ಪ್ರಧಾನ ಸುದ್ದಿ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೊಲೆ

Published On :

ಹಗರಿಬೊಮ್ಮನಹಳ್ಳಿ: ದೆಹಲಿಯ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರದ ಆರೋಪಿಗಳಿಗೆ ಗಲ್ಲುಶಿಕ್ಷೆ ಪ್ರಕಟಗೊಂಡ ಬೆನ್ನಲ್ಲೇ ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ದುಷ್ಕರ್ಮಿಗಳು 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಕುತ್ತಿಗೆಗೆ ದುಪ್ಪಟ್ಟಾ ಬಿಗಿದು ಕೊಲೆ ಮಾಡಿದ್ದಾರೆ.
ಹಾಡಹಗಲೇ 15 ವರ್ಷದ ಬಾಲಕಿ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿ ಭೀಕರವಾಗಿ ಕೊಲೆ ಮಾಡಿರುವ ಈ ಘಟನೆ ತಾಲೂಕಿನ ಜನತೆಯನ್ನು ಬೆಚ್ಚಿಬೀಳಿಸಿದೆ. ಊರಿನಿಂದ ಸುಮಾರು ಒಂದು ಕಿ.ಮೀ. ದೂರದಲ್ಲಿರುವ ಹೊಲಕ್ಕೆ ತೆರಳುತ್ತಿದ್ದಾಗ ರಸ್ತೆ ಪಕ್ಕದ ಹೊಲದಲ್ಲಿ ಬೆಳೆದು ನಿಂತಿದ್ದ ಮೆಕ್ಕೆಜೋಳದ ಹೊಲಕ್ಕೆ ದುಷ್ಕರ್ಮಿಗಳು ಬಲವಂತವಾಗಿ ಬಾಲಕಿಯನ್ನು ಎಳೆದುಕೊಂಡು ಹೋಗಿ ಅತ್ಯಾಚಾರವೆಸಗಿ, ಕೊಲೆ ಮಾಡಿದ್ದಾರೆ.        

ಬಾಲಕಿ ಮುಖದ ಮೇಲೆ ಉಗುರಿನಿಂದ ಗೀರಿದ ಹಾಗೂ ಹಣೆಯ ಎರಡೂ ಪಕ್ಕದಲ್ಲಿ ಸಿಗರೇಟಿನಿಂದ ಸುಟ್ಟಿರುವ ಗಾಯಗಳಿವೆ.
ಪತ್ತೆಹಚ್ಚಿತು ನಾಯಿ: ಮನೆಯಿಂದ ಹೊಲಕ್ಕೆ ಹೋಗಿರುವ ಮಗಳು ತುಂಬಾ ಹೊತ್ತಾದರೂ ಮನೆಗೆ ಬಾರದ ಕಾರಣ ಆಕೆಯ ಪೋಷಕರು ಹುಡುಕಾಡಿದ್ದಾರೆ. ಆದರೆ, ಮಗಳ ಸುಳಿವು ಸಿಕ್ಕಿರಲಿಲ್ಲ. ಕೊನೆಗೆ ಸಾಕು ನಾಯಿಯ ಸಹಾಯದಿಂದ ಮೆಕ್ಕೆಜೋಳದ ಹೊಲದಲ್ಲಿ ಕೊಲೆಯಾಗಿ ಬಿದ್ದಿರುವ ಸ್ಥಳವನ್ನು ಪಾಲಕರು ಪತ್ತೆ ಹಚ್ಚಿದರು. ಪರಿಚಯಸ್ಥರೇ ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಈ ಕೃತ್ಯವೆಸಗಿದ್ದು, ಇದು ಸಾಮೂಹಿಕ ಅತ್ಯಾಚಾರವಿರಬಹುದೆಂದು ಪ್ರಕರಣ ದಾಖಲಾದ ಹಗರಿಬೊಮ್ಮನಹಳ್ಳಿ ಪೊಲೀಸರು ಶಂಕಿಸಿದ್ದಾರೆ. ಘಟನಾ ಸ್ಥಳಕ್ಕೆ ಸಂಜೆ ಭೇಟಿ ನೀಡಿದ ಶಾಸಕ ಎಸ್. ಭೀಮಾನಾಯ್ಕ ಸುದ್ದಿಗಾರರೊಂದಿಗೆ ಮಾತನಾಡಿ, ಕೃತ್ಯ ಎಸಗಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಪೊಲೀಸರು ಮಾತ್ರ ಯಾವುದೆ ಒತ್ತಡ, ಪ್ರಭಾವಕ್ಕೆ ಒಳಗಾಗದೆ ಆರೋಪಿಗಳ ಪತ್ತೆಗೆ ಮುಂದಾಗಬೇಕು. ವಿಶೇಷ ತಂಡಗಳನ್ನು ರಚಿಸಿ, ಕಾರ್ಯಾಚರಣೆಗೆ ಇಳಿಯುವ ಮೂಲಕ ಆರೋಪಿಗಳು ತಪ್ಪಿಸಿಕೊಳ್ಳದಂತೆ ನಿಗಾವಹಿಸಬೇಕೆಂದರು. ಬಾಲಕಿಯ ಪಾಲಕರಿಗೆ ಧೈರ್ಯ ತುಂಬಿ, ಸಾಂತ್ವನ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.