ಪ್ರಧಾನ ಸುದ್ದಿ

ನವಾಜ್ ಕಿರಿಕ್

ನವಾಜ್ ಕಿರಿಕ್
Published On :

ಇಸ್ಲಾಮಾಬಾದ್/ನವದೆಹಲಿ: ಅತ್ತ ಗಡಿಯಲ್ಲಿ ಭಾರತೀಯ ಪಡೆಗಳ ಮೇಲೆ ಪಾಕ್ ಸೈನಿಕರು ದಾಳಿ ಮಾಡುತ್ತಿದ್ದರೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರು ಕಾಶ್ಮೀರ ವಿವಾದ ಬಗೆಹರಿಸುವತ್ತ ಆಸಕ್ತಿ ತೋರಿದ್ದಾರೆ. ಕಾಶ್ಮೀರ ವಿವಾದ ಬಗೆಹರಿಯಬೇಕಾದರೆ ಅಮೆರಿಕ ಮಧ್ಯಪ್ರವೇಶ ಮಾಡಲೇಬೇಕು ಎಂದು ನವಾಜ್ ಷರೀಫ್  ಮತ್ತೊಮ್ಮೆ ಒತ್ತಾಯಿಸಿದ್ದಾರೆ.
ಭಾರತ ಈ ರೀತಿಯ ಮಧ್ಯಸ್ಥಿಕೆಯನ್ನು ಇಷ್ಟಪಡಲಿಕ್ಕಿಲ್ಲ. ಆದರೆ ಸಮಸ್ಯೆ ಪರಿಹಾರವಾಗಬೇಕೆಂದರೆ ವಿಶ್ವದ ಬಲಿಷ್ಠ ಶಕ್ತಿಗಳು ಮಧ್ಯಪ್ರವೇಶ ಮಾಡಲೇಬೇಕಾಗುತ್ತದೆ ಎಂದು ಲಂಡನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಷರೀಫ್ ತಿಳಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಅವರು ಬುಧವಾರ ಅಮೆರಿಕ ಅಧ್ಯಕ್ಷ ಒಬಾಮರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

ಅಪಾಯ ಭೀತಿ: 1999ರಲ್ಲಿ ಕಾರ್ಗಿಲ್ ಯುದ್ಧದ ಮಧ್ಯೆ ಅಮೆರಿಕಕ್ಕೆ ಭೇಟಿ ನೀಡಿದ್ದಾಗಲೂ ನಾನು ಈ ಒತ್ತಾಯವನ್ನು ಅಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್ ಮುಂದಿಟ್ಟಿದ್ದೆ ಎಂದೂ ಷರೀಫ್ ಹೇಳಿದ್ದಾರೆ. ಕಳೆದ 60 ವರ್ಷಗಳಿಂದಲೂ ಭಾರತ-ಪಾಕ್ ಎರಡೂ ರಾಷ್ಟ್ರಗಳು ಶಸ್ತ್ರಾಸ್ತ್ರ ಪೈಪೋಟಿಯಲ್ಲಿ ತೊಡಗಿವೆ. ಇದು ಹೀಗೇ ಮುಂದುವರಿದರೆ ಪರಿಸ್ಥಿತಿ ಅಪಾಯಕಾರಿ ಮಟ್ಟ ತಲುಪಲಿದೆ. ಭಾರತದ ಜತೆಗೂ ಅಣುಬಾಂಬ್ ಇದೆ, ನಮ್ಮಲ್ಲೂ ಇದೆ; ಭಾರತವೂ ಕ್ಷಿಪಣಿ ಅಭಿವೃದ್ಧಿಪಡಿಸುತ್ತಿದೆ, ನಾವೂ ಅಭಿವೃದ್ಧಿಪಡಿಸುತ್ತಿದ್ದೇವೆ. ಇದಕ್ಕೆಲ್ಲ ಮಿತಿ ಇರಬೇಕು ಎಂದು ಷರೀಫ್ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ಮಧ್ಯಪ್ರವೇಶ ಬೇಕಾಗಿಲ್ಲ
ಅಮೆರಿಕ ಮಧ್ಯಪ್ರವೇಶಿಸಬೇಕು ಎಂಬ ನವಾಜ್ ಷರೀಫ್ ಒತ್ತಾಯಕ್ಕೆ ಭಾರತ ತಿರಸ್ಕಾರದ ಉತ್ತರ ನೀಡಿದೆ. ಕಾಶ್ಮೀರ ವಿಚಾರದಲ್ಲಿ ಯಾರದೇ ಮಧ್ಯಪ್ರವೇಶಕ್ಕೆ ಭಾರತ ಒಪ್ಪಿಗೆ ನೀಡುವುದಿಲ್ಲ ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ. ಕಾಶ್ಮೀರವು ಭಾರತದ ಅವಿಭಾಜ್ಯ ಅಂಗ. ಈ ಬಗ್ಗೆ ಯಾವುದೇ ಸಂದೇಹವಿಲ್ಲ. ಈ ಬಗ್ಗೆ ಪ್ರಶ್ನಿಸುವುದು ಸುಖಾಸುಮ್ಮನೆ ಸಮಯವನ್ನು ವ್ಯರ್ಥ ಮಾಡಿದಂತೆ. ಮಧ್ಯಸ್ಥಿಕೆ ಬಗ್ಗೆ ಮಾತನಾಡುವ ಬದಲು ಪಾಕಿಸ್ತಾನವು 2003ರ ಕದನವಿರಾಮ ಕಾಯ್ದೆಯನ್ನು ಗೌರವಿಸಲು ಕಲಿಯಲಿ ಎಂದೂ ಖುರ್ಷಿದ್ ಸಲಹೆ ನೀಡಿದ್ದಾರೆ.

