ಪ್ರಧಾನ ಸುದ್ದಿ

ಸಿನಿಮಾ ಹಬ್ಬಕ್ಕೆ ಸಂಭ್ರಮದ ಚಾಲನೆ

ಸಿನಿಮಾ ಹಬ್ಬಕ್ಕೆ ಸಂಭ್ರಮದ ಚಾಲನೆ
Published On :

-ಆರ್. ಕೇಶವಮೂರ್ತಿ
ಕ.ಪ್ರ.ವಾರ್ತೆ ಚೆನ್ನೈ ಸೆ. 21

ಭಾರತೀಯ ಚಿತ್ರರಂಗದ ನೂರರ ಸಂಭ್ರಮಕ್ಕೆ ಚೆನ್ನೈನಲ್ಲಿ ಶನಿವಾರ ಅದ್ಧೂರಿ ಚಾಲನೆ ದೊರೆಯಿತು.
ಆ ಮೂಲಕ ನಾಲ್ಕು ದಿನಗಳ ಸಿನಿಮಾ ಹಬ್ಬಕ್ಕೆ ತಮಿಳುನಾಡಿನ ರಾಜಧಾನಿ ವೇದಿಕೆ ಆಯಿತು.   ಶನಿವಾರ ಸಂಜೆ ಆರಂಭವಾದ ಕಾರ್ಯಕ್ರಮದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ, ಮುಖ್ಯ  ಕಾರ್ಯದರ್ಶಿ ಶೀಲಾ ಬಾಲಕೃಷ್ಣನ್, ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಿ. ಕಲ್ಯಾಣ್, ಕನ್ನಡ ಚಿತ್ರರಂಗದ ಥಾಮಸ್, ಹಿರಿಯ ನಟಿ ಬಿ. ಸರೋಜಾದೇವಿ ಸೇರಿದಂತೆ ಚಿತ್ರರಂಗದ ಗಣ್ಯರು, ರಾಜಕಾರಣಿಗಳು, ಸರ್ಕಾರದ ಪ್ರತಿನಿಧಿಗಳು, ನೂರರ ಸಿನಿಮಾ ಹಬ್ಬಕ್ಕೆ ಸಾಕ್ಷಿಯಾದರು.
ಸುಮಾರು ಒಂದೂವರೆ ಗಂಟೆ ನಡೆದ ಕಾರ್ಯಕ್ರಮದಲ್ಲಿ ಪ್ರಮುಖ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.ಬಳಿಕ  ನಡೆದ ಸಾಂಸ್ಕೃತಿಕ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸಿತು.  ಭಾರತೀಯ ಚಿತ್ರರಂಗದ ನಾಲ್ಕು ಪ್ರಮುಖ ಭಾಷೆಗಳಾದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ದಿಗ್ಗಜರ ಸಮ್ಮುಖದಲ್ಲಿ ನಡೆದ ಈ ಸಮಾರಂಭ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಒಂದು ದಾಖಲೆ. ಮೊದಲ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ಮುಖ್ಯಮಂತ್ರಿ ಜಯಲಲಿತಾ ಹಾಗೂ ಹಿರಿಯ ನಟಿ ಬಿ. ಸರೋಜಾದೇವಿ.
ಜನಜಾತ್ರೆ: ಅದು ಚೆನ್ನೈನ ಹೃದಯಭಾಗದಲ್ಲಿರುವ ವಿಶಾಲವಾದ ಜವಹರಲಾಲ್ ನೆಹರೂ ಒಳಾಂಗಣ ಕ್ರೀಡಾಂಗಣ. ಕ್ರೀಡಾಂಗಣದ ಮುಖ್ಯದ್ವಾರ ಸೇರಿದಂತೆ ಸುತ್ತಲೂ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದ್ದರು. ಅಷ್ಟೇ ಪ್ರಮಾಣದ ಪೊಲೀಸರ ಸರ್ಪಗಾವಲು ಅಲ್ಲಿತ್ತು. ಚೆನ್ನೈ ನಗರ ಸೇರಿದಂತೆ ದೂರ ಊರುಗಳಿಂದ ಬಂದಿದ್ದ ಜನರನ್ನು ನಿಯಂತ್ರಿಸಲು ಕಾವಲುಪಡೆ ಹರಸಾಹಸ ಪಡುತ್ತಿದ್ದುದು ಸಾಮಾನ್ಯವಾಗಿತ್ತು.
ಇನ್ನು ಸ್ಟೇಡಿಯಂನ ಒಳಗೂ ಪ್ರತಿನಿಧಿಗಳು ಕಿಕ್ಕಿರಿದು ಸೇರಿದ್ದರು. ಎಂಟರಿಂದ ಒಂಬತ್ತು ಸಾವಿರ ಪ್ರತಿನಿಧಿಗಳು ಸಮಾರಂಭವನ್ನು ಕಣ್ತುಂಬಿಕೊಂಡರು. ನಾಲ್ಕು ಭಾಷೆಯ ಭಾರತೀಯ ಚಿತ್ರರಂಗದ ವಿವಿಧ ವಲಯದ ಪ್ರಮುಖರು ಅಲ್ಲಿದ್ದರು.
ವೇದಿಕೆ ಮುಂಭಾಗದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಕಮಲಹಾಸನ್ ಸೇರಿದಂತೆ ಹಿರಿಯ ಸಂಗೀತ ನಿರ್ದೇಶಕ ಇಳಯರಾಜ, ನಟ, ನಟಿಯರಾದ ಬಾಲಕೃಷ್ಣ, ತ್ರಿಶಾ, ಮೀನಾ, ಜಯಪ್ರದಾ, ಜಯಸುಧಾ, ಸೇರಿನಟನಟಿಯರ ದಂಡೇ ಅಲ್ಲಿ ನೆರೆದಿತ್ತು. ಇತ್ತ, ಹೊರಗೂ ತಮ್ಮ ನೆಚ್ಚಿನ ನಾಯಕ ನಟ, ನಟಿಯರನ್ನು ನೋಡಲು ಬಂದ ಜನ ಪೊಲೀಸರ ಸರ್ಪಗಾವಲಿನಲ್ಲಿ ಬಂಧಿಯಾಗಿದ್ದರು.

