ಪ್ರಧಾನ ಸುದ್ದಿ

ಜಿ20 ಗಮನ ಜಾಗತಿಕ ಆರ್ಥಿಕ ಸುಧಾರಣೆ ಕಡೆಗಿರಲಿ

Published On :

ಸೇಂಟ್‌ಪೀಟರ್ಸ್‌ಬಗ್: ಜಿ20 ನಾಯಕರು ಮುಂದುವರಿದ ರಾಷ್ಟ್ರಗಳ ಬಗೆಗಿನ ತಮ್ಮ ಗಮನವನ್ನು ಆರ್ಥಿಕ ಚೇತರಿಕೆಯನ್ನು ಪ್ರೋತ್ಸಾಹಿಸುವ ಮತ್ತು ಜಾಗತಿಕ ಆಡಳಿತ ಸುಧಾರಣೆಗಳ ಬಗ್ಗೆ ಹರಿಸಬೇಕಿದೆ.
ರಷ್ಯಾದ ಸೈಂಟ್‌ಪೀಟರ್ಸ್‌ಬರ್ಗ್‌ನಲ್ಲಿ ನಡೆಯಲಿರುವ ಜಿ 20 ಶೃಂಗ ಸಮ್ಮೇಳನದಲ್ಲಿ ನಾಲ್ಕು ವಿಷಯಗಳು ಪ್ರಧಾನವಾಗಿರಲಿವೆ. ಅವು ಜಾಗತಿಕ ಆರ್ಥಿಕ ಅಭಿವೃದ್ಧಿಯ ವಿಶ್ವಾಸದ ಹೆಚ್ಚಳ, ಜಾಗತಿಕ ಆಡಳಿತದಲ್ಲಿ ಸುಧಾರಣೆಗೆ ಪ್ರೋತ್ಸಾಹ, ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಏಕತೆ ಮತ್ತು ಸಹಕಾರದ ಹೆಚ್ಚಳ, ಮತ್ತು ಚೀನಾ ಆರ್ಥಿಕ ಬೆಳವಣಿಗೆ ಪ್ರವೃತ್ತಿಯ ಮೌಲ್ಯಮಾಪನ.
ಜಿ 20, 2008ರ ಎಂದೂ ಕೇಳರಿಯದ ಅಂತಾರಾಷ್ಟ್ರೀಯ ಆರ್ಥಿಕ ಸಂಕಷ್ಟಕ್ಕೆ ಪ್ರತಿಕ್ರಿಯೆ ಎಂಬಂತೆ ಜನ್ಮ ತಳೆಯಿತು. ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು ಅದರ ಪರಮೋಚ್ಚ ಆದ್ಯತೆಯಾಗಿತ್ತು. ಸಮಯ ಕಳೆದಂತೆ ಅಮೆರಿಕದ ಕಡಿದಾದ, ಆನಿಶ್ಚಿತ ಆರ್ಥಿಕ ಸ್ಥಿತಿ ಮತ್ತು ಯೂರೋಪ್‌ನಲ್ಲಿನ ಸಾಲದ ಸಂಕಷ್ಟದ ಕಾರಣದಿಂದಾಗಿ ಜಿ 20 ಮುಂದುವರಿದ ರಾಷ್ಟ್ರಗಳಲ್ಲಿನ ಆರ್ಥಿಕ ಚೇತರಿಕೆ ಕಡೆಗೆ ಅಧಿಕ ಗಮನ ಹರಿಸಿತು. ಆದರೆ, ಈ ಸಮ್ಮೇಳನದಲ್ಲಿ ಮುಖ್ಯ ಲಕ್ಷ್ಯ ಮುಂದುವರಿದ ರಾಷ್ಟ್ರಗಳಿಂದ ಅಭಿವೃದ್ಧಿಶೀಲ ಅದರಲ್ಲೂ ವಿಶೇಷವಾಗಿ ಉದಯೋನ್ಮುಖ ಅರ್ಥ ವ್ಯವಸ್ಥೆಗಳ ಕಡೆಗೆ ಬದಲಾಗಲಿದೆ.
