ಪ್ರಧಾನ ಸುದ್ದಿ

ಕಿಯೋಸ್ಕ್‌ನಲ್ಲಿ ಪ್ರವಾಸಿ ಕೈಪಿಡಿ

Published On :

ಬಳ್ಳಾರಿ: ಹಂಪಿ ಸೇರಿದಂತೆ ವಿವಿಧ ಪ್ರದೇಶಗಳಿಗೆ ಪ್ರವಾಸಕ್ಕಾಗಿ ಬರುವ ವಿದೇಶಿ ಹಾಗೂ ಪರ ರಾಜ್ಯದ ಪ್ರವಾಸಿಗರನ್ನು ನಿಗದಿತ ಬೆಲೆಗಿಂತ ಎರಡು ಪಟ್ಟು ಹಣ ಪಡೆದು ಏಮಾರಿಸುವುದನ್ನು ತಡೆಯಲು, ವಿದೇಶಿ ಹಾಗೂ ಪರ ರಾಜ್ಯಗಳ ಪ್ರವಾಸಿಗರ ಕೈ ಬೆರಳಲ್ಲೇ ರಾಜ್ಯದ ಪ್ರವಾಸೋದ್ಯಮದ ಮಾಹಿತಿ ನೀಡಲು ಜಿಲ್ಲಾಡಳಿತ ಮುಂದಾಗಿದೆ.
ಆ ಮೂಲಕ ಜಿಲ್ಲೆಯ ಪ್ರವಾಸೋದ್ಯಮವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಹಾಗೂ ಪ್ರವಾಸಿಗರಿಗೆ ಅನುಕೂಲ ಮಾಡುವ ಉದ್ದೇಶದಿಂದ ಜಿಲ್ಲೆಯ ಐತಿಹಾಸಿಕ ಹಂಪಿ ಸೇರಿದಂತೆ 11 ಕಡೆಗಳಲ್ಲಿ ಕಿಯೋಸ್ಕ್‌ಗಳನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈಗಾಗಲೆ ಕಿಯೋಸ್ಕ್‌ಗಳನ್ನು ಖರೀದಿಸಿರುವ ಜಿಲ್ಲಾಡಳಿತ ಇದೀಗ ಕೆನೋ ಸಾಫ್ಟ್‌ವೇರ್‌ಗೆ ಪ್ರವಾಸೋದ್ಯಮದ ಮಾಹಿತಿ ಅಪ್‌ಲೋಡ್ ಮಾಡುವಲ್ಲಿ ನಿರತವಾಗಿದೆ.  ಹಂಪಿ ಸೇರಿದಂತೆ ಇತರೆಡೆಗೆ ಬರುವ ವಿದೇಶಿ ಪ್ರವಾಸಿಗರಿಗೆ ಇಲ್ಲಿನ ಹೊಟೇಲ್ ಹಾಗೂ ವಸ್ತುಗಳ ಬೆಲೆ ಬಗ್ಗೆ ಮಾಹಿತಿ ಇರುವುದಿಲ್ಲ. ಆಗ ವಿದೇಶಿಗರನ್ನು ಏಮಾರಿಸಿ ದುಪ್ಪಟ್ಟು ಬೆಲೆಗೆ ವಸ್ತು ಮಾರಾಟ ಮಾಡುತ್ತಾರೆ ಎಂಬ ಆರೋಪ ಇತ್ತು. ಅಲ್ಲದೆ, ಪ್ರವಾಸೋದ್ಯಮದ ಬಗ್ಗೆ ಮಾಹಿತಿ ಪಡೆಯಲು ಹಾಗೂ ರಾಜ್ಯ, ಜಿಲ್ಲೆಯ ಪ್ರವಾಸಿ ತಾಣಗಳ ಬಗ್ಗೆ ವಿದೇಶಿಗರು ಹಂಪಿ ಪೊಲೀಸ್ ಠಾಣೆಗೆ ಹೋಗಿ ಮಾಹಿತಿ ಪಡೆಯುತ್ತಿದ್ದರು. ಇಂತಹ ಫಜೀತಿಗೆ ಇತಿಶ್ರೀ ಹಾಡಲು ಇದೀಗ ಜಿಲ್ಲಾಡಳಿತ ಕಿಯೋಸ್ಕ್ ಸಹಾಯ ಪಡೆಯುತ್ತಿದೆ.
