ಪ್ರಧಾನ ಸುದ್ದಿ

ರಂಭಾಪುರಿ ಅಡ್ಡಪಲ್ಲಕ್ಕಿಗೆ ನಮೋ ನಮೋ...

Published On :

ಕನ್ನಡಪ್ರಭ ವಾರ್ತೆ,  ಗುಲ್ಬರ್ಗ,  ಅ.14-
ವಿವಾದಗಳಿಂದಾಗಿ ನಾಡಿನ ಜನರ ಗಮನ ಸೆಳೆದಿದ್ದ ರಂಭಾಪುರಿ ಶ್ರೀಗಳ ಶರನ್ನವರಾತ್ರಿ ದಸರಾ ದರ್ಬಾರ್ ನಿಮಿತ್ತ ವಿಜಯದಶಮಿ ದಿನವಾದ ಸೋಮವಾರ ಜೇವರ್ಗಿ ಪಟ್ಟಣದಲ್ಲಿ ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಸಹಸ್ರಾರು ಭಕ್ತರ ಹಾಡು, ಕುಣಿತ, ಜಯಘೋಷ, ಶಹನಾಯಿ ವಾದನ, ಡೊಳ್ಳು ಕುಣಿತ ಸೇರಿದಂತೆ ಸಕಲ ವಾದ್ಯ ವೈಭವಗಳೊಂದಿಗೆ ಸಂಭ್ರಮದಿಂದ ನಡೆಯಿತು.
ನಾಡಿನ ಮೂಲೆ ಮೂಲೆಗಳಿಂದ ಜೇವರ್ಗಿಗೆ ಹರಿದು ಬಂದಿದ್ದ ಜನಸಾಗರದ ಮಧ್ಯೆ ಸರ್ವಾಲಂಕಾರದ ಪಲ್ಲಕ್ಕಿಯಲ್ಲಿ ಶ್ರೀಗಳು ತಮ್ಮ ಹಸಿರು ಬಣ್ಣದ ನಿಶಾನೆ ಧ್ವಜ ದಂಡದೊಂದಿಗೆ ವಿರಾಜಮಾನರಾದಗ ಸೇರಿದ್ದ ಭಕ್ತರು ಕುಣಿದು ಕುಪ್ಪಳಿಸಿದರು. ಮಾನವ ಧರ್ಮದ ಜಯಘೋಷಗಳ ನಡುವೆಯೇ ವೀರಸೋಮೇಶ್ವರರ ಪಲ್ಲಕ್ಕಿಗೆ ನಮಿಸಿದರು.

ಸಂಪ್ರದಾಯ ಆಚರಣೆ: ಸರಾ ದರ್ಬಾರ್ ಅಂಗವಾಗಿ ಅ.4 ರಂದೆ ಜೇವರ್ಗಿ ಪುರಪ್ರವೇಶ ಮಾಡಿದ್ದ ಶ್ರೀಗಳು ಸತತ 9 ದಿನಗಳ ಕಾಲ ಇಷ್ಟಲಿಂಗ ಪೂಜೆ, ಉಪನ್ಯಾಸ, ದಸರಾ ದರ್ಬಾರ್ ಸಂಪ್ರದಾಯ ನಿರಂತರ ಜೇವರ್ಗಿಯಲ್ಲಿ ಆಚರಿಸಿದ್ದರು. ಸಹಸ್ರಾರು ಭಕ್ತರು ಸಾಕ್ಷಿಯಾಗಿದ್ದರು. ಶರನ್ನವರಾತ್ರಿ ಮಹೋತ್ಸವದ ಸಮಾರೋಪ ಸಮಾರಂಭ ರೂಪದಲ್ಲಿ ನಡೆದದ್ದು ಅಡ್ಡಪಲ್ಲಕ್ಕಿ ಉತ್ಸವ.
ಶ್ರೀಗಳು ವಾಸವಾಗಿದ್ದ ವಿಜಾಪುರ ಕ್ರಾಸ್‌ನ ಸೋಮನಾಥಹಳ್ಳಿ ಗೌಡರ ಗಂಗಾ ನಿವಾಸದಿಂದ ಎಪಿಎಂಸಿ ಯಾರ್ಡ್‌ನ ನವರಾತ್ರಿ ಉತ್ಸವದ ಮಂಟಪದವರೆಗೂ ಅಡ್ಡಪಲ್ಲಕ್ಕಿ ನಡೆಯಿತು. ಬರೋಬ್ಬರಿ ಸೋಮವಾರ ಮಧ್ಯಾಹ್ನ 3.15 ಕ್ಕೆ ಶುರುವಾದ ರಂಭಾಪುರಿ ಪೀಠದ ಅಡ್ಡಪಲ್ಲಕ್ಕಿ ಉತ್ಸವಕ್ಕೆ ಕೇದಾರ ಪೀಠದ ಭೀಮಾಶಂಕರಲಿಂಗ ಜಗದ್ಗುರುಗಳು ಚಾಲನೆ ನೀಡಿದ್ದು, ಈ ದರ್ಬಾರನ ವಿಶೇಷ ಆಕರ್ಷಣೆಯಾಗಿ ಕಂಗೊಳಿಸಿತು.

