ಪ್ರಧಾನ ಸುದ್ದಿ

ಪ್ರಧಾನಿಗೂ ಮಸಿ

ಪ್ರಧಾನಿಗೂ ಮಸಿ
Published On :

ಪಿಟಿಐ ನವದೆಹಲಿ/ಹೈದರಾಬಾದ್ ಅ.16-
ಕಲ್ಲಿದ್ದಲು ಹಗರಣದಲ್ಲಿ ಬಿರ್ಲಾ ಉದ್ದಿಮೆ ಸಮೂಹದ ಅಧ್ಯಕ್ಷ ಕುಮಾರಮಂಗಲಂ ಬಿರ್ಲಾ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದ್ದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಕಲ್ಲಿದ್ದಲು ಇಲಾಖೆಯ ನಿವೃತ್ತ ಕಾರ್ಯದರ್ಶಿ ಪಿ.ಸಿ.ಪಾರಖ್ ಕೇಂದ್ರ ತನಿಖಾ ದಳದ ಕ್ರಮದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಜತೆಗೆ ಹಗರಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು 'ಸಹ-ಸಂಚುಗಾರ' ಎಂದು ಘೋಷಿಸಬೇಕು ಎಂದು ಒತ್ತಾಯಿಸಿದ್ದಾರೆ. ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲಿ ಆ ಸಂದರ್ಭದಲ್ಲಿ ಕಲ್ಲಿದ್ದಲು ಖಾತೆ ಸಚಿವರಾಗಿದ್ದ ಪ್ರಧಾನಿ ಸಿಂಗ್ ಅವರೇ ಅಂತಿಮ ನಿರ್ಧಾರ ಕೈಗೊಂಡಿದ್ದಾರೆ ಎಂದು ದೂರಿದ್ದಾರೆ. ಜತೆಗೆ ಬಿಜೆಪಿ ಕೂಡ ಹಗರಣದಲ್ಲಿ ಪ್ರಧಾನಿ ಪಾತ್ರ ವಹಿಸಿದ್ದು ಸಾಬೀತಾಗಿದೆ. ಹೀಗಾಗಿ ಅವರು ಪದತ್ಯಾಗ ಮಾಡಬೇಕೆಂದು ಒತ್ತಾಯಿಸಿದೆ.

ಪ್ರಧಾನಿ ಹೆಸರೇಕೆ ಇಲ್ಲ?: ಸಿಬಿಐ ತಮ್ಮ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರಿಂದ ಕೋಪೋದ್ರಿಕ್ತರಾಗಿರುವ ಕಲ್ಲಿದ್ದಲು ಇಲಾಖೆ ನಿವೃತ್ತ ಕಾರ್ಯದರ್ಶಿ ಪಿ.ಸಿ.ಪಾರಖ್ ಸಿಬಿಐ ತನಿಖೆ ನಡೆಸಿದ ಕ್ರಮವನ್ನೇ ಪ್ರಶ್ನಿಸಿದ್ದಾರೆ. ಬೆಳವಣಿಗೆ ಬಗ್ಗೆ ಬುಧವಾರ ಹೈದರಾಬಾದ್‌ನಲ್ಲಿ ಮಾತನಾಡಿದ ಅವರು ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲಿ ಅಂದು ಆ ಖಾತೆಯ ಹೊಣೆ ಹೊತ್ತಿದ್ದ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಅಂತಿಮ ನಿರ್ಧಾರ ಕೈಗೊಂಡಿದ್ದರು  ಎಂದು ಆರೋಪಿಸಿದರು.
ಹೀಗಾಗಿ, ಪ್ರಧಾನಿ ಹೆಸರನ್ನು ಮೊತ್ತಮೊದಲಾಗಿ ಸಿಬಿಐ ಪ್ರಸ್ತಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.
'ಕುಮಾರಮಂಗಲಂ ಬಿರ್ಲಾ, ನನ್ನನ್ನು ಸಂಚುಗಾರರು ಎಂದು ಸಿಬಿಐಗೆ ಹೆಸರಿಸಲು ಸಾಧ್ಯವಿದ್ದರೆ, ಕಲ್ಲಿದ್ದಲು ಬ್ಲಾಕ್‌ಗಳ ಹಂಚಿಕೆ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡ ಪ್ರಧಾನಿ ಹೆಸರೇಕೆ ಇಲ್ಲ?' ಎಂದು ಪಾರಖ್ ಪ್ರಶ್ನಿಸಿದ್ದಾರೆ.
ಒಂದು ವೇಳೆ ಸಂಚು ಎಂದಾಗಿದ್ದರೆ ಮೂವರ ಹೆಸರು ಕೂಡ ಎಫ್‌ಐಆರ್‌ನಲ್ಲಿ  ಇರಬೇಕಿತ್ತು ಎಂದಿದ್ದಾರೆ ಪಾರಖ್.

