ಸರ್ಕಾರಿ ನೌಕರಿಗೆ ಇಲ್ಲ ಖಾತರಿ!
ಕ.ಪ್ರ.ವಾರ್ತೆ , ಮಂಗಳೂರು , ಸೆ. 12
ಇವರು ಸರ್ಕಾರಿ ನೌಕರರು. ಮಿಗಿಲಾಗಿ ಹೆಸರಿಗಷ್ಟೇ ಸರ್ಕಾರಿ ಪ್ರೌಢಶಾಲೆಯ 'ಕಾಯಂ' ಶಿಕ್ಷಕರು. ಆದರೆ ಇವರಿಗೆ ಎರಡು ತಿಂಗಳಿಂದ ಸಂಬಳವೇ ಸಿಕ್ಕಿಲ್ಲ. ಇದಕ್ಕೆ ಕಾರಣ ಕಡತಗಳಲ್ಲಿ ಅವರ ಹುದ್ದೆ 'ತಾತ್ಕಾಲಿಕ'.
ಪ್ರತಿ ವರ್ಷ ಏಪ್ರಿಲ್ನಲ್ಲಿ ತಾತ್ಕಾಲಿಕ ಹುದ್ದೆ ಮುಂದುವರಿಸಿ ಸರ್ಕಾರ ಆದೇಶಿಸುತ್ತಿತ್ತು. ಈ ವರ್ಷ ಸೆಪ್ಟೆಂಬರ್ ಬಂದರೂ ಹುದ್ದೆ ಮುಂದುವರಿಕೆ ಆದೇಶ ಬಾರದ ಕಾರಣ ವೇತನವೂ ಬಂದಿಲ್ಲ. ಇದರಿಂದ ರಾಜ್ಯದಲ್ಲಿರುವ ಕಾಯಂ ಶಿಕ್ಷಕರೀಗ ಮಾಸಿಕ ಸಂಬಳಕ್ಕೆ ಕಾಯುತ್ತಿದ್ದಾರೆ.
ಕಳೆದ 15 ವರ್ಷಗಳ ಹಿಂದೆ ಸರ್ಕಾರಿ ಹೈಸ್ಕೂಲ್ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಅಧಿಕವಿದ್ದಾಗ ಹೆಚ್ಚುವರಿ ಶಿಕ್ಷಕರನ್ನು ನೇಮಿಸಲಾಗಿತ್ತು. ಅನಿವಾರ್ಯವಾಗಿ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿಕೊಂಡರೂ ಅವರನ್ನು ಹೆಸರಿಗಷ್ಟೇ 'ಕಾಯಂ' ಮಾಡಲಾಗಿತ್ತು. ಆದರೆ ಶಿಕ್ಷಕ ಹುದ್ದೆಯನ್ನು ಮಾತ್ರ ಕಡತಗಳಲ್ಲಿ 'ತಾತ್ಕಾಲಿಕ' ಎಂದು ಪರಿಗಣಿಸಿದ್ದು, ಇದೀಗ ಶಿಕ್ಷಕರಿಗೆ ಮುಳುವಾಗಿದೆ.
ಹುದ್ದೆ ಕಾಯಂ ಮಾಡಿಲ್ಲ: ಶಿಕ್ಷಕ ಹುದ್ದೆಗೆ ಭರ್ತಿಗೊಳಿಸುವಾಗ ನೇಮಕಗೊಂಡ 5 ವರ್ಷಗಳಲ್ಲಿ ಹುದ್ದೆ ಕಾಯಂಗೊಳಿಸಬೇಕು ಎಂಬುದು ಶಿಕ್ಷಣ ಇಲಾಖೆ ನಿಯಮವಿದ್ದರೂ, ಈ ಹಿಂದೆ ನೇಮಕಗೊಂಡ ಶಿಕ್ಷಕರಿಗೆ ಮಾತ್ರ ಅನ್ವಯವಾಗಿಲ್ಲ. ಈ ರೀತಿ ರಾಜ್ಯದ 750 ಸರ್ಕಾರಿ ಪ್ರೌಢಶಾಲೆಗಳಲ್ಲಿ ಆರೂವರೆ ಸಾವಿರ ಶಿಕ್ಷಕರನ್ನು ನೇಮಿಸಲಾಗಿದೆ. ಇವರಲ್ಲಿ ಅನೇಕರು ನಿವೃತ್ತಿ ಅಂಚಿನಲ್ಲಿದ್ದಾರೆ. ಹುದ್ದೆ ಕಾಯಂಗೊಳಿಸುವಂತೆ ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ.