ಉದ್ಘೋಷಗಳು: ಉತ್ತಾರಾಖಾಂಡ್‌ನ ಕೇದಾರದಿಂದ ನೇರವಾಗಿ ಜೇವರ್ಗಿ ವಿಜಯದಶಮಿ ಶರನ್ನವರಾತ್ರಿ ಉತ್ಸವಕ್ಕೆ ಆಗಮಿಸಿದ್ದ ಭೀಮಾಶಂಕರ ಶ್ರೀಗಳ ಸನ್ನಿಧಾನ ಸೇರಿದ್ದ ಭಕ್ತರಲ್ಲಿ ಉತ್ಸಾಹ ಇಮ್ಮಡಿಗೊಳ್ಳುವಂತೆ ಮಾಡಿತ್ತು. 3ಕ್ಕೆ ಸರಿಯಾಗಿ ಶ್ರೀಗಳಿಬ್ಬರು ಗಂಗಾ ನಿವಾಸದ ಮೊಗಸಾಲೆಯಲ್ಲಿ ಕಂಡುಬಂದರಲ್ಲದೆ ಸೇರಿದ್ದ ಭಕ್ತರತ್ತ ಕೈ ಬೀಸುತ್ತ ನಸುನಕ್ಕಾಗ ಎಲ್ಲೆಡೆ ಮಾನವ ಧರ್ಮಕ್ಕೆ ಜಯವಾಗಲಿ ಎಂದು ಕೇಳಿಬಂದ ಉದ್ಘೋಷ ಮುಗಿಲು ಮುಟ್ಟಿತ್ತು.
ಚಿನ್ನದ ಕಿರೀಟ ಧರಿಸಿ ಪಲ್ಲಕ್ಕಿಯಲ್ಲಿ ವೀರಶೋಮೇಶ್ವರ ಶ್ರೀ ಭಕ್ತರನ್ನು ಅಡ್ಡಪಲ್ಲಕ್ಕಿ ಮಾರ್ಗದುದ್ದಕ್ಕೂ ಹರಸಿದರು. ಅಡ್ಡಪಲ್ಲಕ್ಕಿ ಜೊತೆಗೆ ಹೆಜ್ಜೆ ಹಾಕಿದ ಕೇದಾರ ಜಗದ್ಗುರುಗಳು ಬನ್ನಿ ಮುಡಿದು ಮುಖ್ಯ ಮಂಟಪಕ್ಕೆ ಪಲ್ಲಕ್ಕಿ ಬರುವವರೆಗಿನ 2 ಗಂಟೆಗೂ ಅಧಿಕಯಲ್ಲಿ ಪಾದಯಾತ್ರೆಯಲ್ಲೇ ಪಲ್ಲಕ್ಕಿ ಜೊತೆಗಿದ್ದು ಭಕ್ತರಷ್ಟೆ ಅಲ್ಲ, ಸೇರಿದ್ದ ರಂಭಾಪುರಿ ಪೀಠದ ವಿವಿಧ ಶಾಖಾ ಮಠಗಳ ಗುರುಗಳ ಗಮನ ಸೆಳೆದರು.

