ಬೆಂಗಳೂರು ಕೃಷಿ ವಿವಿಯಿಂದಲೇ ಕಳಪೆ ಬೀಜ!
ಕ.ಪ್ರ.ವಾರ್ತೆ, ಗದಗ, ಅ. 11-
ಕೃಷಿ ವಿಶ್ವವಿದ್ಯಾಲಯಗಳೆಂದರೆ ರೈತರ ಪಾಲಿಗೆ ವರದಾನ. ಆದರೆ, ತಾಲೂಕಿನ ಹೊಂಬಳ ಗ್ರಾಮದ ರೈತರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಕಳಪೆ ಶೇಂಗಾ ಬೀಜ ಪೂರೈಸಿ ಮೋಸ ಮಾಡಿದೆ. ಬಿತ್ತನೆ ಮಾಡಿದ ರೈತರು ಕಂಗಾಲಾಗಿದ್ದು ದಿಕ್ಕು ತೋಚದಂತಾಗಿದ್ದಾರೆ.
ಹೊಂಬಳ ಗ್ರಾಮದಲ್ಲಿನ ಜಮೀನು ಸಾಕಷ್ಟು ಸಮತಟ್ಟಾದ ಹಾಗೂ ಹೆಚ್ಚು ಫಲವತ್ತಾದ ಕಪ್ಪುಮಣ್ಣನ್ನು ಹೊಂದಿದ್ದು, ಮುಂಗಾರಿನಲ್ಲಿ ಶೇಂಗಾ ಇಲ್ಲಿನ ಪ್ರಮುಖ ಬೆಳೆಯಾಗಿದೆ. ಇದನ್ನೇ ಗಮನಿಸಿದ್ದ ಬೆಂಗಳೂರು ಕೃಷಿ ವಿವಿಯ ಪ್ರೊಫೆಸರ್ ಡಾ.ಎಸ್.ಎಂ. ಪಿಳ್ಳೇಗೌಡ ಎಂಬವರು ಗ್ರಾಮದ ಪ್ರಮುಖರೊಬ್ಬರ ಮೂಲಕ ಗ್ರಾಮದಲ್ಲಿನ 450ಕ್ಕೂ ಹೆಚ್ಚು ರೈತರಿಗೆ ಇದು ಉತ್ತಮ ಗುಣಮಟ್ಟದ ಶೇಂಗಾ, ಅಧಿಕ ಇಳುವರಿ ಬರುತ್ತದೆ. ಈ ಶೇಂಗಾವನ್ನು ನಾವೇ ಮಾರುಕಟ್ಟೆ ದರಕ್ಕಿಂತ 1 ಸಾವಿರ ಹೆಚ್ಚು ನೀಡಿ ಖರೀದಿಸುತ್ತೇವೆ ಎಂದು ಹೇಳಿದ್ದರಿಂದ ರೈತರು 500 ಹೆಕ್ಟೇರ್ಗೂ ಹೆಚ್ಚಿನ ಪ್ರದೇಶದಲ್ಲಿ ಬಿತ್ತನೆ ಮಾಡಿದ್ದಾರೆ.
ಕೃಷಿ ವಿವಿಯ ಅಧಿಕಾರಿಗಳೇ ನೀಡಿರುವ ಬೀಜ ಎಂದು ರೈತರು ಹೆಚ್ಚಿನ ಇಳುವರಿ ಬರುವ ನಿರೀಕ್ಷೆ ಹೊಂದಿದ್ದರು. ಆದರೆ, ಬೆಳೆ ಉತ್ತಮವಾಗಿ ಬೆಳೆದಿದ್ದರೂ ಸಮರ್ಪಕವಾಗಿ ಕಾಯಿ ಹಿಡಿದಿಲ್ಲ. ಹಿಡಿದಿರುವ ನಾಲ್ಕಾರು ಕಾಯಿಗಳಲ್ಲಿಯೂ ರಸವತ್ತಾಗಿ ಕಾಳುಗಳೇ ಇಲ್ಲ. ಆಗಿರುವ ಕಾಳುಗಳು ರಾಶಿ ಮಾಡುವ ಸಂದರ್ಭಕ್ಕೆ ಕಪ್ಪುಬಣ್ಣಕ್ಕೆ ತಿರುಗಿದ್ದು, ರೈತರನ್ನು ಕಂಗಾಲಾಗಿಸಿದೆ. ಇದು ವಿಶೇಷ ಬೀಜ ಎಂದು ಪ್ರತಿ ಕ್ವಿಂಟಲ್ ಬೀಜಕ್ಕೆ ರೈತರಿಂದ 4500 ಪಡೆದಿದ್ದು, ಇಂದು 800ಕ್ಕೆ ಈ ಶೇಂಗಾವನ್ನು ಯಾರೂ ಕೇಳುತ್ತಿಲ್ಲ.
