ನೀರಾವರಿಗೆ ಸಿಕ್ಕಿತು 5 ಸಾವಿರ ಕೋಟಿ

ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ.9-
ರಾಜ್ಯದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎರಡು ಪ್ರಮುಖ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ 5 ಸಾವಿರ ಕೋಟಿ ಬಿಡುಗಡೆಯಾಗಲಿದೆ.
ನಾರಾಯಣಪುರ ಎಡದಂಡೆ ಕಾಲುವೆ ದುರಸ್ತಿ ಮತ್ತು ವಿಸ್ತರಣೆಗೆ 4051 ಕೋಟಿ ಮತ್ತು ತುಂಗಾ ಮೇಲ್ದಂಡೆ ಯೋಜನೆಗೆ ಈಗ ಖರ್ಚಾಗಿರುವುದು ಸೇರಿ ಒಟ್ಟು 2500 ಕೋಟಿ ಬಿಡುಗಡೆಗೆ ಕೇಂದ್ರ ಜಲ ಆಯೋಗದ ತಾಂತ್ರಿಕ ಸಲಹಾ ಸಮಿತಿ ಮಂಗಳವಾರ ಅನುಮೋದನೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಬುಧವಾರ ಈ ಕುರಿತು ಮಾಹಿತಿ ನೀಡಿದ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್, ನಾರಾಯಣಪುರ ಎಡದಂಡೆ ಕಾಲುವೆ ದುರಸ್ತಿ ಮತ್ತು ವಿಸ್ತರಣೆಗೆ ಮಂಜೂರಾದ ಪೂರ್ಣ ಹಣ ಕೇಂದ್ರದಿಂದ ರಾಜ್ಯಕ್ಕೆ ಬರಲಿದೆ.
ಈ ಅನುದಾನದಲ್ಲಿ ಕಾಲುವೆಯ ಪುನಾರಚನೆ ಕಾರ್ಯ ಕೈಗೊಳ್ಳಲಾಗುವುದು. ಅದೇರೀತಿ ತುಂಗಾ ಮೇಲ್ದಂಡೆ ಯೋಜನೆಗೆ ಈಗಾಗಲೇ 1500 ಕೋಟಿ ವೆಚ್ಚ ಮಾಡಿದ್ದು, ಈ ಹಣ ಕಳೆದು ಕೇಂದ್ರದಿಂದ 1 ಸಾವಿರ ಕೋಟಿ ಬರಲಿದೆ ಎಂದು ಹೇಳಿದರು.
ಇದರ ಜತೆಗೆ ಸೊನ್ನತಿ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ 600 ಕೋಟಿ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಕೋರಲಾಗಿದ್ದು, ತಾಂತ್ರಿಕ ಸಲಹಾ ಸಮಿತಿಯ ಮುಂದಿನ ಸಭೆಯಲ್ಲಿ ಇದಕ್ಕೆ ಮಂಜೂರಾತಿ ಸಿಗುವ ಸಾಧ್ಯತೆ ಇದೆ. ರಾಜ್ಯದ ಕೇಂದ್ರ ಸಚಿವರ ಜತೆ ಸೇರಿ ಕೇಂದ್ರ ಜಲಸಂಪನ್ಮೂಲ ಸಚಿವ ಹರೀಶ್ ರಾವತ್ ಅವರೊಂದಿಗೆ ಮಾತುಕತೆ ನಡೆಸಿದ ಹಿನ್ನೆಲೆಯಲ್ಲಿ ಈ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು.
