ಪ್ರಧಾನ ಸುದ್ದಿ

ಮೊದಲ ರಾಷ್ಟ್ರಕವಿ ಊರಲ್ಲಿ ರಾಜ್ಯೋತ್ಸವವೇ ಇಲ್ಲ!

Published On :

ಮಂಗಳೂರು: ನವೆಂಬರ್‌ನಲ್ಲಿ ಕರ್ನಾಟಕದೆಲ್ಲೆಡೆ ರಾಜ್ಯೋತ್ಸವ ಸಂಭ್ರಮಾಚರಣೆ ನಡೆದರೆ ಕರ್ನಾಟಕದ ಮೊಟ್ಟ ಮೊದಲ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈಗಳ ಮನೆ, ಊರಲ್ಲಿ ಮಾತ್ರ ರಾಜ್ಯೋತ್ಸವ ಸಂಭ್ರಮ, ಕನ್ನಡ ಕಲವರವ ಕೇಳುವುದೇ ಇಲ್ಲ.
ಬಹುಭಾಷಾ ವಿದ್ವಾಂಸ, ಸಂಶೋಧಕ ಗೋವಿಂದ ಪೈಗಳ ಜೀವಿತ ಕಾಲದಲ್ಲಿ ಮಂಜೇಶ್ವರ ಮನೆ ಕನ್ನಡಕ್ಕೆ ಸ್ಫೂರ್ತಿ ಚಿಲುಮೆಯಾಗಿತ್ತು. ಕನ್ನಡ ಸಂಶೋಧನೆ, ಸಾಧನೆಗಳಿಗೆ ಮುಕುಟಪ್ರಾಯವಾಗಿತ್ತು. ಸಾಹಿತಿಯೂ ಆಗಿರುವ ಕೇಂದ್ರ ಇಂಧನ ಸಚಿವ ಎಂ.ವೀರಪ್ಪ ಮೊಯ್ಲಿ ಎಳವೆಯಲ್ಲಿ ನಾಟಕ ಕೃತಿಗಳನ್ನು ಕೇಳಿ ಪಡೆಯಲು ಇದೇ ಮಂಜೇಶ್ವರ ಗೋವಿಂದ ಪೈಗಳ ಮನೆಗೆ ಬರುತ್ತಿದ್ದರು. ಅಲ್ಲಿ ಪೈಗಳಿಂದ ಸಾಹಿತ್ಯ ಪಾಠ ಕೇಳುತ್ತಿದ್ದರು.
ಪೈಗಳ ನಿಧನ ಮತ್ತು ಕಾಸರಗೋಡು ಕೇರಳಕ್ಕೆ ಸೇರಿದ ಮೇಲೆ ಕ್ರಮೇಣ ಕನ್ನಡ ಚಟುವಟಿಕೆಗಳು ಕ್ಷೀಣವಾದವು. ಮನೆಯನ್ನು ವಾರಸುದಾರರು ಕೇರಳ ಸರ್ಕಾರಕ್ಕೆ ಹಸ್ತಾಂತರಿಸಿದ ಬಳಿಕ ಭೂಮಾಪಕರ ಸರ್ಕಾರಿ ಕಚೇರಿಯಾಗಿ ಪರಿವರ್ತನೆಯಾಗಿ ಕೆಲವು ವರ್ಷ ಮಲೆಯಾಳಿಗಳ ಅಬ್ಬರ ನಡೆದಿತ್ತು. ಕನ್ನಡ ಪರ ಹೋರಾಟಗಾರರು ಆಗೊಮ್ಮೆ ಈಗೊಮ್ಮೆ ಕನ್ನಡ ಸಾಹಿತ್ಯ ಪರಿಷತ್‌ಗೆ, ಕೇಂದ್ರ ಸಚಿವ ವೀರಪ್ಪ ಮೊಯ್ಲಿಯವರಿಗೆ ಆಗಾಗ ನೆನಪಿನ ಓಲೆ ನೀಡುತ್ತಿದ್ದರು. ಜೂನ್‌ನಲ್ಲಿ ಗಿಳಿವಿಂಡು ಯೋಜನೆ ಚಾಲನೆ ನೀಡುವ ಸಮಾರಂಭದಲ್ಲಿ ಕನ್ನಡದ ಕಟ್ಟಾಳಿನ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಲೆಯಾಳಿ ಮತ್ತು ಇಂಗ್ಲಿಷ್ ಅಬ್ಬರವೇ ಹೆಚ್ಚಿತ್ತು!

