ಪ್ರಧಾನ ಸುದ್ದಿ

ಕಾಲುಬಾಯಿ; ರೈತರ ಬದುಕು ಮೂರಾಬಟ್ಟೆ

Published On :

ಕ.ಪ್ರ.ವಾರ್ತೆ, ರಾಮನಗರ, ಅ. 18-
ಹೈನೋದ್ಯಮ ಅವಲಂಬಿಸಿ ಬದುಕು ಕಟ್ಟಿಕೊಳ್ಳುವ ಬಗ್ಗೆ ರೈತಾಪಿ ಸಮುದಾಯ ಕಟ್ಟಿಕೊಂಡ ಕನಸನ್ನು ರಾಸುಗಳಿಗೆ ಆವರಿಸಿರುವ ಕಾಲುಬಾಯಿ ಜ್ವರಬಾಧೆ ನುಚ್ಚುನೂರು ಮಾಡಿದೆ. ಈ ರೋಗದಿಂದ ಹೈನೋದ್ಯಮದ ಮೇಲೆ ಬಲವಾದ ಪೆಟ್ಟು ಬಿದ್ದಿದ್ದು, ರೈತರು ಚೇತರಿಸಿಕೊಳ್ಳಲಾಗದೆ ಪರಿತಪಿಸುತ್ತಿದ್ದಾರೆ.
ಕಾಲುಬಾಯಿ ಜ್ವರಬಾಧೆ ಜತೆಗೆ ತಲೆದೋರಿದ ಗಳಲೇ ರೋಗ, ಹಂದಿ ರೋಗ ಮತ್ತು ಗೂಬೆ ರೋಗಗಳ ಹಾವಳಿಯಿಂದ ರಾಸುಗಳು ತತ್ತರಿಸಿವೆ. ಬೆಂಗಳೂರು ಹಾಲು ಒಕ್ಕೂಟ (ಬಮೂಲ್) ವ್ಯಾಪ್ತಿಯ 12 ತಾಲೂಕುಗಳಲ್ಲಿ 2310 ರಾಸುಗಳು ಸಾವನ್ನಪ್ಪಿದ್ದು, ಈ ಪೈಕಿ ರಾಮನಗರ ಜಿಲ್ಲೆಯ 4 ತಾಲೂಕುಗಳ 1709 ರಾಸುಗಳು ಸೇರಿವೆ. ಬಮೂಲ್ ಸಂಚಾರಿ ಘಟಕ, ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಇಲಾಖೆ ವೈದ್ಯರು ಅದೆಷ್ಟೇ ಹರಸಾಹಸ ನಡೆಸುತ್ತಿದ್ದರೂ ರೋಗ ನಿಯಂತ್ರಣ ಸಾಧ್ಯವಾಗಿಲ್ಲ. ಸಹಸ್ರಾರು ರು. ಕೊಟ್ಟು ರಾಸುಗಳನ್ನು ಖರೀದಿಸಿ, ಹೈನೋದ್ಯಮದಲ್ಲಿ ತೊಡಗುವ ಮೂಲಕ ಲಾಭ ಪಡೆಯಲು ಹೊರಟಿರುವ ರೈತರ ಬದುಕು ನಿಜಕ್ಕೂ ಮೂರಾಬಟ್ಟೆಯಾಗಿದೆ.

ಮೂರು ಕಾಸಿಗೂ ಬೇಡ: ಪ್ರತಿ ಲೀಟರ್ ಹಾಲಿಗೆ ಹಿಂದಿನ ಬಿಜೆಪಿ ಸರ್ಕಾರ ರು.2 ಪ್ರೋತ್ಸಾಹ ಧನ ನೀಡುತ್ತಿತ್ತು. ಕಾಂಗ್ರೆಸ್ ಸರ್ಕಾರ ಅದನ್ನು ರು. 4ಕ್ಕೆ ಹೆಚ್ಚಿಸಿತು. ಇದರ ಜತೆಗೆ ಕೆಎಂಎಫ್ ಕೂಡ ಹಾಲಿನ ಧಾರಣೆ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಸಹಜವಾಗಿಯೇ ಹೈನೋದ್ಯಮ ಲಾಭದಾಯಕ ಉದ್ಯಮವಾಗಿ ಪರಿಣಮಿಸಿತು. ಕೃಷಿಗೆ ಬೆನ್ನು ತೋರಿದ ಸಾಕಷ್ಟು ರೈತರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.  ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಸಹಜವಾಗಿಯೇ ಮಿಶ್ರತಳಿ ರಾಸುಗಳ ಧಾರಣೆಯೂ ಏರಿಕೆಯಾಗಿದೆ. ದಿನಕ್ಕೆ ಸರಾಸರಿ 15-20 ಲೀಟರ್ ಹಾಲು ನೀಡುವ ಜತೆಗೆ ಉತ್ತಮ ಮೈಕಟ್ಟು ಹೊಂದಿರುವ ಮಿಶ್ರತಳಿ ಪ್ರತಿ ರಾಸುವಿನ ಬೆಲೆ ರು. 50 ಸಾವಿರದ ಗಡಿ ದಾಟಿದೆ. ಒಂದೊಮ್ಮೆ ಇಂತಹ ರಾಸುಗಳಿಗೆ ಕಾಲುಬಾಯಿ ಜ್ವರ ತಗುಲಿದರೆ ಮೂರು ಕಾಸಿಗೂ ಬೇಡವಾಗುತ್ತಿದೆ.

ವಿಮೆ ನಿಗದಿಯಲ್ಲೂ ಅನ್ಯಾಯ: ಕೆಎಂಎಫ್ ಅಧೀನದ ಹಾಲು ಒಕ್ಕೂಟಗಳ ಸಂಚಾರಿ ಘಟಕಗಳು ರಾಸುಗಳಿಗೆ ವಿಮೆ ಮೊತ್ತ ನಿಗದಿಪಡಿಸುವುದರಲ್ಲೂ ಅನ್ಯಾಯವೆಸಗುತ್ತಿದ್ದಾರೆ. ಮಾರುಕಟ್ಟೆಯಲ್ಲಿರುವ ಬೆಲೆಗೆ ಆಸುಪಾಸಿನ ಮೌಲ್ಯವನ್ನೂ ರಾಸುಗಳಿಗೆ ನಿಗದಿಪಡಿಸುತ್ತಿಲ್ಲ. ಹೀಗಾಗಿ ರಾಸು ಸಾವನ್ನಪ್ಪಿದಾಗ ರೈತರು ತಮ್ಮ ಗಂಟಿನಲ್ಲೇ ಹಣ ಕಳೆದುಕೊಂಡು, ನಷ್ಟ ಅನುಭವಿಸುತ್ತಿದ್ದಾರೆ.
  ವಿಮೆ ಸೌಲಭ್ಯಕ್ಕೆ ಒಳಪಟ್ಟ ರಾಸುಗಳಿಗೆ ಪರಿಹಾರ ನೀಡದಿರಲು ನಿರ್ಧರಿಸಿರುವುದು ಮತ್ತೊಂದು ಆಘಾತಕಾರಿ ಸಂಗತಿಯಾಗಿದೆ.

- ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.