ಪ್ರಧಾನ ಸುದ್ದಿ

ಸರ್ದಾರಿಕೆ

ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಮಾರಕ ಮ್ಯೂಸಿಯಂ ಉದ್ಘಾಟನೆಯಲ್ಲಿ...

ಸರ್ದಾರಿಕೆ
Published On :

ಅಹ್ಮದಾಬಾದ್ : ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಸ್ಮಾರಕ ಮ್ಯೂಸಿಯಂ ಉದ್ಘಾಟನೆಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಭಾಗವಹಿಸಿದ್ದರು. ಅಹಮದಾಬಾದ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮತ್ತು ಮೋದಿ ಪಟೇಲ್ ಬಗ್ಗೆ ಪರೋಕ್ಷ ವಾಕ್ಸಮರ ನಡೆಸಿದರು.

ಸರ್ದಾರ್ ಆಗ್ಬೇಕಿತ್ತು
ದೇಶದ ಮೊದಲ ಪ್ರಧಾನಿಯಾಗಿ ಜವಾಹರ್‌ಲಾಲ್ ನೆಹರೂ ಬದಲಿಗೆ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರೇ ಅಧಿಕಾರ ವಹಿಸಿರುತ್ತಿದ್ದರೆ ಭಾರತದ ಪರಿಸ್ಥಿತಿಯೇ ಬದಲಾಗುತ್ತಿತ್ತು ಎಂದು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಮೊದಲ ಪ್ರಧಾನಿ ನೆಹರೂ ಅವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.
ಸರ್ದಾರ್ ಪಟೇಲ್ ಅವರು ಕೇಂದ್ರ ಗೃಹ ಸಚಿವರಾಗಿ ದೇಶವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜತೆಗೆ ಅವರು ಜಾತ್ಯತೀತ ವ್ಯಕ್ತಿಯಾಗಿದ್ದರು ಎಂದು ಮೋದಿ ಕೊಂಡಾಡಿದ್ದಾರೆ.
ಮಹಿಳೆಯರಿಗೆ ವಿಧಾನಸಭೆ ಮತ್ತು ಸಂಸತ್‌ನಲ್ಲಿ ಮೂರನೇ ಒಂದರಷ್ಟು ಸ್ಥಾನಗಳನ್ನು ಮೀಸಲಿಡಬೇಕು ಎಂದು ನಾವು ಈಗ ಹೋರಾಟ ನಡೆಸುತ್ತಿದ್ದೇವೆ. ಆದರೆ 1926ರಲ್ಲಿ ಪಟೇಲ್ ಅವರು  ಈ ಬಗ್ಗೆ ಕನಸು ಕಂಡಿದ್ದರು ಮತ್ತು ಅಹಮದಾಬಾದ್‌ನಲ್ಲಿ ಕೌನ್ಸಿಲರ್ ಆಗಿದ್ದಾಗ ಅದು ಜಾರಿಗೆ ಬರುವಂತೆ ಮಾಡಿದ್ದರು. ಈ ಮೂಲಕ ಅವರು ದೂರದೃಷ್ಟಿಯನ್ನು ಹೊಂದಿದ್ದರು ಎಂದು ಮೋದಿ ಪಟೇಲ್ ಅವರನ್ನು ಕೊಂಡಾಡಿದರು.
 ದೇಶದ ಸಮಗ್ರತೆ ಮತ್ತು ಐಕ್ಯತೆಗೆ ಧಕ್ಕೆ ಇದೆ ಎಂದ ಮೋದಿ, ಭಯೋತ್ಪಾದಕರು ಮತ್ತು ನಕ್ಸಲೀಯರು ದೇಶದ ಸಮಗ್ರತೆಗೆ ಅಡ್ಡಿಯಾಗಿದ್ದಾರೆ ಎಂದು ನರೇಂದ್ರ ಮೋದಿ ಪ್ರತಿಪಾದಿಸಿದರು. ಹಿಂಸಾಕೃತ್ಯದಲ್ಲಿ ತೊಡಗಿದವರಿಗೆ ಯಶಸ್ಸು ಸಿಕ್ಕದು ಎನ್ನುವುದಕ್ಕೆ ಪಂಜಾಬ್ ಉದಾಹರಣೆ ಎಂದರು ಮೋದಿ.

