ಕರಾಳ ಶನಿವಾರ
ನಗರದ ಕನಕಪುರ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಣೇಶ ಮೂರ್ತಿ ವಿಸರ್ಜನೆ ವೇಳೆ ಇಬ್ಬರು...

-ಸಾವಿಗೆ ಬೇಕಾದದ್ದು ನೆಪ ಮಾತ್ರ. ಗೋಡೆ ಕುಸಿತ, ನೀರು ಕುಡಿಯಲು ಹೋಗಿದ್ದವರು, ಗಣೇಶ ವಿಸರ್ಜನೆಗೆ ತೆರಳಿದ್ದವರು, ಅಪಘಾತ ಹೀಗೆ ಹಲವು ಕಾರಣಗಳಿಂದ ಬೆಂಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಸಂಭವಿಸಿದ ದುರಂತಗಳಿಗೆ ಬರೋಬ್ಬರಿ 17 ಮಂದಿ ಅಸುನೀಗಿದ್ದಾರೆ. ಶನಿವಾರ ಈ ಕುಟುಂಬಗಳ ಪಾಲಿಗೆ ಕರಾಳ ದಿನವಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು ಸೆ.14
ನಗರದ ಕನಕಪುರ ರಸ್ತೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಗಣೇಶ ಮೂರ್ತಿ ವಿಸರ್ಜನೆ ವೇಳೆ ಇಬ್ಬರು ಯುವಕರು ಕೃಷ್ಣರಾಜಪುರದ ವರ್ತೂರು ಕೆರೆಯಲ್ಲಿ ನೀರುಪಾಲಾಗಿದ್ದಾರೆ.
ಭಾರಿ ಮಳೆಯಿಂದಾಗಿ ದೊಮ್ಮಲೂರಿನಲ್ಲಿ ಗೋಡೆ ಕುಸಿದು ಬಾಲಕರಿಬ್ಬರು ಮೃತಪಟ್ಟಿದ್ದರೆ, ಕೃಷ್ಣರಾಜಪುರದಲ್ಲಿ ಗಂಗಚೆಟ್ಟಿ ಕೆರೆ ಕಟ್ಟೆ ಹೊಡೆದು ಬಡಾವಣೆ ಜಲಾವೃತವಾಗಿತ್ತು.
ಕನಕಪುರ ರಸ್ತೆಯ ಸೋಮನಹಳ್ಳಿ ಬಳಿ ಶನಿವಾರ ಕಾರು ಹಾಗೂ ಬಿಎಂಟಿಸಿ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರಿನಲ್ಲಿದ್ದ ಬೆಂಗಳೂರಿನ ಅಶೋಕ ನಗರ, ನೀಲಸಂದ್ರ ನಿವಾಸಿಗಳಾದ ಯಾಸಿರ್ ಖಾನ್, ಯಾರಬ್, ಅಯೂಬ್, ಜುನೈದ್ ಹಾಗೂ ಮಯೂರ್ ಮೃತರಾಗಿದ್ದಾರೆ. ಯುವಕರು ಸುಮಾರು 21ರಿಂದ 25 ವರ್ಷ ವಯಸ್ಸಿನವರು ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಬಸ್ನಲ್ಲಿದ್ದ ಓರ್ವ ಮಹಿಳಾ ಪ್ರಯಾಣಿಕರ ಕಾಲು ಮುರಿದಿದ್ದು, ಚಾಲಕ ಸೇರಿದಂತೆ ಇತರ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಶನಿವಾರ ಮಧ್ಯಾಹ್ನ 4.15ರ ಸುಮಾರಿಗೆ ಸೋಮನಹಳ್ಳಿ ಗೇಟ್ ಬಳಿ ಕೆ.ಆರ್. ಮಾರುಕಟ್ಟೆಯಿಂದ ಕೆಂಪಯ್ಯನಪಾಳ್ಯಕ್ಕೆ ತೆರಳುತ್ತಿದ್ದ ರೂಟ್ ನಂಬರ್ 213ಡಿ ಬಿಎಂಟಿಸಿ ಬಸ್ ಹಾಗೂ ಕನಕಪುರ ಕಡೆಯಿಂದ ಬರುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಮುಖಾಮುಖಿ ಡಿಕ್ಕಿಯಾಗಿವೆ.
