ಸಾಂಕ್ರಾಮಿಕ ರೋಗ ಹರಡಲು ತರಬೇತಿ!
ಕ.ಪ್ರ.ವಾರ್ತೆ, ಮಂಗಳೂರು, ಅ. 7-
ಉಗ್ರರು ಕೇವಲ ಬಾಂಬ್ ಸ್ಫೋಟಗಳನ್ನು ಮಾತ್ರ ನೆಚ್ಚಿಕೊಂಡಿದ್ದರೆ?
ಈ ಪ್ರಶ್ನೆಗೆ ಇಲ್ಲ ಎಂದು ಉತ್ತರ ಹೇಳಬಹುದು. ಯಾಕೆಂದರೆ, ಬಂಧಿತ ಐಎಂ ಸಹ ಸ್ಥಾಪಕ, ಉಗ್ರ ಯಾಸೀನ್ ಭಟ್ಕಳ್ ತನಿಖೆ ವೇಳೆ ಕೆಲವು ಭಯಂಕರ ಸತ್ಯಗಳನ್ನು ಹೊರ ಹಾಕಿದ್ದಾನೆ. ಬಾಂಬ್ ಸ್ಫೋಟಗಳ ಜತೆ ಜತೆಗೆ ಭಾರತದಲ್ಲಿ ಸಾಂಕ್ರಾಮಿಕ ರೋಗಳನ್ನು ಹರಡಿಸುವ ತಂತ್ರಗಳನ್ನು ಕೂಡಾ ಪಾಕಿಸ್ತಾನದಲ್ಲಿ ಇಂಡಿಯನ್ ಮುಜಾಹಿದ್ದೀನ್ ಉಗ್ರರಿಗೆ ತರಬೇತಿ ನೀಡಲಾಗಿತ್ತು ಎಂದು ಯಾಸೀನ್ ಭಟ್ಕಳ್ ತಿಳಿಸಿದ್ದಾನೆ.
ವಿಶೇಷವಾಗಿ ಪ್ಲೇಗ್ನಂಥ ಮಾರಕ ಸಾಂಕ್ರಾಮಿಕ ರೋಗಗಳನ್ನು ಹರಡಿಸುವ ಬಗ್ಗೆ ತರಬೇತಿ ನೀಡಿಲಾಗಿತ್ತು. ಸತ್ತ ಹೆಗ್ಗಣ, ಒಣಗಿದ ಮೀನು ರಾಶಿ ಒಟ್ಟು ಮಾಡಿ, ಹಲವು ದಿನ ಕೊಳೆಸಬೇಕು. ಬಳಿಕ ಅದನ್ನು ಬೇರೆ ಬೇರೆ ಪ್ರದೇಶದಲ್ಲಿ ಎಸೆಯಬೇಕು. ಆಗ ಪ್ಲೇಗ್ ಉಂಟು ಮಾಡುವ ವೈರಾಣುಗಳು ಹರಡುತ್ತವೆ ಎಂದು ಪಾಕ್ ಕಮಾಂಡರ್ ತರಬೇತಿ ನೀಡಿದ್ದ ಎಂದು ಯಾಸೀನ್ ಹೇಳಿದ್ದಾನೆ.
ರಾಜ್ಯದ ಪೊಲೀಸ್ ಅಧಿಕಾರಿಗಳ ಮುಂದೆ ಯಾಸೀನ್ ಭಟ್ಕಳ್ ಈ ವಿಚಾರ ಬಹಿರಂಗಪಡಿಸಿದ್ದಾನೆ.
ಐಎಸ್ಐ ತರಬೇತಿ: ಪಾಕಿಸ್ತಾನದ ಐಎಸ್ಐ ತರಬೇತಿ ನೀಡುತ್ತಿತ್ತು. ಪ್ರಮುಖರ ಕೊಲೆಗೆ ಬಳಸಲು ಯಾವುದೇ ಸಾಕ್ಷಿ ಸಿಗದಿರುವ ವಿಷ ಉತ್ಪಾದಿಸುವ 4 ವಿಧಾನ ಬಗ್ಗೆಯೂ ತರಬೇತಿಯಲ್ಲಿ ವಿವರಿಸಿದ್ದಾರೆ. ಈ ವಸ್ತುಗಳು ಪ್ರತಿ ದಿನ ಆಹಾರ ರೂಪದಲ್ಲಿ ಸೇವಿಸುವ ವಸ್ತುಗಳು. ಇವುಗಳ ಮಿಶ್ರಣ ಮತ್ತು ಕಾಯಿಸುವಿಕೆಯಿಂದ ವಿಷವಾಗುತ್ತದೆ(ಅಪಾಯಕಾರಿ ಆದ್ದರಿಂದ ಮಿಶ್ರಣ ವಿವರಣೆ ನೀಡಿಲ್ಲ) ಎಂದು ಆತ ತಯಾರಿಕೆ ವಿಧಾನವನ್ನು ತನಿಖಾಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನೆ.
ಅಷ್ಟೇ ಅಲ್ಲದೆ, ಪಾಕಿಸ್ತಾನ ತರಬೇತಿ ಶಿಬಿರಗಳಲ್ಲಿ ಪ್ರತಿ ದಿನ ಪ್ರತಿಯೊಬ್ಬ ಶಿಬಿರಾರ್ಥಿಯೂ 500 ಮದ್ದು ಗುಂಡು ಹೊಡೆಯಬೇಕಿತ್ತು. ತರಬೇತಿ ಸಂದರ್ಭದಲ್ಲಿ 50 ದಿನಗಳ ಕಾಲ ಮಿಲಿಟರಿ ಮ್ಯಾನುವೆಲ್ಗಿಂತ ಭಿನ್ನವಾದ ಆಲ್ ಖೈದಾ ಮ್ಯಾನುವೆಲ್ ಪಾಲಿಸಬೇಕಿತ್ತು. ಇಲ್ಲಿ ಧರ್ಮಕ್ಕಾಗಿ ಹೋರಾಡುವ ಜಿಹಾದ್ ಪ್ರಮುಖವಾಗಿ ಬೋಧಿಸುತ್ತಿದ್ದರು.
