ಆಡ್ವಾಣಿ ಪಕ್ಕಕ್ಕೆ ಮೋದಿ ಪಟ್ಟಕ್ಕೆ

ನವದೆಹಲಿ: ಹಿರಿಯ ಮುಖಂಡ ಎಲ್.ಕೆ. ಆಡ್ವಾಣಿ ಅವರನ್ನು ಬದಿಗಿಟ್ಟೇ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಪ್ರಧಾನಿ ಅಭ್ಯರ್ಥಿ ಪಟ್ಟ ಕಟ್ಟುವುದು ಬಹುತೇಕ ಖಚಿತವಾಗಿದೆ. ಶುಕ್ರವಾರ ಬಿಜೆಪಿ ಸಂಸದೀಯ ಮಂಡಳಿ ಸಭೆ ಕರೆಯುವ ಸಾಧ್ಯತೆ ಇದ್ದು, ಈ ವೇಳೆ ಅಧಿಕೃತ ಘೋಷಣೆ ಹೊರಬೀಳಲಿದೆ.
ಮೋದಿ ಆಯ್ಕೆ ವಿಚಾರದಲ್ಲಿ ಒಮ್ಮತ ಮೂಡಿಸಲು ಪ್ರಯತ್ನಿಸುತ್ತಿರುವ ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಮೋದಿ ಅವರೇ ನಮ್ಮ ಅಭ್ಯರ್ಥಿ ಎಂದು ಈಗಾಗಲೇ ನಿರ್ಧರಿಸಿಯಾಗಿದೆ. ಇದು ಆರೆಸ್ಸೆಸ್ ಅಭಿಪ್ರಾಯ ಕೂಡ. ಇದಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದ್ದೇವೆ. ನಿಮ್ಮ ಬೆಂಬಲ ಸಿಗದಿದ್ದರೂ ಸರಿ ಮೋದಿ ಅವರಿಗೆ ಪಕ್ಷದ ಸಾರಥ್ಯ ನೀಡಲಿದ್ದೇವೆ. ಆರೆಸ್ಸೆಸ್ ಸೂಚನೆಯಂತೆಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನುವ ಸಂದೇಶವನ್ನು ಮೋದಿ ವಿರೋಧಿ ಬಣಕ್ಕೆ ರವಾನಿಸಿದ್ದಾರೆ.
ಇದರ ಮಧ್ಯೆಯೂ ಕೊನೆ ಕ್ಷಣದ ಪ್ರಯತ್ನವಾಗಿ ರಾಜನಾಥ್ ಸಿಂಗ್ ಗುರುವಾರ ಬೆಳಗ್ಗೆ ಮತ್ತೊಮ್ಮೆ ಆಡ್ವಾಣಿ ಜತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಸಂಜೆ ವೇಳೆಗೆ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕಿ ಸುಷ್ಮಾಸ್ವರಾಜ್ ಜತೆಗೂ ಸುಮಾರು ಅರ್ಧಗಂಟೆ ಚರ್ಚೆ ನಡೆಸಿದ್ದಾರೆ. ಮೋದಿ ಆಯ್ಕೆಗೆ ಬೆಂಬಲ ವ್ಯಕ್ತಪಡಿಸುವಂತೆ ಮನವಿ ಮಾಡಿದ್ದಾರೆ.
ಮೋದಿ ಅವರನ್ನು ಸೆ. 19ರೊಳಗೆ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸಬೇಕು ಎಂಬುದು ಆರೆಸ್ಸೆಸ್ ಬಯಕೆ. ಆದರೆ, ಮೋದಿ ಬೆಂಬಲಿಗರು ಸೆ.17ರೊಳಗೆ ಈ ಕಾರ್ಯ ಮುಗಿಯಲಿ ಎಂದು ಒತ್ತಡ ಹೇರುತ್ತಿದ್ದಾರೆ. ಸೆ.13ರಂದು ಬಹುತೇಕ ನಾಯಕರು ದೆಹಲಿಯಲ್ಲೇ ಇರುವುದರಿಂದ ಅಂದೇ ಈ ಘೋಷಣೆ ಮಾಡುವುದು ಸೂಕ್ತ ಎನ್ನುವುದು ರಾಜನಾಥ್ ಸಿಂಗ್ ಅಭಿಪ್ರಾಯ.