ಆದೇಶ ಬರದಿದ್ರೆ ಸಂಬಳ ಇಲ್ಲ: ಪ್ರತಿ ವರ್ಷ ಮಾರ್ಚ್ಗೆ ಇವರ ನೇಮಕ ಅವಧಿ ಮುಗಿಯುತ್ತದೆ.
ಏಪ್ರಿಲ್ಗೆ ಮತ್ತೆ ಮುಂದಿನ ವರ್ಷಕ್ಕೆ ನೇಮಕಗೊಳಿಸಿದ ಬಗ್ಗೆ ಆದೇಶ ಹೊರಡಿಸಬೇಕು. ನೇಮಕದ ಅವಧಿ ಮುಗಿದು 2 ತಿಂಗಳೊಳಗೆ ಮತ್ತೆ ನೇಮಕ ಮುಂದುವರಿಸದಿದ್ದರೆ ನಂತರ ವೇತನವೂ ಸಿಗುವುದಿಲ್ಲ. ಈ ಬಾರಿ ಇಂಥ ಸಂದಿಗ್ಧ ಪರಿಸ್ಥಿತಿಯನ್ನು ಈ ಶಿಕ್ಷಕರು ಎದುರಿಸುತ್ತಿದ್ದಾರೆ.
ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚು ಕಡಿಮೆ ಆದರೆ ಹುದ್ದೆಯನ್ನು ವರ್ಗಾಯಿಸುವುದು ಅಥವಾ ಅಲ್ಲೇ ಕಾಯಂ ಮಾಡಲು ಅವಕಾಶವಿದೆ. ಈ ಬಗ್ಗೆ ಮನವಿ ಸಲ್ಲಿಸಿದರೂ ಶಿಕ್ಷಣ ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಶಿಕ್ಷಕರು.
ತಾತ್ಕಾಲಿಕ ಹುದ್ದೆಯಲ್ಲಿರುವ ಕಾಯಂ ಶಿಕ್ಷಕರಿಗೆ ವೇತನ ಸಿಗದಿರುವ ಸಂಗತಿ ಈಗಷ್ಟೇ ಗೊತ್ತಾಗಿದೆ. ಇದನ್ನು ಮೊದಲೇ ಗಮನಕ್ಕೆ ತಂದಿದ್ದರೆ ಶಿಕ್ಷಣ ಇಲಾಖೆ ಜತೆ ಮಾತುಕತೆ ನಡೆಸಿ ಪರಿಹರಿಸಲಾಗುತ್ತಿತ್ತು. ಈಗ ಈ ಬಗ್ಗೆ ವಿಸ್ತೃತ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು.
ರಾಮಕೃಷ್ಣ ಶಿರೂರು, ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ
ಕಾಯಂ ಶಿಕ್ಷಕರಿಗೆ ತಾತ್ಕಾಲಿಕ ಹುದ್ದೆಯಿಂದ ತೊಂದರೆಯಾಗಿರುವ ವಿಚಾರ ತನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ವಿಚಾರಿಸಿ ಸೂಕ್ತ ಕ್ರಮ ಕೈಗೊಳ್ಳುವೆ.
ಮಹಮ್ಮದ್ ಮೋಸಿನ್, ಪ್ರೌಢ ಶಿಕ್ಷಣ ಇಲಾಖೆ ಆಯುಕ್ತ
-ಆತ್ಮಭೂಷಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

