ಜಿಲ್ಲಾಧಿಕಾರಿ ಸಹಿ ಮಾಡಿದ ಅಬಕಾರಿ ಉಪ ಆಯುಕ್ತ

ಕನ್ನಡಪ್ರಭ ವಾರ್ತೆ , ಯಾದಗಿರಿ , ಸೆ.12
ಯಾದಗಿರಿ ಜಿಲ್ಲೆಯ ಅಬಕಾರಿ ಇಲಾಖೆಯಲ್ಲಿ ನಡೆದಿರುವ ದೊಡ್ಡ ಕ್ರಿಮಿನಲ್ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಾರ್ ಹಾಗೂ ವೈನ್ ಶಾಪ್ಗಳ ಪ್ರಸಕ್ತ ಸಾಲಿನ ಸನ್ನದು ನವೀಕರಣವನ್ನು ಜಿಲ್ಲಾಧಿಕಾರಿ ಹೆಸರಿನಲ್ಲಿ ಅಬಕಾರಿ ಉಪ ಆಯುಕ್ತರೇ ಸಹಿ ಮಾಡಿ ಕ್ರಿಮಿನಲ್ ಸ್ವರೂಪದ ಅಪರಾಧ ಎಸಗಿದ್ದಾರೆ!
ನಿಯಮ ಬಾಹಿರವಾಗಿ ಜಿಲ್ಲಾಧಿಕಾರಿಯವರ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವವರು ಅಬಕಾರಿ ಉಪ ಆಯುಕ್ತರಾಗಿರುವ ಎಸ್.ಕೆ.ಕುಮಾರ್. ಗುಲ್ಬರ್ಗ ವಿಭಾಗದ ಅಬಕಾರಿ ಜಂಟಿ ಆಯುಕ್ತರೂ ಆಗಿರುವ ಇವರು ಜಿಲ್ಲೆಯ 112 ವಿವಿಧ ಸ್ವರೂಪದ ಅಬಕಾರಿ ಸನ್ನದುಗಳನ್ನು ಯಾದಗಿರಿ ಡಿಸಿ ಎಫ್.ಆರ್. ಜಮಾದಾರ್ ಅವರ ಹೆಸರಿನಲ್ಲಿ ತಾವೇ ಸಹಿ ಮಾಡಿ, ಬಾರ್ ಮಾಲೀಕರಿಗೆ ನೀಡಿದ್ದಾರೆ. ಇದು ಅಪರಾಧವಾಗಿರುವುದರಿಂದ ಈ ಸಾಲಿನಲ್ಲಿ ಬಾರ್ ಹಾಗೂ ವೈನ್ ಶಾಪ್ ಮಾಲೀಕರಿಗೆ ನೀಡಿರುವ ಪರವಾನಗಿ ಅಸಿಂಧು ಆಗಲಿದ್ದು, ಇದರಿಂದ ಬಾರ್, ವೈನ್ ಶಾಪ್ ಮಾಲೀಕರು ಇದೀಗ ಪರವಾನಗಿ ಇಲ್ಲದೆಯೂ ಮದ್ಯ ಮಾರುತ್ತಿದ್ದಾರೆ.
ಡಿಸಿ ಸಹಿ ಮಾಡಿದ ಅಬ್ಕಾರಿ ಉಪ ಆಯುಕ್ತ
ಡಿಸಿ ಸಹಿ ಮಾಡಬೇಕು: ಬಾರ್ ಮತ್ತು ವೈನ್ ಶಾಪ್ಗಳು ಹೊಂದಿರುವ ವಿವಿಧ ಸ್ವರೂಪದ ಅಬಕಾರಿ ಸನ್ನದುಗಳ ಅವಧಿ ಪ್ರತಿ ವರ್ಷ ಜೂನ್ 30ಕ್ಕೆ ಕೊನೆಗೊಳ್ಳುತ್ತದೆ. ಅದನ್ನು ನವೀಕರಿಸುವ ವೇಳೆ ಅಬಕಾರಿ ಅಧಿಕಾರಿಗಳು ಅಂಗಡಿ ಸ್ಥಳ ಪರಿಶೀಲಿಸಿ, ಸಾರ್ವಜನಿಕರಿಂದ ಯಾವುದೇ ಆಕ್ಷೇಪ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಂಡು ಡಿಸಿಗೆ ಕಡತ ಕಳುಹಿಸಬೇಕು. ಅದನ್ನು ಪರಿಶೀಲಿಸಿ ಡಿಸಿ ಸಹಿ ಮಾಡಿ ಸನ್ನದು ನವೀಕರಿಸಬೇಕು. ಆದರೆ ಅಬಕಾರಿ ಡಿಸಿ ಎಸ್.ಕೆ.ಕುಮಾರ್ ಡಿಸಿ ಜಮಾದಾರ್ ಹೆಸರಿನಲ್ಲಿ ತಾವೇ ಸಹಿ ಮಾಡಿ ಸನ್ನದು ನವೀಕರಿಸಿದ್ದಾರೆ. ಇದು ಕರ್ನಾಟಕ ಅಬಕಾರಿ (ದೇಶೀ ಹಾಗೂ ವಿದೇಶೀ ಮದ್ಯ ಮಾರಾಟ) ನಿಯಮ 1968-5(ಎ)ದ ದುರುಪಯೋಗವಾಗಿದ್ದು, ಕ್ರಿಮಿನಲ್ ಸ್ವರೂಪದ ಅಪರಾಧವಾಗಿದೆ. ಅಲ್ಲದೇ ಕರ್ನಾಟಕ ನಾಗರಿಕ ನಡತೆ ನಿಯಮಗಳ ಉಲ್ಲಂಘನೆಯಾಗುತ್ತದೆ.
