್ರಮ, ಸಡಗರ ಮನೆ ಮಾಡಿತ್ತು.
ವನ್ಯಜೀವಿ ಸಪ್ತಾಹದ ಅಂಗವಾಗಿ ಆನೆ ಬಿಡಾರದಲ್ಲಿ ಆನೆ ಹಬ್ಬ ಆಚರಣೆ ಹಮ್ಮಿಕೊಳ್ಳಲಾಗಿತ್ತು. ಆನೆಗಳಾಟ ನೋಡಲು ಸಾವಿರಾರು ಮಂದಿ ಅಲ್ಲಿ ಸೇರಿದ್ದರು, ಬಂದವರಿಗೆ ನಿರಾಸೆ ಮಾಡದಂತೆ ಆನೆಗಳೂ ಸಹ ಮಜಾ ಕೊಟ್ಟವು.
ಅಮೃತ, ಆಲೆ, ನಾಗ, ಕಪಿಲ, ಸಾಗರ್, ಇಂದಿರಾ, ಸೂರ್ಯ, ಗಂಗೆ... ಇವರೇ ಪ್ರಮುಖ ಆಕರ್ಷಣೆಗಳು. ಪ್ರತಿ ವರ್ಷದಂತೆ ಈ ಬಾರಿಯೂ ಫುಟ್ಬಾಲ್, ಕ್ರಿಕೆಟ್ ಇತ್ಯಾದಿ ಆಟಗಳನ್ನಾಡಿದರೆ, ಹೊಸತೆಂಬಂತೆ ಬ್ಯಾಸ್ಕೆಟ್ ಬಾಲ್ ಸ್ಪರ್ಧೆ ನಡೆಯಿತು. ಸೌಂದರ್ಯ ಸ್ಪರ್ಧೆ, ಕ್ಯಾಟ್‌ವಾಕ್ ದಿನ ವಿಶೇಷ ಕಾರ್ಯಕ್ರಮ. ವಿಶೇಷವಾಗಿ ಅಲಂಕರಿಸಿಕೊಂಡ ಆನೆಗಳು ಸೌಂದರ್ಯ ಸ್ಪರ್ಧೆಯಲ್ಲಿ ತಮ್ಮ ವೈಯ್ಯಾರ ತೋರಿಸಿ ಚಪ್ಪಾಳೆ ಗಿಟ್ಟಿಸಿದವು. ಇನ್ನು ಬಂದಿದ್ದ ಜನರ ಮುಂದೆ ಕ್ಯಾಟ್ ವಾಕ್ ಮಾಡುವ ಮೂಲಕ ಮಾಡೆಲ್‌ಗಳಿಗೆ ತಾವೇನು ಕಡಿಮೆ ಎಂಬಂತೆ ಬಿಂಬಿಸಿಕೊಂಡವು. ಈ ಆನೆಗಳು. ಆರಂಭದಲ್ಲಿ ಅತಿಥಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಆನೆಗಳು, ಹೂವಿನ ಸಿಂಚನೆ ಮಾಡಿ ಸ್ವಾಗತ ಕೋರಿದವು.

ಬಾಂಧವ್ಯ: ನಂತರ ಅತಿಥಿಗಳ ಭಾಷಣ. ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ನಮ್ಮ ವನ್ಯಜೀವಿಗಳಿಗೂ ಸಂಸ್ಕೃತಿಯಿಂದ ಬಾಂಧವ್ಯ ಇದೆ. ಈ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳು ಉಳಿದುಕೊಂಡಿವೆ ಎಂದರು.
ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್ ಮಾತುಗಳು ಅಲ್ಲಿ ಸೇರಿದ್ದವರ ಗಮನ ಸೆಳೆಯಿತು. ನಾವುಗಳು ಆನೆಗಳ ಜಾಗ ಆಕ್ರಮಿಸಿಕೊಳ್ಳುತ್ತಿದ್ದೇವೆ. ಹೀಗಾಗಿ ಆನೆಗಳು ಜನವಸತಿ ಪ್ರದೇಶಕ್ಕೆ ದಾಳಿ ಮಾಡುತ್ತಿವೆ ಎಂಬುದನ್ನು ಅರಿಯಬೇಕಾಗಿದೆ. ಹೀಗಾಗಿ ಹೆಚ್ಚು ವನ್ಯಜೀವಿ ಸಂಪತ್ತು ಬೆಳೆಸಲು ನಾವೆಲ್ಲರೂ ಪ್ರಯತ್ನಿಸಬೇಕೆಂದು ಕರೆಕೊಟ್ಟರು.
ಶಾಸಕ ಕೆ.ಬಿ. ಪ್ರಸನ್ನಕುಮಾರ್, ಜಿಲ್ಲಾಧಿಕಾರಿ ವಿಪುಲ್ ಬನ್ಸಲ್, ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್, ಡಿಎಫ್‌ಓ ರವಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಜರಿದ್ದರು.
ವೇದಿಕೆ ಕಾರ್ಯಕ್ರಮ ನಂತರ ನಡೆದ ಸ್ಪರ್ಧೆಗಳು ನಡೆದವು. ವಿಶೇಷವಾಗಿ ಜಯಸಿಂಹ, ಬಂದ ಜಯಸಿಂಹ ಹಾಡಿಗಾಗಿ ನೃತ್ಯ ಸಾಕಷ್ಟು ಚಪ್ಪಾಳೆ ಗಿಟ್ಟಿಸಿತು. ಅಮೃತ (ಆನೆ) ಮಾತ್ರ ಸ್ವಲ್ಪ ಗೊಂದಲಕ್ಕೆ ಬಿದ್ದವಳಂತೆ ಕಂಡುಬಂದಳು. ಎರಡು ಬಾರಿ ಮಾವುತನ ಮಾತು ಕೇಳದೇ ಅಲ್ಲಿಂದ ತೆರಳುವ ಪ್ರಯತ್ನ ಮಾಡಿದಳು. ಹಾಗೆಯೇ ಬಿಡಾರದ ಕಿರಿಯ ಮೂರು ವರ್ಷದ ಸೂರ್ಯ ಗಾಂಭೀರ್ಯತೆ ಪ್ರದರ್ಶಿಸಿದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.