ಪ್ರಧಾನ ಸುದ್ದಿ

ಇಲ್ಲಿ ಸತ್ತವರಿಗೂ ಸಿಗುತ್ತೆ ಸಾಲ!

Published On :

ಕನ್ನಡಪ್ರಭ ವಾರ್ತೆ  ಗದಗ  ಸೆ.14
ಚಿಕ್ಕ ಮಕ್ಕಳು, ಮೃತರಾದವರು ಹೆಸರಿನಲ್ಲಿಯೂ ಸಾಲ ಬೇಕಾ? ಹಾಗಾದರೆ ಗದಗ ಜಿಲ್ಲಾ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ಬಂದು ಮಾಹಿತಿ ನೀಡಿದರೆ ಸಾಕು. ನಿಮಗೆ ಸಾಲ ಸಿಗುವುದು ಗ್ಯಾರಂಟಿ!
ಅರೆ, ಇದೇನಿದು? ಎಂದು ಹುಬ್ಬೇರಿಸಬೇಡಿ. ಇಂಥ ಹತ್ತಾರು ಅವಾಂತರಗಳಿಗೆ ಜಿಲ್ಲಾ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಸಾಕ್ಷಿಯಾಗಿದ್ದು, ಅದೀಗ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಪಡೆದ ಮಾಹಿತಿಯಿಂದ ಬೆಳಕಿಗೆ ಬಂದಿದೆ.
ಈ ಅಭಿವೃದ್ಧಿ ನಿಗಮದಲ್ಲಿ ಈ ಹಿಂದೆ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ಕಾರವಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ಜೆ.ಗೋನಾಳ ಮಧ್ಯವರ್ತಿಗಳೊಂದಿಗೆ ಸೇರಿ ಇಂಥದ್ದೊಂದು ಅಕ್ರಮವೆಸಗಿದ್ದಾರೆ. ಸರ್ಕಾರದ ಲಕ್ಷಾಂತರ ಹಣ ಅರ್ಹರಿಗೆ ದೊರೆಯದೇ ಇನ್ನಾರದ್ದೋ ಪಾಲಾಗಿದೆ.
ಸತ್ತವರಿಗೂ ಇಲ್ಲಿ ಸಾಲ: ಹಲವು ಜನರು ಇಲಾಖೆಯಿಂದ ಸಾಲ ಪಡೆದವರ ಹಾಗೆ ದಾಖಲೆ ಸೃಷ್ಟಿಸಿರುವ ಅಧಿಕಾರಿಗಳು ಅವರ ಸಾಲ ಮನ್ನಾ ಮಾಡಿದ ದಾಖಲೆಗಳನ್ನೂ ಸೃಷ್ಟಿಸಿದ್ದಾರೆ. ಗದಗ ತಾಲೂಕಿನ ಬೆಳಹೋಡ ಗ್ರಾಮದಲ್ಲಿ ಸುಮಾರು 30ಕ್ಕೂ ಹೆಚ್ಚು ಜನರಿಗೆ ಸಾಲ ಮಂಜೂರು ಮಾಡಿದ್ದಾರೆ. ಅದರಲ್ಲಿ ಕೆಲವು ರಿಜಿಸ್ಟರ್ ಆಗದಿರುವ ಮಹಿಳಾ ಸಂಘಗಳೂ ಇವೆ.
ಬೆಳೆಹೊಡೆ ಗ್ರಾಮದ ಚಾಂದಸಾಬ ಫ. ಕಣಗಿಹಾಳ 2010ರಲ್ಲಿ ತೀರಿಕೊಂಡಿದ್ದು, ಇವರ ಹೆಸರಿನಲ್ಲಿ 2011ರಲ್ಲಿ 20 ಸಾವಿರ ಸಾಲ ಮಂಜೂರು ಮಾಡಿದರೆ, ಮೂರು ವರ್ಷದ ಮಗುವಿನ ಹೆಸರಲ್ಲಿಯೂ ಸಾಲ ನೀಡಲಾಗಿದೆ. 3 ವರ್ಷದ ತೌಫೀಕ್ ನದಾಫ್ ಎನ್ನುವ ಮಗುವಿಗೆ 20 ವರ್ಷ ವಯಸ್ಸು ಎಂದು ದಾಖಲೆಗಳಲ್ಲಿ ತೋರಿಸಿ, ಸ್ವಾವಲಂಬನೆ ಯೋಜನೆಯಡಿ 25 ಸಾವಿರ ಮಂಜೂರು ಮಾಡಲಾಗಿದೆ. ಇನ್ನೂ ಅಸ್ತಿತ್ವದಲ್ಲಿರದ 5 ಮಹಿಳಾ ಹಾಗೂ 1 ಪುರುಷ ಸ್ವ-ಸಹಾಯ ಗುಂಪಿನ ಹೆಸರಲ್ಲಿ ಮೈಕ್ರೋ ಸಾಲವನ್ನು ನೀಡಿದ್ದಾರೆ. ಕೆಲವೆಡೆ ಅಲ್ಪ ಸಂಖ್ಯಾತರಲ್ಲದವರಿಗೂ ಸಾಲ ನೀಡಿದ್ದು, ನಿಗಮದ ಎಲ್ಲ ನಿಮಯಗಳನ್ನೂ ಗಾಳಿಗೆ ತೂರಲಾಗಿದೆ.
