ಒಮನ್ನಲ್ಲಿ ಮೋಸ, ಮಂಗಳೂರಲ್ಲಿ ವಿಲಾಸ!
ದುಬೈ/ಮಂಗಳೂರು: ಹಳ್ಳಕ್ಕೆ ಬೀಳುವವರು ಇರುವವರೆಗೂ ಬೀಳಿಸುವವರು ಇರುತ್ತಾರೆ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಕರ್ನಾಟಕದ ಉರ್ವ ಮೂಲದ ಮಹಿಳೆಯೊಬ್ಬಳು ದುಬೈಗೆ ತೆರಳಿ ಅಲ್ಲಿನ ಜನರಿಗೆ ಕೋಟ್ಯಂತರ ರು. ಪಂಗನಾಮ ಹಾಕಿ ಈಗ ಮಂಗಳೂರಿನಲ್ಲಿ ಮಜಾ ಮಾಡುತ್ತಿದ್ದಾಳೆ.
ಹೌದು. ಈ ವಿನಿತಾ ಕ್ರಾಸ್ತಾ ಎಂಬುವಳೇ ಈ ವಂಚಕಿ. ಈಕೆಯ ವಿರುದ್ಧ ಒಮನ್ನಲ್ಲಿರುವ ಭಾರತೀಯ ಹೂಡಿಕೆದಾರರು ಕೋರ್ಟ್ ಮೆಟ್ಟಿಲೇರಿದ್ದಾರೆ. ತಾನು ಭಾರತದ ಹಲವು ಪ್ರಾಜೆಕ್ಟ್ಗಳನ್ನು ಮಾಡಿದ್ದೇನೆ ಎಂದು ಹೇಳುತ್ತಾ ಸಚಿವಾಲಯದ ನಕಲಿ ದಾಖಲೆಗಳನ್ನು ತೋರಿಸಿ ಎಲ್ಲರನ್ನು ಈಕೆ ಮರಳು ಮಾಡಿದ್ದಳು. ನನ್ನಲ್ಲಿ ಹಣ ಹೂಡಿಕೆ ಮಾಡಿದರೆ, ಅದಕ್ಕೆ ಪ್ರತಿ ತಿಂಗಳು ಬಡ್ಡಿ ನೀಡುವುದಾಗಿಯೂ ಹೇಳಿದ್ದಳು. ಅದರಂತೆ ಹಲವರು ಆಕೆಗೆ ಹಣ ನೀಡಿದ್ದರು. ಮೊದ ಮೊದಲು ಕೆಲ ತಿಂಗಳ ಕಾಲ ಬಡ್ಡಿ ನೀಡಿದ್ದ ಆಕೆ ಬಳಿಕ ಅಲ್ಲಿಂದ ದಿಢೀರನೆ ನಾಪತ್ತೆಯಾಗಿದ್ದಾಳೆ. ಮೇ ತಿಂಗಳಲ್ಲಿ ಸುಮಾರು 66 ಕೋಟಿ ಹಿಡಿದುಕೊಂಡು ತವರಿಗೆ ಬಂದಿದ್ದಾಳೆ. ಈಕೆಯ ಸುಳಿವು ಸಿಗದ ಕಾರಣ ಮೋಸಹೋದವರೆಲ್ಲ ಒಟ್ಟು ಸೇರಿ ಒಮನ್ ಪೊಲೀಸರಿಗೆ ದೂರು ನೀಡಿದಾಗಲೇ ಆಕೆ ಮಂಗಳೂರಿಗೆ ಹೋಗಿರುವುದು ಗೊತ್ತಾಗಿದ್ದು.
ಒಮನ್ನ ಶಾಲೆಯ ಪ್ರತಿ ಸಭೆಗೂ, ಚರ್ಚ್ಗೂ ಆಕೆ ತಪ್ಪದೇ ಭೇಟಿ ನೀಡುತ್ತಿದ್ದಳು. ಜನರ ಜತೆ ಸಂಪರ್ಕ ಬೆಳೆಸಲೆಂದೇ ಅವಳು ಈ ತಂತ್ರ ಹೂಡಿದ್ದಳು. ಹೀಗಾಗಿ ಆಕೆಯನ್ನು ಎಲ್ಲರೂ ನಂಬಿದ್ದರು. ಆದರೆ ಅವಳು ಮೋಸ ಮಾಡುತ್ತಾಳೆಂದು ನಾವು ಯೋಚಿಸಿಯೇ ಇರಲಿಲ್ಲ ಎನ್ನುತ್ತಾರೆ 62 ಲಕ್ಷ ಕಳೆದುಕೊಂಡಿರುವ ಹೂಡಿಕೆದಾರರೊಬ್ಬರ ಪತ್ನಿ.