ಕೇರನ್ ಕಾರ್ಯಾಚರಣೆ: ಅಸ್ಪಷ್ಟ
ಕೇರನ್ ವಲಯದಲ್ಲಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆ ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅ.8ರಂದೇ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ ಎಂದು ಸೇನೆ ಹೇಳಿಕೊಂಡರೂ, ನಂತರದ 5 ದಿನಗಳವರೆಗೂ ಗುಂಡಿನ ಚಕಮಕಿ ಮುಂದುವರಿದಿತ್ತು. ಇದಾದ ಬಳಿಕ ಬಿಎಸ್‌ಎಫ್ ಮತ್ತು ಸೇನೆಯ ಜಂಟಿ ತಂಡ ಶಾಲಾಭಾಟು ಗ್ರಾಮಕ್ಕೆ ಭೇಟಿ ನೀಡಿತ್ತು. ಆದರೆ ಈ ಬಗ್ಗೆ ಸೇನೆ ನೀಡಿದ ಮಾಹಿತಿಯು ಹಲವು ಪ್ರಶ್ನೆಗಳನ್ನು ಮೂಡಿಸಿದೆ. 7 ಮಂದಿ ಉಗ್ರರನ್ನು ಹತ್ಯೆಗೈಯ್ಯಲಾಗಿದೆ ಎಂದು ಸೇನೆ ಹೇಳಿದ್ದರೂ, ಕಾನೂನು ಪ್ರಕಾರ ಆ ಉಗ್ರರ ಮೃತದೇಹಗಳನ್ನು ಒಪ್ಪಿಸುವಲ್ಲಿ ಸೇನೆ ವಿಫಲವಾಗಿದೆ. ಭಾರತೀಯ ಸೇನೆಯೇ  ಮೂವರು ನಾಗರಿಕರನ್ನು ಅಪಹರಿಸಿ, ಅವರಲ್ಲಿ ಇಬ್ಬರನ್ನು ಹತ್ಯೆಗೈದಿದೆ ಎಂದು ಪಾಕ್‌ನ ಮಾಧ್ಯಮಗಳು ವರದಿ ಮಾಡಿದ್ದವು.

ರಕ್ಷಣಾ ಸಚಿವರಿಂದ ಉನ್ನತ ಮಟ್ಟದ ಸಭೆ
ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ತಿಂಗಳಾಂತ್ಯದಲ್ಲಿ ಸಶಸ್ತ್ರ ಪಡೆಯೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಈ ವೇಳೆ, ಕೇರನ್ ವಲಯದಲ್ಲಿ ನಡೆದ 15 ದಿನಗಳ ಕಾರ್ಯಾಚರಣೆ ಬಗ್ಗೆ ಪರಿಶೀಲನೆಯನ್ನೂ ನಡೆಸಲಿದ್ದಾರೆ. 20-30 ಉಗ್ರರ ಗುಂಪಿನೊಂದಿಗೆ ಗುಂಡಿನ ಚಕಮಕಿ ನಡೆದು, 15 ದಿನಗಳೇ ಕಳೆದರೂ ಯಾರೊಬ್ಬರ ಮೃತದೇಹವೂ ಪತ್ತೆಯಾಗಿರದ ಬಗ್ಗೆ ಪ್ರಧಾನಿ ಮನಮೋಹನ್‌ಸಿಂಗ್ ಅಚ್ಚರಿ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಉನ್ನತ ಮಟ್ಟದ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಇದೇ ವೇಳೆ, ಗಡಿಯಲ್ಲಿ ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ ಆಗುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರದ ಮುಂಚೂಣಿ ಪ್ರದೇಶಗಳಿಗೆ ಗೃಹ ಸಚಿವ  ಶಿಂದೆ ಮಂಗಳವಾರ ಭೇಟಿ ನೀಡಲಿದ್ದಾರೆ.

ಕಾಶ್ಮೀರ  ವಿವಾದ ಪರಿಹಾರಕ್ಕೆ ಅಮೆರಿಕ ಮಧ್ಯಪ್ರವೇಶ ಮಾಡಲೇಬೇಕು. ಮುಂದಿನ ದಿನಗಳಲ್ಲಿ ಇದು ಅಪಾಯದ  ಮಟ್ಟಕ್ಕೆ ತಲುಪುವುದು ಖಂಡಿತ.
- ನವಾಜ್ ಷರೀಫ್,  ಪಾಕ್ ಪ್ರಧಾನಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.