ಇದರ ಜತೆಗೆ ಕೇಂದ್ರದ ತ್ವರಿತಗತಿ ನೀರಾವರಿ ಯೋಜನೆಗಳಡಿ ರಾಜ್ಯಕ್ಕೆ ಹಲವು ಯೋಜನೆಗಳಿಗಾಗಿ ಅನುದಾನ ಲಭ್ಯವಾಗಲಿದೆ. ಭೂಸ್ವಾಧೀನ ಯೋಜನೆ ಕುರಿತ ಕೇಂದ್ರದ ನೀತಿ ಜಾರಿಯಾದ ತಕ್ಷಣ ಈ ಅನುದಾನ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅದೇ ರೀತಿ ಕಾವೇರಿ ಕೊಳ್ಳದ ವ್ಯಾಪ್ತಿಯಲ್ಲಿ ರಾಜಾ ಪರಮೇಶ್ವರಿ ಅಣೆಕಟ್ಟೆ ಮತ್ತು ನಾಲೆ ಆಧುನೀಕರಣಕ್ಕೆ 26.50 ಕೋಟಿ ಹಾಗೂ ಶ್ರೀರಾಮದೇವರ ಅಣೆಕಟ್ಟೆ ಆಧುನೀಕರಣಕ್ಕೆ 35 ಕೋಟಿ ಬಿಡುಗಡೆಗೆ ರಾಜ್ಯದ ನೀರಾವರಿ ಸಲಹಾ ಸಮಿತಿ ಒಪ್ಪಿಗೆ ಸೂಚಿಸಿದೆ ಎಂದರು.
ಯುಕೆಪಿ 3ನೇ ಹಂತ- ವೆಚ್ಚ ಹೆಚ್ಚಳ:
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಯೋಜನಾ ವೆಚ್ಚ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಬಗ್ಗೆ ಅವರು ಮುನ್ಸೂಚನೆ ನೀಡಿದರು. 3ನೇ ಹಂತದಲ್ಲಿ ಆಲಮಟ್ಟಿ ಅಣೆಕಟ್ಟೆಯನ್ನು 524 ಮೀಟರ್ಗೆ ಹೆಚ್ಚಿಸಲಾಗುತ್ತದೆ. ಇದರಿಂದ 1.20 ಲಕ್ಷ ಎಕರೆ ಭೂಮಿ ಮುಳುಗಡೆಯಾಗುತ್ತಿದ್ದು, 23 ಹಳ್ಳಿಗಳನ್ನು ಸ್ಥಳಾಂತರಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಕಾರ್ಯ ಮುಗಿದಿದ್ದು, ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಹೇಳಿದರು.
ಆರಂಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತಕ್ಕೆ 17,100 ಕೋಟಿ ಯೋಜನಾ ವೆಚ್ಚ ನಿಗದಿಪಡಿಸಲಾಗಿತ್ತು.
ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳುವ ಭೂಮಿಗೆ ಮಾರ್ಗಸೂಚಿಯನ್ವಯ ಪರಿಹಾರ ನೀಡಲು 3000 ನಿಗದಿಪಡಿಸಲಾಗಿತ್ತು. ಆದರೆ, ಇದೀಗ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕು ಎಂದು ಸರ್ಕಾರ ನಿರ್ಧರಿಸಿದ್ದು, ಭೂಸ್ವಾಧೀನಕ್ಕೆ ಸುಮಾರು 10 ಸಾವಿರ ಕೋಟಿ ಬೇಕಾಗುತ್ತದೆ. ಹೀಗಾಗಿ ಯೋಜನಾ ವೆಚ್ಚ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂದು ತಿಳಿಸಿದರು.
ಜಲಶಿಸ್ತು, ಯೋಜನೆಗಳ ತ್ವರಿತಕ್ಕೆ ಹಲವು ಕ್ರಮ
ಬೆಂಗಳೂರು: ರಾಜ್ಯದಲ್ಲಿ ನೀರಿನ ಬಳಕೆಯಲ್ಲಿ ಶಿಸ್ತು ಮೂಡಿಸುವುದು ಮತ್ತು ನೀರಾವರಿ ಯೋಜನೆಗಳನ್ನು ತ್ವರಿತಗೊಳಿಸಲು ಖಾಲಿ ಹುದ್ದೆಗಳ ಭರ್ತಿ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಜಲ ಸಂಪನ್ಮೂಲ ಇಲಾಖೆ ಮುಂದಾಗಿದೆ.