ವಂಚನೆಯಾಗಿಲ್ಲ: ಆದಿತ್ಯ ಬಿರ್ಲಾ ಗ್ರೂಪ್‌ನ ಒಡೆತನದಲ್ಲಿರುವ ಹಿಂಡಾಲ್ಕೋಗೆ ಒಡಿಶಾದಲ್ಲಿ ನೀಡಲಾಗಿರುವ ಕಲ್ಲಿದ್ದಲು ಬ್ಲಾಕ್‌ಗಳಲ್ಲಿ ಯಾವುದೇ ರೀತಿಯಲ್ಲಿ ನಿಯಮ ಉಲ್ಲಂಘನೆ ಆಗಿಲ್ಲ. ಜತೆಗೆ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿಲ್ಲ ಎಂದು ಪಾರಖ್ ಹೇಳಿಕೊಂಡಿದ್ದಾರೆ.
ಬಿರ್ಲಾ, ಪಿಎಂ ಭೇಟಿ ಬಳಿಕ ಬದಲಾಯ್ತು: ಒಡಿಶಾದಲ್ಲಿನ 2 ಕಲ್ಲಿದ್ದಲು ಬ್ಲಾಕ್‌ಗಳನ್ನು ನೈವೇಲಿ ಲಿಗ್ನೈಟ್ ಕಾರ್ಪೊರೇಷನ್‌ಗೆ ನೀಡಲು ಪರಿಶೀಲನಾ ಸಮಿತಿ ನಿರ್ಧರಿಸಿತ್ತು. ಇದಾದ ಬಳಿಕ ಬಿರ್ಲಾ ಅವರು ಪ್ರಧಾನಿಯವರನ್ನು ಭೇಟಿಯಾಗಿದ್ದರು. ನೈವೇಲಿ ಲಿಗ್ನೈಟ್ ಕಾರ್ಪೊರೇಷನ್‌ನಂತೆ ನಮ್ಮ ಕಂಪನಿಯೂ ಸಮರ್ಥವಾಗಿದೆ. ಹೀಗಾಗಿ ನಮಗೂ ಆದ್ಯತೆ ನೀಡಬೇಕು ಎಂದು ಬಿರ್ಲಾ ಪ್ರಧಾನಿಗೆ ಮನವಿ ಮಾಡಿದ್ದರು. ಇದಾದ ಬಳಿಕ ಒಡಿಶಾದಲ್ಲಿ 2 ಬ್ಲಾಕ್‌ಗಳನ್ನು ಹಿಂಡಾಲ್ಕೋಗೆ ನೀಡಲಾಯಿತು ಎಂದು ಪಾರಖ್ ತಿಳಿಸಿದರು.
ಎರಡೂ ಕಂಪನಿಗಳು ಸಮರ್ಥವಾಗಿದ್ದುದರಿಂದ ಒಡಿಶಾದ ಬ್ಲಾಕ್‌ಗಳನ್ನು ಸಮಾನವಾಗಿ ಹಂಚಿಕೆ ಮಾಡಬಹುದು ಎಂದು ಮನಮೋಹನ್ ಸಿಂಗ್ ಅವರಿಗೆ ಸೂಚಿಸಿದ್ದಾಗಿ ತಿಳಿಸಿದರು. ಅಂತಿಮವಾಗಿ ಪ್ರಧಾನಿ ತಮ್ಮ ಸಲಹೆಯನ್ನು ಒಪ್ಪಿಕೊಂಡದ್ದಾಗಿ ಪಾರಖ್ ಹೇಳಿದರು.

ಆರೋಪ ಸುಳ್ಳು:  ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿರುವಂತೆ ತಮ್ಮ ವಿರುದ್ಧದ ಆರೋಪ ಸುಳ್ಳು ಎಂದು ಕಲ್ಲಿದ್ದಲು ಇಲಾಖೆ ನಿವೃತ್ತ ಕಾರ್ಯದರ್ಶಿ ಪ್ರತಿಪಾದಿಸಿದ್ದಾರೆ.

