ವಿದುರಾಶ್ವತ್ಥದ ಅಶ್ವತ್ಥ ಮರ ಧರೆಗುರುಳಿತು

ಕನ್ನಡಪ್ರಭ ವಾರ್ತೆ, ಗೌರಿಬಿದನೂರು, ಸೆ.11-
ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿಯೂ ಪ್ರಾಮುಖ್ಯತೆ ಪಡೆದಿದ್ದ ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥದ ಬೃಹತ್ ಅಶ್ವತ್ಥ ಮರ ಮಂಗಳವಾರ ರಾತ್ರಿ ಸುರಿದ ಮಳೆಗೆ ನೆಲಕ್ಕುರುಳಿದೆ.
ಈ ಹಿಂದೆ ರೆಂಬೆ ಕೊಂಬೆಗಳು ಆಗಾಗ ಮುರಿದು ಬೀಳುತ್ತಿದ್ದವಾದರೂ ಮರ ಗಟ್ಟಿಯಾಗಿತ್ತು. ಆದರೆ, ಕಳೆದ ಎರಡು-ಮೂರು ದಿನಗಳಿಂದಲೂ ಮಳೆ ಭಾರಿ ಸುರಿಯುತ್ತಿದ್ದು, ಅದರಿಂದಾಗಿ ಸಾವಿರಾರು ವರ್ಷಗಳಷ್ಟು ಹಳೆಯದಾದ ಈ ಮರ ಬುಡ ಸಮೇತ ಉರುಳಿ ಬಿದ್ದಿದೆ. ಮರ ಬಿದ್ದ ಸಂದರ್ಭದಲ್ಲಿ ಸಮೀಪದಲ್ಲಿ ಯಾರೂ ಇರದ ಕಾರಣ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಈ ವಿಷಯ ತಿಳಿದ ಗೌರಿಬಿದನೂರು ತಹಸೀಲ್ದಾರ್ ಡಾ. ಭಾಸ್ಕರ್ ಮತ್ತು ಶ್ರೀ ವಿದುರಾಶ್ವತ್ಥ ಕ್ಷೇತ್ರದ ಆಡಳಿತಾಧಿಕಾರಿ ನಂಜೇಗೌಡ ಅವರು ಸ್ಥಳಕ್ಕೆ ಭೇಟಿ, ಪರಿಶೀಲಿಸಿದ್ದಾರೆ. ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಪರಿಣಾಮ, ತುಂಬಾ ಹಳೆಯದಾದ ಮರ ಉರುಳಿ ಬಿದ್ದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಂತಾನ ಭಾಗ್ಯ ಸೇರಿದಂತೆ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತದೆ ಎಂಬ ನಂಬಿಕೆಯಿಂದ ಈ ಅಶ್ವತ್ಥ ವೃಕ್ಷಕ್ಕೆ ಪ್ರತಿನಿತ್ಯ ಸಹ್ರಾಸರು ಭಕ್ತರು ಪೂಜೆ ಸಲ್ಲಿಸಿ ಹರಕೆ ತೀರಿಸುತ್ತಿದ್ದರು.
ವಿದುರ ನೆಟ್ಟ ಅಶ್ವತ್ಥ: ದ್ವಾಪರ ಯುಗದ ಅಂತ್ಯ ಹಾಗೂ ಕಲಿಕಾಲದ ಆರಂಭದಲ್ಲಿ ವಿದುರನು ಇಲ್ಲಿ ಅಶ್ವತ್ಥ ವೃಕ್ಷವನ್ನು ನೆಟ್ಟಿದ್ದನು ಎಂಬ ಪ್ರತೀತಿ ಇದೆ. ಅಲ್ಲದೆ, ಈ ಮರವನ್ನು ವಿದುರನೇ ಸ್ವತಃ ಬೆಳೆಸಿದ ಹಿನ್ನೆಲೆಯಲ್ಲಿ ಈ ಕ್ಷೇತ್ರಕ್ಕೆ ವಿದುರಾಶ್ವತ್ಥ ಎಂದು ಹೆಸರು ಚಾಲ್ತಿಯಲ್ಲಿ ಬಂದಿದೆ.
ಸ್ವಾತಂತ್ರ್ಯ ಹೋರಾಟಕ್ಕೆ ಪ್ರಸಿದ್ಧ
ವಿದುರಾಶ್ವತ್ಥ ಸ್ವಾತಂತ್ರ ಹೋರಾಟ ಇತಿಹಾಸದಲ್ಲೂ ಪ್ರಮುಖ ಪಾತ್ರವನ್ನು ವಹಿಸಿದ್ದು, ಇದನ್ನು 'ದಕ್ಷಿಣದ ಜಲಿಯನ್ ವಾಲಾ ಬಾಗ್' ಎಂದೇ ಕರೆಯಲಾಗುತ್ತದೆ. 1938ರ ವೇಳೆಯಲ್ಲಿ ವಿದುರಾಶ್ವತ್ಥ ಸ್ವಾತಂತ್ರ್ಯ ಹೋರಾಟಗಾರರ ಕೇಂದ್ರ ಸ್ಥಾನವಾಗಿತ್ತು. 1938 ಏಪ್ರಿಲ್ 11ರಂದು ಪ್ರಮುಖ ನಾಯಕರಾದ ಟಿ. ಸಿದ್ದಲಿಂಗಯ್ಯ, ಕೆ.ಹನುಮಂತಯ್ಯ, ಕೆ.ಸಿ.ರೆಡ್ದಿ ಮತ್ತು ಭೂಪಾಳಂ ಚಂದ್ರಶೇಖರಯ್ಯ ಅವರು ಶಿವಪುರದಲ್ಲಿ ಧ್ವಜಾರೋಹಣ ಮಾಡಿ, ಸತ್ಯಾಗ್ರಹಕ್ಕೆ ಕರೆ ಕೊಟ್ಟರು. 1938 ಏಪ್ರಿಲ್ 25ರಂದು ಸತ್ಯಾಗ್ರಹನಿರತ ಪ್ರತಿಭಟನಾಕಾರರ ಮೇಲೆ ಪೊಲೀಸರ ಗುಂಡಿನ ದಾಳಿ ನಡೆಸಿದ್ದರಿಂದ 10 ಹೋರಾಟಗಾರರ ಸತ್ತಿದ್ದರು. ಅವರ ಪಾರ್ಥಿವ ಶರೀರಗಳನ್ನು ವಿದುರಾಶ್ವತ್ಥದ ದೇಗುಲದ ಸಮೀಪವಿರುವ ಉದ್ಯಾನದಲ್ಲಿ ಅಂತ್ಯಕ್ರಿಯೆ ಮಾಡಲಾಗಿತ್ತು. ಅಲ್ಲೀಗ ಸತ್ಯಾಗ್ರಹ ಸ್ಮಾರಕ ಭವನವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