ಇತರ ರಾಷ್ಟ್ರಗಳ ಅರ್ಥ ವ್ಯವಸ್ಥೆಗಳ ಮೇಲೆ ಏನು ಪರಿಣಾಮ ಬೀರಲಿದೆ ಎಂಬ ವಿವೇಚನೆ ಮಾಡದೆ ಅಮೆರಿಕ ಸರ್ಕಾರ ಕ್ಯೂಇ (QUANTITATIVE EASING) ಎಂಬ ಕ್ರಮವನ್ನು ಜಾರಿಗೊಳಿಸಿತು. (ಪ್ರಸಕ್ತ ಅರ್ಥ ವ್ಯವಸ್ಥೆ ಪರಿಣಾಮಕಾರಿಯಾಗಿಲ್ಲದ ಸಮಯದಲ್ಲಿ ರಾಷ್ಟ್ರೀಯ ಅರ್ಥವ್ಯವಸ್ಥೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಬ್ಯಾಂಕ್‌ಗಳು ಅನುಸರಿಸುವ ಅರ್ಥ ನೀತಿಯನ್ನು ಕ್ಯೂ ಇ ಎನ್ನಲಾಗುತ್ತದೆ)
ಇದೀಗ ಕ್ರಮೇಣ ತನ್ನ ಈ ಕ್ರಮದಿಂದ ಹಿಂದೆ ಸರಿಯುವ ಮತ್ತು ಇದನ್ನು ವಾಪಸ್ ಪಡೆಯುವ ಇಂಗಿತವನ್ನು ಅಮೆರಿಕ ವ್ಯಕ್ತಪಡಿಸಿದೆ. ವಿಶೇಷವಾಗಿ ಅನಿಶ್ಚಿತ ಆರ್ಥಿಕ ಸನ್ನಿವೇಶವನ್ನು ಎದುರಿಸುತ್ತಿರುವ ಉದಯೋನ್ಮುಖ ಅರ್ಥ ವ್ಯವಸ್ಥೆಗಳ ಬಗ್ಗೆ ಗಮನ ಹರಿಸುವುದಾಗಿ ಅದು ಸೂಚನೆ ನೀಡಿದೆ.
ಸೇಂಟ್‌ಪೀಟರ್ಸ್‌ಬರ್ಗ್‌ನಲ್ಲಿ ಸೇರಲಿರುವ ನಾಯಕರು ಮಾರುಕಟ್ಟೆ ವಿಶ್ವಾಸ ವೃದ್ಧಿಗೆ  ಕಾರಣವಾಗುವ ಪರಿಹಾರಗಳಷ್ಟೇ ಅಲ್ಲದೆ ಎಲ್ಲ ರಾಷ್ಟ್ರಗಳ ಕ್ರಿಯಾಶೀಲ ಹಿತವನ್ನೂ ಗಮನದಲ್ಲಿ ಇರಿಸಿಕೊಳ್ಳಲಿದ್ದಾರೆ. ತನ್ಮೂಲಕ ದೃಢ ಜಾಗತಿಕ ಆರ್ಥಿಕ ಬೆಳವಣಿಗೆಯನ್ನು ಸಾಧಿಸುವ ಮತ್ತು ಉದ್ಯೋಗಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನು ಇವರು ಹೊಂದಿದ್ದಾರೆ. ಅದೇ ರೀತಿ, ಜಾಗತಿಕ ಅರ್ಥವ್ಯವಸ್ಥೆಯ ದೀರ್ಘಕಾಲೀನ ಮತ್ತು ಸ್ಥಿರ ಬೆಳವಣಿಗೆ ಜತೆ ಸಂಬಂಧ ಹೊಂದಿರುವ ಮುಂದುವರಿದ ರಾಷ್ಟ್ರಗಳ ಅರ್ಥ ವ್ಯವಸ್ಥೆ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಅರ್ಥವ್ಯವಸ್ಥೆಗಳ ನಡುವೆ ಸಮನ್ವಯದ ಅಗತ್ಯವೂ ಇದೆ.