ರಾಜನಾಥ್ಸಿಂಗ್ಗೆ ಜವಾಬ್ದಾರಿ: ಮೋದಿ ಆಯ್ಕೆ ವಿಚಾರದಲ್ಲಿ ಒಮ್ಮತ ಮೂಡಿಸುವ ಜವಾಬ್ದಾರಿಯನ್ನು ಆರೆಸ್ಸೆಸ್ ರಾಜನಾಥ್ ಸಿಂಗ್ ಅವರಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಈ ವಿಚಾರದಲ್ಲಿ ಒಮ್ಮತ ಮೂಡಿಸಲು ರಾಜನಾಥ್ ಸಾಧ್ಯವಾದ ಎಲ್ಲಾ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿ ಸಂಸದೀಯ ಮಂಡಳಿ ಸದಸ್ಯರು ಅದರಲ್ಲೂ ಮೋದಿ ವಿರೋಧಿ ಗುಂಪಿನಲ್ಲಿ ಗುರುತಿಸಿಕೊಂಡಿರುವವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಅಭಿಪ್ರಾಯ ಪಡೆಯುತ್ತಿದ್ದಾರೆ. ಒಂದು ವೇಳೆ ಈ ವಿಚಾರದಲ್ಲಿ ಒಮ್ಮತ ಸಾಧ್ಯವಾಗದೇ ಹೋದರೆ ಅಧ್ಯಕ್ಷರಾಗಿ ತಮ್ಮ ಅಧಿಕಾರ ಚಲಾಯಿಸುವ ಆಯ್ಕೆಯನ್ನೂ ಮುಕ್ತವಾಗಿಟ್ಟುಕೊಂಡಿದ್ದಾರೆ.
ಜೋಶಿ ಬೆಂಬಲ: ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಆಯ್ಕೆಗೆ ಈವರೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ಪಕ್ಷದ ಹಿರಿಯ ಮುಖಂಡ ಮುರಳಿ ಮನೋಹರ ಜೋಶಿ ಅವರ ಮನವೊಲಿಸುವಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಯಶಸ್ವಿಯಾಗಿದ್ದಾರೆ. ಬುಧವಾರ ಆಡ್ವಾಣಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ರಾಜನಾಥ್ ಸಿಂಗ್ ಅವರು ಜೋಶಿ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಅವರು ಪಕ್ಷದ ನಿರ್ಧಾರಕ್ಕೆ ಬೆಂಬಲ ಸೂಚಿಸುವಂತೆ ಮನವೊಲಿಸಿದ್ದಾರೆ. ಒಂದು ವೇಳೆ ಈ ವಿಚಾರದಲ್ಲಿ ಒಮ್ಮತ ಮೂಡದೇ ಹೋದರೂ ಮೋದಿ ಆಯ್ಕೆ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾಯ್ಡು, ಅನಂತ್ರಿಂದಲೂ ಆಡ್ವಾಣಿ ಭೇಟಿ: ಮೋದಿ ಆಯ್ಕೆ ವಿಚಾರದಲ್ಲಿ ಮುನಿಸಿಕೊಂಡಿರುವ ಆಡ್ವಾಣಿ ಮನವೊಲಿಸಲು ಈಗ ಪಕ್ಷದ ಉಳಿದ ಮುಖಂಡರಾದ ವೆಂಕಯ್ಯ ನಾಯ್ಡು ಹಾಗೂ ಅನಂತ ಕುಮಾರ್ ಅವರೂ ಪ್ರಯತ್ನ ನಡೆಸಿದ್ದಾರೆ. ಗುರುವಾರ ಆಡ್ವಾಣಿ ಅವರನ್ನು ಭೇಟಿಯಾದ ಈ ಮುಖಂಡರು ಆಡ್ವಾಣಿ ಜತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ, ಸುಷ್ಮಾಸ್ವರಾಜ್ ಅವರನ್ನೂ ಭೇಟಿಯಾದ ಅನಂತ್ ಕುಮಾರ್ ಮೋದಿ ಆಯ್ಕೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ.
ಮೋದಿ- ಆಡ್ವಾಣಿ ಬೆಂಬಲಿಗರ ವಾಕ್ಸಮರ: ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಈಗ ಮೋದಿ ಹಾಗೂ ಆಡ್ವಾಣಿ ಬೆಂಬಲಿಗರ ನಡುವೆ ವಾಕ್ಸಮರ ಆರಂಭವಾಗಿದೆ. ಸುಶೀಲ್ ಮೋದಿ ಅವರು ಆಡ್ವಾಣಿ ಅವರನ್ನು ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ ಈಗ ಆಡ್ವಾಣಿ ಬೆಂಬಲಿಗರು ಗುಜರಾತ್ ಮುಖ್ಯಮಂತ್ರಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸ್ವತಃ ಪಕ್ಷದ ಇಬ್ಭಾಗಕ್ಕೆ ಕಾರಣವಾದ ವ್ಯಕ್ತಿಯೊಬ್ಬ ಕೇಂದ್ರದಲ್ಲಿ ಸ್ಥಿರ, ಪರಿಣಾಮಕಾರಿ ಸರ್ಕಾರವನ್ನು ಹೇಗೆ ಮುನ್ನಡೆಸಲು ಸಾಧ್ಯ ಎಂದು ಆಡ್ವಾಣಿ ಗುಂಪಿನಲ್ಲಿ ಗುರುತಿಸಿಕೊಂಡಿರುವ ಸುಧೀಂದ್ರ ಕುಲಕರ್ಣಿ ಪ್ರಶ್ನಿಸಿದ್ದಾರೆ. ಅಲ್ಲದೆ, ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದಲ್ಲಿ ಯಾವುದೇ ಒಮ್ಮತ ಮೂಡಿಲ್ಲ ಎಂದೂ ಕುಲಕರ್ಣಿ ಟ್ವೀಟರ್ನಲ್ಲಿ ತಿಳಿಸಿದ್ದಾರೆ.
