ಮತ್ತಷ್ಟು 'ಅದಿರು'ತ್ತಿದೆ ಅಕ್ರಮ ವ್ಯವಹಾರ!
ಬಳ್ಳಾರಿ: ರಾಜ್ಯದಲ್ಲಿ ಅಕ್ರಮ ಅದಿರು ರಫ್ತು ಪ್ರಕರಣಗಳ ತನಿಖೆ ಮತ್ತಷ್ಟು ಬಿಗಿಗೊಳ್ಳಲಿದೆ. ಯಾಕೆಂದರೆ, ಇದುವರೆಗೂ ಸಿಬಿಐ ತನಿಖೆಯನ್ನು ನಡೆಸುತ್ತಿತ್ತು. ಆದರೀಗ, ಈ ಪ್ರಕರಣಗಳ ತನಿಖೆಯನ್ನು 'ಆರ್ಥಿಕ ಅಪರಾಧ ದಳ'(ಎಕಾನಿಮಿಕಲ್ ಅಫೆನ್ಸ್ ವಿಂಗ್-ಇಒಡಬ್ಲ್ಯೂ) ಕೈಗೊಳ್ಳಲಿದೆ. ಈ ಇಒಡಬ್ಲ್ಯೂ ಸಿಬಿಐನ ಅಂಗವಾಗಿದ್ದು, ಅಕ್ರಮದಲ್ಲಿ ಹಣದ ಪ್ರಮಾಣ ವಿಪರೀತವಿದ್ದರೆ ಅಂಥ ಪ್ರಕರಣಗಳ ತನಿಖೆ ನಡೆಸುತ್ತದೆ.
ಶೀಘ್ರದಲ್ಲಿಯೇ ಕರ್ನಾಟಕಕ್ಕೆ ಇಒಡಬ್ಲ್ಯು ಭೇಟಿ ನೀಡಲಿದ್ದು, ಈ ಎಲ್ಲ ಪ್ರಕರಣಗಳ ಮೇಲ್ನೋಟಕ್ಕೆ ಕೋಟ್ಯಂತರ ಹಣದ ವಹಿವಾಟು ನಡೆದಿರುವುದರಿಂದ ಸಿಬಿಐನ ಆರ್ಥಿಕ ಅಪರಾಧ ದಳದ ಅಗತ್ಯತೆಯನ್ನು ಮನಗಂಡಿರುವ ಸಿಬಿಐ ನಿರ್ದೇಶಕರಾದ ರಂಜಿತ್ ಸಿನ್ಹಾ ಶೀಘ್ರದಲ್ಲಿಯೇ ನುರಿತ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಾಜ್ಯಕ್ಕೆ ಕಳುಹಿಸಿಕೊಡಲಿದ್ದಾರೆ. ಈ ಮೂಲಕ ಸಿಬಿಐ ತನ್ನ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಿದೆ.