ದಾಸರಿ ಹೆಸರೇಕಿಲ್ಲ?: ಹಗರಣದಲ್ಲಿ ಕಲ್ಲಿದ್ದಲು ಖಾತೆ ಸಹಾಯಕ ಸಚಿವ ದಾಸರಿ ನಾರಾಯಣ ರಾವ್ ಹೆಸರೇಕೆ ಇಲ್ಲ ಎಂದು ಪಾರಖ್ ಪ್ರಶ್ನಿಸಿದ್ದಾರೆ. ಬ್ಲಾಕ್ ಹಂಚಿಕೆಗಳಿಗೆ ಸಂಬಂಧಿಸಿದಂತೆ ಎಲ್ಲ ಕಡತಗಳೂ ಅವರ ಮೂಲಕವೇ ಬರಬೇಕು. ಹೀಗಾಗಿ, ಅವರ ಹೆಸರೂ ಏಕೆ ಸೇರ್ಪಡೆಗೊಂಡಿಲ್ಲ ಎಂದು ಪ್ರಶ್ನಿಸಿದರು.

ಒತ್ತಡ ಇರಲಿಲ್ಲ: ತಲಬಿರಾ ಒಂದು ಮತ್ತು ಎರಡನೇ ಘಟಕಗಳ ಹಂಚಿಕೆಯಲ್ಲಿ ಪ್ರಧಾನಿ ಕಚೇರಿ ಮೇಲೆ ಒತ್ತಡ ಇರಲಿಲ್ಲ ಎಂದು ಹೇಳಿಕೊಂಡ ಪಾರಖ್, 'ಸಮರ್ಥವಾಗಿಯೇ ನಿರ್ಧಾರ ಕೈಗೊಳ್ಳಲಾಯಿತು' ಎಂದರು. ನ್ಯಾಯಸಮ್ಮತ ಮತ್ತು ಸರಿಯಾದ ನಿರ್ಧಾರ ಎಂಬುದರ ನಡುವಿನ ವ್ಯತ್ಯಾಸ ಕಂಡುಕೊಳ್ಳಲು ಸಿಬಿಐ ವಿಫಲವಾಗಿದೆ ಎಂದು ಪಾರಖ್ ಲೇವಡಿ ಮಾಡಿದ್ದಾರೆ.

ತನಿಖಾ ಸಂಸ್ಥೆಗಳು ಗೊಂದಲದಲ್ಲಿ ಇಂಥ ಕ್ರಮ ಕೈಗೊಂಡಿವೆ ಎಂದು ಗೊತ್ತಾಗುತ್ತದೆ. ಸರಿಯಾದ ಸಾಕ್ಷ್ಯಾಧಾರಗಳಿಲ್ಲದೆ ಗೌರವಾನ್ವಿತ ಉದ್ಯಮಿಗಳನ್ನು ಗುರಿಯಾಗಿಸುವುದು ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತದೆ.
-ಟಿ.ವಿ.ಮೋಹನ್‌ದಾಸ್ ಪೈ, ಇನ್ಫೋಸಿಸ್ ಆಡಳಿತ ಮಂಡಳಿ ಮಾಜಿ ಸದಸ್ಯ

ಪ್ರಧಾನಿ ರಾಜಿನಾಮೆ ಕೊಡಲಿ: ಬಿಜೆಪಿ
ಪಾರಖ್ ಅವರ ಆರೋಪಗಳಿಂದ ಉತ್ತೇಜನಗೊಂಡಿರುವ ಪ್ರತಿಪಕ್ಷ ಬಿಜೆಪಿ ಪ್ರಧಾನಿ ತಕ್ಷಣ ರಾಜಿನಾಮೆ ಕೊಡಬೇಕೆಂದು ಆಗ್ರಹಿಸಿದೆ. ನವದೆಹಲಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಪ್ರಕಾಶ್ ಜಾವಡೇಕರ್ ಪ್ರಧಾನಿಯ ಹೆಸರನ್ನೂ ಸಿಬಿಐ 'ಸಹ-ಸಂಚುಗಾರ' ಎಂದು ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪಾರಖ್ ಅವರ ಆರೋಪದ ಹಿನ್ನೆಲೆಯಲ್ಲಿ ಪ್ರಧಾನಿ ತಮ್ಮ ಹೊಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ ಜಾವಡೇಕರ್.  2004ರಲ್ಲಿ ಪಾರಖ್ ನೀಡಿದ್ದ ಸಲಹೆಯನ್ನು ಸಂಪುಟದಲ್ಲಿ ಉದ್ದೇಶಪೂರ್ವಕವಾಗಿ ಚರ್ಚಿಸಲಿಲ್ಲ. ಈ ಮೂಲಕ ಮನಬಂದಂತೆ ಕಲ್ಲಿದ್ದಲು ಬ್ಲಾಕ್‌ಗಳನ್ನು ಹಂಚಲು ನಿರ್ಧರಿಸಲಾಗಿತ್ತು ಎಂದು ಜಾವಡೇಕರ್ ಹೇಳಿಕೊಂಡಿದ್ದಾರೆ.

