ಪ್ರಧಾನ ಸುದ್ದಿ

ಮಾಜಿ ಸೈನಿಕನ ಪತ್ನಿಗೆ ಪಿಂಚಣಿ: ಪ್ರಕರಣ ದಾಖಲು

Published On :

ಮೈಸೂರು: ಮಾಜಿ ಸೈನಿಕನ ಪತ್ನಿ ಮಕ್ಕಳಿಗೆ ಪಿಂಚಣಿ ಸಿಗುತ್ತಿಲ್ಲ. ಅಗತ್ಯ ದಾಖಲೆಗಳಿದ್ದರೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ಲಕ್ಷ್ಯಿಸುತ್ತಿದೆ ಎಂಬ ಬಗ್ಗೆ ರಾಜ್ಯ ಮಾನವ ಹಕ್ಕುಗಳ ಆಯೋಗ ಸುಮೊಟೊ(ಸ್ವಯಂ ಪ್ರೇರಿತ) ಪ್ರಕರಣ ದಾಖಲಿಸಿಕೊಂಡಿದೆ.
ಆ.8ರಂದು 'ಕನ್ನಡಪ್ರಭ'ದಲ್ಲಿ ಪ್ರಕಟವಾದ ವರದಿಯ ಆಧಾರದ ಮೇಲೆ ಆಯೋಗವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು, ಆ.13ರಂದು ವಿಚಾರಣೆ ನಡೆಸಿದೆ. ಈ ಪ್ರಕರಣದ ಬಗ್ಗೆ ಅಗತ್ಯ ಕ್ರಮಕೈಗೊಂಡು ಅನುಪಾಲನಾ ವರದಿಯನ್ನು ಸಲ್ಲಿಸುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶಕರಿಗೆ ಸೂಚಿಸಿದೆ. ವಿಶ್ವಸನೀಯ ಮೂಲಗಳ ಪ್ರಕಾರ, ಈ ಬಗ್ಗೆ ವಿವರವಾದ ವರದಿ ನೀಡುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕರು ಮೈಸೂರಿನ ಉಪ ನಿರ್ದೇಶಕರಿಗೆ ಸೂಚಿಸಿದ್ದು, ಅವರು ಈವರೆಗೆ ಕಳುಹಿಸಿಲ್ಲ. ಹೀಗಾಗಿ ನಿರ್ದೇಶಕರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ಅನುಪಾಲನಾ ವರದಿ ಕಳುಹಿಸಿಲ್ಲ ಎಂದು ಗೊತ್ತಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಪಡೆದಿರುವ ದಾಖಲಾತಿಗಳ ಪ್ರಕಾರ, ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಬೋಯ್‌ಕೇರಿಯ ಬಿ.ಡಿ. ರುದ್ರಯ್ಯಗೆ ಬಿ.ಆರ್. ಮೋಹಿನಿ ಎಂಬವರ ಜತೆ ವಿವಾಹವಾಗಿ ಮೂವರು ಮಕ್ಕಳಿದ್ದರು. ಆಗ ರುದ್ರಯ್ಯ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅದೇ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬ ರುದ್ರಯ್ಯ ಅವರ ಮನೆಗೆ ಬರುತ್ತಿದ್ದರು. ಆತನೊಂದಿಗೆ ಮೋಹಿನಿ ತನ್ನ ಮೂವರು ಮಕ್ಕಳೊಂದಿಗೆ ನಾಪತ್ತೆಯಾದರು. ಈ ವಿಷಯ ಗೊತ್ತಾಗಿ ರುದ್ರಯ್ಯ ತನ್ನ ಪತ್ನಿಗೆ ವಾಪಸ್ ಬರುವಂತೆ ಕರೆದರೂ ಬರಲಿಲ್ಲ. ಇದಾದ ನಂತರ ರುದ್ರಯ್ಯ ಬಿ.ಆರ್. ಲಲಿತಾ ಎಂಬವರನ್ನು ವಿವಾಹವಾದರು. ಆಕೆಗೆ ಬಿ.ಆರ್. ಹರೀಶ ಹಾಗೂ ಬಿ.ಆರ್. ಸೀಮಾ ಎಂಬ ಇಬ್ಬರು ಮಕ್ಕಳು. ಈ ಇಬ್ಬರು ಮಕ್ಕಳಿಗೆ 2001ರಿಂದ 2005ರವರೆಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಿಂದ ವಿದ್ಯಾರ್ಥಿ ವೇತನ ಸಿಕ್ಕಿತ್ತು.