ಸಿಬಿಐನ ವಿಶೇಷ ತಂಡ ಅಕ್ರಮ ರಫ್ತಿನ ಕುರಿತಾಗಿ ತನಿಖೆ ಮಾಡಲು ರಾಜ್ಯಕ್ಕೆ ಆಗಮಿಸುತ್ತಿದೆ ಎಂಬ ಕುತೂಹಲವಿತ್ತು. ಸಿಬಿಐನಲ್ಲಿ ಹಲವು ದಳಗಳಿದ್ದು, ದೆಹಲಿ, ಮುಂಬೈ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರದಲ್ಲಿ ಮಾತ್ರ ವಿವಿಧ ವಿಂಗ್ಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯದಲ್ಲಿರುವ ಸಿಬಿಐ ಕಚೇರಿಯಲ್ಲಿ ಕೇವಲ 20 ಇನ್ಸ್ಪೆಕ್ಟರ್ಗಳು, ಒರ್ವ ಎಸ್ಪಿ, ಒಬ್ಬ ಡಿಐಜಿ ಇರುವುದರಿಂದ ಇಷ್ಟೊಂದು ತನಿಖೆಯನ್ನು ನಡೆಸಲು ಕಷ್ಟಸಾಧ್ಯವಾಗಿತ್ತು. ಅಲ್ಲದೆ, ಸುಪ್ರೀಂ ಕೋರ್ಟ್ ಆದೇಶದಂತೆ ಈಗಾಗಲೇ 50 ಸಾವಿರ ಟನ್ಗಿಂತ ಹೆಚ್ಚು ಅದಿರನ್ನು ಅಕ್ರಮವಾಗಿ ರಫ್ತು ಮಾಡಿರುವ ಕಂಪನಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗಿರುವ ಹೊಣೆಯನ್ನು ಇದೀಗ ಸಿಬಿಐನ ಇಒಡಬ್ಲ್ಯು ಕೈಗೆತ್ತಿಕೊಂಡು ಎಫ್ಐಆರ್ ದಾಖಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ಕಾರಣವೇನು?
ಕರ್ನಾಟಕದಲ್ಲಿ ಅಕ್ರಮವಾಗಿ ಹಾಗೂ ಇತ್ತೀಚಿಗೆ 7 ಬಂದರುಗಳ ಮೂಲಕ ಅಕ್ರಮ ಅದಿರು ರಫ್ತು ಮಾಡಿರುವ ಪ್ರಕರಣವನ್ನು ಸಚಿವ ಸಂಪುಟದ ಸಭೆ ಸಿಬಿಐಗೆ ವಹಿಸಿಕೊಡಲು ನಿರ್ಧರಿಸಿರುವುದರಿಂದ ಈ ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಮನಿ ಲ್ಯಾಂಡರಿಂಗ್, ಹವಾಲಾ, ತೆರಿಗೆ ವಂಚನೆ, ರಾಜಧನ ತೆರಿಗೆ ವಂಚನೆ, ಅಂಡರ್ ಇನ್ ವಾಯಿಸ್ ಮೂಲಕ ಅದಿರು ಮಾರಾಟ, ಬೇನಾಮಿ ಕಂಪನಿಗಳ ಮೂಲಕ ದೇಶ, ವಿದೇಶಗಳಲ್ಲಿ ಕಾರ್ಯನಿರ್ವಹಣೆ, ಅಕ್ರಮ ಸಂಪಾದನೆ ಮಾಡಿ ವಿದೇಶದಲ್ಲಿ ಹಣ ಸಂಗ್ರಹಿಸಿಟ್ಟಿರುವುದು, ಬಂಡವಾಳ ಹೂಡಿಕೆ, ಏಳು ಬಂದರ್ಗಳ ಮೂಲಕ 12,228.14 ಕೋಟಿ ಮೌಲ್ಯದ ಅದಿರು ರಫ್ತು ಮಾಡಿರುವುದರಿಂದ ಈ ಪ್ರಕರಣಗಳನ್ನು ಸಿಬಿಐ ಆರ್ಥಿಕ ಅಪರಾಧ ತನಿಖಾ ದಳ ಕೈಗೆತ್ತಿಕೊಂಡಿದೆ.