ಎದ್ದು ಕಂಡ ಹಸಿರು ಪೇಟ: ವಿವಾದಗಳಿಂದಾಗಿ ಜನಮನ ಸೆಳೆದಿದ್ದ ಅಡ್ಡಪಲ್ಲಕ್ಕಿ ಉತ್ಸವ ನೆರವೇರಿಸಲು ನೂರಾರು ಭಕ್ತರು ಸಿದ್ಧವಾಗಿದ್ದರು. ಸಂಘಟಕರು ಪಲ್ಲಕ್ಕಿ ಸೇವೆಗೆ ನೂಕುನುಗ್ಗಲು ಆಗಬಾರದು ಎಂದು ಆಯ್ದ 50 ರಿಂದ 75 ಸೇವಕರಿಗೆ ಹಸಿರು ಪೇಟ ತೊಡಿಸಿ ಭಕ್ತರ ಗುಂಪಿನಿಂದ ಎದ್ದು ಕಾಣುವಂತಹ ವ್ಯವಸ್ಥೆ ಮಾಡಿದ್ದರು.
ದಸರಾ ದರ್ಬಾರ್ ಓಕೆ, ಅಡ್ಡಪಲ್ಲಕ್ಕಿ ಯಾಕೆ ಎಂದು ಜೇವರ್ಗಿಯಲ್ಲಿ ಷಣ್ಮುಖ ಶಿವಯೋಗಿ ಶರಣರ ಬಳಗದವರು ಪ್ರಶ್ನಿಸಿ ತೀವ್ರ ವಿರೋಧ ಹೊರಹಾಕಿದ್ದರು. ಅಷ್ಟೆ ಅಲ್ಲ, ದಸರಾ ದರ್ಬಾರ್‌ಗೆ ಪ್ರತಿಯಾಗಿ ಅನುಭಾವ ದರ್ಶನ ಎಂದು ಶರಣರ ಉಪನ್ಯಾಸ ಮಾಲಿಕೆಯನ್ನು ಆರಂಭಿಸಿದ್ದರು.
ದಸರಾ ದರ್ಬಾರ್ ಹಾಗೂ ಅನುಭಾವ ದರ್ಶನ ಸಮಾರಂಭಗಳ ವೇದಿಕೆ ಮದ್ಯೆ ಕೇವಲ 400 ಮೀಟರ್ ಅಂತರವಷ್ಟೆ ಇತ್ತು. ಇದರಿಂದಾಗಿ ಜಿಲ್ಲಾಡಳಿತಕ್ಕೂ ಜೇವರ್ಗಿ ದಸರಾ ದರ್ಬಾರ್, ಅಡ್ಡಪಲ್ಲಕ್ಕಿ ಆಚರಮೆ ಹಾಗೂ ಅನುಭಾವ ದರ್ಶನ ಉಪನ್ಯಾಸ ಮಾಲಿಕೆ ಸಮಾರಂಭಗಳು ತಲೆಬೇನೆಗೆ ಕಾರಣವಾಗಿದ್ದವು.

ಅಣಕು ಶವಯಾತ್ರೆಗೆ ಯತ್ನಿಸಿದವರ ಬಂಧನ:
ಜೇವರ್ಗಿಯಲ್ಲಂತೂ ಅಡ್ಡಪಲ್ಲಕ್ಕಿ ಉತ್ಸವದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇತ್ತು. ಇಲ್ಲಿನ ಅನುಭಾವ ದರ್ಶನ ಉಪನ್ಯಾಸ ವೇದಿಕೆಯಲ್ಲಿ ಅಡ್ಡಪಲ್ಲಕ್ಕಿ ನಡೆಯುವ ಸಮಯದಲ್ಲೇ ಮರಣವೇ ಮಹಾನವಮಿ ಕಾರ್ಯಕ್ರಮ ನಡೆಸುವುದಾಗಿ ಶರಣರ ಬಳಗದವರು ಘೋಷಿಸಿದ್ದರು. ಆದರೆ ಪೊಲೀಸರು ಈ ಕಾರ್ಯಕ್ರಮದಿಂದ ಶಾಂತಿ ಕದಡುವ ಶಂಕೆಗಳಿದ್ದು, ಇದನ್ನು ನಿರಾಕಿರಿಸದ್ದರಿಂದ ಈ ಸಮಾರಂಭ ನಡೆಯಲಿಲ್ಲ.
ಇತ್ತ ಗುಲ್ಬರ್ಗದಲ್ಲಿ ಪ್ರಗತಿಪರ ಗುಂಪಿನ ಸದಸ್ಯರು ಸೋರಿಕೊಂಡು ಕನ್ನಡ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನೆ ನಡೆಸಿ ಪಂಚ ಪೀಠಾಧೀಶರ ಅಣಕು ಶವಯಾತ್ರೆ ನಡೆಸಲು ಯತ್ನಿಸಿದಾಗ ಪೊಲೀಸರು ಅವರನ್ನೆಲ್ಲ ಬಂಧಿಸಿದರು. ಡಾ. ಮೀನಾಕ್ಷಿ ಬಾಳಿ, ಕೆ. ನಿಲಾ, ಜಿಪಂ ಸದಸ್ಯೆ ಶೋಭಾ ಬಾಣಿ, ಪ್ರೊ. ಆರ್.ಕೆ. ಹುಡಗಿ, ಬೀದರ್‌ನ ಬಸವಗಿರಿಯಿಂದ ಆಗಮಿಸಿದ್ದ ಗಂಗಾಂಬಿಕಾ ಸೇರಿದಂತೆ 30ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಸಂಜೆ ಬಿಡುಗಡೆ ಮಾಡಿದರು.

