ಸಾಲ ಪಡೆಯದಿದ್ದರೂ ಮನೆಗೆ ಬಂತು ಮನ್ನಾ ಪತ್ರ!
ಕ.ಪ್ರ.ವಾರ್ತೆ , ಮೈಸೂರು , ಅ. 19
ಮೈಸೂರು ಜಿಲ್ಲೆಯವರೇ ಆದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ವಿವಿಧ ನಿಗಮಗಳಿಂದ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಪಡೆದಿರುವ ಸಾಲವನ್ನು ಮನ್ನಾ ಮಾಡುವ ನಿರ್ಧಾರ ಕೈಗೊಂಡರು. ಆದರೆ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಫಲಾನುಭವಿಯೊಬ್ಬರಿಗೆ ಈವರೆಗೂ ಸಾಲದ ಹಣವೇ ತಲುಪಿಲ್ಲ. ಆದರೆ ಸಾಲ ಮನ್ನಾ ಮಾಡಿರುವ ಪತ್ರ ಮಾತ್ರ ತಲುಪಿದೆ!
ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರು ಪ್ರತಿನಿಧಿಸುವ ಟಿ. ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನೂರು ವರಕೇರಿ ಬೀದಿಯ ಶ್ರೀನಿವಾಸ ಎಂಬವರ ಪತ್ನಿ ಎಲ್. ಸರೋಜಾ ಅವರು ಸಾಲಕ್ಕಾಗಿ 2010-11ನೇ ಸಾಲಿನಲ್ಲಿ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಕ್ಕೆ ಅರ್ಜಿ ಸಲ್ಲಿಸಿದ್ದರು. ನಾಲ್ಕಾರು ಬಾರಿ ಅಲೆದರೂ ಪ್ರಯೋಜನವಾಗದಿದ್ದಾಗ ಕ್ಷೇತ್ರದ ಶಾಸಕರಾಗಿದ್ದ ಡಾ. ಎಚ್.ಸಿ. ಮಹದೇವಪ್ಪ ಅವರ ಕಡೆಯಿಂದ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ಹೇಳಿಸಿದ್ದರು. ಇದಾದ ನಂತರವೂ ನಿಗಮದ ಕಚೇರಿಗೆ ಸರೋಜಾ ಅವರ ಸಹೋದರ ಗಿರೀಶ್ ಅಲೆದಾಡಿದ್ದೇ ಬಂತು. ಆದರೆ ಸಾಲ ಮಂಜೂರಾಗಲಿಲ್ಲ. ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಅವರು ಮತ್ತೆ ವಿಚಾರಿಸಲೂ ಹೋಗಲೇ ಇಲ್ಲ. ಆದರೆ ಏನಾಶ್ಚರ್ಯ? ಈಗ ಸರೋಜಾ ಅವರ ವಿಳಾಸಕ್ಕೆ 2013, ಆ.7ರ ದಿನಾಂಕ ನಮೂದಿಸಿ ಸಾಲಮನ್ನಾ ತಿಳಿವಳಿಕೆ ಪತ್ರ ಕಳುಹಿಸಲಾಗಿದೆ!
ಪತ್ರದಲ್ಲಿ ಏನಿದೆ?: ನಿಗಮವು ಅನುಷ್ಠಾನಗೊಳಿಸುತ್ತಿರುವ ಚೈತನ್ಯ ಸಬ್ಸಿಡಿ ಕಂ ಸಾಫ್ಟ್ ಲೋನ್ ಯೋಜನೆಯಲ್ಲಿ ಹಲ್ಲರ್ ಮತ್ತು ಫ್ಲೋರ್ಮಿಲ್ ಉದ್ದೇಶಕ್ಕೆ 2010-11ನೇ ವರ್ಷದಲ್ಲಿ 20 ಸಾವಿರ ಸಾಲವನ್ನು ನಿಮಗೆ ನೀಡಲಾಗಿರುತ್ತದೆ(ಸಾಲದ ಖಾತೆ ಸಂಖ್ಯೆ- 95/10-11). ಸರ್ಕಾರದ ಆದೇಶದನ್ವಯ ನಿಮ್ಮಿಂದ ವಸೂಲಾಗಲು ಬಾಕಿ ಇದ್ದ ಅಸಲು 20 ಸಾವಿರ ಮತ್ತು ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗಿದೆ. ಈ ಪ್ರಯೋಜನವನ್ನು ನೀವು ಪಡೆದು ನಿಮ್ಮ ಆರ್ಥಿಕ ಜೀವನಮಟ್ಟವನ್ನು ಅಭಿವೃದ್ಧಿಪಡಿಸಿಕೊಳ್ಳುವಂತೆ ಹಾರೈಸುತ್ತೇವೆ ಎಂದು ಜಿಲ್ಲಾ ವ್ಯವಸ್ಥಾಪಕರ ಸಹಿಯೊಂದಿಗೆ ಪತ್ರ ಕಳುಹಿಸಲಾಗಿದೆ. ಅದರಲ್ಲಿ ಚೆಕ್ ನಂ. 533134, ಡಿಸೆಂಬರ್ 31, 2010, ಎಸ್ಬಿಎಂ, ತಲಕಾಡು ಎಂದು ಸಹ ನಮೂದಿಸಲಾಗಿದೆ. ಈ ಪತ್ರ ತಲುಪಿದ ಕೂಡಲೇ ಸರೋಜಾ ಅವರ ಸೋದರ ಗಿರೀಶ್ ತಲಕಾಡು ಎಸ್ಬಿಎಂ ಶಾಖೆಗೆ ಹೋಗಿ ವಿಚಾರಿಸಿದರು. ಆದರೆ ಅಲ್ಲಿ ಯಾವುದೇ ಹಣ ಬಂದಿಲ್ಲ ಎಂಬ ಉತ್ತರ ಸಿಕ್ಕಿತು.