ಹೋಟೆಲ್, ಊಟದ ಮಾಹಿತಿ ಲಭ್ಯ: ರಾಜ್ಯ ಪ್ರವಾಸೋದ್ಯಮದವನ್ನು ಮೂಲವಾಗಿಟ್ಟುಕೊಂಡು ಕಿಯೋಸ್ಕ್‌ಗಳನ್ನು ಅಳವಡಿಸಲು ಮುಂದಾಗಿದೆ. ಕೇವಲ ಪ್ರವಾಸೋದ್ಯಮ ಮಾಹಿತಿ ಅಲ್ಲದೆ ಈಗಾಗಲೆ ಜಿಲ್ಲೆಯ ಪ್ರಮುಖ ಹೊಟೇಲ್‌ಗಳ ರೂಮ್ ರೆಂಟ್, ಊಟದ ಬೆಲೆ, ವಿದೇಶಿಗರು ಹೆಚ್ಚಾಗಿ ಖರೀದಿಸುವ ವಸ್ತುಗಳ ಮಾಹಿತಿಯನ್ನು ಜಿಲ್ಲಾಡಳಿತ ಪಡೆದು ಅವುಗಳನ್ನು ಕಿಯೋಸ್ಕ್‌ಗೆ ಅಳವಡಿಸಲು ಮುಂದಾಗಿದೆ. ಇದರಿಂದ ಬೆರಳ ತುದಿಯಲ್ಲೇ ಇಡೀ ಜಿಲ್ಲೆಯ ಹಾಗೂ ರಾಜ್ಯದ ಪ್ರವಾಸೋದ್ಯಮದ ಮಾಹಿತಿ ಸಿಗುತ್ತದೆ.
ಪ್ರವಾಸಿ ತಾಣಗಳ ಮಾಹಿತಿ: ಕಿಯೋಸ್ಕ್ ಯಂತ್ರದಲ್ಲಿ ಬಳ್ಳಾರಿ ಜಿಲ್ಲೆಯ ಹಂಪಿಯ ಸ್ಮಾರಕಗಳ ಮಾಹಿತಿಯೊಂದಿಗೆ ಜಿಲ್ಲೆಯ ಇನ್ನಿತರ ಪ್ರವಾಸಿ ತಾಣಗಳ ಮಾಹಿತಿ ಇಲ್ಲಿರುತ್ತದೆ. ಇನ್ನು ಐತಿಹಾಸಿಕ ಹಂಪಿಗೆ ಬರುವ ಪ್ರವಾಸಿಗರು ರಾಜ್ಯದ ಇತರೆ ಸ್ಥಳಗಳಲ್ಲಿನ ಪ್ರಮುಖ ಪ್ರವಾಸಿ ಕೇಂದ್ರಗಳು, ಅಲ್ಲಿಗೆ ಹೋಗಲು ರೇಲ್ವೆ, ಬಸ್‌ಗಳಿರುವ ಮಾಹಿತಿ ಕಿಯೋಸ್ಕ್‌ದಲ್ಲಿ ಲಭ್ಯ. ಜಿಲ್ಲೆಯ ಪ್ರವಾಸೋದ್ಯಮ ಮಾಹಿತಿಯಲ್ಲದೇ, ರಾಜ್ಯದ ಪ್ರವಾಸೋದ್ಯಮ ಸ್ಥಳಗಳ ಮಾಹಿತಿ ಲಭ್ಯವಿರುತ್ತದೆ. ಅಗತ್ಯ ಬಿದ್ದರೆ ಮಾಹಿತಿಯನ್ನು ಪ್ರಿಂಟೌಂಟ್ ಪಡೆಯುವ ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ರೇಲ್ವೆ, ಬುಕ್ಕಿಂಗ್ ಮಾಡುವ ವ್ಯವಸ್ಥೆ ಇಲ್ಲಿರುತ್ತದೆ. ಪ್ರಿಂಟೌಂಟ್ ಬಿಟ್ಟಂತೆ ಕಿಯೋಸ್ಕ್ ಯಂತ್ರ ಮಾಹಿತಿ ಪಡೆಯಲು ಉಚಿತ ಬಳಕೆ ಮಾಡಿಕೊಳ್ಳಬಹುದು ಎನ್ನುತ್ತಾರೆ ಅಧಿಕಾರಿಗಳು.