ಡಿಕ್ಕಿ ರಭಸಕ್ಕೆ ಸ್ವಿಫ್ಟ್ ಕಾರಿನ ಅರ್ಧಭಾಗ ಬಿಎಂಟಿಸಿ ಬಸ್ನ ಮುಂಭಾಗದ ಅಡಿಗೆ ಸೇರಿಕೊಂಡಿತ್ತು. ಇದರಿಂದಾಗಿ ಕಾರಿನಲ್ಲಿದ್ದ ಐವರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಪ್ರತ್ಯಕ್ಷದರ್ಶಿ ಪ್ರಕಾರ, ಯುವಕರಿದ್ದ ಕಾರು ವೇಗವಾಗಿ ಬಂದು ವಾಹನವೊಂದನ್ನು ಓವರ್ಟೇಕ್ ಮಾಡಿದೆ. ಆದರೆ, ಕಾರಿನ ಚಾಲಕ ಎದುರುಗಡೆಯಿಂದ ಬರುತ್ತಿದ್ದ ಬಿಎಂಟಿಸಿ ಬಸ್ನ್ನು ಗಮನಿಸಿರಲಿಲ್ಲ. ಅಷ್ಟೇನು ವಿಸ್ತಾರವಲ್ಲದ ರಸ್ತೆಯಾಗಿರದ ಕಾರಣ ಕಾರು ನಿಯಂತ್ರಣಕ್ಕೆ ಬಾರದೇ ನೇರವಾಗಿ ಬಸ್ನ ಅಡಿಗೆ ನುಗ್ಗಿದೆ. ಇನ್ನು ಬಿಎಂಟಿಸಿ ಬಸ್ ಚಾಲಕ ದಿಢೀರ್ ಬ್ರೇಕ್ ಹಾಕಿದ್ದನಾದರೂ ಪ್ರಯೋಜನವಾಗಿಲ್ಲ. ಅಪಘಾತದ ರಭಸಕ್ಕೆ ಕಾರು ಮತ್ತು ಬಸ್ ಒಂದಕ್ಕೊಂದು ಬೆಸೆದುಕೊಂಡಿದ್ದವು. ಇದರಿಂದಾಗಿ ಕಾರಿನ ಪ್ರಯಾಣಿಕರನ್ನು ಹೊರತೆಗೆಯರು ಹರಸಾಹಸಪಡಬೇಕಾಯಿತು. ಕ್ರೇನ್ ಸಹಾಯದಿಂದ ಕಾರನ್ನು ಬಸ್ಸಿನಿಂದ ಬೇರ್ಪಡಿಸಿ, ನಂತರ ಪ್ರಯಾಣಿಕರ ಶವಗಳನ್ನು ಹೊರತೆಗೆಯಲಾಯಿತು.ಸ್ಥಳೀಯರ ನೆರವಿನೊಂದಿಗೆ ಶವಗಳನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ನೀರುಪಾಲು: ಗಣೇಶ ಮೂರ್ತಿ ವಿಸರ್ಜನೆ ವೇಳೆ ಇಬ್ಬರು ಯುವಕರು ನೀರುಪಾಲಾಗಿರುವ ಘಟನೆ ನಗರದ ವರ್ತೂರು ಕೆರೆಯಲ್ಲಿ ಸಂಭವಿಸಿದ್ದು, ಶವಗಳ ಹುಡುಕಾಟಕ್ಕೆ ಬಿಬಿಎಂಪಿ ಮತ್ತು ಅಗ್ನಿಶಾಮಕ ಸಿಬ್ಬಂದಿ ಮುಂದಾಗಿದ್ದಾರೆ. ಆಂಧ್ರ ಮೂಲದ ಕೂಲಿ ಕಾರ್ಮಿಕರಾದ ಮಂಜುನಾಥ್(23) ಮಂಜುನಾಥ್(25) ನಾಪತ್ತೆ ಆಗಿರುವ ಯುವಕರು. ವರ್ತೂರು ಕೆರೆಯಲ್ಲಿ ಗಣೇಶ ವಿಸರ್ಜನೆಗೆ ಬಿಬಿಎಂಪಿ ವತಿಯಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ಎಂದಿನಂತೆ ಇಂದು 5 ಯುವಕರು ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ನೀರಿಗೆ ಇಳಿದಿದ್ದರು. ಆ ಪೈಕಿ ಇಬ್ಬರು ನಾಪತ್ತೆ ಆಗಿದ್ದು, ನೀರಿನಲ್ಲಿ ಮುಳುಗಿ ಮೃತರಾಗಿರಬಹುದು ಎಂದು ಶಂಕಿಸಲಾಗಿದೆ.