ತಕರಾರು: ರುದ್ರಯ್ಯ ಅವರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಮೈಸೂರು ಕಚೇರಿಯಲ್ಲಿ ಅಧೀಕ್ಷಕರಾಗಿ ಸೇವೆ ಸಲ್ಲಿಸಿ, ಸ್ವಯಂ ನಿವೃತ್ತಿ ಪಡೆದಿದ್ದರು. ನಂತರವೂ ವಿದ್ಯಾರ್ಥಿ ವೇತನ ಸಿಕ್ಕಿತ್ತು. ರುದ್ರಯ್ಯ ಅವರು 2007, ಏ.16ರಂದು ನಿಧನರಾದ ನಂತರ ಪತ್ನಿ ಮತ್ತು ಮಕ್ಕಳು ಕುಟುಂಬ ಪಿಂಚಣಿ ಹಾಗೂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಹೋದಾಗ ಉಪ ನಿರ್ದೇಶಕರಾಗಿದ್ದ ಮೇಜರ್ ಆರ್.ಎಸ್. ವಿಶ್ವನಾಥ್ ಅವರು, ಬಿ.ಆರ್. ಲಲಿತಾ ದಿ. ರುದ್ರಯ್ಯ ಅವರ ಪತ್ನಿ ಹಾಗೂ ಮಕ್ಕಳಲ್ಲ ಎಂದು ತಕರಾರು ತೆಗೆದರು. ಇದರಿಂದ ಆಘಾತಕ್ಕೊಳಗಾದ ಲಲಿತಾ ಅವರು ಮಕ್ಕಳೊಂದಿಗೆ ಊರಿಗೆ ತೆರಳಿದರು. ಹೀಗಾಗಿ ಮಕ್ಕಳಿಗೆ ಒಂದು ವರ್ಷ ವಿದ್ಯಾಭ್ಯಾಸ ನಷ್ಟವಾಯಿತು. ಆದರೆ ಮಕ್ಕಳನ್ನು ಹೇಗಾದರೂ ಮಾಡಿ ಓದಿಸಬೇಕು ಎಂದು ಮತ್ತೆ ಮೈಸೂರಿಗೆ ಬಂದ ಅವರು, ಮನೆಗೆಲಸ ಮಾಡಿಕೊಂಡು, ಮಕ್ಕಳನ್ನು ಓದಿಸುತ್ತಿದ್ದಾರೆ.

ವಿಚಾರಣೆಗೆ ಪತ್ರ: ಏತನ್ಮಧ್ಯೆ 2011, ಜೂ.4ರಂದು ಬಿ.ಆರ್. ಹರೀಶ್ ಹಾಗೂ ಬಿ.ಆರ್. ಸೀಮಾ ಅವರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕ ಸಿ.ಎಂ. ಉತ್ತಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಿ, ನಮ್ಮ ತಾಯಿಯು ರುದ್ರಯ್ಯ ಅವರ ಪತ್ನಿ ಅಲ್ಲ ಎನ್ನುವುದಾದರೇ ಮೊದಲ ಪತ್ನಿ ಎಲ್ಲಿದ್ದಾರೆ ವಿಚಾರಣೆ ನಡೆಸಿ ಎಂದು ಕೋರಿದರು. ಅವರು ಮೈಸೂರಿನ ಉಪ ನಿರ್ದೇಶಕ ಮೇಜರ್ ಆರ್.ಎಸ್. ವಿಶ್ವನಾಥ್ ಅವರಿಗೆ ಪತ್ರ ಬರೆದರು. ಈ ಬಗ್ಗೆ ಇಲಾಖಾ ವಿಚಾರಣೆ ನಡೆಸಿ ಎಂದು ಪತ್ರ ಬರೆದರು. ಆದರೆ ಉತ್ತಯ್ಯ ಅವರು ಇಲಾಖಾ ತನಿಖೆಗೆ ಆದೇಶಿಸಲೇ ಇಲ್ಲ. ಈ ಬಗ್ಗೆ ಎರಡು ವರ್ಷ ಕಳೆದರೂ ಲಲಿತಾ ಅವರಿಗೆ ಯಾವುದೇ ಮಾಹಿತಿ ಕೂಡ ನೀಡಲಿಲ್ಲ.
ಇದ್ದಕ್ಕಿದ್ದಂತೆ ಮೊದಲ ಪತ್ನಿ 2012ರಲ್ಲಿ ಪ್ರತ್ಯಕ್ಷವಾಗುತ್ತಾರೆ. ಪಯೋನಿರ್ ರೆಕಾರ್ಡ್ಸ್‌ನ ಪ್ರಧಾನ ನಿಯಂತ್ರಕರ ಸೂಚನೆಯ ಮೇರೆಗೆ ಮಂಗಳೂರಿನ ಸೇನಾ ನೇಮಕಾತಿ ಕಚೇರಿಯವರು ತನಿಖೆಗೆ ಮುಂದಾಗುತ್ತಾರೆ. ಮೊದಲ ಪತ್ನಿಗೆ ಕಳುಹಿಸುವ ಪತ್ರಗಳು ತಲುಪುತ್ತವೆ. ಆದರೆ ಎರಡನೇ ಪತ್ನಿಗೆ ಹಳೆಯ ವಿಳಾಸಕ್ಕೆ ಕಳುಹಿಸುತ್ತಿದ್ದರಿಂದ ಯಾವುದೇ ಪತ್ರಗಳು ತಲುಪುತ್ತಿರಲಿಲ್ಲ. ತಾವು ಬಾಡಿಗೆ ಮನೆಯಲ್ಲಿ ವಾಸಿಸುವುದರಿಂದ ಪದೇ ಪದೇ ಮನೆ ಬದಲಿಸುತ್ತಿದ್ದು, ಕಾಗದ ಪತ್ರಗಳನ್ನು ಕೇರಾಫ್ ವಿಳಾಸಕ್ಕೆ ಕಳುಹಿಸುವಂತೆ ಲಲಿತಾ ಅವರು ಕೋರಿದರೂ ಅವರಿಗೆ ಯಾವುದೇ ಪತ್ರಗಳು ಸಿಗುವುದಿಲ್ಲ. ಈಗ 'ಕನ್ನಡಪ್ರಭ'ದಲ್ಲಿ ವರದಿ ಪ್ರಕಟವಾದ ನಂತರ ರಾಜ್ಯ ಮಾನವ ಹಕ್ಕುಗಳ ಆಯೋಗವೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವುದರಿಂದ ನಮಗೆ ನ್ಯಾಯ ಸಿಗುವ ಭರವಸೆ ಇದೆ ಎನ್ನುತ್ತಾರೆ ಬಿ.ಆರ್. ಲಲಿತಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.