ಈಗಾಗಲೇ ಒಂದು ಪ್ರಕರಣದಲ್ಲಿ ನಮಗೆ ಗೆಲವಾಗಿದೆ. ಹಾಗಾಗಿ ಆಕೆಯ ವಿರುದ್ಧ ಇನ್ನೂ ಹಲವು ಪ್ರಕರಣಗಳನ್ನು ದಾಖಲಿಸಲು ಮುಂದಾಗಿದ್ದೇವೆ. ಆಕೆಯನ್ನು ಪತ್ತೆಹಚ್ಚಿ, ಬಂಧಿಸಿ ಜೈಲಿಗೆ ಕಳುಹಿಸುವವರೆಗೂ ಸಮಾಧಾನವಿಲ್ಲ ಎಂದು ಆಕ್ರೋಶಭರಿತ ಮಾತುಗಳನ್ನಾಡುತ್ತಾರೆ ಹಣ ನೀಡಿ ವಂಚನೆಗೆ ಒಳಗಾದವರು.
ಉರ್ವ ಠಾಣೆಗೆ ದೂರು ಬಂದಿತ್ತು!
ಒಮನ್ನಲ್ಲಿ ಮೋಸ ಮಾಡಿದ ವಂಚಕಿ ಉರ್ವದವಳೇ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಈಕೆ ವಂಚಿಸಿರುವುದು ಒಮನ್ನಲ್ಲಿರುವ ಮಂಗಳೂರಿನ ಮೂಲದವರಿಗೇ ಎಂದಿರುವ ಉರ್ವ ಪೊಲೀಸರು, ಈಕೆ ವಿರುದ್ಧ 3 ತಿಂಗಳ ಹಿಂದೆ ದೂರು ದಾಖಲಿಸಲು ವ್ಯಕ್ತಿಯೊಬ್ಬರು ಬಂದಿದ್ದರು ಎಂದಿದ್ದಾರೆ.
ಉರ್ವದ ಈಕೆ ಚಿಕ್ಕ ವಯಸ್ಸಿನಲ್ಲೇ ವಿದೇಶಕ್ಕೆ ಹೋಗಿದ್ದ ಇವಳು ಮದುವೆಯಾಗಿದ್ದರೂ ಕೂಡ ಒಮನ್ ನಿವಾಸಿಯೊಬ್ಬನ ಜೊತೆ ವಾಸಿಸುತ್ತಿದ್ದಳು. ಪ್ರತಿ ಬಾರಿ ಠೇವಣಿ ಸಂಗ್ರಹಿಸುವಾಗಲೂ ತನ್ನ ಮಗನ ಜೊತೆ ಬರುತ್ತಿದ್ದಳಂತೆ. ಮಾತಿನ ಮೋಡಿಯಿಂದಲೇಬಲೆಗೆ ಬೀಳಿಸುತ್ತಿದ್ದ ಈಕೆ, ಮಧ್ಯವರ್ತಿಗಳಿಗೆ ಹೆಚ್ಚಿನ ಕಮಿಷನ್ ನೀಡುತ್ತಿದ್ದಳು ಎಂದು ಹೆಸರು ಹೇಳಲಿಚ್ಚಿಸದ ಸ್ಥಳೀಯರೊಬ್ಬರು 'ಕನ್ನಡಪ್ರಭ'ಕ್ಕೆ ಹೇಳಿದ್ದಾರೆ.
'ವಿನಿತಾ ಮರಿಯಾ ಕ್ರಾಸ್ತಾ ವಂಚನೆ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ದಾಖಲಾಗಿಲ್ಲ' ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಮನೀಷ್ ಕರ್ಬಿಕರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

