ಪ್ರಧಾನ ಸುದ್ದಿ

ಪ್ರತಿ ಜಿಲ್ಲೆಯಲ್ಲೂ ಪುಸ್ತಕ ಪರಿಷೆ 'ಸೃಷ್ಟಿ'

Published On :

ಬೆಂಗಳೂರು: ಪುಸ್ತಕ ಪ್ರೇಮಿಗಳ, ಸಾಹಿತ್ಯಾಸಕ್ತರ ಪುಸ್ತಕ ಪರಿಷೆ ಸಿಲಿಕಾನ್ ಸಿಟಿಯಲ್ಲಿ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆಯಲಿದೆ.
ಪ್ರತಿ ಜಿಲ್ಲೆಯಲ್ಲೂ ಒಂದೊಂದು ದಿನ ಪುಸ್ತಕ ಪರಿಷೆ ನಡೆಸುವ ಮೂಲಕ ಪುಸ್ತಕ ಪ್ರಿಯರಿಗೆ, ಸಾಹಿತ್ಯಾಸಕ್ತರಿಗೆ ಪುಸ್ತಕಗಳನ್ನು ಒದಗಿಸುವ ನಿಟ್ಟಿನಲ್ಲಿ ಸೃಷ್ಟಿ ವೆಂಚರ್ಸ್ ಮುಂದಾಗಿದೆ.
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಪುಸ್ತಕ ಪರಿಷೆ ನಡೆಸುವ ಬಗ್ಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ತಿಂಗಳ ಹಿಂದೆಯೇ ಪತ್ರ ಬರೆದು, ಪರಿಷೆಗೆ ಅವಕಾಶ ಕಲ್ಪಿಸಿ ಸಹಕರಿಸುವಂತೆ ಕೋರಿದೆ. ಆದರೆ, ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿ ಹೊರತುಪಡಿಸಿ ಬೇರೆ ಜಿಲ್ಲೆಯ ಜಿಲ್ಲಾಧಿಕಾರಿಗಳು ಇದುವರೆಗೂ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಹಾಗಾಗಿ, ಸೃಷ್ಟಿ ವೆಂಚರ್ಸ್ ಅವರ ಉತ್ತರದ ನಿರೀಕ್ಷೆಯಲ್ಲಿದೆ. ಅಧಿಕಾರಿಗಳಿಂದ ಉತ್ತರ ಬಂದ ನಂತರ ಅಲ್ಲಿಗೆ ಹೋಗಿ ಮಾತುಕತೆ ನಡೆಸಿ, ಪರಿಷೆಯ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಸೃಷ್ಟಿ ವೆಂಚರ್ಸ್‌ನ ಅಧ್ಯಕ್ಷರು 'ಕನ್ನಡ ಪ್ರಭ'ಕ್ಕೆ ತಿಳಿಸಿದರು.
ಬೆಂಗಳೂರಿಗೆ ಕಷ್ಟ: ಒಂದು ಪುಸ್ತಕಕ್ಕಾಗಿ ದೂರದ ಊರಿನವರು ಬೆಂಗಳೂರಿಗೆ ಬರುವುದು ಕಷ್ಟ. ಆದ್ದರಿಂದ ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಗಳಲ್ಲಿ ಪರಿಷೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿದೆ. ಪುಸ್ತಕ ಕೊಂಡು ಹೋದವರು, ಉಳ್ಳವರು ಸಾಕಷ್ಟು ಪುಸ್ತಕ ನೀಡುತ್ತಾರೆ. ಆ ಪುಸ್ತಕಗಳನ್ನು ಹಾಗೆಯೇ ಇಟ್ಟು ಬೀಗ ಹಾಕುವ ಬದಲು ಆಸಕ್ತರು ಉಪಯೋಗಿಸಿಕೊಳ್ಳಲಿ ಎಂಬುದು ಇದರ ಮತ್ತೊಂದು ಉದ್ದೇಶ.