ಸಿಬಿಐ ಕ್ರಮದಿಂದ ಹಾನಿ

ಕಲ್ಲಿದ್ದಲು ಹಗರಣದಲ್ಲಿ ಬಿರ್ಲಾ ಉದ್ದಿಮೆ ಸಮೂಹದ ಅಧ್ಯಕ್ಷ ಕುಮಾರಮಂಗಲಂ ಬಿರ್ಲಾ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದ್ದರಿಂದ ಉದ್ದಿಮೆಗಳ ಮೇಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದಂತಾಗಿದೆ. ಹೀಗೆಂದು ಹಲವು ಕೈಗಾರಿಕೋದ್ಯಮಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಕುಮಾರಮಂಗಲಂ ಬಿರ್ಲಾ ಗೌರವಾನ್ವಿತ ಉದ್ಯಮಿ. ಅವರಿಗೆ ಉದ್ದಿಮೆ ವಲಯ ಬೆಂಬಲ ನೀಡುತ್ತದೆ. ಈ ಕ್ರಮದಿಂದಾಗಿ ಉದ್ದಿಮೆ ಮೇಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸಿದಂತಾಗುತ್ತದೆ' ಎಂದು  ಪಿ.ಎಚ್.ಡಿ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಅಧ್ಯಕ್ಷ ಸುಮನ್ ಜ್ಯೋತಿ ಖೈತಾನ್ ಪ್ರತಿಪಾದಿಸಿದ್ದಾರೆ.  
ಪ್ರಕರಣ ನಡೆದಿದೆ ಎನ್ನಲಾದ ಸಮಯದಲ್ಲಿ ಬಿರ್ಲಾ ನಾನ್-ಎಕ್ಸಿಕ್ಯೂಟಿವ್ ಚೇರ್‌ಮೆನ್ ಆಗಿದ್ದರು. ಸಂಸ್ಥೆಯ ನಿತ್ಯದ ವ್ಯವಹಾರದಲ್ಲಿ ಭಾಗಿಯಾಗದೇ ಇರುವ ವ್ಯಕ್ತಿ ಮೇಲೆ ಎಫ್‌ಐಆರ್ ದಾಖಲಿಸಿರುವುದು ಸರಿಯಾದ ಕ್ರಮ ಅಲ್ಲ' ಎಂದು ಅಸೋಚಾಮ್ ಪ್ರಧಾನ ಕಾರ್ಯದರ್ಶಿ ಡಿ.ಎಸ್.ರಾವತ್ ಹೇಳಿದ್ದಾರೆ.

25 ಕೋಟಿ ನಗದು ಪತ್ತೆ
ಸಿಬಿಐ ಎಫ್‌ಐಆರ್‌ನಲ್ಲಿ ಸೇರ್ಪಡೆಗೊಂಡಿರುವ ಹಿಂಡಾಲ್ಕೋ ಕಂಪನಿಯ ನವದೆಹಲಿ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 25 ಕೋಟಿ ನಗದು ಪತ್ತೆಯಾಗಿದೆ. ಅದಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳು ಸಿಗದೇ ಇದ್ದುದರಿಂದ ಅದನ್ನು ತನಿಖಾ ಸಂಸ್ಥೆ ವಶಕ್ಕೆ ಪಡೆದುಕೊಂಡಿದೆ.

ಟೊಳ್ಳಾದ ಸ್ವಯಂಚಾಲಿತ ಆಯುಧದಿಂದ ಗುಂಡು ಹಾರಿಸಿದಂತೆ ಬಿಜೆಪಿ ವರ್ತಿಸುತ್ತಿದೆ. ಸುಪ್ರೀಂಕೋರ್ಟ್ ನೇತೃತ್ವದಲ್ಲಿಯೇ ಸಿಬಿಐ ತನಿಖೆ ನಡೆಸುತ್ತಿದೆ. ಹೀಗಾಗಿ ಬಿಜೆಪಿ ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು
-ಮನಿಷ್ ತಿವಾರಿ ಕೇಂದ್ರ ವಾರ್ತಾ ಸಚಿವ

ಕುಮಾರಮಂಗಲಂ ಬಿರ್ಲಾ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದ್ದು ದುರದೃಷ್ಟಕರ. ಇದರಿಂದ ಹೂಡಿಕೆದಾರರ ವಿಶ್ವಾಸಾರ್ಹತೆ ಪ್ರಶ್ನಿಸಿದಂತಾಗುತ್ತದೆ. ತನಿಖಾ ಸಂಸ್ಥೆಗಳು ಇಂಥ ಕ್ರಮದ ಮೂಲಕ ಮನೋಭಾವನೆ ಕೆರಳಿಸುವಂತೆ ಮಾಡಬಾರದು.
-ಆನಂದ್ ಶರ್ಮಾ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.