ಜಾಗತಿಕ ಆರ್ಥಿಕ ಆಡಳಿತದ ಸುಧಾರಣೆಗೆ ಉತ್ತೇಜನ ನೀಡುವಲ್ಲಿ ಎಲ್ಲ ಸದಸ್ಯ ರಾಷ್ಟ್ರಗಳೂ ಕೈಜೋಡಿಸಬೇಕಿದೆ. ಅಲ್ಲದೆ, ಈವರೆಗಿನ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನಿರ್ಧಾರಿತ ಮೊತ್ತ(ಕೋಟಾ)ದ ಸುಧಾರಣೆಯನ್ನು ಜಾರಿಗೊಳಿಸುವ ಬಗ್ಗೆ ಮತ್ತು ಹೊಸ ಸುತ್ತಿನ ಕೋಟಾ ಸುಧಾರಣೆ ಕಾರ್ಯಸೂಚಿಯನ್ನು ಶುರು ಮಾಡುವ ಬಗ್ಗೆಯೂ ಸೇಂಟ್‌ಪೀಟರ್ಸ್‌ಬರ್ಗ್ ಶೃಂಗ ಪರಿಶೀಲಿಸಲಿದೆ.
ಜಾಗತಿಕ ಅರ್ಥ ವ್ಯವಸ್ಥೆಯ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಆರ್ಥಿಕ ಸ್ಥಿರತೆ ಮಂಡಳಿಯ ಪಾತ್ರವನ್ನು ಮತ್ತಷ್ಟು ಬಲಪಡಿಸಬೇಕಿದೆ. ವಿಶ್ವ ವಾಣಿಜ್ಯ ಸಂಸ್ಥೆ(ಡಬ್ಲ್ಯೂಟಿಒ) ಪ್ರತಿನಿಧಿಸುವ ಬಹುಪಕ್ಷೀಯ ವಾಣಿಜ್ಯ ವ್ಯವಸ್ಥೆಯ ಭವಿಷ್ಯಕ್ಕೂ ಈ ಶೃಂಗಸಭೆ ಶ್ರೀಕಾರ ಹಾಡಲಿದೆ. ಇವೆಲ್ಲವೂ ಜಾಗತಿಕ ಆರ್ಥಿಕ ಆಡಳಿತದಲ್ಲಿ ಪ್ರಮುಖ ಕ್ರಮಗಳಾಗಿದ್ದು, ಸಂಬಂಧಪಟ್ಟ ಎಲ್ಲರ ದೀರ್ಘಕಾಲೀನ ಹಿತಾಸಕ್ತಿ ಜತೆಗೆ ಸಂಬಂಧ ಹೊಂದಿವೆ.
ಅನಿಶ್ಚಿತತೆ: ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಕೋಟಾ ಸುಧಾರಣೆಯು ಸಾಮಾನ್ಯ ವೇಳಾಪಟ್ಟಿಗೆ ಅನುಸಾರವಾಗಿಯೇ ಮುಂದುವರಿದಿದೆ. ಆದರೆ, ಬಹುಪಕ್ಷೀಯ ವ್ಯಾಪಾರ ಪದ್ಧತಿಯ ಭವಿಷ್ಯಕ್ಕೆ ಸಂಬಂಧಿಸಿ ಸಾಕಷ್ಟು ಅನಿಶ್ಚಿತತೆ ಕಂಡು ಬಂದಿದೆ. ದೋಹಾ ಸುತ್ತಿನ ಮಾತುಕತೆಗಳು ದೀರ್ಘಕಾಲ ಲಂಬಿಸಿದ್ದು, ಡಬ್ಲ್ಯೂಟಿಒ ಬಗ್ಗೆ ಕೆಲವು ರಾಷ್ಟ್ರಗಳು ನಿರಾಶೆಗೆ ಗುರಿಯಾಗಲು ಕಾರಣವಾಗಿದೆ.