ಅಲ್ಲದೆ, ಯೋಜನಾವಾರು ನಿರ್ವಹಣೆ ಮೂಲಕ ಅವುಗಳಿಗೆ ಇರುವ ಅಡ್ಡಿ, ಆರ್ಥಿಕ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಕೂಡ ನಿರ್ಧರಿಸಿದೆ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಜಲ ಸಂಪನ್ಮೂಲ ಇಲಾಖೆಯಲ್ಲಿ 1ಸಾವಿರ ಸಹಾಯ ಎಂಜಿನಿಯರ್ಗಳು ಮತ್ತು 500 ಕಿರಿಯ ಎಂಜಿನಿಯರ್ಗಳ ಹುದ್ದೆ ಖಾಲಿ ಇದ್ದು, ಈ ಪೈಕಿ 500 ಹುದ್ದೆಗಳನ್ನು ಕಾಯಂ ಆಗಿ ಭರ್ತಿ ಮಾಡಲು ಮುಖ್ಯಮಂತ್ರಿಗಳು ಸಮ್ಮತಿಸಿದ್ದಾರೆ. ಇನ್ನುಳಿದ ಒಂದು ಸಾವಿರ ಹುದ್ದೆಗಳಿಗೆ ಸಂಬಂಧಿಸಿದಂತೆ ಆಯಾ ನೀರಾವರಿ ನಿಗಮಗಳ ಮೂಲಕ ಮತ್ತು ಯೋಜನೆಗಳ ಅಗತ್ಯತೆಗೆ ತಕ್ಕಂತೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಇದರಿಂದ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಸಾಧ್ಯವಾಗುತ್ತದೆ. ಆದರೆ, ಎಲ್ಲರಿಗೂ ನೀರು ಲಭ್ಯವಾಗುವಂತೆ ನೋಡಿಕೊಳ್ಳಬೇಕಾದರೆ ಅದರ ಬಳಕೆಯಲ್ಲಿ ಶಿಸ್ತು ತರಬೇಕಾಗುತ್ತದೆ. ಇದಕ್ಕೆ ಅನುಕೂಲವಾಗುವಂತೆ ನೀರಗಂಟಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವುದರ ಜತೆಗೆ ಸರ್ವೇಯರ್ಗಳನ್ನೂ ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಯೋಜನೆವಾರು ನಿರ್ವಹಣೆ: ತಾವು ಸಚಿವರಾಗಿ ಅಧಿಕಾರವಹಿಸಿಕೊಂಡ ಬಳಿಕ ಕೃಷ್ಣ ಭಾಗ್ಯ ಜಲನಿಗಮ, ಕರ್ನಾಟಕ ನೀರಾವರಿ ನಿಗಮ ಮತ್ತು ಕಾವೇರಿ ನೀರಾವರಿ ನಿಗಮ ವ್ಯಾಪ್ತಿಯಲ್ಲಿ ವ್ಯವಸ್ಥಾಪಕ ಎಂಜಿನಿಯರ್ಗಳ ಮಟ್ಟದ ಸಭೆ ನಡೆಸಿ ಪ್ರತಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿದೆ. ಜತೆಗೆ ಎಲ್ಲಾ ಯೋಜನೆಗಳ ಬಗ್ಗೆ ಯೋಜನಾವಾರು ನಿರ್ವಹಣೆಗೆ ನಿರ್ಧರಿಸಲಾಗಿದ್ದು, ಪ್ರತಿ ವಾರ ಇದನ್ನು ಪರಿಶೀಲಿಸಲಾಗುತ್ತದೆ. 15 ದಿನಕ್ಕೊಮ್ಮೆ ವ್ಯವಸ್ಥಾಪಕ ಎಂಜಿನಿಯರ್ಗಳು ಮತ್ತು ಸಹಾಯಕ ಎಂಜಿನಿಯರ್ಗಳು, ಪ್ರತಿ ತಿಂಗಳು ನಿಗಮದ ಅಧ್ಯಕ್ಷರು ಮತ್ತು ಆರು ವಾರಕ್ಕೊಮ್ಮೆ ಜಲ ಸಂಪನ್ಮೂಲ ಸಚಿವರು ಇದನ್ನು ಪರಿಶೀಲಿಸುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