ಸಾಧನೆ-ಸನ್ಮಾನ
ನೂರರ ಸಿನಿಮಾ ಸಂಭ್ರಮದ ಮೊದಲ ದಿನ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರಿಂದಲೇ ನಾಲ್ಕು ಭಾಷೆಯ ಪ್ರಮುಖ ಸಾಧಕರನನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಬಯೋಸ್ಕೋಪ್ ಮಾದರಿಯನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು. ಕನ್ನಡದ ಬಿ. ಸರೋಜಾದೇವಿ ಹಾಗೂ ತೆಲುಗಿನ ಬಾಲಕೃಷ್ಣ, ಮೀನಾ, ಜಯಸುಧಾ, ಜಯಪ್ರದಾ, ಶಾರದಾ, ಸಿಮ್ರಾನ್, ಪನೋರಮಾ, ಎಂ.ವಿ. ರಾಜಮ್ಮ, ಕಾಂಚನಾ, ಕೃಷ್ಣಕುಮಾರಿ, ಸಾಹುಕಾರ್ ಜಾನಕಿ, ಲಾರೆನ್ಸ್ ಸೇರಿದಂತೆ ಹಲವು ಮಂದಿಯನ್ನು ಸನ್ಮಾನಿಸಲಾಯಿತು.

