ನಾಳೆ ಜಂಬೂ ಸವಾರಿ ಸಜ್ಜಾಗಿದೆ ಮೈಸೂರು

ಕನ್ನಡಪ್ರಭ ವಾರ್ತೆ ಮೈಸೂರು ಅ.12
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯು ವಿಜಯ ದಶಮಿಯ ದಿನವಾದ ಅ.14ರಂದು ಜರುಗಲಿದ್ದು, ಇದಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.
ಮೈಸೂರಿನವರೇ ಆದ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಿ ಜಂಬೂ ಸವಾರಿಗೆ ಚಾಲನೆ ನೀಡುವ ಅದೃಷ್ಟ ಸಿಕ್ಕಿರುವುದು ವಿಶೇಷ. ಇದೇ ಕಾರಣಕ್ಕಾಗಿ ಈ ಬಾರಿ ದಸರೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಅಲ್ಲದೇ ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆ- ಬೆಳೆಯಾಗಿರುವುದು, ಕಾನೂನು ಮತ್ತು ಸುವ್ಯವಸ್ಥೆಯ ಯಾವುದೇ ಸಮಸ್ಯೆ ಇಲ್ಲದಿರುವುದರಿಂದ ದೇಶ- ವಿದೇಶಗಳ ಪ್ರವಾಸಿಗರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ.
ನವರಾತ್ರಿ ಉತ್ಸವವು ಮೈಸೂರಿನ ಯದುವಂಶದ ರಾಜರಿಗೆ ವಿಜಯನಗರ ಅರಸರಿಂದ ಬಂದ ಬಳುವಳಿ. ನಾಡಹಬ್ಬದ ಹೆಸರಿನಲ್ಲಿ ರಾಜ್ಯ ಸರ್ಕಾರವೇ ಆಚರಿಸುವ ರಾಜ್ಯದ ಮಹತ್ವಪೂರ್ಣ ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವವೇ ದಸರಾ. ಅರಸೊತ್ತಿಗೆ ಅಳಿದು, ಪ್ರಜಾತಂತ್ರ ವ್ಯವಸ್ಥೆ ಜಾರಿಗೆ ಬಂದಿದ್ದರೂ ಸಹ ಮೈಸೂರಿನಲ್ಲಿ ರಾಜಮಹಾರಾಜರ ಕಾಲದ ಆಚರಣೆಗಳು ಉಳಿದುಕೊಂಡು ಬಂದಿರುವುದು ವಿಶೇಷ. ಇದೇ ಮೈಸೂರು ದಸರೆಯ ಮಹತ್ವ.
ಜಂಬೂ ಸವಾರಿ ಸಾಗುವ ಮಾರ್ಗವನ್ನು ಅಂದಗೊಳಿಸುವ ಅಂತಿಮ ಸುತ್ತಿನ ಕೆಲಸಗಳು ಸಾಗುತ್ತಿವೆ. ದಸರೆಗೂ ಮಳೆಗೂ ಅದೇನೋ ನಂಟು. ದಸರೆಯ ಸಂದರ್ಭದಲ್ಲಿ ಮಳೆ ಬರಲೇಬೇಕು. ಈ ಬಾರಿ ಕೂಡ ಒಂದು ದಿನ ಜೋರು ಮಳೆ ಬಂದರೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿಯಾಗಲಿಲ್ಲ. ಅರಮನೆ ಹಾಗೂ ಮಾನಸ ಗಂಗೋತ್ರಿ ಬಯಲು ರಂಗಮಂದಿರದಲ್ಲಿ ನಡೆದ ಯುವ ಸಂಭ್ರಮದ ಕಾರ್ಯಕ್ರಮಕ್ಕೆ ಮಾತ್ರ ಒಂದು ದಿನ ಕೊಂಚ ತೊಂದರೆಯಾಗಿತ್ತು.
ಸಾರಿಗೆ ಸಂಸ್ಥೆಯ ವಿಶೇಷ ಬಸ್ ಹಾಗೂ ರೇಲ್ವೆ ಇಲಾಖೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ.