ಜಿಲ್ಲಾಧಿಕಾರಿಗೆ ಸೂಚನೆ:
ಕಾರ್ಯಕ್ರಮದಲ್ಲಿ ವೀರಪ್ಪ ಮೊಯ್ಲಿಯವರು ಕಾಸರಗೋಡ್ ಕಲೆಕ್ಟರ್ (ಜಿಲ್ಲಾಧಿಕಾರಿ)ರನ್ನು ಎದುರು ಕುಳ್ಳಿರಿಸಿಕೊಂಡು ಕನ್ನಡ ಸಾಹಿತ್ಯ ಕಾರ್ಯಕ್ರಮ, ಕಾರ್ಯಾಗಾರ ನಡೆಸುವಂತೆ ಹೇಳಿದ್ದರು. ನವೆಂಬರ್‌ನಲ್ಲಿ ಕನ್ನಡ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಿದ್ದರು. ಕನ್ನಡ ಪರ ಕೆಲಸ ಮಾಡುವ ಡಾ. ರಮಾನಂದ ಬಾಯರಿ ಅವರನ್ನು ಮುಂದಿಟ್ಟುಕೊಂಡು ಕಾರ್ಯಕ್ರಮ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು.
ಈ ಬಗ್ಗೆ ಡಾ.ಬಾಯರಿ ಹೇಳುವುದು ಹೀಗೆ, 'ಕೇಂದ್ರ ಸಚಿವರ ಸೂಚನೆ ಹಿನ್ನೆಲೆಯಲ್ಲಿ ಒಮ್ಮೆ ಜಿಲ್ಲಾಧಿಕಾರಿಗೆ ಕರೆ ಮಾಡಿ ಚರ್ಚಿಸಿದ್ದರು. ಬಳಿಕ ನಾನು ಅನೇಕ ಬಾರಿ ಕರೆ ಮಾಡಿ ವಿಚಾರಿಸಿದರೆ ಸೂಕ್ತ ಸ್ಪಂದನೆ ದೊರೆತಿಲ್ಲ. ಇತ್ತೀಚೆಗೆ ವಿಚಾರಿಸಿದಾಗ ಗೋವಿಂದ ಪೈಗಳ ಕುರಿತ ಕೈಪಿಡಿ ಮಾಡುತ್ತಿದ್ದೇವೆ ಸಹಕರಿಸಬೇಕು ಎಂದು ಕೇಳಿಕೊಂಡಿದ್ದರು. ಜಿಲ್ಲಾಧಿಕಾರಿಗೆ ಇದ್ದ ಉಮೇದು ಕೆಳ ಹಂತದ ಅಧಿಕಾರಿಗಳಿಗೆ ಇಲ್ಲ' ಎನ್ನುತ್ತಾರೆ.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಇದುವರೆಗೆ ನಿಗದಿಯಾದ ಮಾಹಿತಿ ಇಲ್ಲ. ರಾಷ್ಟ್ರಕವಿ ಗೋವಿಂದ ಪೈಗಳ ಮನೆ ದುರಸ್ತಿ, ತೇಪೆ ಕಾರ್ಯ ಆವರಣಗೋಡೆ ರಚನೆ ಮತ್ತು ಸಭಾಭವನ ನಿರ್ಮಾಣಕ್ಕೆ ಚಾಲನೆ ನೀಡುವ ಕಾರ್ಯಕ್ರಮ ನಡೆಯಲಿದೆ.
ಇದಕ್ಕೆ ಅ.27ರಂದು ದಿನ ನಿಗದಿಯಾಗಿತ್ತು. ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿವರಿಗೆ ಪುರುಸೊತ್ತು ಇಲ್ಲದ ಕಾರಣ ನ.8ಕ್ಕೆ ಮುಂದೂಡಲಾಗಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಟ್ರಸ್ಟ್‌ನ ಕಾರ್ಯದರ್ಶಿ ಎಂ.ಜೆ. ಕಿಣಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

- ಜಿತೇಂದ್ರ ಕುಂದೇಶ್ವರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.