ಸಿಂಗ್ ಟಾಂಗ್
ದೇಶದ ಮೊದಲ ಪ್ರಧಾನಿ ನೆಹರೂ ಮತ್ತು ಸರ್ದಾರ್ ಪಟೇಲ್ ಉತ್ತಮ ಸಂಬಂಧವನ್ನೇ ಹೊಂದಿದ್ದರು. ಹೆಚ್ಚಿನ ಸಂದರ್ಭಗಳಲ್ಲಿ ಅವರಿಬ್ಬರು ಪರಸ್ಪರ ಅಭಿಪ್ರಾಯಗಳನ್ನು ಗೌರವಿಸುತ್ತಿದ್ದರು ಎಂದು ಮನಮೋಹನ್ ಸಿಂಗ್ ಹೇಳುವ ಮೂಲಕ ಪ್ರಧಾನಿ ಸಿಂಗ್ ವೇದಿಕೆಯಲ್ಲೇ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದರು.
ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅಪ್ಪಟ ಕಾಂಗ್ರೆಸಿಗರಾಗಿದ್ದರು. ಅವರು ಜಾತ್ಯತೀತವಾದಿ, ಉದಾರ ನೀತಿ ಹೊಂದಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಇತರ ಸಿದ್ಧಾಂತವಾದಿಗಳ ಬಗ್ಗೆ ಗೌರವ ಹೊಂದಿದ್ದರು ಎಂದು ಬಲವಾಗಿ ವಾದಿಸಿದ್ದಾರೆ. ಇಂಥ ಮಹಾನ್ ನಾಯಕ ಇದ್ದ ಪಕ್ಷದಲ್ಲೇ ತಾವು ಇರುವುದು ಹೆಮ್ಮೆ ಎಂದು ಮನಮೋಹನ್ ಸಿಂಗ್ ಹೇಳಿಕೊಂಡರು.
ಮಹಾತ್ಮಾ ಗಾಂಧಿ, ನೆಹರೂ ಮತ್ತು ಸರ್ದಾರ್ ಪಟೇಲ್ ಅವರು ಪಕ್ಷದ ನಾಯಕರಾಗಿದ್ದರು. ಕಾಂಗ್ರೆಸ್‌ನ ಮಹಾನ್ ನಾಯಕರಾಗಿದ್ದ ಪಟೇಲ್ ಕರಾಚಿಯಲ್ಲಿ ಆಯೋಜಿಸಲಾಗಿದ್ದ ಪಕ್ಷದ ಅಧಿವೇಶನದ ನೇತೃತ್ವ ವಹಿಸಿಕೊಂಡಿದ್ದರು. ಪಟೇಲ್ ಆದರ್ಶಗಳ ಬಗ್ಗೆ ದೇಶದ ಯುವಜನತೆಯಲ್ಲಿ ಹೆಚ್ಚಿನ ಅರಿವು ಮೂಡಿಸುವುದು ಸದ್ಯದ ಅಗತ್ಯವಾಗಿದೆ ಎಂದರು
ಈ ಕಾರ್ಯಕ್ರಮದಲ್ಲಿ ಹಾಜರಿರುವ ಎಲ್ಲರೂ ಸದ್ಯದ ಪರಿಸ್ಥಿತಿಯಲ್ಲಿ ಪಟೇಲ್ ಅವರ ಆದರ್ಶಗಳನ್ನು ಅಗತ್ಯವಾಗಿ ಪಾಲನೆ ಮಾಡುವ ಅಗತ್ಯವಿದೆ ಎನ್ನುವುದನ್ನು ಒಪ್ಪುವ ವಿಶ್ವಾಸ ತಮಗಿದೆ ಎಂದು ಪ್ರಧಾನಿ ತಿಳಿಸಿದರು.

ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಕೊಂದದ್ದು ಆರ್‌ಎಸ್‌ಎಸ್ ಎಂಬ ವಿಷ ಬೀಜ ಎಂದು ಪಟೇಲ್ ಹೇಳಿದ್ದು ಬಿಜೆಪಿಗೆ ನೆನಪಿದೆಯೇ? ದೇಶದ ಮೊದಲ ಗೃಹಸಚಿವರೇ ಆ ಸಂಘಟನೆಯನ್ನು ನಿಷೇಧಿಸಿದ್ದರು ಎಂಬ ವಿಚಾರ ಆ ಪಕ್ಷದ ನಾಯಕರಿಗೆ ತಿಳಿದಿರಲಿ. ಕಳೆದ ಕೆಲ ತಿಂಗಳಿಂದ ಬಿಜೆಪಿ ನಾಯಕರು ಪಟೇಲ್ ಅವರನ್ನು ನಮ್ಮವರು ಎಂದು ಹೇಳಿಕೊಳ್ಳುತ್ತಿದ್ದಾರೆ.
- ಸಲ್ಮಾನ್ ಖುರ್ಷಿದ್, ಕೇಂದ್ರ ವಿದೇಶಾಂಗ ಸಚಿವ

ಸರ್ದಾರ್ ಪಟೇಲ್ ಇಡೀ ದೇಶದ ನಾಯಕರು ಎನ್ನುವುದನ್ನು ಎಲ್ಲರೂ ಗಮನಿಸಬೇಕು. ಕಾಂಗ್ರೆಸ್ ನಾಯಕರು ಪಟೇಲ್ ಅವರ ಎಲ್ಲ ಧೋರಣೆಗಳನ್ನು, ವಿಚಾರಧಾರೆಯನ್ನು ಒಪ್ಪುತ್ತಾರೆಯೇ ಎಂಬುದನ್ನು ಮೊದಲು ಬಹಿರಂಗವಾಗಿ ಹೇಳಿಕೊಳ್ಳಲಿ.
- ರಾಮ್ ಮಾಧವ್,  ಆರ್‌ಎಸ್‌ಎಸ್ ಮುಖಂಡ

ಸರ್ದಾರ್ ಪಟೇಲ್ ಅವರನ್ನು ನಮ್ಮವರು ಎಂದು ಹೇಳಲು ಬಿಜೆಪಿ ನಾಯಕರಿಗೆ ಯಾವುದೇ ಹಕ್ಕಿಲ್ಲ. ಅವರು ಯಾವತ್ತಿದ್ದರೂ ನಮ್ಮ ಪಕ್ಷದ ನಾಯಕರು. ಒಂದು ವೇಳೆ ಅವರು ಅಂಥ ವಿಚಾರ ಹೊಂದಿದ್ದರೆ ಅದನ್ನು ಬಿಟ್ಟುಬಿಡುವುದು ಉತ್ತಮ.
- ಪಿ.ಸಿ.ಚಾಕೋ, ಕಾಂಗ್ರೆಸ್ ನಾಯಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.