ಕೆರೆ ಕಟ್ಟೆ ಒಡೆದು ಜಲಾವೃತ
ಅತಿ ಮಳೆಯಿಂದ ಕೃಷ್ಣರಾಜಪುರದ ಗಂಗಚೆಟ್ಟಿ ಕೆರೆ ಕಟ್ಟೆ ಹೊಡೆದು ನೂರಾರು ಮನೆಗಳು ಜಲಾವೃತ್ತವಾಗಿವೆ. ಸಾರ್ವಜನಿಕರು ಪ್ರಯಾಸಪಟ್ಟು ಮನೆಗಳಲ್ಲಿ ತುಂಬಿದ್ದ ಮಳೆ ನೀರನ್ನು ಹೊರಹಾಕಿದರು. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಕೃಷ್ಣರಾಜಪುರ ಮತ್ತು ಮಹದೇವಪುರದಲ್ಲಿ ನಾಲ್ಕು ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಬಿಡಿಎ ವತಿಯಿಂದ ಗಂಗಚೆಟ್ಟಿ ಕೆರೆ ಅಭಿವೃದ್ಧಿ ಕೆಲಸ ಕೈಗೊಂಡಿದ್ದು, 1.6 ಕೋಟಿ ವೆಚ್ಚದಲ್ಲಿ ನಡೆಸುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಕೆರೆಯ ನೀರು ಹೊರಹಾಕಲು ಕಟ್ಟೆಯಿಂದ ಪೈಪ್ ಅಳವಡಿಸಲಾಗಿದೆ. ಮಳೆ ಹೆಚ್ಚಾದ್ದರಿಂದ ಈ ಕಟ್ಟೆ ಹೊಡೆದು ಪಕ್ಷದ ನೇತ್ರಾವತಿ ಬಡಾವಣೆಯ ನೂರಾರು ಮನೆಗಳಿಗೆ ನುಗ್ಗಿದೆ.
4 ಮಕ್ಕಳು ಜಲಸಮಾಧಿ
ಹುಮನಾಬಾದ್: ದಾಹ ನೀಗಿಸಿಕೊಳ್ಳಲು ಕೆರೆಗಿಳಿದಿದ್ದ ನಾಲ್ವರು ಮಕ್ಕಳು ಜಲಸಮಾಧಿಯಾದ ಘಟನೆ ತಾಲೂಕಿನ ಕಲ್ಲೂರು ರಸ್ತೆಯಲ್ಲಿರುವ ಗುತ್ತಿ ಬಸವಣ್ಣ ಕೆರೆಯಲ್ಲಿ ಶನಿವಾರ ಸಂಭವಿಸಿದೆ. ಮೃತರನ್ನು ಪಟ್ಟಣದ ವಾಂಜರಿ ಬಡಾವಣೆಯಲ್ಲಿ ವಾಸವಾಗಿರುವ ಪೂಜಾ ಗಣಪತಿ ವಾಕಡೆ (12), ರೂಪಾ ಗುಂಡಪ್ಪ ವಾಕಡೆ (13), ಲತಾ ವಸಂತ ಗರುಡ (12) ಹಾಗೂ ಯುವರಾಜ ಬಾದಲ್ ವಾಕಡೆ (9) ಎಂದು ಗುರುತಿಸಲಾಗಿದೆ. ಉರುವಲು ಕಟ್ಟಿಗೆ ತರಲು ಹೋಗುತ್ತಿದ್ದೇವೆ ಎಂದು ಹೇಳಿ ಎಂಟು ಮಕ್ಕಳು ಹೊರಟಿದ್ದರು. ನೀರು ಕುಡಿಯಲೆಂದು ಗುತ್ತಿ ಬಸವಣ್ಣ ಕೆರೆ ಬಳಿ ಬಂದಿದ್ದಾರೆ. ಆಟವಾಡುತ್ತ ಕೆರೆ ಒಳಗಡೆಗೆ ತೆರಳಿದ್ದಾರೆ. ಆಳ ಹೆಚ್ಚುತ್ತಿದ್ದಂತೆ ನಾಲ್ವರು ಹೂಳಲ್ಲಿ ಸಿಲುಕಿದರು. ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮೃತದೇಹಗಳನ್ನು ಹೊರಕ್ಕೆ ತೆಗೆದರು.