ಅಮ್ಮನ ಆರಾಧನೆ
ನಾಲ್ಕು ರಾಜ್ಯಗಳ ಶತಮಾನೋತ್ಸವ ಸಂಭ್ರಮ ಸಮಾರಂಭ ಇದಾಗಿದ್ದರೂ ಕಾರ್ಯಕ್ರಮದ ವೇದಿಕೆ ಚೆನ್ನೈ. ಹೀಗಾಗಿ, ಇಡೀ ಸಿನಿಮಾ ಸಂಭ್ರಮ ತಮಿಳಿಗರ ಕಾರ್ಯಕ್ರಮದಂತೆ ಕಂಡುಬಂತು. ಅದರಲ್ಲೂ ಮುಖ್ಯಮಂತ್ರಿ ಜಯಲಲಿತಾ ಅವರನ್ನೇ ಹೊಗಳಿ ಅಟ್ಟಕ್ಕೇರಿಸುವ ಭಾಷಣಗಳೇ ಹೆಚ್ಚಾಗಿದ್ದರಿಂದ ನಿಜವಾದ ಸಿನಿಮಾ ಸಂಭ್ರಮ ಮೂಲೆ ಸೇರಿ ಅಮ್ಮ ನ ಆರಾಧನೆ ಪ್ರಧಾನವಾಗಿತ್ತು. ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಿ. ಕಲ್ಯಾಣ್, ನಮ್ಮ ಅಮ್ಮ ಕೊಟ್ಟ ಜನ್ಮ ಒಂದು ದಿನದ್ದು. ಆದರೆ ನೀವು ನಮಗೆ ಕೊಟ್ಟ ಕೊಡುಗೆ ಎಂದೆಂದಿಗೂ ಮರೆಯಲಾಗದ ಜನ್ಮ. ಅದಕ್ಕೆ ಸಾಕ್ಷಿ ನೀವೇ ಖುದ್ದಾಗಿ ನಮ್ಮ ಕ್ಷೇತ್ರದ ಶತಮಾನೋತ್ಸವಕ್ಕೆ ಬಂದಿರುವುದು ಎಂದು ಜಯಲಲಿತಾ ಅವರನ್ನು ಉದ್ದೇಶಿಸಿ ಹೇಳಿದರು.

ರಾಜ್ ಮತ್ತು ವಿಷ್ಣು
ಚೆನ್ನೈನಲ್ಲಿ ನಡೆಯುತ್ತಿರುವ ಚಿತ್ರರಂಗದ ನೂರರ ಸಂಭ್ರಮದ ಅಂಗವಾಗಿ ನಗರದ ಬೀದಿ ಬೀದಿಗಳಲ್ಲಿ ವರನಟ ಡಾ. ರಾಜ್‌ಕುಮಾರ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಭಾವಚಿತ್ರಗಳನ್ನು ಒಳಗೊಂಡ ಭಿತ್ತಿಪತ್ರಗಳು ರಾರಾಜಿಸುತ್ತಿದ್ದವು. ಕನ್ನಡದ ಈ ಇಬ್ಬರೂ ಒಟ್ಟಿಗೆ ಇದ್ದ ಈ ಪೋಸ್ಟರ್‌ಗಳು ತಮಿಳುನಾಡಿನ ಗೋಡೆಗಳನ್ನು ಅಲಂಕರಿಸಿದ್ದು ವಿಶೇಷವಾಗಿತ್ತು. ಅಲ್ಲದೇ ನಟ ದೇವರಾಜ್ ಅಭಿನಯದ ಹುಲಿಯ, ರಾಜ್ ಅಭಿನಯದ ಭಾಗ್ಯವಂತರು  ಚಿತ್ರದ ಭಿತ್ತಿಪತ್ರಗಳು ಚೆನ್ನೈನ ಪ್ರಮುಖ ಬೀದಿಗಳಲ್ಲಿ ಕಾಣಿಸಿಕೊಂಡಿದ್ದವು.

ನಮ್ಮವರ ನಿರ್ಲಕ್ಷ್ಯ
ಈ ನೂರರ ಸಿನಿಮಾ ಸಂಭ್ರಮ ನಾಲ್ಕು ರಾಜ್ಯಗಳ ಮನೆಯ ಹಬ್ಬ. ಆದರೆ ಉದ್ಘಾಟನಾ ಸಮಾರಂಭವನ್ನು ನೋಡಿದಾಗ ಕನ್ನಡ ಮಾತ್ರವಲ್ಲದೆ, ತೆಲುಗು ಹಾಗೂ ಮಲಯಾಳಂ ಚಿತ್ರರಂಗದ ಗಣ್ಯರಿಗೂ ವೇದಿಕೆಯಲ್ಲಿ ಕೂರುವ ಅವಕಾಶ ಇರಲಿಲ್ಲ.  ಕನ್ನಡದ ಉದ್ಯಮಕ್ಕೆ ಒಂದಷ್ಟು ಪರಿಚಿತವಾಗಿರುವ ಥಾಮಸ್ ಮತ್ತು ಬಿ. ಸರೋಜಾದೇವಿ ಹೊರತಾಗಿ ಬೇರೊಬ್ಬ ಕನ್ನಡ ಕಲಾವಿದರಾಗಲಿ ಅಥವಾ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿದಂತೆ ಯಾರೊಬ್ಬರಿಗೂ ವೇದಿಕೆಯೇರುವ ಅವಕಾಶ ಇರಲಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.