ಪ್ರಧಾನ ಸುದ್ದಿ

ಜೈಶಂಕರ್ ಬಂದಾನು.. ಮಹಿಳೆಯರೇ ಎಚ್ಚರ!

ಜೈಶಂಕರ್ ಬಂದಾನು.. ಮಹಿಳೆಯರೇ ಎಚ್ಚರ!
ಸೈಕೋ ಜೈಶಂಕರ್... ಹೀಗೂ ಕಂಡಾನು ನೆನಪಿರಲಿ...
Published On :

ಕನ್ನಡಪ್ರಭ ವಾರ್ತೆ, ಬೆಂಗಳೂರು, ಸೆ.2-
ಮಹಿಳೆಯರೇ ಎಚ್ಚರ..!
ವಿಕೃತಕಾಮಿ ಸೈಕೋ ಜೈಶಂಕರ್ ಜೈಲಿನಿಂದ ತಪ್ಪಿಸಿಕೊಂಡಿದ್ದಾನೆ. 19ಕ್ಕೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಿರುವ ಜೈಶಂಕರ್ ಅಸಹಾಯಕ ಹೆಣ್ಣುಮಕ್ಕಳನ್ನೇ ತನ್ನ ಕೃತ್ಯಕ್ಕೆ ಬಳಸಿಕೊಳ್ಳುತ್ತಾನೆ. ಆತನ ಬಂಧನಕ್ಕೆ ತೀವ್ರ ಶೋಧ ನಡೆಸುತ್ತಿರುವ ಪೊಲೀಸರು, ಈಗ ಮಹಿಳೆಯರು ಜಾಗರೂಕರಾಗಿರುವಂತೆ ಮನವಿ ಮಾಡಿದ್ದಾರೆ. ಅದರಲ್ಲೂ ನಿರ್ಜನ ಪ್ರದೇಶಗಳಲ್ಲಿ ಒಬ್ಬಂಟಿಯಾಗಿ ಓಡಾಡುವ, ತೋಟದ ಮನೆಗಳು, ಹೆದ್ದಾರಿಗಳು, ಗ್ರಾಮಾಂತರ ಪ್ರದೇಶಗಳಲ್ಲಿ ಒಂಟಿಯಾಗಿರುವ ಮಹಿಳೆಯರನ್ನು ಗುರುತಿಸಿ ಜೈಶಂಕರ್ ತನ್ನ ಪಾತಕ ಕೃತ್ಯ ಎಸಗುತ್ತಾನೆ.
ಈ ಹಿನ್ನೆಲೆಯಲ್ಲಿ ಮಹಿಳೆಯರು ಜಾಗೃತರಾಗಿರಬೇಕು ಎನ್ನುವುದು ಪೊಲೀಸರು ನೀಡಿರುವ ಎಚ್ಚರಿಕೆ ಮಾತ್ರವಲ್ಲ, ಕನ್ನಡಪ್ರಭದ ಕಾಳಜಿಯೂ ಹೌದು.
ಆತ ಎಸಗಿರುವ ಈ ಹಿಂದಿನ ಕೃತ್ಯಗಳನ್ನು ಆಧರಿಸಿ ಹೇಳುವುದಾದರೆ ಜೈಶಂಕರ್ ಗ್ರಾಮಾಂತರ ಪ್ರದೇಶಗಳಲ್ಲೇ ಅಪರಾಧ ಎಸಗುತ್ತಾನೆ.                   
ನೀರು ಕೇಳುವ ನೆಪದಲ್ಲಿ, ವಿಳಾಸ ಕೇಳುವವರ ಸೋಗಿನಲ್ಲಿ, ತನ್ನ ಸಂಬಂಧಿಕರು ಕಾಣೆಯಾಗಿದ್ದಾರೆ. ಅವರು ಈಕಡೆ ಬಂದಿದ್ದನ್ನು ನೋಡಿದ್ದೀರಾ ? ಎಂದು ಪ್ರಶ್ನಿಸುತ್ತಾ ಮಹಿಳೆ ಒಂಟಿಯಾಗಿ ಇದ್ದಾಳೋ ಅಥವಾ ಜೊತೆಯಲ್ಲಿ ಯಾರಿದ್ದಾರೆ ಎನ್ನುವುದನ್ನು ನೋಡಿಕೊಂಡು ಮೇಲೆ ಎರಗುತ್ತಾನೆ. ಅತ್ಯಾಚಾರ ಎಸಗಿ ಕೊಲೆಗೈದು ಮೈಮೇಲಿನ ಆಭರಣಗಳನ್ನು ಅಪಹರಿಸಿ ಪರಾರಿಯಾಗುತ್ತಾನೆ.
ಜೈಶಂಕರ ಎಷ್ಟು ವಿಕೃತ ಮನಸಿನವನೆಂದರೆ, ಇಬ್ಬರು ಮಹಿಳೆಯರು ಅಥವಾ ಮಹಿಳೆ, ಪುರುಷ ಹೀಗೆ ಇಬ್ಬರು ಇದ್ದರೂ ಅವರ ಮೇಲೂ ಹಲ್ಲೆ ನಡೆಸುತ್ತಾನೆ. ಕೆಲ ಪ್ರಕರಣಗಳಲ್ಲಿ ಪತಿಯ ಎದುರೇ ಪತ್ನಿಯ ಮೇಲೆ ಅತ್ಯಾಚಾರ ಎಸಗಿ ನಂತರ ಅವರಿಬ್ಬರನ್ನು ಹತ್ಯೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ನಾಗರಿಕರು ಮಾತ್ರವಲ್ಲ ಆಸ್ಪತ್ರೆಗಳು, ಕ್ಲಿನಿಕ್ಗಳಲ್ಲಿ ವೈದ್ಯರು, ನರ್ಸ್ಗಳು ಜೈಶಂಕರನ ಮುಖ ಚಹರೆಯನ್ನು ಗಮನದಲ್ಲಿರಿಸಿಕೊಳ್ಳುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಏಕೆಂದರೆ ಜೈಲಿನಿಂದ ಪರಾರಿಯಾಗುವ ವೇಳೆ ಆತನ ಕಾಲು, ಕೈಗಳಿಗೆ ಗಾಯಗಳಾಗಿದ್ದು, ಚಿಕಿತ್ಸೆಗೆ ಬರುವ ಸಾಧ್ಯತೆ ಇದೆ. ಕುಗ್ರಾಮಗಳಲ್ಲಿ ಆರ್ಯುವೇದ, ಯುನಾನಿ ಮುಂತಾದ ಕಡೆ ಚಿಕಿತ್ಸೆ ಪಡೆದುಕೊಳ್ಳಲು ಹೋಗುವುದರಿಂದ ನಾಟಿ ಔಷಧಿ ನೀಡುವವರು ಜೈಶಂಕರನ ಬಗ್ಗೆ ಎಚ್ಚರದಿಂದ ಇದ್ದು ಪೊಲೀಸರಿಗೆ ಸ್ಥಳೀಯರಿಗೆ ಮಾಹಿತಿ ನೀಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ಬಯಲು ಶೌಚಕ್ಕೆ ತೆರಳುವ ಮಹಿಳೆಯರನ್ನು ಟಾರ್ಗೆಟ್ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಜೈಶಂಕರನ ಇತ್ತೀಚಿನ ಫೋಟೋವನ್ನು ಸಂಗ್ರಹಿಸಿ ಗ್ರಾಮದ ವಿವಿಧ ಪ್ರದೇಶಗಳಲ್ಲಿ ಹಾಕುವುದು ಉತ್ತಮ. ಗ್ರಾಮಾಂತರ ಪ್ರದೇಶಗಳಲ್ಲಿ ಓಡಾಡುವ ಖಾಸಗಿ ಹಾಗೂ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಕುಳಿತುಕೊಳ್ಳುವ ಸೀಟ್ಗಳ ಬಳಿ ಒಂದೆರೆಡು ಫೋಟೋಗಳನ್ನು ಹಾಕಬೇಕು.