ಗುಂಡಿಗೆ ಬಿದ್ದು ಇಬ್ಬರು ಸಾವು
ಧಾರವಾಡ: ಆಟವಾಡುತ್ತಿದ್ದ ಸೋದರರಿಬ್ಬರು ಗಣೇಶ ಮೂರ್ತಿ ವಿಸರ್ಜನೆಗಾಗಿ ತೋಡಿದ್ದ ಗುಂಡಿಗೆ ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಧಾರವಾಡ ಗಾಂಧಿನಗರದಲ್ಲಿ ಶನಿವಾರ ನಡೆದಿದೆ. ಪ್ರಜ್ವಲ ಮುಳಗುಂದ (7) ಹಾಗೂ ನಾಗರಾಜ ಮುಳಗುಂದ (6) ಮೃತ ದುರ್ದೈವಿಗಳು. ಶುಕ್ರವಾರ ರಾತ್ರಿ 120 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಿದ ಬಳಿಕ ಅದನ್ನು ಮುಚ್ಚದೆ ಕೇವಲ ತಾಡಪತ್ರಿ ಹೊದಿಸಲಾಗಿತ್ತು. ಶನಿವಾರ ಬೆಳಗ್ಗೆ ಪಟಾಕಿ ಸಿಡಿಸುತ್ತಾ ಸೋದರರಿಬ್ಬರು ತೆರಳಿದ್ದು ಗುಂಡಿಯಲ್ಲಿ ಬಿದ್ದಿದ್ದಾರೆ.
ಗೋಡೆ ಕುಸಿತಕ್ಕೆ ಎರಡು ಬಲಿ
ಚಿಕ್ಕನಾಯಕನಹಳ್ಳಿ/ದೊಡ್ಡಬಳ್ಳಾಪುರ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮನೆ ಗೋಡೆ ಕುಸಿದು ಇಬ್ಬರು ಮೃತಪಟ್ಟಿದ್ದಾರೆ. ಕಂದಿಕೆರೆ ಹೋಬಳಿ ಕಾತ್ರಿಕೆಹಾಲ್ ಗ್ರಾಮದ ರಾವುಡಯ್ಯ (62) ರಸ್ತೆಯಲ್ಲಿ ನಡೆದು ಹೋಗುತ್ತಿದ್ದಾಗ ಹಳೆಯ ಮನೆಯ ಗೋಡೆ ಕುಸಿದು ಮೃತಪಟ್ಟಿದ್ದಾನೆ. ದೊಡ್ಡಬಳ್ಳಾಪುರದ ಕೂಗೋನಹಳ್ಳಿಯಲ್ಲಿ ಗೋಡೆ ಕುಸಿದು ಬಿದ್ದಿದ್ದರಿಂದ ನೂರಿಮಾ (52) ಮೃತಪಟ್ಟಿದ್ದಾರೆ.
ಈಜಲು ಹೋದ ಮಕ್ಕಳು ಬರಲಿಲ್ಲ
ಶಿರಾ: ಈಜಲು ಹೋಗಿದ್ದ ಮಕ್ಕಳಿಬ್ಬರು ತಾಲೂಕಿನ ಶಿರಾದಡ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಶನಿವಾರ ಪ್ರಜ್ವಲ್ (12), ತೇಜಸ್ (13) ಈಜಲು ಹೋಗಿದ್ದರು. ನೀರಿನ ಆಳಕ್ಕೆ ಸಿಲುಕಿ ಮೃತಪಟ್ಟಿದ್ದಾರೆ. ಕಳ್ಳಂಬೆಳ್ಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