ಮಾರಾಟವಾಗುತ್ತಿಲ್ಲ: ನಾವೇ ಖರೀದಿಸುತ್ತೇವೆ ಎಂದು ಹೇಳಿದ್ದ ಅಧಿಕಾರಿಗಳು ಇಂದು ಜಾರಿಕೊಳ್ಳುತ್ತಿದ್ದಾರೆ. ಕನಿಷ್ಠ ಅದನ್ನು ಮಾರಾಟವಾದರೂ ಮಾಡೋಣ ಎಂದು ಗದಗ ಎಪಿಎಂಸಿಗೆ ತೆಗೆದುಕೊಂಡು ಹೋದರೆ ಈ ಶೇಂಗಾದಲ್ಲಿ ಯಾವುದೇ ಎಣ್ಣೆ ಅಂಶಗಳೇ ಇಲ್ಲ ಎಂದು ಖರೀದಿದಾರರು ಖರೀದಿಗೆ ಮುಂದೆ ಬರುತ್ತಿಲ್ಲ.
ಅನಿವಾರ್ಯವಾಗಿ ಮಾರಾಟ ಮಾಡಲು ಹೋದರೆ ಕ್ವಿಂಟಲ್ಗೆ 750ಕ್ಕೆ ಕೇಳುತ್ತಾರೆ. ಈ ಶೇಂಗಾ ಬಿತ್ತನೆ ಮಾಡಿ ರೈತರು ಸಮಸ್ಯೆಗೆ ಸಿಲುಕಿದ್ದಾರೆ.ಹಾರಿಕೆ ಉತ್ತರ ನೀಡುತ್ತಿರುವ ವಿವಿ!
ಗದಗ ಜಿಲ್ಲೆಯ ರೈತರು ಕಳಪೆ ಬೀಜ ಬಿತ್ತಿ ಕಂಗಾಲಾಗಿದ್ದಾರೆ ಎಂದು 'ಕನ್ನಡಪ್ರಭ' ಬೆಂಗಳೂರು ವಿವಿ ಬೀಜ ವಿಭಾಗದ ವಿಶೇಷಾಧಿಕಾರಿ ರಾಮೇಗೌಡ ಅವರನ್ನು ಸಂಪರ್ಕಿಸಿದರೆ ಹಾರಿಕೆಯ ಉತ್ತರ ನೀಡಿದರು. 'ಗದಗ ಜಿಲ್ಲೆಯಲ್ಲಿ ವಿವಿಯಿಂದ ಬೀಜ ಪೂರೈಸಿದ್ದು ನಿಜ. ಅದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ನಾಳೆ ಬೆಳಗ್ಗೆ ಮಾಹಿತಿ ನೀಡುತ್ತೇನೆ. ಈಗೇನೂ ಕೇಳಬೇಡು' ಎಂದರು.
ಬಿತ್ತನೆ ಪೂರ್ವದಲ್ಲಿ ಹೊಂಬಳ ಗ್ರಾಮಸ್ಥರು ಕೃಷಿ ಇಲಾಖೆಯನ್ನು ಸಂಪರ್ಕಿಸಿಲ್ಲ. 2 ದಿನಗಳ ಹಿಂದಷ್ಟೇ ಬಂದು ನಮಗೆ ಈ ರೀತಿ ತೊಂದರೆಯಾಗಿದೆ ಎಂದು ಮೌಖಿಕವಾಗಿ ದೂರು ನೀಡಿದ್ದಾರೆ. ಈ ಕುರಿತು ಬೆಂಗಳೂರು ಕೃಷಿ ವಿವಿ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತಿದ್ದೇನೆ.
- ಟಿ.ಬಿ.ಬಾಲರಡ್ಡಿ, ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ
ಬೆಂಗಳೂರಿನಿಂದ ಅಧಿಕಾರಿಗಳು ಬಂದು ಕೃಷಿ ವಿವಿಯೇ ಈ ಬೀಜ ನೀಡುತ್ತಿದೆ ಎಂದು ಹೇಳಿದ ಹಿನ್ನೆಲೆಯಲ್ಲಿ ಹಾಗೂ ಹೆಚ್ಚಿನ ಇಳುವರಿ, ಬೆಲೆ ಸಿಗುತ್ತದೆ ಎನ್ನುವ ನಿರೀಕ್ಷೆಯಿಂದ ಬಿತ್ತನೆ ಮಾಡಿದ್ದೆವು. ಆದರೆ, ಇಳುವರಿಯೂ ಬಂದಿಲ್ಲ, ಬೆಲೆಯೂ ಸಿಗುತ್ತಿಲ್ಲ. ಈಗ ನಮಗೆ ನ್ಯಾಯ ಸಿಗದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ.
-ಶೇಂಗಾ ಬಿತ್ತನೆ ಮಾಡಿದ ಹೊಂಬಳ ಗ್ರಾಮದ ರೈತರು
- ಶಿವಕುಮಾರ ಕುಷ್ಟಗಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

