ಪ್ರಧಾನ ಸುದ್ದಿ

ಶಿಕ್ಷಕರ ವರ್ಗಾವಣೆ ಗೊಂದಲ ನಿವಾರಣೆ

Published On :

ಬೆಂಗಳೂರು: ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಬಹುದೊಡ್ಡ ತಲೆನೋವಾಗಿರುವ ವರ್ಗಾವಣೆ ಪ್ರಕ್ರಿಯೆಯಲ್ಲಿನ ಗೊಂದಲ ನಿವಾರಿಸಲು ಕ್ರಮ ಕೈಗೊಂಡಿದ್ದು, ಮುಂದಿನ ಏಪ್ರಿಲ್ ವೇಳೆಗೆ ಸರಿಪಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.
ರಾಜ್ಯ ಸಾಕ್ಷರತಾ ಮಿಷನ್ ಪ್ರಾಧಿಕಾರ, ಲೋಕ ಶಿಕ್ಷಣ ನಿರ್ದೇಶನಾಲಯ ಶಿಕ್ಷಕರ ಭವನದಲ್ಲಿ ಏರ್ಪಡಿಸಿದ್ದ 49ನೇ ಅಂತಾರಾಷ್ಟ್ರೀಯ ಸಾಕ್ಷರತಾ ಸಪ್ತಾಹ- 2013 ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ವರ್ಗಾವಣೆ ಸಮಸ್ಯೆ ಹೆಚ್ಚು ಕೇಳಿ ಬಂದ ಹಿನ್ನೆಲೆಯಲ್ಲಿ ಅದನ್ನು ನಿವಾರಿಸಲು ಸರ್ಕಾರ ಚಿಂತಿಸಿತ್ತು. ಪ್ರಕ್ರಿಯೆಯಲ್ಲಿ ಇರುವ ಅಂಶ, ನಿಯಮ ಪರಿಶೀಲಿಸಲಾಗುತ್ತಿದೆ. ಅಗತ್ಯ ಪ್ರಕ್ರಿಯೆಗಳು ಆರಂಭವಾಗಿವೆ.
ಎಲ್ಲ ಸಮಸ್ಯೆಗಳನ್ನು ಒಮ್ಮೆಲೆ ನಿವಾರಿಸಲು ಸಾಧ್ಯವಿಲ್ಲ. ವರ್ಗಾವಣೆ ಸಮಸ್ಯೆ ಸೇರಿ ಶಿಕ್ಷಕರ ಕುಂದುಕೊರತೆಗಳನ್ನು ಹಂತಹಂತವಾಗಿ ಬಗೆಹರಿಸಲಾಗುವುದು ಎಂದರು.
ಇಲಾಖೆಯಲ್ಲಿನ ಸಮಸ್ಯೆ ಬಗ್ಗೆ ತಿಳಿಯಬೇಕಿದೆ ಹಾಗಾಗಿ ಶಿಕ್ಷಕರು ತಮ್ಮ ಮತ್ತು ಶಾಲೆಯ ಸಮಸ್ಯೆಗಳನ್ನು ನನಗೆ ಬರೆದು ಕಳುಹಿಸಬಹುದು. ಅದನ್ನು ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಸೋಮಾರಿಗಳಿಗೆ ಚಾಟಿ: ಕೆಲವು ಶಿಕ್ಷಕರು ಮೂರ್ನಾಲ್ಕು ಹುದ್ದೆ ಅಲಂಕರಿಸಿ ಎಲ್ಲವನ್ನೂ ನಾವೇ ಮಾಡಬೇಕೆಂದು ಪೇಚಾಡುತ್ತಾರೆ. ಆಡಳಿತಾತ್ಮಕ ಕೆಲಸಗಳಲ್ಲೇ ಮುಳುಗಿರುತ್ತಾರೆ. ಅವರೂ ಸಹ ತರಗತಿಗೆ ಹಾಜರಾಗಿ ಬೋಧನೆ ಕೆಲಸದಲ್ಲಿ ತೊಡಗಬೇಕು. ಅಂತಹ ಸಾಕಷ್ಟು ಪ್ರಕರಣಗಳಿದ್ದು, ಇನ್ನು ಮುಂದೆ ಹಾಗಾಗುವುದಿಲ್ಲ. ಒಬ್ಬರಿಗೆ ಒಂದೇ ಹುದ್ದೆ ನೀಡಲಾಗುವುದು. ಕೆಲಸ ಮಾಡದೆ ಇರುವವರು ಕಂಡುಬಂದಲ್ಲಿ ಕ್ರಮಕೈಗೊಳ್ಳುವುದಾಗಿ ಚಾಟಿ ಬೀಸಿದ ಅವರು, ಶಿಕ್ಷಕರು ಮೌಲ್ಯಯುತ ಸಮಾಜ ಕಟ್ಟಲು ನೆರವಾಗಬೇಕು ಎಂದರು. ರಾಜ್ಯದಲ್ಲಿ ಸಾಕ್ಷರತೆ ಪ್ರಮಾಣ ಶೇ.75ರಷ್ಟಿದ್ದು, ಪ್ರಜೆಗಳನ್ನು ಶೇ.100ರಷ್ಟು ಸಾಕ್ಷರರನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು. ಅನಕ್ಷರಸ್ತರನ್ನು ಸಾಕ್ಷರರನ್ನಾಗಿ ಮಾಡುವಲ್ಲಿ ಕೆಳಹಂತದಲ್ಲಿ ಶ್ರಮಿಸುತ್ತಿರುವ ಪ್ರೇರಕರ ಕೆಲಸ ಶ್ಲಾಘನೀಯ ಎಂದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳನ್ನು ಈಗಿನಿಂದಲೇ ತಿದ್ದಿ ಅವರನ್ನು ಹೃದಯವಂತರನ್ನಾಗಿ ಮಾಡಬೇಕು ಹಾಗೂ ನಮ್ಮಗಳ ನಡುವೆ ಇರುವ ಜಾತಿ ಎಂಬ ಗೋಡೆ ಹೊಡೆದುಹಾಕಿ ಉತ್ತಮ ಸಮಾಜ ನಿರ್ಮಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಲೋಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕಿ ಎನ್.ಸಿ. ಸೀತಮ್ಮ, ಸಾಹಿತಿ ಕಮಲಾ ಹಂಪನಾ, ಸಾಕ್ಷರತಾ ಮಿಷನ್ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ. ನಾರಾಯಣರಾವ್, ಸರ್ವಶಿಕ್ಷಣ ಅಭಿಯಾನದ ನಿರ್ದೇಶಕ ಡಿ. ಬಸವರಾಜು, ಸಾವಿರಾರು ಶಿಕ್ಷಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.