5 ವರ್ಷಗಳಲ್ಲಿ 25000 ಶಿಕ್ಷಕರ ನೇಮಕ: ಸಿಎಂ
ಶಿವಮೊಗ್ಗ: ಮುಂದಿನ ಐದು ವರ್ಷಗಳಲ್ಲಿ ಖಾಲಿ ಇರುವ 25 ಸಾವಿರ ಶಿಕ್ಷಕ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಪಂ ಆಶ್ರಯದಲ್ಲಿ ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ 2013ನೇ ಸಾಲಿನ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕರ ನೇಮಕಾತಿ ಕುರಿತು ಶಿಕ್ಷಣ ಸಚಿವರೊಂದಿಗೆ ಈಗಾಗಲೇ ಚರ್ಚಿಸಿದ್ದು, ಈ ವರ್ಷ 12 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ. ಇದೇ ರೀತಿ ಪ್ರತಿ ವರ್ಷ ನಿವೃತ್ತ ಹೊಂದಿದ್ದ ಶಿಕ್ಷಕರನ್ನು ಗಣನೆಗೆ ತೆಗೆದುಕೊಂಡು, ಪ್ರತಿ ವರ್ಷ 3-4 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವಂತೆ ಸೂಚಿಸಿದ್ದೇನೆ ಎಂದರು.
ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯ ಶೈಕ್ಷಣಿಕವಾಗಿ ಹಿಂದೆ ಬಿದ್ದಿದೆ. ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಸಾಕ್ಷರತೆ ಪ್ರಮಾಣ ಶೇ.90ರ ಗಡಿ ದಾಟಿದೆ. ಆದರೆ, ರಾಜ್ಯದಲ್ಲಿ ಶೇ.75ರಷ್ಟು ಮಾತ್ರ ಸಾಕ್ಷರತೆ ಇದೆ. ಇದನ್ನು ಶೇ.100ಕ್ಕೇರಿಕೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ಕ್ರಮಕೈಗೊಂಡಿದೆ. ರಾಜ್ಯದಲ್ಲಿ ಶಿಕ್ಷಿತ ಮಹಿಳೆಯರ ಪ್ರಮಾಣ ಹೆಚ್ಚಿಸಲು ಹೊಸ ಯೋಜನೆಯೊಂದನ್ನು ರೂಪಿಸಲಾಗಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯಡಿ ರಾಜ್ಯದಲ್ಲಿ ಮೊದಲನೇ ತರಗತಿಗೆ ದಾಖಲಾಗುವ ವಿದ್ಯಾರ್ಥಿನಿಯರಿಗೆ ಪ್ರತಿದಿನಕ್ಕೆ 2ನಂತೆ ಅವರ ಖಾತೆಗೆ ಜಮಾ ಮಾಡಲಾಗುವುದು. ಈ ಹಣವನ್ನು ಎಸ್ಎಸ್ಎಲ್ಸಿವರೆಗಿನ ವಿದ್ಯಾಬ್ಯಾಸ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿನಿಗೆ ಒದಗಿಸಲಾಗುವುದು ಎಂದರು.
ಶಿಕ್ಷಕರ ಸಮಸ್ಯೆಗಳಿಗೆ ಮುಕ್ತಿ- ರತ್ನಾಕರ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ತಿಂಗಳಾಂತ್ಯದಲ್ಲಿ 4 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಶಿಕ್ಷಣ ಕ್ಷೇತ್ರಕ್ಕೆ ಹೊಸ ಆಯಾಮ ನೀಡಲು ಸರ್ಕಾರದಿಂದ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು. ಶಿಕ್ಷಣ ಕ್ಷೇತ್ರದಲ್ಲಿ ಸಕಾಲಿಕವಾಗಿ ಅಗತ್ಯ ಬದಲಾವಣೆಗಳೊಂದಿಗೆ ಸಮಾಜದ ಎಲ್ಲರಿಗೂ ಶಿಕ್ಷಣ ಹಾಗೂ ಮೂಲಸೌಕರ್ಯಗಳನ್ನು ಒದಗಿಸಲಾಗುವುದು. ಮುಖ್ಯವಾಗಿ ಶಿಕ್ಷಕರಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ರಾಜ್ಯಪ್ರಶಸ್ತಿಗೆ ಆಯ್ಕೆಯಾದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಪ್ರಶಸ್ತಿ ಪ್ರದಾನ ಮಾಡಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಗುರುಗಳ ನೆನೆದ ಸಿಎಂ ಸಿದ್ದು
