ಬಲವಿಲ್ಲದ ರಾಮನಿಗೆ ಜಂಬೂ ಸವಾರಿ ಇಲ್ಲ

ಕನ್ನಡಪ್ರಭ ವಾರ್ತೆ, ಮೈಸೂರು, ಅ.11-
ಮೈಸೂರು ದಸರಾ ಮಹೋತ್ಸವದಲ್ಲಿ ಸತತ 14 ಬಾರಿ 750 ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊತ್ತಿದ್ದ ಬಲರಾಮ ಆನೆ ನಿವೃತ್ತಿ ಹಾದಿಯಲ್ಲಿದೆ. ಬಲಭೀಮನಾಗಿದ್ದ ಬಲರಾಮ ಈಗ ಬಲಹೀನನಾಗಿರುವುದು ಇದಕ್ಕೆ ಕಾರಣ. ಕಳೆದ ಬಾರಿ ದಸರೆಯಲ್ಲಿಯೇ ಬಲರಾಮನಿಂದ ಕ್ಯಾಪ್ಟನ್ ಸ್ಥಾನ ಕಸಿದುಕೊಂಡು ಅರ್ಜುನನಿಗೆ ನೀಡಲಾಗಿತ್ತು. ಹೀಗಿದ್ದರೂ ಬಲರಾಮ ಜಂಬೂ ಸವಾರಿಯಲ್ಲಿ ಆರಂಭಿಕನಾಗಿ ಅಂದರೆ 'ನಿಶಾನೆ ಆನೆ'ಯಾಗಿ ಮೆರವಣಿಗೆಯನ್ನು ಮುನ್ನಡೆಸಿದ್ದ. ಈ ಬಾರಿ ಆ ಪಾತ್ರ ನಿರ್ವಹಿಸುವುದು ಕಷ್ಟಸಾಧ್ಯ ಎನಿಸಿದೆ.
ಬಲರಾಮನನ್ನು ಸೆರೆ ಹಿಡಿಯುವಾಗಲೇ ಕಣ್ಣಿಗೆ ಏಟಾಗಿ ದೃಷ್ಟಿ ಮಂದವಾಗಿತ್ತು. ಒಂದು ಕಣ್ಣು ಸರಿಯಾಗಿ ಕಾಣಿಸುತ್ತಿರಲಿಲ್ಲ. ಕಳೆದ ಬಾರಿ ದಸರೆಗೆ ಬಂದಾಗ ನಿಶ್ಯಕ್ತನಾಗಿದ್ದ. ಗ್ಲುಕೋಸ್ ನೀಡಿದರೂ ಸುಧಾರಣೆಯಾಗಲಿಲ್ಲ. ಅಂತಿಮವಾಗಿ ಬಲರಾಮನಿಗೆ ಅಂಬಾರಿ ಹೊರುವ ಕಾಯಕದಿಂದ ನಿವೃತ್ತಿ ಘೋಷಿಸಲಾಗಿತ್ತು. ಜಿಲ್ಲಾಡಳಿತದ ಪರವಾಗಿ ಆನೆಯನ್ನು ಗೌರವಿಸಿ, ನಿಶಾನೆ ಆನೆಯಾಗಿ ಬಳಸಲಾಗಿತ್ತು.
ಅರ್ಧ ದಾರಿಯಲ್ಲೇ ಮರಳುತ್ತಾನೆ: ಈ ಬಾರಿ ಕೂಡ ಅದೇ ಭರವಸೆ ಮೇಲೆಯೇ ಬಲರಾಮನನ್ನು ಗಜಪಡೆಯ ಮೊದಲ ತಂಡದಲ್ಲಿಯೇ ಅರಮನೆಗೆ ಕರೆತಂದು ರಾಜ್ಯಾತಿಥ್ಯ ನೀಡಲಾಗುತ್ತಿತ್ತು. ಇತರೆ 13 ಆನೆಗಳೊಂದಿಗೆ ಆತ ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ತಾಲೀಮಿಗೆ ತೆರಳುತ್ತಿದ್ದ. ಆದರೆ ಆತ ಕಳೆದ ಕೆಲವು ದಿನಗಳಿಂದ ಅರಮನೆಯಿಂದ ಬನ್ನಿಮಂಟಪಕ್ಕೆ ತೆರಳುವ ಮಾರ್ಗ ಮಧ್ಯೆ ಬರುವ ಆರ್ಎಂಸಿ ಬಳಿಯೇ ವಾಪಸ್ಸಾಗಲು ಯತ್ನಿಸುತ್ತಿದ್ದ. ಇದು ಸರಿ ಹೋಗಬಹುದು ಎಂದು ಅರಣ್ಯಾಧಿಕಾರಿಗಳು, ಆನೆ ವೈದ್ಯರು, ಮಾವುತರು ಎಣಿಸಿದ್ದರು.
ವನ್ಯಜೀವಿ ವಿಭಾಗದ ಡಿಸಿಎಫ್ ಎಸ್.ಎನ್. ದೇವರಾಜ್ ಹಾಗೂ ಆನೆ ವೈದ್ಯ ಡಾ. ನಾಗರಾಜ್ ಅವರು ಅ.13ರವರೆಗೆ ನೋಡಿ, ಬಲರಾಮನನ್ನು ಮೆರಣಿಗೆಯಲ್ಲಿ ನಿಶಾನೆಯಾಗಿ ಬಳಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ತೀರ್ಮಾನಿಸುವುದಾಗಿ ಹೇಳಿದ್ದಾರೆ. ಆದರೆ ಬಲರಾಮ ಆರ್ಎಂಸಿ ಬಳಿಯಿಂದ ವಾಪಸ್ ಆಗಲು ಯತ್ನಿಸಿದ್ದಲ್ಲಿ ಇತರೆ ಆನೆಗಳು ಹಿಂಬಾಲಿಸಿ, ಮೆರವಣಿಗೆಗೆ ತೊಂದರೆ ಆಗುವ ಸಾಧ್ಯತೆ ಇರುವುದರಿಂದ ವಿಶ್ರಾಂತಿ ನೀಡುವ ಸಾಧ್ಯತೆಯೇ ಹೆಚ್ಚು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬಲರಾಮನಿಗೆ ದಸರೆಯಿಂದ ಶಾಶ್ವತವಾಗಿ ವಿರಾಮ ಸಿಗಲಿದೆ.
18 ಬಾರಿ ಅಂಬಾರಿ ಹೊತ್ತಿದ್ದ ದ್ರೋಣ 1997ರ ದಸರೆಯನ್ನು ಮುಗಿಸಿ, ಕಾಡಿಗೆ ವಾಪಸ್ಸಾದ ನಂತರ ಅಕಾಲಿಕ ಮರಣಕ್ಕೀಡಾದ. ಹೀಗಾಗಿ 1998ರಿಂದ 2012ರವರೆಗೆ ಅಂದರೆ ಸತತ 14 ಬಾರಿ ಬಲರಾಮ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿ ಸಮರ್ಥ ಉತ್ತರಾಧಿಕಾರಿ ಎನಿಸಿಕೊಂಡು ಎಲ್ಲರಿಂದಲೂ ಭಲೇ ಭಲೇ... ಎಂದು ಶಹಬ್ಬಾಸ್ ಪಡೆದಿದ್ದ.
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


