10 ಗಂಟೆ ಈಜಿ ಪ್ರಾಣ ಉಳಿಸಿಕೊಂಡರು!

ಪಾರಾದೀಪ್: ಇದು ಸಾವನ್ನು ಗೆದ್ದ ಕಥೆ! ಇಡೀ ಪೂರ್ವ ಕರಾವಳಿಯನ್ನು ಚಂಡಿಯಂತೆ ಚಂಡಾಡುತ್ತಿದ್ದ, ಸಿಕ್ಕಿದ್ದೆಲ್ಲವನ್ನು ಆಹುತಿ ತೆಗೆದುಕೊಳ್ಳುತ್ತಿದ್ದ ಫೈಲಿನ್ ಚಂಡಮಾರುತದ ಬಾಯಿಯಿಂದ ಪವಾಡಸದೃಶವಾಗಿ ಬದುಕುಳಿದು ಬಂದ ಒಡಿಶಾದ 18 ಮೀನುಗಾರರ ಕಥೆ ಇದು.
ಫೈಲಿನ್ ಚಂಡಮಾರುತ ಪೂರ್ವಕರಾವಳಿಯನ್ನು ಅಪ್ಪಳಿಸಿದಾಗ ಈ ಹದಿನೆಂಟು ಮೀನುಗಾರರು ಪಾರಾದೀಪ್ ಸಮೀಪದ ಸಮುದ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ಇವರು ಎರಡು ಬೋಟ್ಗಳಲ್ಲಿ ಮೀನುಹಿಡಿಯಲೆಂದು ಆಳಸಾಗರಕ್ಕೆ ಹೋಗಿದ್ದರು. ಈ ಮಧ್ಯೆ ಫೈಲಿನ್ ಎದುರಾದ ಹಿನ್ನೆಲೆಯಲ್ಲಿ ಈ ಎರಡೂ ತಂಡ ಬೋಟ್ಗಳನ್ನು ದಡದತ್ತ ತಿರುಗಿಸಿದೆ. ಆದರೆ, ಅಷ್ಟರಲ್ಲಾಗಲೇ ಇಂಧನ ಕೈಕೊಟ್ಟಿತ್ತು. ಪರಿಣಾಮ ಇವರ ಬೋಟ್ ಪಾರಾದೀಪ್ ಕರಾವಳಿಯಿಂದ 5 ಮೈಲಿ ದೂರದಲ್ಲಿ ಸಮುದ್ರದ ನಡುವೆ ಸಿಕ್ಕಿಹಾಕಿಕೊಂಡಿದೆ. ಈ ವೇಳೆ ಮೀನುಗಾರರು ಕೋಸ್ಟ್ಗಾರ್ಡ್ ನೆರವು ಯಾಚಿಸಿದ್ದಾರೆ. ಇದಾಗಿ 48 ಗಂಟೆಗಳಾದರೂ ಅವರಿಗೆ ಯಾವುದೇ ನೆರವಿನ ಹಸ್ತ ಸಿಗಲಿಲ್ಲ. ಕೊನೆಗೆ ಇಂಧನವನ್ನಾದರೂ ಒದಗಿಸಿ ಎಂದು ಗೋಗರೆದಿದ್ದಾರೆ. ಇಷ್ಟಾದರೂ ಯಾವುದೇ ನೆರವು ಸಿಗದೇ ಹೋದಾಗ ಸಮುದ್ರಮಧ್ಯದಲ್ಲೇ ಉಳಿದಿದ್ದಾರೆ. ಒಂದು ಕಡೆ ಚಂಡಮಾರುತದಿಂದಾಗಿ ಸಾಗರದಲ್ಲಿ ಏಳುತ್ತಿರುವ ಹಲವು ಮೀಟರ್ ಎತ್ತರದ ಅಲೆಗಳು... ಇನ್ನೊಂದು ಕಡೆ ಭಾರಿ ಗಾಳಿ... ಇಂಥ ಪರಿಸ್ಥಿತಿಯಲ್ಲಿ ಜೀವ ಉಳಿದರೆ ಅದೇ ಪುಣ್ಯ ಎಂದು ಈ 18 ಮಂದಿ ದೇವರಿಗೆ ಮೊರೆ ಇಡುತ್ತಿದ್ದರು. ಅ.12ರಂದು ಫೈಲಿನ್ ಅಬ್ಬರಕ್ಕೆ ಸಿಲುಕಿ ಬೋಟ್ ಮಗುಚಿಬಿದ್ದಿದೆ. 18 ಮಂದಿ ಜೀವಉಳಿಸಿಕೊಳ್ಳಲು ಸಾಗರಕ್ಕೆ ಜಿಗಿದಿದ್ದಾರೆ. ನಂತರ ಖಾಲಿ ಡಬ್ಬಗಳು, ಗ್ಯಾಸ್ಸಿಲಿಂಡರ್ ಹಿಡಿದು 10 ಗಂಟೆ ನಿರಂತರ ಈಜಿ ಸುರಕ್ಷಿತವಾಗಿ ದಡ ತಲುಪಿದ್ದಾರೆ. ಸದ್ಯ ಈ ತಂಡದ ಮುಖಂಡನನ್ನು ಮೀನುಗಾರಿಕೆ ಇಲಾಖೆ ಎಚ್ಚರಿಕೆಯನ್ನೂ ಲೆಕ್ಕಿಸದೆ ಸಮುದ್ರಕ್ಕಿಳಿದ ಆರೋಪದ ಮೇರೆಗೆ ಬಂಧಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