ಉಪವಾಸ ನಡೆಸಿದ ಸ್ವಾಮೀಜಿಗಳು: ಅಡ್ಡಪಲ್ಲಕ್ಕಿ ಆಚರಣೆ ಅಮಾನವೀಯವೆಂದು ಸಿಎಂ ಸಿದ್ದರಾಮಯ್ಯರನ್ನು ನಿಯೋಗದಲ್ಲಿ ಕಂಡು ಆಚರಣೆ ಮೇಲೆ ನಿಷೇಧ ಹೇರಲು ಯತ್ನಿಸಿ ಕೊನೆ ಗಳಿಗೆಯಲ್ಲಿ ಸರ್ಕಾರ ನಿಷೇಧಕ್ಕೆ ಮುಂದಾಗದ ವಿಚಾರ ಅರಿತ ಶರಣರ ಬಳಗದ ಸುಲಫಲ ಮಠಾಧೀಶ ಮಹಾಂತ ಶ್ರೀ, ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಮೃತ್ಯುಂಜಯ ಶ್ರೀ, ಮೈಸೂರಿನ ಉರಿಲಿಂಗ ಪೆದ್ದಿ ಪೀಠದ ಜ್ಞಾನಪ್ರಕಾಶ ಶ್ರೀ, ಜೇರಟಗಿಯ ಮಹಾಂತಾ ಶ್ರೀ, ಗುಲ್ಬರ್ಗ ತೌದಾಪುರಿ ಹಿರೇಮಠದ ರಾಜಶೇಖರ ದೇವರು, ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಝರಾಜೇಂದ್ರ ಶ್ರೀ, ಚಿಗರಳ್ಳಿಯ ಸಿದ್ದಬಸವ ಕಬೀರ ಶ್ರೀ, ಗದಗದ ಮೃತ್ಯುಂಜಯ ಸ್ವಾಮೀಜಿ,  ಸೊನ್ನದ ಶಿವಾನಂದ ಶ್ರೀ, ನೆಲೋಗಿಯ ಶ್ರೀಗಳು ಸೇರಿದಂತೆ 15ಕ್ಕೂ ಹೆಚ್ಚು ಸ್ವಾಮೀಜಿಗಳು ಅ.13 ರಿಂದಲೇ ಗುಲ್ಬರ್ಗದ ಜಿಲ್ಲಾಧಿಕಾರಿ ಕಚೇರಿ ಮುಂದೆ ನಿರಶನ ಆರಂಭಿಸಿದ್ದರು.

ಉಪವಾಸ ಪ್ರತಿಭಟನೆ: ಅಡ್ಡಪಲ್ಲಕ್ಕಿ ಆಚರಣೆಯ ದಿನವಾದ ಸೋಮವಾರ ಇಡೀದಿನ ಉಪವಾಸ ಪ್ರತಿಭಟನೆ ಈ ಸ್ವಾಮೀಜಿಗಳು ಮುಂದುವರಿಸಿದಾಗ ಜಿಲ್ಲಾಡಳಿತ ಇವರ ಉಪವಾಸ ಸ್ಥಳದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್ ಹಾಕಿತ್ತಲ್ಲದೆ ಅಂಬುಲನ್ಸ್ ಜೊತೆಗೆ ಈ ಸ್ಥಳದ ಮೇಲೂ ಕಾವಲು ಹಾಕುವ ಮೂಲಕ ಜೇವರ್ಗಿಯಲ್ಲಿ ಯಾವ ಕಾರಣಕ್ಕೂ ಶಾಂತಿ- ಸುವ್ಯವಸ್ಥೆ ಕದಡದಂತೆ ಕ್ರಮಗಳನ್ನು ಕೈಗೊಂಡಿತ್ತು.
3000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಅಡ್ಡಪಲ್ಲಕ್ಕಿ ದಿನದ ಪಹರೆಗಾಗಿ ಜೇವರ್ಗಿಯಲ್ಲಿ ನಿಯೋಜನೆ ಮಾಡಲಾಗಿತ್ತು. ಜಿಲ್ಲಾ ಎಸ್ಪಿ ಅಮೀತ್ ಸಿಂಗ್ ಜೇವರ್ಗಿ ಭದ್ರತೆಯ ಉಸ್ತುವಾರಿ ವಹಿಸಿದ್ದರು. ಜೇವರ್ಗಿಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಲ್ಲಿಯೂ ನಾಕಾಬಂದಿ ಮಾಡುವ ಮೂಲಕ ಸಮಾಜ ಘಾತಕ ಶಕ್ತಿಗಳು ಯಾವ ಮಾರ್ಗದಿಂದಲೂ ಜೇವರ್ಗಿ ತಲುಪದಂತೆ, ಅಲ್ಲಿನ ದಸರಾ ದರ್ಬಾರ್, ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿನ ಶಾಂತಿ- ಸಂಭ್ರಮ ಕದಡದಂತೆ ಪೊಲೀಸರು ಸಕಲ ಕ್ರಮ ಜರುಗಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.