ಆಡ್ವಾಣಿ ಮೂಲೆಗುಂಪು?: ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಅವರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಆಡ್ವಾಣಿ ಮೊದಲಿನಿಂದಲೇ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿದರೆ ಬಿಜೆಪಿಗೆ ಹಿನ್ನಡೆಯಾಗಲಿದೆ ಎನ್ನುವುದು ಆಡ್ವಾಣಿ ಅಭಿಪ್ರಾಯ. ಮುಂಬರುವ ಚುನಾವಣೆಯಲ್ಲಿ ಯುಪಿಎ ಭ್ರಷ್ಟಾಚಾರವೇ ಪ್ರಮುಖ ವಿಚಾರವಾಗಲಿದೆ. ಮೋದಿ ಅವರನ್ನು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿದರೆ ಚುನಾವಣೆಯಲ್ಲಿ ಮೋದಿ ವಿಚಾರವೇ ಪ್ರಮುಖವಾಗಿ ಬಿಡಲಿದೆ ಎಂದು ಆಡ್ವಾಣಿ ತಿಳಿಸಿದ್ದಾರೆ. ಆದರೆ, ಇದಕ್ಕೆ ಬಿಜೆಪಿ ಹಾಗೂ ಆರೆಸ್ಸೆಸ್ ಸೊಪ್ಪು ಹಾಕುತ್ತಿಲ್ಲ. ಹಾಗಾಗಿ ಪ್ರಧಾನಿ ಅಭ್ಯರ್ಥಿ ಆಯ್ಕೆ ವಿಚಾರದಿಂದಾಗಿ ಪಕ್ಷದಲ್ಲಿ ಆಡ್ವಾಣಿ ಮೂಲೆಗುಂಪಾಗಲಿದ್ದಾರೆ.
ಪ್ರಧಾನಿ ಅಭ್ಯರ್ಥಿಯಾಗಿ ಮೋದಿ ಅವರನ್ನು ಬಿಟ್ಟು ಬೇರೆ ಯಾರನ್ನೂ ಸಾರ್ವಜನಿಕರು, ಪಕ್ಷದ ಕಾರ್ಯಕರ್ತರು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಪ್ರಧಾನಿ ಅಥವಾ ಮುಖ್ಯಮಂತ್ರಿಯಾಗಿ ಯಾರನ್ನೂ ಬಲವಂತವಾಗಿ ಹೇರಲು ಸಾಧ್ಯವಿಲ್ಲ.
- ಸುಶೀಲ್ ಕುಮಾರ್ ಮೋದಿ
ಪ್ರಧಾನಿ ಅಭ್ಯರ್ಥಿ ವಿಚಾರವಾಗಿ ಯಾರೂ ಪ್ರತಿಭಟನೆ ನಡೆಸುತ್ತಿಲ್ಲ. ಮೋದಿ ಅವರ ಭವಿಷ್ಯ ಮಾತುಕತೆ ನಂತರ ನಿರ್ಧಾರವಾಗಲಿದೆ.
- ರಾಜನಾಥ್ ಸಿಂಗ್, ಬಿಜೆಪಿ ಅಧ್ಯಕ್ಷ
ಬಿಜೆಪಿಯು ಗೊಂದಲಕ್ಕೀಡಾದ ವ್ಯಕ್ತಿಗಳು, ಅಜೆಂಡಾ ಹೊಂದಿರುವ ಗೊಂದಲದ ಪಕ್ಷವಾಗಿದೆ. ಗೊಂದಲಕ್ಕೀಡಾದವರಷ್ಟೇ ಈ ರೀತಿ ವರ್ತಿಸಲು ಸಾಧ್ಯ
- ಮೀಮ್ ಅಫ್ಜಲ್, ಕಾಂಗ್ರೆಸ್ ವಕ್ತಾರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