ಜಾರಿ ನಿರ್ದೇಶನಾಲಯಕ್ಕೆ ಸಹಕಾರಿ
ದೆಹಲಿ, ಮುಂಬೈ, ಚೆನ್ನೈನಲ್ಲಿರುವ ಸಿಬಿಐ ನುರಿತ ಅಧಿಕಾರಿಗಳು ಅಕ್ರಮ ಅದಿರು ರಫ್ತು ಕುರಿತಾದ ತನಿಖೆಯನ್ನು ಕೈಗೆತ್ತಿಕೊಳ್ಳಲಿದ್ದಾರೆ. ಶೀಘ್ರದಲ್ಲಿಯೇ ರಾಜ್ಯಕ್ಕೆ ಆಗಮಿಸಿರುವ ಆರ್ಥಿಕ ಅಪರಾಧ ದಳದ ನುರಿತ ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡು ಆರಂಭದಲ್ಲಿ 20 ಕಂಪನಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಲಿದ್ದಾರೆ. ಸ್ವಿಜರ್ಲೆಂಡ್, ಸಿಂಗಾಪುರ, ಮಾರೀಷಸ್, ದುಬೈ ಸೇರಿದಂತೆ ಇತರ ದೇಶಗಳಲ್ಲಿ ಕಂಪನಿಗಳು ತಮ್ಮ ವ್ಯವಹಾರಗಳನ್ನು ನಡೆಸುವುದರಿಂದ ಈ ಆರ್ಥಿಕ ಅಪರಾಧ ದಳಕ್ಕೆ ತನಿಖೆ ಸುಲಭವಾಗುತ್ತದೆ. ಇದೀಗ ನಡೆಸುತ್ತಿರುವ ಪ್ರಕರಣಗಳ ಕುರಿತಾಗಿ ಸಿಬಿಐ ದೋಷಾರೋಪಣ ಪಟ್ಟಿ ಸಲ್ಲಿಸಿದ ನಂತರ, ಈ ಕುರಿತಾಗಿ ಆರ್ಥಿಕ ಅಪರಾಧ ದಳ ತನಿಖೆ ನಡೆಸುವುದರಿಂದರಿಂದ ಮುಂದೆ ಜಾರಿ ನಿರ್ದೇಶನಾಲಯದ ತನಿಖೆಗೆ ಸಹಕಾರಿಯಾಗಲಿದೆ ಎಂದೇ ಹೇಳಲಾಗುತ್ತಿದೆ.
ತನಿಖೆ ಮತ್ತಷ್ಟು ಚುರುಕು
ಈಗಾಗಲೇ ಸಿಬಿಐ ಡಿಐಜಿ ಹಿತೇಂದ್ರ, ಎಸ್ಪಿ ಸುಬ್ರಮಣ್ಯೇಶ್ವರ ರಾವ್ ತಂಡವು ಎಎಂಸಿ, ಡಿಎಂಎಸ್, ಬೇಲೆಕೇರಿ ಅದಿರು ಪ್ರಕರಣದ ತನಿಖೆ ನಡೆಸುತ್ತಿದ್ದು, ಈಗಾಗಲೇ ಗಣಿ ವಲಯದ ಗಣಿ ಮಾಲೀಕರು, ಟ್ರಾನ್ಸ್ಪೋರ್ಟ್, ಎಕ್ಸ್ಪೋರ್ಟ್ ಸೇರಿದಂತೆ ಅವರಿಗೆ ಸಹಕರಿಸಿದ ಜನರನ್ನು ಬೆನ್ನಟ್ಟಿ ತನಿಖೆ ಮಾಡಿ, ಜೈಲು ಕಂಬಿ ಎಣಿಸುವಂತೆ ಮಾಡಿದೆ. ಇದೀಗ ಸಿಬಿಐನ ಆರ್ಥಿಕ ಅಪರಾಧ ತಂಡದಲ್ಲಿ ನುರಿತ ಅಧಿಕಾರಿಗಳು ಇರುವುದರಿಂದ ಇನ್ಮುಂದೆ ತನಿಖೆ ಮತ್ತಷ್ಟು ಚುರುಕುಗೊಂಡು, ತನಿಖೆಯ ವಿಸ್ತಾರ, ಆಳ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇದರಿಂದಾಗಿ ಗಣಿ ವಲಯ ಮತ್ತಷ್ಟು ಸಂಕಷ್ಟ ಎದುರಿಸುವಲ್ಲಿ ಎರಡು ಮಾತಿಲ್ಲ.
-ಶಶಿಧರ ಮೇಟಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