ಏನೇನು ತರಬೇತಿ?: ತರಬೇತಿಯಲ್ಲಿ ಮುಖ್ಯವಾಗಿ ಹ್ಯಾಂಡ್ಗ್ರೆನೇಡ್ ಬಳಕೆ, ಆಟೋಮ್ಯಾಟಿಕ್ ಫಯರ್, ಕಿಲ್ಲಿಂಗ್ ರೇಂಜ್, ಎಫೆಕ್ಟಿವ್ ರೇಂಜ್ ಸಹಿತ ಭಾರತ ಸೇನೆ ಬಳಸುವ ಎಲ್ಲ ಆಯುಧಗಳ ಮಾಹಿತಿ ಮತ್ತು ತರಬೇತಿ ನೀಡಲಾಗುತ್ತಿತ್ತು. ತರಬೇತಿ ಅತ್ಯಂತ ಕಠಿಣವಾಗಿದ್ದು, ಪ್ರತಿಯೊಬ್ಬ ಜಿಹಾದಿಯೂ ದಿನಕ್ಕೆ 500 ಗುಂಡು ಗುರಿ ಇಟ್ಟು ಹೊಡೆಯಲೇ ಬೇಕಿತ್ತು. ಆರ್ಡಿಎಕ್ಸ್ ಬಾಂಬ್ ತಯಾರಿಕೆ ತರಬೇತಿಯೂ ನೀಡಲಾಗುತ್ತದೆ. ಸ್ಫೋಟಕ ತಯಾರಿಕೆ ಅದರಲ್ಲಿಯೂ ಸಾಮಾನ್ಯವಾಗಿ ಅಂಗಡಿಗಳಲ್ಲಿ ಸಿಗುವ ಅಮೋನಿಯಂ ನೈಟ್ರೇಟ್ ಬಳಸಿ ಬಾಂಬ್ ತಯಾರಿಸುವುದು. ಪೋಟಾಶಿಂಯ ಪ್ಲೋರೈಡ್, ಹೈಡ್ರೋಜನ್ ಬಾಂಬ್ ತಯಾರಿ ಪ್ರಾತ್ಯಕ್ಷಿಕೆ ನೀಡಲಾಗಿತ್ತು.
ಐಎಸ್ಐ ತರಬೇತಿ ನೀಡುವುದು ಮಾತ್ರವಲ್ಲದೆ ಇಂಡಿಯನ್ ಮುಜಾಹಿದ್ದೀನ್ ಉಗ್ರರ ಕುಟುಂಬಗಳಿಗೆ ನಿರಂತರ ಹಣಕಾಸು ನೆರವು ನೀಡುತ್ತಿತ್ತು. ಪತ್ನಿಗೆ ರಮ್ಜಾನ್ ವೇಳೆ ಹಣ ಕಳುಹಿಸಿ ಸಿಕ್ಕಿ ಬಿದ್ದದ್ದಲ್ಲ, ಪತ್ನಿ ಜತೆ ಮಾತನಾಡಿ ನಾನು ಸಿಕ್ಕಿ ಬಿದ್ದೆ ಎಂದು ಯಾಸೀನ್ ರಾಜ್ಯ ಪೊಲೀಸರ ಮುಂದೆ ವಿವರಿಸಿದ್ದಾನೆ.
ಕೊಟ್ಟಾಯಂನಲ್ಲೂ ಶಿಬಿರ
2007ರಲ್ಲಿ ಕೇರಳದ ಕೊಟ್ಟಾಯಂ ವಗಮೋನ್ ಎಂಬಲ್ಲಿ ಯಾಸೀನ್ ಭಟ್ಕಳ ಸಹಚರ ವಂಝಾರ್ ಇಮಾಮ್ ಉಗ್ರರಿಗೆ ತರಬೇತಿ ಶಿಬಿರ ನಡೆಸಿದ್ದ. ಬಂಡೆ ಏರುವುದು, ಹಗ್ಗ ಸಹಾಯದಿಂದ ಮೇಲೇರುವುದು, ಬೈಕ್ ರೇಸ್ ಮತ್ತು ಪೆಟ್ರೋಲ್ ಬಾಂಬ್ ತಯಾರಿಕೆ ತರಬೇತಿ ನೀಡಲಾಗಿತ್ತು. ವಂಝಾರ್ ರಾಂಚಿ, ಜಾರ್ಖಂಡ್ನಲ್ಲಿ ಯಾಸೀನ್ಗೆ ಉಳಿದುಕೊಳ್ಳಲು ಈತನೇ ವ್ಯವಸ್ಥೆ ಮಾಡಿದ್ದ. ಪಾಸ್ಪೋರ್ಟ್ ಮಾಡಲು ಪ್ರಯತ್ನ ಪಟ್ಟಿದ್ದರೂ ಫಲ ಸಿಕ್ಕಿರಲಿಲ್ಲ. ಇದೀಗ ವಂಝಾರ್ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದೆ.
- ಜಿತೇಂದ್ರ ಕುಂದೇಶ್ವರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