ತನಿಖೆಯಾಗಲಿ: ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರವೇನೋ ವಿವಿಧ ಸಾಲ ಯೋಜನೆ ರೂಪಿಸಿ, ಅವರ ಸ್ವಾವಲಂಬನೆ ಬದುಕಿಗೆ ದಾರಿ ಮಾಡಿಕೊಟ್ಟಿದೆ. ಆದರೆ, ಅಧಿಕಾರಿಗಳು ಮಾತ್ರ ಅದನ್ನು ಇನ್ಯಾರದ್ದೊ ಹಿತಾಸಕ್ತಿಗಾಗಿ ಬಳಸಿದಲ್ಲಿ ಅವರ ಅಭಿವೃದ್ಧಿ ಆಗಲು ಸಾಧ್ಯವೇ? ಗದಗ ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿರುವುದು ಈ ಪ್ರಕರಣದಿಂದ ಸ್ಪಷ್ಟವಾಗಿ ಗೋಚರವಾಗುತ್ತದೆ. ಹಿರಿಯ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಬೇಕೆಂದು ಜನರು ಆಗ್ರಹಿಸಿದ್ದಾರೆ.
ಈ ಅಧಿಕಾರಿಗಳ ಕರ್ಮಕಾಂಡ ಇನ್ನೂ ಸಾಕಷ್ಟಿದೆ. ದುಬೈನಲ್ಲಿ ವಾಸವಾಗಿರೋ ರಮಜಾನಸಾಬ್ ಹೊಂಬಳ ಎಂಬ ವ್ಯಕ್ತಿಯ ಹೆಸರಲ್ಲಿ 'ಶ್ರಮ ಶಕ್ತಿ ಯೋಜನೆ' ಅಡಿಯಲ್ಲಿ 25 ಸಾವಿರ ಸಾಲ ಮಂಜೂರಾಗಿರುವ ದಾಖಲೆ ಇದೆ. ಆ ಸಾಲವೂ ಇಂದು ಮನ್ನಾ ಆಗಿದೆ. ಇದು ಕೇವಲ ಒಂದೇ ಗ್ರಾಮದಲ್ಲಿ ಮಾತ್ರವಲ್ಲ. ಇಂಥ ಆವಾಂತರ ಜಿಲ್ಲೆಯ ಪ್ರತಿಯೊಂದು ಗ್ರಾಮಗಳಲ್ಲಿಯೂ ಸೃಷ್ಟಿಯಾಗಿದ್ದು, ಸರ್ಕಾರ ಕೂಡಲೇ ಈ ಕುರಿತು ಪರಿಶೀಲಿಸಬೇಕು.
- ಶಂಶುದ್ದೀನ್ ದೊಡ್ಡಮನಿ
ಮಾಹಿತಿ ಹಕ್ಕು ಕಾರ್ಯಕರ್ತ

ಈ ವಿಷಯವಾಗಿ ತಕ್ಷಣವೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಂದ ಚರ್ಚಿಸಿ ಸಮಗ್ರ ತನಿಖೆ ನಡೆಸುವಂತೆ ಸೂಚಿಸುತ್ತೇನೆ. ಅಧಿಕಾರಿಗಳ ತಪ್ಪು ಕಂಡು ಬಂದಲ್ಲಿ ಸರ್ಕಾರ ನಿಯಮಾವಳಿಗಳ ಆಧಾರದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು.
-ಎನ್.ಎಸ್. ಪ್ರಸನ್ನಕುಮಾರ
ಗದಗ ಜಿಲ್ಲಾಧಿಕಾರಿ

 ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.