ಸರೋಜಾ ಅವರ ಖಾತೆ ಇರುವುದು ಬನ್ನೂರು ಎಸ್ಬಿಐ ಶಾಖೆಯಲ್ಲಿ. ಅಲ್ಲಿಗೂ ಯಾವುದೇ ಸಾಲದ ಬಾಬ್ತು ಬಂದಿಲ್ಲ. ಹಾಗಾದರೆ ನಿಗಮದಿಂದ ಮಂಜೂರಾದ ಹಣ ಎಲ್ಲಿಗೆ ಹೋಯಿತು? ಸರೋಜಾ ಅವರ ಖಾತೆ ಬನ್ನೂರು ಎಸ್ಬಿಐನಲ್ಲಿ ಇರುವಾಗ ತಲಕಾಡು ಎಸ್ಬಿಎಂಗೆ ಚೆಕ್ ಹೇಗೆ ಹೋಯಿತು ಎಂಬುದಕ್ಕೆ ಯಾರ ಬಳಿಯೂ ಉತ್ತರವಿಲ್ಲ. ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲೂ ಸರಿಯಾದ ಮಾಹಿತಿ ಸಿಗುತ್ತಿಲ್ಲ ಎಂದು ಗಿರೀಶ್ ದೂರಿದ್ದಾರೆ. ಸದ್ಯ ಸರ್ಕಾರ ಸಾಲಮನ್ನಾ ಮಾಡಿದೆ. ನಾವು 20 ಸಾವಿರ ಮತ್ತು ಬಡ್ಡಿ ವಾಪತಿಸುವಂತಿಲ್ಲ. ಆದರೆ ನಿಜವಾಗಿಯೂ ಕಟ್ಟಬೇಕು ಎಂದಿದ್ದರೇ ಕಥೆ ಏನು ಎಂಬುದು ಅವರ ಪ್ರಶ್ನೆ. ಅವರ ಪ್ರಕಾರ, ಬನ್ನೂರಿನ ಶಿವಲಿಂಗೇಗೌಡರ ಪತ್ನಿ ಪುಷ್ಪಲತಾ, ಹೊಸ ಕುಕ್ಕೂರಿನ ಚಿಕ್ಕಬಸವಯ್ಯ ಎಂಬವರ ಪುತ್ರ ಶಾಂತರಾಜು ಅವರಿಗೂ ಸಾಲ ತಲುಪಿಲ್ಲ.
2010-11ನೇ ಸಾಲಿನಲ್ಲಿ ಸಾಲ ಮಂಜೂರಾದಾಗ ನಾನು ಜಿಲ್ಲಾ ವ್ಯವಸ್ಥಾಪಕನಾಗಿರಲಿಲ್ಲ. ನಾನು ಇತ್ತೀಚೆಗೆ ಬಂದಿದ್ದೇನೆ. ಸರೋಜಾ ಅವರಿಗೆ ಮಂಜೂರಾಗಿರುವ ಸಾಲದ ಹಣ ಎಲ್ಲಿಗೆ ಹೋಯಿತು. ಸರೋಜಾ ಅವರ ಬ್ಯಾಂಕ್ ಖಾತೆ ಬನ್ನೂರು ಎಸ್ಬಿಐನಲ್ಲಿದ್ದರೂ ತಲಕಾಡು ಎಸ್ಬಿಎಂ ಶಾಖೆಗೆ ಚೆಕ್ ಹೇಗೆ ಹೋಯಿತು ಎಂಬ ಬಗ್ಗೆ ಪರಿಶೀಲಿಸುತ್ತೇನೆ. ಟಿ. ನರಸೀಪುರ ವಿಧಾನಸಭಾ ಕ್ಷೇತ್ರ ಆಯ್ಕೆ ಸಮಿತಿಯ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಎಲ್. ಸರೋಜಾ 25 ಸಾವಿರ, ಶಾಂತರಾಜು 15 ಸಾವಿರ, ಪುಷ್ಪಲತಾ ಅವರ 25 ಸಾವಿರ ಮಾರ್ಜಿನ್ ಹಣ ಮತ್ತು ಸಹಾಯಧನ ಸೇರಿಸಿ 65 ಸಾವಿರ ಮೌಲ್ಯದ ಚೆಕ್ ಅನ್ನು 31 ಡಿಸೆಂಬರ್ 2010ರಂದು ತಲಕಾಡು ಎಸ್ಬಿಎಂಗೆ ಕಳುಹಿಸಲಾಗಿದೆ. ಈ ಹಣ ಏನಾಯಿತು ಎಂಬುದನ್ನು ಪತ್ತೆ ಮಾಡುತ್ತೇನೆ.
- ಜ್ಞಾನಪ್ರಕಾಶ್, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

