ಸೌಜನ್ಯ ಹತ್ಯಾಚಾರ ವಾರದಲ್ಲಿ ಸಿಐಡಿ ವರದಿ
ಕನ್ನಡಪ್ರಭ ವಾರ್ತೆ , ಬೆಂಗಳೂರು , ಅ.17-
ಸೌಜನ್ಯ ಕೊಲೆ ಪ್ರಕರಣ ಸಂಬಂಧ ಇನ್ನೊಂದು ವಾರದಲ್ಲಿ ಸರ್ಕಾರಕ್ಕೆ ಅಂತಿಮ ವರದಿ ನೀಡಲು ಸಿಐಡಿ ನಿರ್ಧರಿಸಿದೆ. ಈ ಪ್ರಕರಣದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರ ಕುಟುಂಬ ವರ್ಗದ ಪಾತ್ರವಿದೆ ಎಂದು ಕೆಲವರು ಆಪಾದನೆ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರದ ಸೂಚನೆ ಪ್ರಕಾರ, ಹೆಚ್ಚುವರಿ ತನಿಖೆ ನಡೆಸಿದ ಸಿಐಡಿ ಈಗ ಅಂತಿಮ ಹಂತ ತಲುಪಿದೆ.
ಪ್ರಕರಣ ಸಂಬಂಧ ಈಗಾಗಲೇ ತನಿಖೆ ಪೂರ್ಣಗೊಳಿಸಿರುವ ಸಿಐಡಿ ಜನವರಿ 2013ರಂದೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಆ ವರದಿಯಲ್ಲಿ ಆರೋಪಿ ಸಂತೋಷ್ ರಾವ್ ಸೌಜನ್ಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾನೆ ಎಂದು ಸ್ಪಷ್ಟವಾಗಿ ಹೇಳಲಾಗಿದೆ.
ಸಾಕ್ಷ್ಯ ಸಂಗ್ರಹ: ಹೆಚ್ಚುವರಿ ತನಿಖೆಯಲ್ಲೂ ಇದೇ ಅಭಿಪ್ರಾಯ ವ್ಯಕ್ತಪಡಿಸಿರುವ ಸಿಐಡಿ ಅಧಿಕಾರಿಗಳು, ಈಗ ಕೆಲವರು ಆರೋಪ ಮಾಡುತ್ತಿರುವ ವ್ಯಕ್ತಿಗಳು ಘಟನೆ ನಡೆದ ಸಂದರ್ಭದಲ್ಲಿ ಉಜಿರೆಯಲ್ಲಿ ಇರಲಿಲ್ಲ ಎಂಬ ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಈ ಎಲ್ಲ ಅಂಶಗಳನ್ನು ಆಧರಿಸಿ ಇನ್ನೊಂದು ವಾರದಲ್ಲಿ ಅಂತಿಮ ವರದಿ ನೀಡಲು ನಿರ್ಧರಿಸಲಾಗಿದೆ.
ಪ್ರಕರಣದಲ್ಲಿ ಹೆಗ್ಗಡೆ ಕುಟುಂಬ ವರ್ಗದವರ ಕೈವಾಡವಿದೆ ಎಂಬ ಆರೋಪ ವ್ಯಕ್ತವಾದ ನಂತರ ದಕ್ಷ ಅಧಿಕಾರಿ ಡಿಐಜಿ ಸೌಮೇಂದು ಮುಖರ್ಜಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಸಿರಿಗೌರಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿತ್ತು.
ಆದರೆ ಹೊಸ ಆರೋಪವನ್ನು ಸಾಬೀತು ಮಾಡುವುದಕ್ಕೆ ಅಗತ್ಯವಾದ ಯಾವುದೇ ಅಂಶಗಳು ತನಿಖೆ ಸಂದರ್ಭದಲ್ಲಿ ಪತ್ತೆಯಾಗಿಲ್ಲ.