ಮನವೊಲಿಕೆ ಪ್ರಯತ್ನ: ದೋಹಾ ಸುತ್ತುಗಳ ಚರ್ಚೆಯ ಬಿಕ್ಕಟ್ಟು ನಿವಾರಿಸಲು ಮತ್ತು ಬಹುಪಕ್ಷೀಯ ವಾಣಿಜ್ಯ ಪದ್ಧತಿಗೆ ಚೈತನ್ಯ ತುಂಬುವ ಸಲುವಾಗಿ ಡಬ್ಲ್ಯೂಟಿಒದ ನೂತನ ಮಹಾನಿರ್ದೇಶಕ ರಾಬರ್ಟ್ ಅಜೆವೆಡೊ ಅವರು ವ್ಯಾಪಾರವನ್ನು ಸುಗಮಗೊಳಿಸುವ, ಕೃಷಿ, ರಫ್ತು ಸ್ಪರ್ಧೆಯಲ್ಲಿನ ಪ್ಯಾಕೇಜ್‌ಗಳ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ತ್ವರಿತ ತೀರ್ಮಾನದ ಲಾಭ ಪಡೆಯುವಂತೆ ಸದಸ್ಯರ ಮನವೊಲಿಸಲಿದ್ದಾರೆ. ಅಮೆರಿಕ ಮತ್ತು ಇತರ ಮುಂದುವರಿದ ರಾಷ್ಟ್ರಗಳು ತಮ್ಮ ಸ್ವಾರ್ಥ ಮನೋಭಾವ ತ್ಯಜಿಸಿ ತ್ವರಿತ ಲಾಭದ ಈ ಪ್ಯಾಕೇಜ್ ಬಗ್ಗೆ ಪ್ರೋತ್ಸಾಹಿಸಬೇಕಿದೆ.
ಬಹುಪಕ್ಷೀಯ ವಾಣಿಜ್ಯ ವ್ಯವಸ್ಥೆಯ ವಿಕಸನಕ್ಕೆ ಸಂಬಂಧಿಸಿದ ಪ್ರಾಂತೀಯ ಸಹಕಾರ ಸಂಬಂಧಿ ವಿಷಯಗಳೂ ಶೃಂಗದ ಕಾರ್ಯಸೂಚಿಯಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ.
ಅಮೆರಿಕ ಮತ್ತು ಇತರ ಮುಂದುವರಿದ ರಾಷ್ಟ್ರಗಳು ಪ್ರಾಬಲ್ಯ ಹೊಂದಿರುವ ಪ್ರಾಂತೀಯ ಆರ್ಥಿಕ ಸಹಕಾರ ಕುರಿತ ಮಾತುಕತೆಗಳು ವ್ಯಾಪಕ ಮತ್ತು ಉನ್ನತ ಮಟ್ಟದ ಮುಕ್ತ ವ್ಯಾಪಾರ ಕ್ಷೇತ್ರ ನಿರ್ಮಾಣಕ್ಕೆ ಅಗತ್ಯ ಎಂಬ ನೆಪದಲ್ಲಿ ವಿಶಿಷ್ಟ ನಿಯಮಗಳು ಹಾಗೂ ಉಪನಿಯಮಗಳು ಇರಬಾರದು ಎಂಬ ಆಶಯ ಅಭಿವೃದ್ಧಿಶೀಲ ರಾಷ್ಟ್ರಗಳದ್ದು. ಪೆಸಿಫಿಕ್ ಸಾಗರದಾಚೆಯ ವ್ಯಾಪಾರ ಎಂಬ ಹೆಸರಿನಲ್ಲಿ ಮುಂದುವರಿದ ರಾಷ್ಟ್ರಗಳು ಈ ಚರ್ಚೆಯಲ್ಲಿ ಪ್ರಾಬಲ್ಯ ಸಾಧಿಸಲು ಯತ್ನ ನಡೆಸಿವೆ. ಮುಕ್ತ ವ್ಯವಹಾರ, ಪಾರದರ್ಶಕತೆ, ನ್ಯಾಯೋಚಿತತೆ ಮತ್ತು ವಿಭಿನ್ನ ಪ್ರಾಂತೀಯ ಅರ್ಥವ್ಯವಸ್ಥೆ ಸಹಕಾರ ಪದ್ಧತಿಗಳ ವಿಕಸನವನ್ನು ಇದು ಒಳಗೊಳ್ಳಲಿದೆ ಎಂದು ಈ ರಾಷ್ಟ್ರಗಳು ಹೇಳುತ್ತಾ ಬಂದಿವೆ.