ಮೆರವಣಿಗೆಯಲ್ಲಿ ಭಾಗವಹಿಸುವ ಸ್ತಬ್ಧ ಚಿತ್ರಗಳನ್ನು ಸಜ್ಜುಗೊಳಿಸುವ ಕಾರ್ಯ ಮುಕ್ತಾಯದ ಹಂತಕ್ಕೆ ಬಂದಿದೆ. ಜಂಬೂ ಸವಾರಿಯಲ್ಲಿ ಭಾಗವಹಿಸುವ ತಂಡಗಳು ಶನಿವಾರವೂ ತಾಲೀಮು ಮುಂದುವರಿಸಿದವು. ಕಳೆದ ವರ್ಷ ಬರ ಹಾಗೂ ಕಾವೇರಿ ಸಮಸ್ಯೆಯಿಂದಾಗಿ ದಸರಾ ಮಂಕಾಗಿತ್ತು. ಆದರೆ ಈ ಬಾರಿ ಆರಂಭದ ದಿನದಿಂದಲೂ ಪ್ರವಾಸಿಗರು ಬರುತ್ತಿದ್ದಾರೆ. ಶಾಲಾ- ಕಾಲೇಜುಗಳಿಗೆ ಮಧ್ಯಂತರ ರಜೆ, ಸರ್ಕಾರಿ ನೌಕರರಿಗೆ ಸಾಲು ಸಾಲು ರಜೆಗಳು ಬಂದಿರುವುದರಿಂದ ನಗರಕ್ಕೆ ಪ್ರವಾಸಿಗರು ಲಗ್ಗೆ ಹಾಕಿದ್ದಾರೆ. ಪ್ರಮುಖ ಪ್ರವಾಸಿ ತಾಣಗಳು, ಅರಮನೆ, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಯುವದಸರೆ, ಮೃಗಾಲಯ, ಚಾಮುಂಡಿಬೆಟ್ಟ- ಹೀಗೆ ಎಲ್ಲಿ ನೋಡಿದರಲ್ಲೂ ಜನವೋ ಜನ.
ಸಿಎಂ ಚಾಲನೆ: ಸೋಮವಾರ ಮಧ್ಯಾಹ್ನ 1.12ರಿಂದ 1.40ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದಲ್ಲಿ ನಂದಿ ಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ ಸಲ್ಲಿಸುವರು. ನಂತರ ಅರಮನೆಯ ಒಳಾವರಣದಲ್ಲಿ ನಿರ್ಮಿಸುವ ವಿಶೇಷ ವೇದಿಕೆಯಲ್ಲಿ ನಿಂತು ಗಜರಾಜ ಅರ್ಜುನ ಹೊರಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿರುವ ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡುವರು. ಈ ಸಂದರ್ಭದಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ ಉಪಸ್ಥಿತರಿರುವರು.
ಬಿಗಿ ಬಂದೋಬಸ್ತ್
ಮೆರವಣಿಗೆಗೆ 6000ಕ್ಕೂ ಹೆಚ್ಚು ಪೊಲೀಸ್ ಬಳಸಿಕೊಂಡು ಬಿಗಿ ಬಂದೋಬಸ್ತ್ ಮಾಡಲಾಗಿದೆ. ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಎಲ್ಲೆಡೆ ಲೋಹಶೋಧಕ ಯಂತ್ರಗಳ ಮೂಲಕ ತಪಾಸಿಸಿ ಒಳಬಿಡಲಾಗುತ್ತಿದೆ. ಸುಗಮ ಸಂಚಾರಕ್ಕಾಗಿ ಅರಮನೆ ಸುತ್ತಮುತ್ತ ಹಾಗೂ ಮೆರವಣಿಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಅದೇ ದಿನ ಸಂಜೆ 7ಕ್ಕೆ ಬನ್ನಿಮಂಟಪದಲ್ಲಿ ನಡೆಯುವ ಪಂಜಿನ ಕವಾಯತಿನಲ್ಲಿ ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಗೌರವ ವಂದನೆ ಸ್ವೀಕರಿಸುವರು. ಅಲ್ಲಿ ಆಕರ್ಷಕ ಮೋಟಾರ್ ರ್ಯಾಲಿ, ಬಾಣಬಿರುಸುಗಳ ಚಿತ್ತಾರ ನಡೆಯಲಿದೆ. ಇದರೊಂದಿಗೆ ಅ.5ರಿಂದ ನಡೆಯುತ್ತಿರುವ ದಸರೆಗೆ ತೆರೆ ಬೀಳಲಿದೆ.
ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