ವೈಜ್ಞಾನಿಕ ಪರೀಕ್ಷೆ: ಇದಕ್ಕಿಂತ ಮುಖ್ಯವಾಗಿ ಆರೋಪಿ ಸಂತೋಷ್ ರಾವ್ ಹಾಗೂ ಸೌಜನ್ಯ ಮೃತ ದೇಹದಲ್ಲಿ ದೊರೆತ ಅಂಶಗಳನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದಾಗ ಆತನೇ ಈ ಕೃತ್ಯ ಎಸಗಿದ್ದಾನೆ ಎಂಬುದು ದೃಢಪಟ್ಟಿದೆ. ಈ ವಿಚಾರವನ್ನು ಸಿಐಡಿ ದೋಷಾರೋಪ ಪಟ್ಟಿಯಲ್ಲೂ ಹೇಳಿದೆ.
ಎಲ್ಲಕ್ಕಿಂತ ಮುಖ್ಯವಾಗಿ ಆರೋಪಿ ಸಂತೋಷ್ ಕುಮಾರ್ ವಿಕೃತ ಮನಸ್ಥಿತಿಯವನಾಗಿದ್ದು, ಅಸಹಾಯಕ ಸ್ಥಿತಿಯಲ್ಲಿ ಸಿಕ್ಕ ಸೌಜನ್ಯಳ ಮೇಲೆ ಅತ್ಯಚಾರ ಎಸಗಿ ಕೊಲೆ ಮಾಡಿದ್ದ. ಪೊಲೀಸರು ಆತನನ್ನು ಬಂಧಿಸಿದಾಗ ಮೊದಲು ಕೊಲೆ ಮಾಡಿದ್ದು ಮಾತ್ರ ಹೌದು ಎಂದು ಒಪ್ಪಿದ್ದ. ನಂತರ ಹೆಚ್ಚಿನ ವಿಚಾರಣೆ ನಡೆಸಿದಾಗ ಅತ್ಯಾಚಾರದ ಸಂಗತಿಯನ್ನೂ ಬಾಯ್ಬಿಟ್ಟಿದ್ದ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಜತೆಗೆ ಅತ್ಯಾಚಾರವನ್ನು ಆತ ಅತ್ಯಂತ ವಿಕೃತ ರೀತಿಯಲ್ಲಿ ಎಸಗಿದ್ದ. ಆ ಸಂದರ್ಭದಲ್ಲಿ ಆತನ ಮರ್ಮಾಂಗಕ್ಕೂ ಗಾಯವಾಗಿತ್ತು. ನಂತರ ಆತ ಸೌಜನ್ಯಳ ಗುಪ್ತಾಂಗದೊಳಗೆ ಮರಳನ್ನು ಹಾಕಿ ಪರಾರಿಯಾಗಿದ್ದ ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಸೌಜನ್ಯ ಹತ್ಯೆಯನ್ನು ಸಂತೋಷ್ ರಾವ್ ಮಾಡಿದ್ದಾನೆ ಎಂದು ದೃಢವಾಗಿ ಹೇಳುವುದಕ್ಕೆ ಬೇಕಾದ ಸಾಕ್ಷ್ಯಗಳು ನಮ್ಮ ಬಳಿ ಇದೆ. ಸಿಬಿಐ ಸೇರಿದಂತೆ ಬೇರೆ ಯಾವುದೇ ತನಿಖಾ ಸಂಸ್ಥೆ ತನಿಖೆ ನಡೆಸಿದರೂ ಇದಕ್ಕಿಂತ ಭಿನ್ನವಾದ ಸಂಗತಿ ಹೊರಬರಲು ಸಾಧ್ಯವಿಲ್ಲ ಎಂದು ನಮ್ಮ ಅಧಿಕಾರಿಗಳು ಬಹಿರಂಗವಾಗಿ ಸವಾಲು ಹಾಕಬಲ್ಲರು ಎಂದು ಹಿರಿಯ ಅಧಿಕಾರಿಯೊಬ್ಬರು 'ಕನ್ನಡಪ್ರಭ' ಸಂಪರ್ಕಿಸಿದಾಗ ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