ಅನೌಪಚಾರಿಕ ಚರ್ಚೆ
ಜಿ 20 ಎಂಬುದು ವಾಸ್ತವಿಕವಾಗಿ ಚರ್ಚೆ ಮತ್ತು ಸಮಾಲೋಚನೆಗಾಗಿನ ಒಂದು ಉತ್ತಮ ವೇದಿಕೆಯಾಗಿದ್ದು ಜಿ 7 ಮತ್ತು ಬಿಆರ್‌ಐಸಿಎಸ್(ಬ್ರಿಕ್ಸ್ ಎಂಬುದು ಬಲಿಷ್ಠ ಆರ್ಥವ್ಯವಸ್ಥೆಗಳಾಗಿ ಹೊರಹೊಮ್ಮುತ್ತಿರುವ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳನ್ನು ಒಳಗೊಂಡ ಸಂಘದ ಸಂಕ್ಷಿಪ್ತರೂಪ) ರಾಷ್ಟ್ರಗಳು ಈ ವೇದಿಕೆಯ ಬಗ್ಗೆ ತೀವ್ರ ಗಮನ ಹರಿಸಿವೆ. ಬ್ರಿಕ್ಸ್ ನಾಯಕರು ಪ್ರಮುಖ ಅಂತಾರಾಷ್ಟ್ರೀಯ ಸಮ್ಮೇಳನಗಳ ಸಂದರ್ಭದಲ್ಲಿ ಅನೌಪಚಾರಿಕವಾಗಿ ಕಲೆತು ತಮ್ಮ ಸ್ಥಿತಿ-ಗತಿಗಳ ಬಗ್ಗೆ ಸಮಾಲೋಚನೆ ನಡೆಸುವುದು ಮಾಮೂಲಿಯಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ. ತನ್ಮೂಲಕ ಈ ರಾಷ್ಟ್ರಗಳು ಗಣನೀಯ ಸಾಧನೆಗಳನ್ನೂ ಮಾಡಿವೆ.  ಈ ಬಾರಿ ಅಧ್ಯಕ್ಷ ಝಿ ಜಿನ್‌ಪಿಂಗ್ ಜಿ20 ಶೃಂಗಕ್ಕೆ ಹಾಜರಾಗಲಿದ್ದು, ಬ್ರಿಕ್ಸ್ ರಾಷ್ಟ್ರಗಳ ಇತರ ನಾಯಕರ ಜತೆ ಅನೌಪಚಾರಿಕ ಸಭೆ ನಡೆಸಿ ಚರ್ಚಿಸಲಿದ್ದಾರೆ. ಜಿ 20 ಶೃಂಗದ ನಂತರ ಝಿ ಅವರು ಕಿಗರ್‌ಸ್ತಾನದ ರಾಜಧಾನಿ ಬಿಶ್ಕೆಕ್ನಲ್ಲಿ ನಡೆಯಲಿರುವ ಶಾಂಘಾಯ್ ಸಹಕಾರಿ ಸಂಸ್ಥೆಯ ಸಮ್ಮೇಳನಕ್ಕೆ ಹಾಜರಾಗಲಿದ್ದಾರೆ. ಈ ಎಲ್ಲ ಕ್ರಮಗಳು, ಬಲಿಷ್ಠ ಆರ್ಥಿಕ ಶಕ್ತಿಗಳಾಗಿ ಹೊರಹೊಮ್ಮುತ್ತಿರುವ ರಾಷ್ಟ್ರಗಳು ವಿಭಿನ್ನ ಸ್ತರಗಳಲ್ಲಿ ಬಲಗೊಳ್ಳುತ್ತಿರುವ ಲಕ್ಷಣಗಳನ್ನು ತೋರುತ್ತದೆ. ಸರ್ವ ಆಯಾಮಿ ಏಕತೆ ಮತ್ತು ಸಹಕಾರದ ಮೂಲಕ ಅಭಿವೃದ್ಧಿಶೀಲ ರಾಷ್ಟ್ರಗಳ ಹಿತಾಸಕ್ತಿಗಳು ಜಾಗತಿಕ ಆರ್ಥಿಕ ಆಡಳಿತ ಸುಧಾರಣೆಯಲ್ಲಿ ಅಳವಡಿಕೆಯಾಗಬೇಕು. ಇದಕ್ಕೆ ಗೌರ ದೊರೆಯುವಂತಾಗಬೇಕು ಎಂಬುದರ ಸೂಚಕವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.