ನಾನು 4ನೇ ತರಗತಿವರೆಗೆ ಶಾಲೆಗೇ ಹೋಗಿಲ್ಲ. ನೇರವಾಗಿ 5ನೇ ತರಗತಿಗೆ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಗಿಸಿದೆ. ಇದಕ್ಕೆ ನಮ್ಮ ಮೇಷ್ಟ್ರು ಸಕಲೇಶಪುರದ ಎಸ್.ಎಂ. ರಾಜಪ್ಪ ಕಾರಣ. ಒಂದು ವೇಳೆ ರಾಜಪ್ಪ ನಮ್ಮ ಶಾಲೆ ಹೆಡ್ಮೇಷ್ಟ್ರು ಆಗಿರದಿದ್ದರೆ ನಾನು ಪದವೀಧರನಾಗುತ್ತಿರಲಿಲ್ಲ. ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ. ನಾನು ನನ್ನ ತಮ್ಮಂದಿರ ರೀತಿ ಗದ್ದೆ ಕೆಲಸ ಮಾಡಿಕೊಂಡು, ಎಮ್ಮೆ ಮೇಯಿಸಿಕೊಂಡು ಇರುತ್ತಿದೆನೇನೋ? ಈ ರೀತಿ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ. ಗುರುವಾರ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಎಸ್.ಎಂ. ರಾಜಪ್ಪ ಮೇಷ್ಟ್ರು ನನಗೆ ಸೇರಿದಂತೆ ನಮ್ಮೂರಿನ ಮೆಣಸೆಗೌಡ, ಮರಿಲಿಂಗಯ್ಯ ಅವರಿಗೆ ಏಕಾಏಕಿ 5ನೇ ತರಗತಿ ಪ್ರವೇಶಕ್ಕೆ ಅವಕಾಶ ಕೊಟ್ಟು ಸೇರಿಸಿಕೊಂಡರು. ಇಲ್ಲದಿದ್ದರೆ ನಾನು ಏನಾಗುತ್ತಿದ್ದೆ ಎಂಬುದನ್ನು ನೆನೆಸಿಕೊಂಡರೆ ನಗು ಬರುತ್ತದೆ. ನಾನೊಬ್ಬ ರಾಜಕಾರಣಿ ಆಗೋಕೆ ರೈತ ಮುಖಂಡ ಪ್ರೊ. ನಂಜುಂಡಸ್ವಾಮಿ ಕಾರಣ. ಅವರ ಹೋರಾಟ ಮನೋಭಾವದಿಂದ ನಾನು ರಾಜಕೀಯ ಪ್ರವೇಶ ಮಾಡಿದೆ ಎಂದರು.
ಮಕ್ಕಳ ಮುಂದೆ ಸಿಗರೇಟ್ ಸೇದಬೇಡಿ
ಎಮ್ಮೆ ಕಾಯುವ ಸ್ನೇಹಿತರೊಂದಿಗೆ ಆ ವಯಸ್ಸಿನಲ್ಲಿಯೇ ಬೀಡಿ ಸೇದುವುದನ್ನು ಕಲಿತಿದ್ದೆ. ಬೀಡಿ ಸಿಗದಿದ್ದರೆ ಮರದ ಎಲೆ ಮಡಚಿಕೊಂಡು ಸೇದುತ್ತಿದ್ದೆವು. ಒಟ್ಟಿನಲ್ಲಿ ಹೊಗೆ ಬಂದರೆ ಆಯ್ತು. ಅದನ್ನೇ ಮುಂದುವರಿಸಿಕೊಂಡು ಸಿಗರೇಟ್ ಸೇದುವುದು ಅತಿಯಾಯಿತು. ಆದರೆ, ಇದೀಗ ಅದನ್ನು ಬಿಟ್ಟಿದ್ದೇನೆ. ಈ ಮಾತನ್ನು ಯಾಕೆ ಹೇಳುತ್ತಿದ್ದೆನೆಂದರೆ ನಮ್ಮೂರಿನಲ್ಲಿ ಒಬ್ಬ ಮೇಸ್ಟ್ರು ಇದ್ದರು. ವಿದ್ಯಾರ್ಥಿಗಳ ಕೈಯಲ್ಲಿ ಹಣ ಕೊಟ್ಟು ಬೀಡಿ ತರುವುದಕ್ಕೆ ಹೇಳೋರು. ಅದನ್ನು ತರುತ್ತಿದ್ದ ನಮ್ಮ ಸ್ನೇಹಿತ ಮೇಸ್ಟ್ರೇ ಸೇದುತ್ತಾರೆ ನಾನೇಕೆ ಸೇದಬಾರದು ಎಂದು ಸೇದಿದ್ದ. ಹಾಗಾಗಿ ವಿದ್ಯಾರ್ಥಿಗಳ ಮುಂದೆ ಶಿಕ್ಷಕರು ಯಾವುದೇ ಕೆಟ್ಟ ಅಭ್ಯಾಸಗಳನ್ನು ಪ್ರದರ್ಶನ ಮಾಡುವುದು ಬೇಡ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