ಈ ಅಂಶಗಳು ನಿಮ್ಮ ಮನದಲ್ಲಿರಲಿ

  •  ವಿಳಾಸ, ನೀರು ಕೇಳುವ ನೆಪದಲ್ಲಿ ಯಾರಾದರು ಬಂದರೆ ಬಾಗಿಲು ತೆಗೆಯಬೇಡಿ.
  • ಮಹಿಳೆಯರು ಒಂಟಿಯಾಗಿದ್ದಾಗ ಯಾರಾದರೂ ಅನುಮಾನಾಸ್ಪದವಾಗಿ ನೋಡುವುದು, ಅತ್ತ ಇತ್ತ ಓಡಾಡುವುದು ಗೊತ್ತಾದರೆ ತಕ್ಷಣ ನಿಮ್ಮ ನೆರೆ ಹೊರೆಯವರಿಗೆ ಸುದ್ದಿ ಮುಟ್ಟಿಸಿ, ಪೊಲೀಸರಿಗೂ ಮಾಹಿತಿ ನೀಡಿ.
  •  ನಿರ್ಜನ ಪ್ರದೇಶದಲ್ಲಿ ಓಡಾಡುವಾಗ ಜತೆಯಲ್ಲಿ ಪರಿಚಿತರು ಇರಲಿ.
  •  ಒಬ್ಬಂಟಿಯಾಗಿ ಓಡಾಡಬೇಕಾದ ಸಂದರ್ಭ ಬಂದರೆ ಆತ್ಮರಕ್ಷಣೆಗೆ ಆಯುಧ, ಮೆಣಸಿನಪುಡಿ ಪೊಟ್ಟಣವನ್ನು ಜತೆಯಲ್ಲಿಟ್ಟುಕೊಂಡಿರಿ.
ಸುಳಿವು ಕೊಟ್ಟವರಿಗೆ 5 ಲಕ್ಷ ಬಹುಮಾನ
ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.