ಒಂದಕ್ಕಿಂತ ಹೆಚ್ಚು ಪುಸ್ತಕ: ಪುಸ್ತಕ ಪರಿಷೆ ಆರಂಭವಾಗಿ ಆರು ವರ್ಷ ಕಳೆದಿವೆ. ಆದರೆ, ಪ್ರತಿವರ್ಷವೂ ಪುಸ್ತಕ ಪರಿಷೆಗೆ ಬರುವ ಪುಸ್ತಕ ಪ್ರೇಮಿಗಳಿಗೆ ಒಬ್ಬರಿಗೆ ಒಂದು ಪುಸ್ತಕ ಮಾತ್ರ ಕೊಡುವ ವ್ಯವಸ್ಥೆ ಅನುಸರಿಸಲಾಗುತ್ತಿದೆ.
ಒಂದು ಪುಸ್ತಕದ ಬದಲು ಕೊನೆಪಕ್ಷ ಎರಡು ಪುಸ್ತಕ ಕೊಡಿ ಎಂಬ ಒತ್ತಡ ಪುಸ್ತಕ ಪ್ರೇಮಿಗಳಿಂದ ಹೆಚ್ಚುತ್ತಿದೆ. ಪುಸ್ತಕದ ಕೊರತೆ ಇರುವ ಕಾರಣ ಅಲ್ಲದೆ ಒಬ್ಬರಿಗೆ ಬೇಕಾದ ಪುಸ್ತಕ ಮತ್ತೊಬ್ಬರಿಗೆ ಬೇಕಾಗಿರುತ್ತದೆ. ಹಾಗಾಗಿ ಒಂದು ಪುಸ್ತಕ ನೀಡಲಾಗುತ್ತಿದೆ. ಮುಂದಿನ ವರ್ಷ ನಡೆಯುವ ಪುಸ್ತಕ ಪರಿಷೆಯಲ್ಲಿ 40 ಲಕ್ಷ ಪುಸ್ತಕ ಇಡಲಾಗುವುದು. ಆಗ ಒಬ್ಬರಿಗೆ ಒಂದಕ್ಕಿಂತ ಹೆಚ್ಚು ಪುಸ್ತಕ ನೀಡುವ ಬಗ್ಗೆ ಚಿಂತಿಸಲಾಗಿದೆ.
ವಿದ್ಯಾರ್ಥಿಗಳಿಗೆ ಅಗತ್ಯವಿರುವ ಪುಸ್ತಕಗಳು ಪರಿಷೆಯಲ್ಲಿ ಲಭ್ಯ. ಆದರೆ, ಅವರಿಗೆ ಒಂದಕ್ಕಿಂತ ಹೆಚ್ಚು ಕೊಳ್ಳುವ ಸಹಜ ಆಸೆ ಇರುತ್ತದೆ. ಹಾಗಾಗಿ ಕಳೆದ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕವಾಗಿ ವಿದ್ಯಾರ್ಥಿ ಪುಸ್ತಕ ಪರಿಷೆ ಆಯೋಜಿಸಲಾಗುತ್ತದೆ. ಡಿಸೆಂಬರ್ ತಿಂಗಳಲ್ಲಿ ಈ ಪರಿಷೆ ನಡೆಯಲಿದೆ.

ಬೇರೆ ಊರಿನಲ್ಲಿರುವ ಸಾಹಿತ್ಯಾಸಕ್ತರು, ಪುಸ್ತಕ ಪ್ರೇಮಿಗಳು ಬೆಂಗಳೂರಿಗೆ ಬಂದು ಪುಸ್ತಕ ಪರಿಷೆಯಲ್ಲಿ ಭಾಗವಹಿಸಲು ಆಗುವುದಿಲ್ಲ. ಹಾಗಾಗಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪುಸ್ತಕ ಪರಿಷೆ ಮಾಡಲು ನಿರ್ಧರಿಸಲಾಗಿದೆ.
- ನಾಗರಾಜ್ ನಾವುಂದ, ಸೃಷ್ಟಿ ವೆಂಚರ್ಸ್‌ನ ಮುಖ್ಯಸ್ಥ

 ಶಾಂತ ತಮ್ಮಯ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.