ಪ್ರಧಾನ ಸುದ್ದಿ

ಹೈ.ಕ. ಮಂಡಳಿ

ಹೈದರಾಬಾದ್ ಕರ್ನಾಟಕಕ್ಕೆ ಸಂವಿಧಾನದ 371(ಜೆ) ವಿಧಿಯಡಿಯಲ್ಲಿ ದಕ್ಕಿರುವ ವಿಶೇಷ ಸ್ಥಾನಮಾನದಡಿ, 'ಅಭಿವೃದ್ಧಿ ಮಂಡಳಿ' ರಚಿಸಲು ರಾಜ್ಯಪಾಲರಿಗೆ ಪರಮಾಧಿಕಾರ ನೀಡುವ ಅಧಿಸೂಚನೆಗೆ...

Published On :

ನವದೆಹಲಿ: ಹೈದರಾಬಾದ್ ಕರ್ನಾಟಕಕ್ಕೆ ಸಂವಿಧಾನದ 371(ಜೆ) ವಿಧಿಯಡಿಯಲ್ಲಿ ದಕ್ಕಿರುವ ವಿಶೇಷ ಸ್ಥಾನಮಾನದಡಿ, 'ಅಭಿವೃದ್ಧಿ ಮಂಡಳಿ' ರಚಿಸಲು ರಾಜ್ಯಪಾಲರಿಗೆ ಪರಮಾಧಿಕಾರ ನೀಡುವ ಅಧಿಸೂಚನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.
'ಕರ್ನಾಟಕ ರಾಜ್ಯ(ಹೈದರಾಬಾದ್ ಕರ್ನಾಟಕ ಪ್ರದೇಶಕ್ಕಾಗಿ ರಾಜ್ಯಪಾಲರ ವಿಶೇಷಾಧಿಕಾರ) ಆದೇಶ' ಎಂದು ಕರೆಯಲಾಗುವ ಈ ಅಧ್ಯಕ್ಷೀಯ ಆದೇಶದ ಅಧಿಸೂಚನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ರಾಷ್ಟ್ರಪತಿಗಳ ಅಂಕಿತಕ್ಕೆ ರವಾನಿಸಲಿದೆ. ಅಧಿಸೂಚನೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದ ಬಳಿಕ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ 'ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ' ರಚನೆಯಾಗಲಿದೆ.
ಗುಲ್ಬರ್ಗ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಮೂಲಭೂತ ಸೌಲಭ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಲಭ್ಯವಾಗಲಿದೆ. ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಿಗೆ ಮೀಸಲಾತಿ ದಕ್ಕಲಿದೆ ಜತೆಗೆ ಶಿಕ್ಷಣ ಮತ್ತು ವೃತ್ತಿ ಶಿಕ್ಷಣ ಸಂಸ್ಥೆಗಳಲ್ಲೂ ವಿಶೇಷ ಮೀಸಲಾತಿ ದೊರೆಯಲಿದೆ.
ಸಂವಿಧಾನದ 371(ಜೆ) ವಿಧಿಗೆ 2012 ಡಿಸೆಂಬರ್ 20ರಂದು ಸಂಸತ್ತಿನ ಉಭಯ ಸದನಗಳು ಅನುಮೋದನೆ ನೀಡಿದ್ದವು. ಅದಾದ ನಂತರ ಮೀಸಲಾತಿ ಸ್ವರೂಪ ಹೇಗಿರಬೇಕೆಂದು ತಿಳಿಸಲು ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿತ್ತು. ಸಚಿವ ಎಚ್.ಕೆ.ಪಾಟೀಲ್ ನೇತೃತ್ವದ ಸಂಪುಟ ಉಪಸಮಿತಿ ಈ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸಿತ್ತು. ವರದಿಯನ್ನಾಧರಿಸಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ರಾಜ್ಯ ಸರ್ಕಾರದ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರ ಒಪ್ಪಿದೆ.
ಈ ಅಧಿಸೂಚನೆಗೆ ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ಹೈದರಾಬಾದ್ ಕರ್ನಾಟಕಕ್ಕೆ ಸಂವಿಧಾನದತ್ತವಾಗಿ ಸಿಕ್ಕಿರುವ ವಿಶೇಷ ಸ್ಥಾನಮಾನವನ್ನು ಅನುಷ್ಠಾನಗೊಳಿಸಲುವ ಹೊಣೆ ರಾಜ್ಯ ಸರ್ಕಾರದ್ದಾಗುತ್ತದೆ. ಈ ಭಾಗಕ್ಕೆ ಆರ್ಥಿಕ ಮತ್ತು ಶೈಕ್ಷಣಿಕ ಅಸಮತೋಲನ ಸರಿದೂಗಿಸುವ ಹೊಣೆ ರಾಜ್ಯ ಸರ್ಕಾರದ್ದೇ ಆಗುವುದರಿಂದ ಬಜೆಟ್‌ನಲ್ಲಿ ಎಷ್ಟು ಹಣ ಮೀಸಲಿಡುತ್ತದೆ ಮತ್ತು ಅದನ್ನು ಪರಿಣಾಮಕಾರಿಯಾಗಿ ಹೇಗೆ ವಿನಿಯೋಗಿಸುತ್ತದೆ ಎಂಬುದು ಮುಖ್ಯ.

ಏನೇನು ಲಾಭ?

  • ರಾಷ್ಟ್ರಪತಿ ಅಂಕಿತದ ಬಳಿಕ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಈ ಅಭಿವೃದ್ಧಿ ಮಂಡಳಿ ರಚನೆ
  • ಹೈ-ಕ ದ 6 ಜಿಲ್ಲೆಗಳಾದ ಗುಲ್ಬರ್ಗ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜನತೆ ಫಲಾನುಭವಿಗಳು
  • ಅಭಿವೃದ್ಧಿ ಮಂಡಳಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಯತ್ನ
  • ಸ್ಥಳೀಯ ಮೀಸಲಾತಿ ನೀತಿ ಅಳವಡಿಸಿ ಉದ್ಯೋಗದಲ್ಲಿ ಹೈ-ಕ ಮಂದಿಗೆ ಅವಕಾಶದ ಬಾಗಿಲು ತೆರೆಯುವುದು.
  • ಶಿಕ್ಷಣದಲ್ಲಿ ಮೀಸಲಾತಿ, ವೃತ್ತಿ ಶಿಕ್ಷಣ ತರಬೇತಿಯಲ್ಲಿಯೂ ಮೀಸಲಾತಿಗೆ ಅವಕಾಶ.
- ಮಲ್ಲಿಕಾರ್ಜುನ ಖರ್ಗೆ, ರೇಲ್ವೆ ಸಚಿವ
-ಶರಣ ಪ್ರಕಾಶ್ ಪಾಟೀಲ್, ಸಚಿವ
- ಕನ್ನಡಪ್ರಭ ಪ್ರತಿನಿಧಿಯಿಂದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.