ಏನಾಗಿದೆ?: ವಿವಿಧ ಸ್ವರೂಪದ ಅಬಕಾರಿ ಪರವಾನಗಿಗಳಾದ ಸಿಎಲ್-9 (ಬಾರ್), ಸಿಎಲ್-2 (ಮದ್ಯದಂಗಡಿ), ಸಿಎಲ್-3 (ಬಾರ್ ಮತ್ತು ರೆಸ್ಟೋರೆಂಟ್) ಮತ್ತು ಸಿಎಲ್ 11-(ಸಗಟು ಮಾರಾಟ ಮಳಿಗೆ)ಗಳು 2013-14ನೇ ಸಾಲಿಗಾಗಿ ನವೀಕರಣಕ್ಕೆ ಅಬಕಾರಿ ಇಲಾಖೆಗೆ ಬಂದಿದ್ದವು. ಎಫ್.ಆರ್.ಜಮಾದಾರ್, ಜಿಲ್ಲಾಧಿಕಾರಿ, ಯಾದಗಿರಿ ಎಂಬ ಹೆಸರಿನಲ್ಲಿಯೇ ಅವುಗಳ ಸನ್ನದುಗಳನ್ನು ನವೀಕರಿಸಲಾಗಿದೆ. ಅಲ್ಲದೇ ಡಿಸಿ ಸಹಿ ಹಾಕಬೇಕಾದ ಸ್ಥಳದಲ್ಲಿ ಎಸ್.ಕೆ.ಕುಮಾರ್ ಎಂದೇ ಸಹಿ ಹಾಕಲಾಗಿದೆ.
ಸರ್ಕಾರಕ್ಕೆ ವರದಿ: ಈ ಅವ್ಯವಹಾರ ಕುರಿತು ಡಿಸಿ ಜಮಾದಾರ್ ಅವರನ್ನು ಕೇಳಿದಾಗ, ಈ ರೀತಿ ನನ್ನ ಹೆಸರನ್ನು ಅಬಕಾರಿ ಉಪ ಆಯುಕ್ತರು ದುರುಪಯೋಗ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ದಾಖಲೆ ಸಹಿತ ವರದಿ ನೀಡಿದ್ದೇನೆ ಎಂದು ತಿಳಿಸಿದ್ದಾರೆ. ಅಬಕಾರಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಯೊಬ್ಬರು ಈ ರೀತಿ ಮಾಡಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಗುಲ್ಬರ್ಗ ವಿಭಾಗದ ಅಬಕಾರಿ ಜಂಟಿ ಆಯುಕ್ತರೂ ಆಗಿರುವ ಎಸ್.ಕೆ.ಕುಮಾರ್ ಈ ರೀತಿ ನಿಯಮ ಬಾಹಿರವಾಗಿ ಡಿಸಿ ಹೆಸರಿನಲ್ಲಿ ಸಹಿ ಮಾಡಿರುವುದು ಸ್ಪಷ್ಟವಾಗಿರುವುದರಿಂದ ಸರ್ಕಾರ ಅವರ ಮೇಲೆ ಯಾವ ಶಿಸ್ತು ಕ್ರಮ ಕೈಗೊಳ್ಳತ್ತದೆ ಎನ್ನುವುದನ್ನು ನೋಡಬೇಕು.
ಡಿಸಿ ಸಹಿ ಮಾಡುವಲ್ಲಿ ಅಬಕಾರಿ ಉಪ ಆಯುಕ್ತರು ಸಹಿ ಮಾಡಿರುವುದು ಕ್ರಿಮಿನಲ್ ಸ್ವರೂಪದ ಅಪರಾಧ. 112 ಬಾರ್ ಮತ್ತು ರೆಸ್ಟೋರೆಂಟ್ಗಳ ಪರವಾನಗಿಗಳನ್ನು ಈ ರೀತಿ ಸಹಿ ಮಾಡಿ ನವೀಕರಿಸಲಾಗಿದೆ. ಆದ್ದರಿಂದ ಈ ಎಲ್ಲ ಸನ್ನದುಗಳು ಅಸಿಂಧುವಾಗುತ್ತವೆ.
- ಎಫ್.ಆರ್. ಜಮಾದಾರ್, ಯಾದಗಿರಿ ಡಿಸಿ
- ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