11 ಕಡೆ ಕಿಯೋಸ್ಕ್: ಒಂದು ಮೆಷಿನ್‌ಗೆ ರು. 1.25 ಲಕ್ಷ ಹಣ ನೀಡಿ, ಜಿಲ್ಲೆಯ 11 ಕಡೆಗಳಲ್ಲಿ ಮಲ್ಟಿ ಫಂಕ್ಷನ್ ಕಿಯೋಸ್ಕ್ ಅಳವಡಿಸಲು ಜಿಲ್ಲಾಡಳಿತ ತಯಾರಿ ನಡೆಸಿದೆ. ಐತಿಹಾಸಿಕ ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ, ವಿಜಯವಿಠ್ಠಲ ದೇವಸ್ಥಾನ, ಕಮಲಾಪುರದ ಹೋಟೆಲ್ ಮಯೂರ ಭುವನೇಶ್ವರಿ, ಬಳ್ಳಾರಿ ಮತ್ತು ಹೊಸಪೇಟೆಯ ರೇಲ್ವೆ ನಿಲ್ದಾಣ, ಬಸ್ ನಿಲ್ದಾಣ, ಹೊಸಪೇಟೆ ಪ್ರವಾಸೋದ್ಯಮ ಇಲಾಖೆ ಕಚೇರಿ, ತೋರಣಗಲ್‌ನ ಹಯಾತ್ ಹೋಟೆಲ್, ಸಂಡೂರಿನ ಹೆರಿಟೇಜ್ ಹೊಟೇಲ್‌ನಲ್ಲಿ ಸೇರಿದಂತೆ ಇತರೆಡೆ ಕಿಯೋಸ್ಕ್ ಅಳವಡಿಸಲು ಸಿದ್ಧತೆ ನಡೆದಿದೆ. ಇನ್ನುಮುಂದೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರು ಪ್ರವಾಸೋದ್ಯಮದ ಮಾಹಿತಿಗಾಗಿ ತಡಕಾಡುವ ಅಗತ್ಯವಿಲ್ಲ. ನಿಂತಲ್ಲಿಯೇ ಮಾಹಿತಿ ಪಡೆದು ಪ್ರವಾಸ ಮಾಡಬಹುದು.

ಹಂಪಿ ಹಾಗೂ ಜಿಲ್ಲೆಗೆ ಆಗಮಿಸುವ ವಿದೇಶಿ, ಬೇರೆ ರಾಜ್ಯದ ಹಾಗೂ ರಾಜ್ಯದ ಪ್ರವಾಸಿಗರಿಗೆ ಜಿಲ್ಲೆಯ ಪ್ರವಾಸಿ ತಾಣಗಳ ಹಾಗೂ ರಾಜ್ಯದ ವಿವಿಧ ಪ್ರವಾಸೋದ್ಯಮ ಸ್ಥಳಗಳ ಮಾಹಿತಿಗಾಗಿ ಕಿಯೋಸ್ಕ್ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರವಾಸಿಗರಿಗೆ ಇಲ್ಲಿನ ಹೊಟೇಲ್ ರೆಂಟ್, ವಸ್ತುಗಳ ಮಾಹಿತಿ ನೀಡುವ ಉದ್ದೇಶ ಇದರದ್ದು.
- ಅಮ್ಲಾನ್ ಅದಿತ್ಯ ಬಿಸ್ವಾಸ್, ಜಿಲ್ಲಾಧಿಕಾರಿ.

-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.